
ರಾಹುಲ್ ಭೇಟಿಗೆ 'ದೇಶದ್ರೋಹ' ಎಂದಿದ್ದ ಬಿಜೆಪಿ ಅಡ್ಡಾದಲ್ಲೇ ಚೀನಾ ಕಮ್ಯೂನಿಸ್ಟ್ ನಾಯಕರು!
2020ರ ಗಲ್ವಾನ್ ಸಂಘರ್ಷದ ನಂತರ ಮೊದಲ ಬಾರಿಗೆ ಬಿಜೆಪಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವೆ ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆದಿದೆ.
2020ರ ಗಲ್ವಾನ್ ಕಣಿವೆಯ ಭೀಕರ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು. ಆದರೆ, ಈಗ ರಾಜತಾಂತ್ರಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸೋಮವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ (CPC) ನಿಯೋಗದೊಂದಿಗೆ ಬಿಜೆಪಿ ನಾಯಕರು ಔಪಚಾರಿಕ ಮಾತುಕತೆ ನಡೆಸಿದ್ದಾರೆ.
ಸಿಪಿಸಿ ಅಂತರಾಷ್ಟ್ರೀಯ ವಿಭಾಗದ ಉಪ ಸಚಿವ ಸುನ್ ಹೈಯಾನ್ ನೇತೃತ್ವದ ನಿಯೋಗವು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ್ ಚೌತೈವಾಲೆ ಅವರನ್ನು ಭೇಟಿಯಾಯಿತು. ಈ ಭೇಟಿಯಲ್ಲಿ ಭಾರತದಲ್ಲಿನ ಚೀನಾ ರಾಯಭಾರಿ ಕ್ಸು ಫೀಹಾಂಗ್ ಕೂಡ ಉಪಸ್ಥಿತರಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಷ್ಯಾದ ಕಜನ್‌ನಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಐದು ವರ್ಷಗಳ ನಂತರ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅಲ್ಲಿ ಕೈಗೊಂಡ ನಿರ್ಧಾರದಂತೆ, ಗಡಿ ಭಾಗದಲ್ಲಿ ಸೈನ್ಯವನ್ನು ಹಿಂದಕ್ಕೆ ಪಡೆಯಲು ಮತ್ತು ರಾಜತಾಂತ್ರಿಕ ಸಂವಹನವನ್ನು ಪುನರಾರಂಭಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಅದರ ಮುಂದುವರಿದ ಭಾಗವೇ ಈ ಬಿಜೆಪಿ-ಸಿಪಿಸಿ ಭೇಟಿ.
ಇದು ಯಾಕೆ ಇಷ್ಟು ದೊಡ್ಡ ಸುದ್ದಿ?
2020ರಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ, ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಅಂದಿನಿಂದ ಇಂದಿನವರೆಗೆ ಯಾವುದೇ ಪಕ್ಷ ಮಟ್ಟದ ಅಧಿಕೃತ ಭೇಟಿಗಳು ನಡೆದಿರಲಿಲ್ಲ. ಸುಮಾರು 5 ವರ್ಷಗಳ ನಂತರ ಬಿಜೆಪಿಯು ಚೀನಾ ಆಡಳಿತ ಪಕ್ಷದೊಂದಿಗೆ ನೇರ ಸಂವಾದ ನಡೆಸಿರುವುದು ಉಭಯ ದೇಶಗಳ ನಡುವೆ ಸಂಬಂಧ ನಿಧಾನವಾಗಿ ಸುಧಾರಿಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಕಾಂಗ್ರೆಸ್ vs ಬಿಜೆಪಿ: ರಾಜಕೀಯ ಸಂಘರ್ಷ
ಈ ಭೇಟಿಯು ದೇಶೀಯ ರಾಜಕೀಯದಲ್ಲೂ ಭಾರಿ ಚರ್ಚೆ ಹುಟ್ಟುಹಾಕಿದೆ. 2018ರಲ್ಲಿ ರಾಹುಲ್ ಗಾಂಧಿ ಚೀನಾಕ್ಕೆ ಭೇಟಿ ನೀಡಿದ್ದಾಗ ಕಾಂಗ್ರೆಸ್ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವೆ 'ರಹಸ್ಯ ಒಪ್ಪಂದ' (MoU) ನಡೆದಿದೆ ಎಂದು ಬಿಜೆಪಿ ಈ ಹಿಂದೆ ಪದೇ ಪದೇ ಟೀಕಿಸಿತ್ತು. ಈಗ ಬಿಜೆಪಿಯೇ ಚೀನಾ ಜೊತೆ ಮಾತುಕತೆ ನಡೆಸುತ್ತಿರುವುದನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಪ್ರಧಾನಿ ಮೋದಿಯವರು ಚೀನಾಕ್ಕೆ ಹೆದರುತ್ತಿದ್ದಾರೆ ಮತ್ತು ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿಕೊಂಡಿದ್ದರೂ ಸುಮ್ಮನಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು.
ರಾಯಭಾರ ಕಚೇರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ
ಚೀನಾ ಕಮ್ಯುನಿಸ್ಟ್ ಪಕ್ಷದ (CPC) ನಿಯೋಗ ಭೇಟಿ ನೀಡಿದ ಬೆನ್ನಲ್ಲೇ, ಈ ಹಿಂದೆ ರಾಹುಲ್ ಗಾಂಧಿ ಅವರು ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. 2017ರಲ್ಲಿ ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್ ಗಡಿ ಬಿಕ್ಕಟ್ಟು ತಾರಕದಲ್ಲಿದ್ದಾಗ, ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಚೀನಾ ರಾಯಭಾರಿ ಲುವೋ ಝಾವೋಹುಯಿ ಅವರನ್ನು ಭೇಟಿಯಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್ ಪಕ್ಷವು ಈ ಭೇಟಿಯನ್ನು "ಸುಳ್ಳು ಸುದ್ದಿ" ಎಂದು ನಿರಾಕರಿಸಿತ್ತು. ಆದರೆ, ಚೀನಾ ರಾಯಭಾರಿ ಕಚೇರಿಯು ತನ್ನ ವೆಬ್‌ಸೈಟ್‌ನಲ್ಲಿ ಭೇಟಿಯ ಬಗ್ಗೆ ಮಾಹಿತಿ ಹಾಕಿದ ನಂತರ, ಕಾಂಗ್ರೆಸ್ ಇದನ್ನು ಒಪ್ಪಿಕೊಂಡಿತು.
ಬಿಜೆಪಿ ಈ ಭೇಟಿಯನ್ನು ದೇಶದ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಪದೇ ಪದೇ ಟೀಕಿಸುತ್ತಾ ಬಂದಿದೆ. ಗಡಿಯಲ್ಲಿ ಉದ್ವಿಗ್ನತೆ ಇರುವಾಗ ವಿರೋಧ ಪಕ್ಷದ ನಾಯಕರು ಸರ್ಕಾರದ ಗಮನಕ್ಕೆ ತರದೆ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದು ಯಾಕೆ? ಎಂದು ಬಿಜೆಪಿ ಪ್ರಶ್ನಿಸಿತ್ತು. ಇದೀಗ ಚೀನಾ ನಿಯೋಗ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಎಂಟ್ರಿ ಕೊಟ್ಟಿರುವುದು ಸಹಜವಾಗಿಯೇ ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.

