
Digital Arrest| ಕ್ಷಣ ಕ್ಷಣ ಮೊಬೈಲ್ ಮೂಲಕ ʼಡಿಜಿಟಲ್ ಬಂಧನʼದ ಭಯ; ಎಲ್ಲಿದೆ ಅಭಯ?
ಅಪರಿಚಿತರು ಪೊಲೀಸ್ ಅಧಿಕಾರಿಗಳೆಂದು ಕರೆ ಮಾಡಿದರೆ ಗಾಬರಿಯಾಗಬೇಡಿ. ಸಮಾಧಾನವಾಗಿ ಯೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ವಾಟ್ಸಾಪ್ ಅಥವಾ ಸ್ಕೈಪ್ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡುವುದಿಲ್ಲ.
ತಂತ್ರಜ್ಞಾನ ಬೆಳೆದಂತೆಲ್ಲಾ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಇಂದು ಭೌತಿಕವಾಗಿ ದಾಳಿ ಮಾಡಿ ದೋಚುವ ಕಳ್ಳರಿಗಿಂತ, ಪರದೆಯ ಹಿಂದೆ ಕುಳಿತು ಜನರ ಮನಸ್ಸಿನಲ್ಲಿ ಭಯ ಬಿತ್ತಿ ಲಕ್ಷಾಂತರ ರೂಪಾಯಿ ಲೂಟಿ ಮಾಡುವ 'ಸೈಬರ್ ವಂಚಕರ'ರ ಹಾವಳಿ ಹೆಚ್ಚಾಗಿದೆ.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ವರದಾನವಾಗುವಷ್ಟೇ ವೇಗವಾಗಿ ಶಾಪವಾಗಿಯೂ ಪರಿಣಮಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ಅಪರಾಧಗಳ ಪಟ್ಟಿಗೆ ಸೇರ್ಪಡೆಯಾದ ಅತ್ಯಂತ ಅಪಾಯಕಾರಿ ಮತ್ತು ವಿವೇಚನಾಹೀನ ವಂಚನೆಯೆಂದರೆ 'ಡಿಜಿಟಲ್ ಅರೆಸ್ಟ್' . ಇದು ಕೇವಲ ಹಣ ಕದಿಯುವ ತಂತ್ರವಲ್ಲ, ಬದಲಾಗಿ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸಿ, ಅವರ ಭಯವನ್ನೇ ಬಂಡವಾಳ ಮಾಡಿಕೊಳ್ಳುವ ವ್ಯವಸ್ಥಿತ ಮಾಫಿಯಾವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಉನ್ನತ ಶಿಕ್ಷಣ ಪಡೆದವರವರೆಗೆ ಎಲ್ಲರೂ ಈ ಮಾಯಾಜಾಲಕ್ಕೆ ಸಿಲುಕುತ್ತಿರುವುದು ಇಂದಿನ ಕಾಲದ ದೊಡ್ಡ ವಿಪರ್ಯಾಸ.
ಅಂಕಿ-ಅಂಶಗಳ ಆತಂಕಕಾರಿ ಚಿತ್ರಣ
ಲಭ್ಯವಿರುವ ಅಧಿಕೃತ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಪ್ರಕರಣಗಳ ಸಂಖ್ಯೆ ಶೇ.500ರಷ್ಟು ಹೆಚ್ಚಾಗಿದೆ. ಇನ್ನು 2025ರಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ, ಲೂಟಿಯಾದ ಮೊತ್ತ ಮಾತ್ರ 2024ಕ್ಕೆ ಸಮನಾಗಿದೆ. ಇದರರ್ಥ ವಂಚಕರು ಈಗ ಒಬ್ಬೊಬ್ಬರಿಂದಲೇ ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ.
