
ಹೋರಾಟ ನಡೆಸುತ್ತಿರುವ ಗ್ರಾಮಸ್ಥರು
ಕಲ್ಲಿದ್ದಲು ಗಣಿಗಾರಿಕೆ ವಿರುದ್ಧದ ಪ್ರತಿಭಟನೆ ಹಿಂಸಾರೂಪಕ್ಕೆ; ಪೊಲೀಸ್ ವಾಹನಗಳಿಗೆ ಬೆಂಕಿ
ಶಾಂತಿ ಕಾಪಾಡುವಂತೆ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಮನವಿ ಮಾಡಿದರೂ, ಉದ್ರಿಕ್ತ ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಕಲ್ಲು ತೂರಾಟ ನಡೆಸಿದೆ.
ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಜಿಂದಾಲ್ ಪವರ್ ಲಿಮಿಟೆಡ್‌ನ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಶನಿವಾರ (ಡಿ. 27) ವಿಕೋಪಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಗಾರೆ ಪೆಲ್ಮಾ ಸೆಕ್ಟರ್-1 ಕಲ್ಲಿದ್ದಲು ಬ್ಲಾಕ್‌ಗೆ ಸಂಬಂಧಿಸಿದಂತೆ 14 ಹಳ್ಳಿಗಳ ಜನರು ಕಳೆದ ಡಿಸೆಂಬರ್ 12 ರಿಂದ ಲಿಬ್ರಾ ಗ್ರಾಮದಲ್ಲಿ ಧರಣಿ ನಡೆಸುತ್ತಿದ್ದರು. ಡಿಸೆಂಬರ್ 8ರಂದು ನಡೆದ ಸಾರ್ವಜನಿಕ ವಿಚಾರಣೆಯು ನಿಯಮಬಾಹಿರವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಗಣಿಗಾರಿಕೆ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಶನಿವಾರ ಬೆಳಗ್ಗೆ ಸುಮಾರು 300 ರಷ್ಟಿದ್ದ ಪ್ರತಿಭಟನಾಕಾರರ ಸಂಖ್ಯೆ ಮಧ್ಯಾಹ್ನದ ವೇಳೆಗೆ ಸಾವಿರಕ್ಕೆ ಏರಿಕೆಯಾಗಿತ್ತು. ಶಾಂತಿ ಕಾಪಾಡುವಂತೆ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಮನವಿ ಮಾಡಿದರೂ, ಉದ್ರಿಕ್ತ ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಕಲ್ಲು ತೂರಾಟ ನಡೆಸಿದೆ.
ಈ ದಾಳಿಯಲ್ಲಿ ತಮ್ನಾರ್ ಪೊಲೀಸ್ ಠಾಣಾಧಿಕಾರಿ ಕಮಲಾ ಪುಸಾಮ್, ಎಸ್‌ಡಿಒಪಿ ಅನಿಲ್ ವಿಶ್ವಕರ್ಮ ಮತ್ತು ಓರ್ವ ಕಾನ್‌ಸ್ಟೆಬಲ್ ಸೇರಿದಂತೆ ಹಲವು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉದ್ರಿಕ್ತರು ಪೊಲೀಸ್ ಬಸ್, ಜೀಪ್ ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಜಿಂದಾಲ್ ಕಂಪನಿಯ ಕಲ್ಲಿದ್ದಲು ಸಂಸ್ಕರಣಾ ಘಟಕಕ್ಕೆ (CHP) ನುಗ್ಗಿ ಅಲ್ಲಿದ್ದ ಕನ್ವೇಯರ್ ಬೆಲ್ಟ್ ಮತ್ತು ಟ್ರ್ಯಾಕ್ಟರ್‌ಗಳನ್ನು ಧ್ವಂಸಗೊಳಿಸಿದ್ದಾರೆ.
ಆಡಳಿತ ಮತ್ತು ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪ
ಜಿಲ್ಲಾಧಿಕಾರಿ ಮಯಾಂಕ್ ಚತುರ್ವೇದಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಕಳೆದ 15 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕೆಲವು ಸಮಾಜಘಾತಕ ಶಕ್ತಿಗಳು ಹಾದಿ ತಪ್ಪಿಸಿ ಜನರನ್ನು ಪ್ರಚೋದಿಸಿವೆ" ಎಂದು ತಿಳಿಸಿದ್ದಾರೆ. ಗಾಯಗೊಂಡವರ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಗಢಕ್ಕೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಅವರು ಈ ಘಟನೆಗೆ ಬಿಜೆಪಿ ಸರ್ಕಾರದ ಹಠಮಾರಿ ಧೋರಣೆಯೇ ಕಾರಣ ಎಂದು ಆರೋಪಿಸಿದ್ದಾರೆ. "ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರವು ಆದಿವಾಸಿಗಳನ್ನು ಮತ್ತು ಗ್ರಾಮಸ್ಥರನ್ನು ಅವರ ಭೂಮಿಯಿಂದ ಬಲವಂತವಾಗಿ ಒಕ್ಕಲೆಬ್ಬಿಸುತ್ತಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಪರಿಸ್ಥಿತಿ ಕೈಮೀರಿದೆ" ಎಂದು ಅವರು ದೂರಿದ್ದಾರೆ.
ಪ್ರಸ್ತುತ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ನಡೆಯುತ್ತಿರುವುದು ಮತ್ತು ಕೆಲವರು ಅವರನ್ನು ರಕ್ಷಿಸುತ್ತಿರುವುದು ಕಂಡುಬಂದಿದೆ.

