ಹುಬ್ಬಳ್ಳಿಯಲ್ಲಿ ಡಿಜಿಟಲ್‌ ಅರೆಸ್ಟ್‌; ವ್ಯಕ್ತಿಗೆ 1.07 ಕೋಟಿ ವಂಚನೆ
x

ಹುಬ್ಬಳ್ಳಿಯಲ್ಲಿ ಡಿಜಿಟಲ್‌ ಅರೆಸ್ಟ್‌; ವ್ಯಕ್ತಿಗೆ 1.07 ಕೋಟಿ ವಂಚನೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ “ಟ್ರಂಪ್ ಆ್ಯಪ್”, “ವರ್ಕ್ ಫ್ರಂ ಹೋಮ್” ಮತ್ತು “ಇನ್ವೆಸ್ಟ್‌ಮೆಂಟ್ ಟಾಸ್ಕ್” ಶೈಲಿಯ ವಂಚನೆಗಳಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.


ಹುಬ್ಬಳ್ಳಿಯ ಕೇಶ್ವಾಪುರದ ನಾಗೇಶ್ ಶರ್ಮಾ ಎಂಬುವರಿಗೆ ಮುಂಬೈ ಪೊಲೀಸರ ಹೆಸರಿನಲ್ಲಿ ಡಿಜಿಟಲ್‌ ಅರೆಸ್ಟ್‌ ಮಾಡುವುದಾಗಿ ಬೆದರಿಸಿ ವಾಟ್ಸ್ಆ್ಯಪ್ ವಿಡಿಯೊ ಕರೆ ಮೂಲಕ 1.07 ಕೋಟಿ ರೂ. ಲಪಟಾಯಿಸಿರುವ ಘಟನೆ ನಡೆದಿದೆ.

ನಾಗೇಶ್ ಶರ್ಮಾ ಅವರಿಗೆ ವಿಶ್ವಾಸ್ ಹಾಗೂ ಮತ್ತೊಬ್ಬ ವ್ಯಕ್ತಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ, “ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ನೀವು ನಡೆಸಿರುವ 2 ಕೋಟಿ ವ್ಯವಹಾರಕ್ಕೆ ಸಂಬಂಧಿಸಿ ಒ.ಎಂ. ಅಬ್ದುಲ್ ಸಲಾಮ್ ಅವರಿಂದ 20 ಲಕ್ಷ ಪಡೆದ ಬಗ್ಗೆ ಲೋಕಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಗಾಗಿ ನಿಮ್ಮ ಖಾತೆ ಸ್ಥಗಿತಗೊಳಿಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದೇವೆ. ಹಣ ಪಾವತಿಸಿದರೆ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹೇಳಿದ್ದಾರೆ.

ವಂಚಕರ ಬೆದರಿಕೆಗೆ ಹೆದರಿದ ನಾಗೇಶ್‌ ಶರ್ಮಾ ಅವರು ಹಂತ ಹಂತವಾಗಿ ಆರೋಪಿಗಳ ಖಾತೆಗೆ 1.07 ಕೋಟಿ ರೂ. ಆನ್ಲೈನ್ ಮೂಲಕ ವರ್ಗಾಯಿಸಿದ್ದಾರೆ. ಈ ಸಂಬಂಧ ತಿಳಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ಕ್ ಫ್ರಂ ಹೋಮ್ ಜಾಹೀರಾತು ಮೂಲಕ ವಂಚನೆ

ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ದೇಸಾಯಿ ನಗರದ ನಿವಾಸಿ ಅಕ್ಷತಾ ಅವರಾದಿ ಅವರು ಇನ್‌ಸ್ಟಾಗ್ರಾಂನಲ್ಲಿ “ವರ್ಕ್ ಫ್ರಂ ಹೋಮ್” ಜಾಹೀರಾತು ನೋಡಿ ವಂಚಕರ ಬಲೆಗೆ ಸಿಲುಕಿದ್ದಾರೆ.

ಜಾಹೀರಾತು ವೀಕ್ಷಿಸಿದ ತಕ್ಷಣ ವಂಚಕರು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ, “ಸೂಪರ್ ಗ್ರೂಪ್” ಹೆಸರಿನ ಗ್ರೂಪ್‌ಗೆ ಸೇರಿಸಿ ವಿವಿಧ ಟಾಸ್ಕ್‌ಗಳ ಹೆಸರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್‌ ಮತ್ತು ಫೋನ್‌ ಪೇ ಮೂಲಕ ಹಣ ವರ್ಗಾಯಿಸಿದ ಪರಿಣಾಮ ಒಟ್ಟು 19.49 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.

ಹೆಚ್ಚಿದ ಸೈಬರ್ ವಂಚಕರ ಹಾವಳಿ

ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ 590 ಕೋಟಿ ರೂ.ಗೂ ಹೆಚ್ಚು ಮೊತ್ತದ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕಳೆದ ತಿಂಗಳಲ್ಲೇ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, 16 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ “ಟ್ರಂಪ್ ಆ್ಯಪ್”, “ವರ್ಕ್ ಫ್ರಂ ಹೋಮ್” ಮತ್ತು “ಇನ್ವೆಸ್ಟ್‌ಮೆಂಟ್ ಟಾಸ್ಕ್” ಶೈಲಿಯ ವಂಚನೆಗಳಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

“ಯಾರಾದರೂ ವಾಟ್ಸ್ಆ್ಯಪ್ ಅಥವಾ ವಿಡಿಯೋ ಕರೆ ಮೂಲಕ ಪೊಲೀಸರ ಹೆಸರಿನಲ್ಲಿ ಬೆದರಿಸಿದರೆ, ಹಣ ವರ್ಗಾಯಿಸಬಾರದು. ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಠಾಣೆ ಸಂಪರ್ಕಿಸಿ ದೂರು ನೀಡಬೇಕು,” ಎಂದು ಪೊಲೀಸರು ಸಲಹೆ ನೀಡಿದ್ದಾರೆ.

Read More
Next Story