2023ರಲ್ಲಿ ಕೇವಲ 142 ಪ್ರಕರಣಗಳು ದಾಖಲಾಗಿದ್ದು, ಸುಮಾರು 16.65 ಕೋಟಿ ರೂ. ಲೂಟಿಯಾಗಿತ್ತು. 2024ರಲ್ಲಿ ಪ್ರಕರಣಗಳ ಸಂಖ್ಯೆ 874ಕ್ಕೆ ಏರಿಕೆಯಾಗಿ, ವಂಚನೆಯಾದ ಮೊತ್ತ 151.24 ಕೋಟಿ ರೂ. ದಾಟಿದೆ. 2025 ರಲ್ಲಿ (ನವೆಂಬರ್ ವರೆಗೆ) ಪ್ರಕರಣಗಳ ಸಂಖ್ಯೆ 293 ಇದ್ದರೂ, ಲೂಟಿಯಾದ ಮೊತ್ತ ಮಾತ್ರ 144.58 ಕೋಟಿ ರೂ. ಆಗಿದೆ. ದಿನಕಳೆದಂತೆ ವಂಚಕರು ಸಣ್ಣ ಮೊತ್ತದ ಬದಲಾಗಿ ದೊಡ್ಡ ಮೊತ್ತದ ಹಣ ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರೇ ಸಿಂಹಪಾಲು
ರಾಜ್ಯದಲ್ಲಿ ದಾಖಲಾಗುವ ಒಟ್ಟು ಸೈಬರ್ ಪ್ರಕರಣಗಳಲ್ಲಿ ಸಿಂಹಪಾಲು ಬೆಂಗಳೂರಿನದ್ದೇ ಆಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಐಟಿ ಉದ್ಯೋಗಿಗಳು, ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳು ಇಲ್ಲಿ ಹೆಚ್ಚಾಗಿರುವುದರಿಂದ ವಂಚಕರಿಗೆ ದೊಡ್ಡ ಮೊತ್ತದ ಹಣ ಸುಲಭವಾಗಿ ಸಿಗುತ್ತದೆ. ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರನ್ನು ಗುರಿಯಾಗಿಸಿ, ಪೊಲೀಸರ ಹೆಸರಿನಲ್ಲಿ ಬೆದರಿಸಿದಾಗ ಅವರು ಸಾಮಾಜಿಕ ಗೌರವಕ್ಕೆ ಹೆದರಿ ಹಣ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಹುತೇಕ ಎಲ್ಲರೂ ಆನ್‌ಲೈನ್ ಬ್ಯಾಂಕಿಂಗ್ ಬಳಸುವುದರಿಂದ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆದುಹೋಗುತ್ತದೆ.
ಬೆಂಗಳೂರಿನ ಪ್ರತಿ ವಿಭಾಗದಲ್ಲೂ ಸೈಬರ್ ಆರ್ಥಿಕ ಮತ್ತು ಮಾದಕವಸ್ತು ಪೊಲೀಸ್ ಠಾಣೆಗಳಿದ್ದರೂ ವಂಚಕರನ್ನು ಹಿಡಿಯುವುದು ಕಷ್ಟವಾಗುತ್ತಿದೆ. ಅಂತಾರಾಷ್ಟ್ರೀಯ ಜಾಲವಾಗಿದ್ದು, ವಂಚಕರು ಕಾಂಬೋಡಿಯಾ, ಲಾವೋಸ್ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಬಡ ಜನರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ಹಣ ವರ್ಗಾಯಿಸುವುದರಿಂದ ಅಸಲಿ ಆರೋಪಿಗಳ ಪತ್ತೆ ವಿಳಂಬವಾಗುತ್ತಿದೆ. ವಂಚನೆಯಾದ ಮೊತ್ತದಲ್ಲಿ ಶೇ. ೧೦ರಷ್ಟು ಹಣವನ್ನು ಮಾತ್ರ ರಿಕವರಿ ಮಾಡಲು ಸಾಧ್ಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇತ್ತೀಚಿನ ಪ್ರಮುಖ ಘಟನೆಗಳು
ಇತ್ತೀಚಿನ ದಿನಗಳಲ್ಲಿ ಸೈಬರ್ ಕಿರಾತಕರು ಅತ್ಯಂತ ಪ್ರಭಾವಿ ವ್ಯಕ್ತಿಗಳು, ಉನ್ನತ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಕುಟುಂಬಸ್ಥರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ಮತ್ತು ಆಘಾತಕಾರಿ ಉದಾಹರಣೆ ಎಂದರೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಪ್ರೀತಿ ಸುಧಾಕರ್ ಅವರು ‘ಡಿಜಿಟಲ್ ಅರೆಸ್ಟ್’ ಬಲೆಗೆ ಬಿದ್ದು ಬರೋಬ್ಬರಿ 5.7 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವುದು. ಈ ಘಟನೆಯು ಸಮಾಜದ ಪ್ರಬಲ ವರ್ಗಗಳಲ್ಲೂ ಆತಂಕ ಮೂಡಿಸಿದ್ದು, ಡಿಜಿಟಲ್ ಲೋಕದಲ್ಲಿ ಯಾರು ಕೂಡ ಸುರಕ್ಷಿತರಲ್ಲ ಎಂಬ ಕಟು ಸತ್ಯವನ್ನು ಸಾರಿದೆ.
