Attempted assault on singer for singing devotional song Jago Maa: Organizer arrested in West Bengal
x

ಬೆಂಗಾಲಿ ಗಾಯಕಿ ಲಗ್ನಜಿತಾ ಚಕ್ರವರ್ತಿ ಹಾಗೂ ಆರೋಪಿ ಮೆಹಬೂಬ್ ಮಲ್ಲಿಕ್

'ಜಾಗೋ ಮಾ' ಭಕ್ತಿಗೀತೆ ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆ ಯತ್ನ: ಪಶ್ಚಿಮ ಬಂಗಾಳದಲ್ಲಿ ಆಯೋಜಕನ ಬಂಧನ

'ಬಸಂತೋ ಏಶೆ ಗೆಚೆ' ಹಾಡಿನ ಮೂಲಕ ಖ್ಯಾತಿ ಗಳಿಸಿರುವ ಲಗ್ನಜಿತಾ, "ಆತ ನನ್ನ ಮೇಲೆ ದೈಹಿಕ ಹಲ್ಲೆ ಮಾಡಲು ಯತ್ನಿಸಿದ. ವೇದಿಕೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ," ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.


Click the Play button to hear this message in audio format

ಜನಪ್ರಿಯ ಬೆಂಗಾಲಿ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರು ವೇದಿಕೆ ಮೇಲೆ ಭಕ್ತಿಗೀತೆಯೊಂದನ್ನು ಹಾಡಿದ್ದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದ ಭಗವಾನ್‌ಪುರದಲ್ಲಿ ನಡೆದಿದೆ. ಈ ಸಂಬಂಧ ಮೆಹಬೂಬ್ ಮಲ್ಲಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ (ಡಿ.20) ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಲೈವ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರು ಕಾರ್ಯಕ್ರಮದ ವೇಳೆ ಪ್ರಸಿದ್ಧ ಬೆಂಗಾಲಿ ಭಕ್ತಿಗೀತೆ 'ಜಾಗೋ ಮಾ' (Jago Maa) ಹಾಡುತ್ತಿದ್ದರು. ಈ ವೇಳೆ ವೇದಿಕೆಗೆ ನುಗ್ಗಿದ ಆಯೋಜಕ ಮೆಹಬೂಬ್ ಮಲ್ಲಿಕ್, "ಸಾಕು ನಿನ್ನ 'ಜಾಗೋ ಮಾ', ಈಗಲೇ ಏನಾದರೂ ಜಾತ್ಯತೀತ (Secular) ಹಾಡು ಹಾಡು," ಎಂದು ಕೂಗಾಡಿದ್ದಾರೆ. ಅಷ್ಟೇ ಅಲ್ಲದೆ, ಪ್ರೇಕ್ಷಕರ ಮುಂದೆಯೇ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಲಗ್ನಜಿತಾ ಆರೋಪಿಸಿದ್ದಾರೆ.

'ಬಸಂತೋ ಏಶೆ ಗೆಚೆ' ಹಾಡಿನ ಮೂಲಕ ಖ್ಯಾತಿ ಗಳಿಸಿರುವ ಲಗ್ನಜಿತಾ, "ಆತ ನನ್ನ ಮೇಲೆ ದೈಹಿಕ ಹಲ್ಲೆ ಮಾಡಲು ಯತ್ನಿಸಿದ. ವೇದಿಕೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ," ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಸಹೋದರನ ಸಮರ್ಥನೆ:

ಆರೋಪಿ ಮೆಹಬೂಬ್ ಮಲ್ಲಿಕ್‌ನ ಸಹೋದರ ಮಸೂದ್ ಮಲ್ಲಿಕ್ ಈ ಆರೋಪಗಳನ್ನು ತಳ್ಳಿಹಾಕಿದ್ದು, "ಗಾಯಕಿ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಶಾಲಾ ಕಾರ್ಯಕ್ರಮವಾದ್ದರಿಂದ ಜಾತ್ಯತೀತ ಹಾಡು ಹಾಡುವಂತೆ ಕೇಳಲಾಗಿತ್ತು. ಆದರೆ ಅವರು ಅದಕ್ಕೆ ಒಪ್ಪದೆ ಪೊಲೀಸ್ ಠಾಣೆಗೆ ಹೋಗಿದ್ದಾರೆ," ಎಂದು ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ಲಗ್ನಜಿತಾ ಈ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ರಾಜಕೀಯ ತಿರುವು:

ಈ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಂಧಿತ ಆರೋಪಿಯು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಎಂದು ಬಿಜೆಪಿ ಆರೋಪಿಸಿದೆ. "ಹಿಂದೂ ವಿರೋಧಿ ಧೋರಣೆಯಿಂದಾಗಿ ಗಾಯಕಿಯನ್ನು ಗುರಿಯಾಗಿಸಲಾಗಿದೆ. ಪೊಲೀಸರು ಆರಂಭದಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ್ದರು," ಎಂದು ಬಿಜೆಪಿ ನಾಯಕ ಶಂಕುದೇವ್ ಪಾಂಡಾ ಕಿಡಿಕಾರಿದ್ದಾರೆ. ತೃಣಮೂಲ ಕಾಂಗ್ರೆಸ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಹಿರಿಯ ಪೊಲೀಸ್ ಅಧಿಕಾರಿ ಮಿಥುನ್ ಡೇ ಅವರು ಆರೋಪಿಯ ಬಂಧನವನ್ನು ದೃಢಪಡಿಸಿದ್ದು, ತನಿಖೆ ಮುಂದುವರಿದಿದೆ.

Read More
Next Story