
ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ಪಾರಾಗಲು ಸೂತ್ರ ಪ್ರಕಟಿಸಿದ ಸಿಜೆಐ ಸೂರ್ಯಕಾಂತ್
ಸುಪ್ರೀಂ ಕೋರ್ಟ್ ಹೈಬ್ರಿಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭೌತಿಕ ಮತ್ತು ವರ್ಚುವಲ್ ಎರಡೂ ರೀತಿಯಲ್ಲಿ ಕಲಾಪಗಳನ್ನು ನಡೆಸಲು ಅವಕಾಶವಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಅಪಾಯಕಾರಿ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಕಲಾಪಗಳಿಗೆ ಖುದ್ದು ಹಾಜರಾಗುವ ಬದಲು ಹೈಬ್ರಿಡ್ ಮೋಡ್ (ವಿಡಿಯೋ ಕಾನ್ಫರೆನ್ಸಿಂಗ್) ಬಳಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ವಕೀಲರು ಮತ್ತು ಕಕ್ಷಿದಾರರಿಗೆ ಸಲಹೆ ನೀಡಿದ್ದಾರೆ. ದೆಹಲಿಯಲ್ಲಿನ ಹವಾಮಾನ ವೈಪರೀತ್ಯ ಮತ್ತು ಹದಗೆಟ್ಟಿರುವ ಗಾಳಿಯ ಗುಣಮಟ್ಟವನ್ನು ಪರಿಗಣಿಸಿ ಈ ಸೂಚನೆ ನೀಡಲಾಗಿದೆ.
ಭಾನುವಾರ (ಡಿಸೆಂಬರ್ 14) ಸುಪ್ರೀಂ ಕೋರ್ಟ್ ಆಡಳಿತ ಮಂಡಳಿ ಹೊರಡಿಸಿದ ಸುತ್ತೋಲೆಯಲ್ಲಿ, ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಿದ್ದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ತಮ್ಮ ಪ್ರಕರಣಗಳ ವಿಚಾರಣೆಗೆ ಹಾಜರಾಗಬಹುದು ಎಂದು ಸಿಜೆಐ ಸಲಹೆ ನೀಡಿರುವುದಾಗಿ ತಿಳಿಸಲಾಗಿದೆ. ಸದ್ಯ ಸುಪ್ರೀಂ ಕೋರ್ಟ್ ಹೈಬ್ರಿಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭೌತಿಕ ಮತ್ತು ವರ್ಚುವಲ್ ಎರಡೂ ರೀತಿಯಲ್ಲಿ ಕಲಾಪಗಳನ್ನು ನಡೆಸಲು ಅವಕಾಶವಿದೆ.
461ಕ್ಕೆ ಏರಿಕೆಯಾದ ವಾಯು ಗುಣಮಟ್ಟ ಸೂಚ್ಯಂಕ (AQI)
ಭಾನುವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು 461 ಕ್ಕೆ ತಲುಪಿದ್ದು, ಇದು ಈ ಚಳಿಗಾಲದ ಅತ್ಯಂತ ಕಲುಷಿತ ದಿನ ಹಾಗೂ ದಾಖಲಾದ ಎರಡನೇ ಕೆಟ್ಟ ಡಿಸೆಂಬರ್ ದಿನವಾಗಿದೆ. ಕಡಿಮೆ ತಾಪಮಾನ ಮತ್ತು ಗಾಳಿಯ ವೇಗ ತಗ್ಗಿರುವುದರಿಂದ ಮಾಲಿನ್ಯಕಾರಕಗಳು ಚದುರಿ ಹೋಗದೆ ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿಯೇ ಸಿಲುಕಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, 401 ಮತ್ತು 500 ರ ನಡುವಿನ AQI ಅನ್ನು 'ಗಂಭೀರ' (Severe) ಎಂದು ಪರಿಗಣಿಸಲಾಗುತ್ತದೆ. ಇಂತಹ ಅಪಾಯಕಾರಿ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ವಾಯುಮಾಲಿನ್ಯದಿಂದ ಅಸ್ವಸ್ಥತೆ ಅನುಭವಿಸಿದ್ದ ಸಿಜೆಐ
ತೀವ್ರ ವಾಯುಮಾಲಿನ್ಯದ ಕಾರಣದಿಂದ ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ಸಂಪೂರ್ಣವಾಗಿ ವರ್ಚುವಲ್ ಮೋಡ್‌ಗೆ ಬದಲಾಯಿಸುವ ಸಾಧ್ಯತೆಯ ಕುರಿತು ನವೆಂಬರ್ 26 ರಂದು ಮಾತನಾಡಿದ್ದ ಸಿಜೆಐ ಸೂರ್ಯಕಾಂತ್ ಅವರು, ಹಿಂದಿನ ದಿನ ತಾವು ಒಂದು ಗಂಟೆಗಳ ಕಾಲ ವಾಯುವಿಹಾರಕ್ಕೆ ಹೋದಾಗ ಅಸ್ವಸ್ಥರಾಗಿದ್ದಾಗಿ ಉಲ್ಲೇಖಿಸಿದ್ದರು. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಅವರು ಈ ವಿಷಯ ಪ್ರಸ್ತಾಪಿಸಿದ್ದರು.
ಇದಕ್ಕೂ ಮುನ್ನ ನವೆಂಬರ್ 13 ರಂದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಕೂಡ ದೆಹಲಿ-ಎನ್‌ಸಿಆರ್ ಭಾಗದ ಅಪಾಯಕಾರಿ ಗಾಳಿಯ ಗುಣಮಟ್ಟವನ್ನು ಉಲ್ಲೇಖಿಸಿ, ವಕೀಲರು ಖುದ್ದು ಕೋರ್ಟ್‌ಗೆ ಬರುವ ಬದಲು ವರ್ಚುವಲ್ ಆಗಿ ಹಾಜರಾಗುವುದು ಸೂಕ್ತ ಎಂದು ಸಲಹೆ ನೀಡಿದ್ದರು. ಇದೀಗ ಮಾಲಿನ್ಯದ ಮಟ್ಟ ಮತ್ತಷ್ಟು ಏರಿಕೆಯಾಗಿರುವುದರಿಂದ ಹೈಬ್ರಿಡ್ ಮಾದರಿಯ ಬಳಕೆಗೆ ಮತ್ತೆ ಒತ್ತು ನೀಡಲಾಗಿದೆ.