ಸಾರ್ವಜನಿಕರು ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಇಂತಹ ಕರೆಗಳು ಬಂದರೆ ಭಯಭೀತರಾಗದೆ ಕರೆಯನ್ನು ಕಟ್ ಮಾಡಬಹುದು. ಅಲ್ಲದೇ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು. ಇಂತಹ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಪೊಲೀಸ್ ಆಯುಕ್ತ
ಪ್ರೀತಿ ಸುಧಾಕರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾವು ದೆಹಲಿಯ ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡರು. ನಿಮ್ಮ ಹೆಸರಿನಲ್ಲಿ ಬಂದಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಎಂಬ ನಿಷೇಧಿತ ಡ್ರಗ್ಸ್ ಮತ್ತು ನಕಲಿ ಪಾಸ್‌ಪೋರ್ಟ್‌ಗಳಿವೆ ಎಂದು ಹೆದರಿಸಿದರು.ಕೂಡಲೇ ಅವರನ್ನು ಸ್ಕೈಪ್ ವಿಡಿಯೋ ಕಾಲ್‌ಗೆ ಬರುವಂತೆ ಒತ್ತಾಯಿಸಲಾಯಿತು. ವಿಡಿಯೋ ಕಾಲ್‌ನಲ್ಲಿ ವಂಚಕರು ಸಿಬಿಐ ಅಥವಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳಂತೆ ನಟಿಸಿ, ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಿ ಬೆದರಿಸಿದರು. ಸುಮಾರು ೪೮ ಗಂಟೆಗಳ ಕಾಲ ಅವರನ್ನು ‘ಡಿಜಿಟಲ್ ಬಂಧನ’ದಲ್ಲಿಟ್ಟು, ಈ ವಿಷಯವನ್ನು ಪತಿಗಾಗಲಿ ಅಥವಾ ಪೊಲೀಸರಿಗಾಗಲಿ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾನಸಿಕವಾಗಿ ಕುಗ್ಗಿಸಿದರು. ನಿಮ್ಮ ಬ್ಯಾಂಕ್ ಖಾತೆಗಳ ಹಣ ಅಕ್ರಮವಲ್ಲ ಎಂದು ಸಾಬೀತುಪಡಿಸಲು ನಾವು ನೀಡುವ ತಾತ್ಕಾಲಿಕ ಖಾತೆಗೆ ವರ್ಗಾಯಿಸಿ, ಆರ್‌ಬಿಐ ಪರಿಶೀಲನೆ ನಡೆಸಿದ ನಂತರ ಅದನ್ನು ವಾಪಸ್ ಮಾಡುತ್ತೇವೆ ಎಂದು ನಂಬಿಸಿದರು. ಈ ಹಂತದಲ್ಲಿ ಪ್ರೀತಿ ಸುಧಾಕರ್ ಅವರು ಹಂತಹಂತವಾಗಿ ಒಟ್ಟು 5.7 ಕೋಟಿ ರೂ.ಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದರು. ನಂತರ ವಂಚಕರು ಸಂಪರ್ಕ ಕಡಿತಗೊಳಿಸಿದಾಗ ವಂಚನೆ ಬೆಳಕಿಗೆ ಬಂತು.
ಇತರೆ ವ್ಯಕ್ತಿಗಳು ಸಹ ಡಿಜಿಟಲ್ ಅರೆಸ್ಟ್ ಬಲೆಗೆ
ಸುಧಾಕರ್ ಅವರ ಪತ್ನಿ ಮಾತ್ರವಲ್ಲದೆ, ಇತ್ತೀಚೆಗೆ ಬೆಂಗಳೂರು ಮತ್ತು ಕರ್ನಾಟಕದ ಹಲವು ಉನ್ನತ ಮಟ್ಟದ ವ್ಯಕ್ತಿಗಳು ಈ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಹಲವು ನಿವೃತ್ತ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳು ಇದೇ ಮಾದರಿಯಲ್ಲಿ ತಲಾ 1 ರಿಂದ 2 ಕೋಟಿ ರೂ. ಕಳೆದುಕೊಂಡಿದ್ದಾರೆ. ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳ ಹಿರಿಯ ವ್ಯವಸ್ಥಾಪಕರು ಸಹ ಸೈಬರ್ ಪೊಲೀಸರ ಹೆಸರಿನಲ್ಲಿ ಬೆದರಿಕೆಗೆ ಒಳಗಾಗಿ ದೊಡ್ಡ ಮೊತ್ತದ ಹಣ ಕಳೆದುಕೊಂಡ ಪ್ರಕರಣಗಳು ದಾಖಲಾಗಿವೆ. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರು ತಮ್ಮ ಹೆಸರಿಗೆ ಮಸಿ ಬಳಿಯಬಹುದು ಎಂಬ ಭಯದಿಂದ ವಂಚಕರು ಕೇಳಿದಷ್ಟು ಹಣ ನೀಡುತ್ತಿದ್ದಾರೆ.
ಬೆಂಗಳೂರಿನ ಸಂಜಯ್ ನಗರದಲ್ಲಿ ನಿವೃತ್ತ ಅಧಿಕಾರಿಯೊಬ್ಬರಿಂದ 2 ಕೋಟಿ ರೂ. ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಐಟಿ ಉದ್ಯೋಗಿಯೊಬ್ಬರಿಂದ 80 ಲಕ್ಷ ರೂ.ಗಳನ್ನು ಇದೇ ಮಾದರಿಯಲ್ಲಿ ದೋಚಲಾಗಿದೆ. ಇಂತಹ ಘಟನೆಗಳು ಬೆಂಗಳೂರಿನ ಶಿಕ್ಷಿತ ವರ್ಗದಲ್ಲೂ ಆತಂಕ ಮೂಡಿಸಿವೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಎಂಬುದು ಕಾನೂನಿನಲ್ಲಿ ಇರುವ ಪದವಲ್ಲ, ಇದು ಕೇವಲ ವಂಚಕರು ಸೃಷ್ಟಿಸಿದ ನಾಟಕ. ವಂಚಕರು ಹಂತ ಹಂತವಾಗಿ ಜನರನ್ನು ಬಲೆಗೆ ಬೀಳಿಸುತ್ತಾರೆ. ಆಧಾರ್ ಸಂಖ್ಯೆ ಅಥವಾ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಅಕ್ರಮ ಪಾರ್ಸೆಲ್ ಕಳುಹಿಸಲಾಗಿದೆ. ಅದರಲ್ಲಿ ಡ್ರಗ್ಸ್ ಅಥವಾ ನಕಲಿ ಪಾಸ್‌ಪೋರ್ಟ್ ಇದೆ ಎಂದು ಕರೆ ಮಾಡಿ ಹೆದರಿಸಲಾಗುತ್ತದೆ. ಇದಲ್ಲದೇ, ಸಿಬಿಐ ನಾರ್ಕೋಟಿಕ್ಸ್ ವಿಭಾಗ ಅಥವಾ ಪೊಲೀಸರಂತೆ ನಟಿಸಿ ಸ್ಕೈಪ್ ಅಥವಾ ವಾಟ್ಸಾಪ್ ವಿಡಿಯೋ ಕಾಲ್ ಮಾಡಲಾಗುತ್ತದೆ.
ಹಿನ್ನೆಲೆಯಲ್ಲಿ ನಕಲಿ ಪೊಲೀಸ್ ಠಾಣೆಯ ಸೆಟ್ ಇರುತ್ತದೆ ಮತ್ತು ಅವರು ಪೊಲೀಸ್ ಸಮವಸ್ತ್ರ ಧರಿಸಿರುತ್ತಾರೆ. ನಿಮ್ಮ ಮೇಲೆ ತನಿಖೆ ನಡೆಯುತ್ತಿದೆ, ನೀವು ವಿಡಿಯೋ ಕಾಲ್‌ನಿಂದ ಹೊರಬರುವಂತಿಲ್ಲ, ಯಾರಿಗೂ ಹೇಳುವಂತಿಲ್ಲ ಎಂದು ಬೆದರಿಸಿ ಬಲಿಪಶುವನ್ನು ಗಂಟೆಗಟ್ಟಲೆ ಅಥವಾ ದಿನಗಟ್ಟಲೆ 'ಡಿಜಿಟಲ್ ಬಂಧನ'ದಲ್ಲಿ ಇರಿಸುತ್ತಾರೆ.
ಪ್ರಕರಣದಿಂದ ಹೊರಬರಲು ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಾರೆ. ಭಯಗೊಂಡ ಜನರು ತಮ್ಮ ಜೀವನದ ಸಂಪಾದನೆಯನ್ನು ವಂಚಕರಿಗೆ ನೀಡಬೇಕಾಗುತ್ತದೆ.
ವಂಚನೆ ಹೆಚ್ಚಾಗಲು ಕಾರಣಗಳೇನು?
ವಂಚನೆ ತಡೆಯಲು ಇರುವ ಸುರಕ್ಷಾ ಕ್ರಮಗಳು
ಯಾವುದೇ ಅಪರಿಚಿತರು ಪೊಲೀಸ್ ಅಧಿಕಾರಿಗಳೆಂದು ಕರೆ ಮಾಡಿದರೆ ಗಾಬರಿಯಾಗಬೇಡಿ. ಸಮಾಧಾನವಾಗಿ ಯೋಚಿಸಬೇಕು. ಯಾವುದೇ ಸರ್ಕಾರಿ ಸಂಸ್ಥೆ ವಾಟ್ಸಾಪ್ ಅಥವಾ ಸ್ಕೈಪ್ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡುವುದಿಲ್ಲ. ಅಂತಹ ಕರೆ ಬಂದರೆ ತಕ್ಷಣ ಕಟ್ ಮಾಡಬೇಕು. ಪ್ರಶ್ನೆ ಮಾಡುವುದನ್ನು ಕಲಿಯಬೇಕು. ನನಗೆ ಅಧಿಕೃತ ನೋಟಿಸ್ ಕಳುಹಿಸಿ, ನಾನು ವಕೀಲರೊಂದಿಗೆ ಠಾಣೆಗೆ ಬರುತ್ತೇನೆ ಎಂದು ಧೈರ್ಯವಾಗಿ ಹೇಳಬೇಕು. ಹಣ ವರ್ಗಾಯಿಸಿದ ತಕ್ಷಣ ಅಥವಾ ಅಂತಹ ಕರೆ ಬಂದ ತಕ್ಷಣ '1930' ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಬಹುದು. ಮನೆಯ ಹಿರಿಯರಿಗೆ ಮತ್ತು ಮಕ್ಕಳಿಗೆ ಇಂತಹ ವಂಚನೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಗೊಳಿಸುವುದು ಅಗತ್ಯ. ಭಾರತೀಯ ಪೊಲೀಸರು ಅಥವಾ ನ್ಯಾಯಾಲಯಗಳು ಎಂದಿಗೂ ವಿಡಿಯೋ ಕಾಲ್ ಮೂಲಕ ಬಂಧನ ಮಾಡುವುದಿಲ್ಲ ಎಂಬುದು ಜನರಿಗೆ ತಿಳಿಯಬೇಕು. ಹಣ ವರ್ಗಾವಣೆಯಾದ ತಕ್ಷಣ (1-2 ಗಂಟೆಯೊಳಗೆ) 1930 ಸಂಖ್ಯೆಗೆ ಕರೆ ಮಾಡಿದರೆ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಶೇ. 80ರಷ್ಟು ಇರುತ್ತದೆ. ವಾಟ್ಸಾಪ್ ಅಥವಾ ಸ್ಕೈಪ್ ಮೂಲಕ ಬರುವ ಅನಾಮಧೇಯ ವಿಡಿಯೋ ಕರೆಗಳನ್ನು ಸ್ವೀಕರಿಸಬಾರದು.
ಡಿಜಿಟಲ್ ಅರೆಸ್ಟ್ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಆದರೆ ಇಂತಹ ಯಾವುದೇ ಬಂಧನವನ್ನು ಪೊಲೀಸರು ಮಾಡುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಇಂತಹ ಕರೆಗಳು ಬಂದರೆ ಭಯಭೀತರಾಗದೆ ಕರೆಯನ್ನು ಕಟ್ ಮಾಡಬಹುದು. ಅಲ್ಲದೇ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು. ಇಂತಹ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

