ಅಖಿಲೇಶ್ ಯಾದವ್‌ಗೆ ಓವೈಸಿ ನೇರ ಸವಾಲ್: ಮುಸ್ಲಿಂ ಮತಗಳಿಗಾಗಿ ಶುರುವಾಯ್ತು ಮಹಾ ಯುದ್ಧ!
x
ಅಖಿಲೇಶ್‌ ಯಾದವ್‌ ಮತ್ತು ಅಸಾದುದ್ದೀನ್‌ ಓವೈಸಿ

ಅಖಿಲೇಶ್ ಯಾದವ್‌ಗೆ ಓವೈಸಿ ನೇರ ಸವಾಲ್: ಮುಸ್ಲಿಂ ಮತಗಳಿಗಾಗಿ ಶುರುವಾಯ್ತು ಮಹಾ ಯುದ್ಧ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಅಖಿಲೇಶ್ ಯಾದವ್ ಮತ್ತು ಓವೈಸಿ ನಡುವೆ ಜಟಾಪಟಿ ಶುರುವಾಗಿದೆ. ಮುಸ್ಲಿಂ ಮತಗಳ ಮೇಲೆ ಓವೈಸಿ ಕಣ್ಣಿಟ್ಟಿದ್ದು, ಅಖಿಲೇಶ್ ಅವರ ಕೋಟೆಯನ್ನು ಭೇದಿಸಲು ಪ್ಲಾನ್ ಮಾಡಿದ್ದಾರೆಯೇ? ವಿವರ ಇಲ್ಲಿದೆ.


ಮಹಾರಾಷ್ಟ್ರದ ಬಿಎಂಸಿ (BMC) ಚುನಾವಣೆಗಳ ಪ್ರಚಾರದ ಅಬ್ಬರ ಈಗ ಉತ್ತರ ಪ್ರದೇಶದ ರಾಜಕಾರಣದಲ್ಲಿ ಪ್ರತಿಧ್ವನಿಸುತ್ತಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ "ಅಂಗಡಿ ಬಂದ್ ಮಾಡಿಸುತ್ತೇನೆ" ಎಂದು ಬಹಿರಂಗವಾಗಿ ಸವಾಲು ಹಾಕುವ ಮೂಲಕ ಯುಪಿ ವಿಧಾನಸಭಾ ಚುನಾವಣೆಯ ರಣಕಳೆಯನ್ನು ಈಗಲೇ ಮೊಳಗಿಸಿದ್ದಾರೆ.

ಓವೈಸಿ ನೀಡಿದ ಸವಾಲೇನು?

ಮುಂಬೈನಲ್ಲಿ ಬಿಎಂಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ, "ಮುಸ್ಲಿಂ ರಾಜಕೀಯ ನಾಯಕತ್ವ ಮುನ್ನೆಲೆಗೆ ಬರಲಿದೆ. ಯಾವ ದಿನ ಅಲ್ಪಸಂಖ್ಯಾತ ನಾಯಕತ್ವ ಪ್ರಬಲವಾಗುತ್ತದೋ, ಅಂದು ಅಖಿಲೇಶ್ ಯಾದವ್ ಅವರ ಅಂಗಡಿ ಬಂದ್ ಆಗಲಿದೆ" ಎಂದು ಗುಡುಗಿದ್ದಾರೆ. ಬಿಹಾರದ ಸೀಮಾಂಚಲ್ ಭಾಗದಲ್ಲಿ ಸಾಧಿಸಿದ ಗೆಲುವಿನಿಂದ ಉತ್ಸಾಹಗೊಂಡಿರುವ ಓವೈಸಿ, ಈಗ ಯುಪಿಯಲ್ಲಿ ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ಮುಸ್ಲಿಂ ಮತಬ್ಯಾಂಕ್‌ಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ.

ಅಖಿಲೇಶ್ ವಿರುದ್ಧದ ಅಸಮಾಧಾನಗಳೇನು?

ಸಮಾಜವಾದಿ ಪಕ್ಷದ 'PDA' (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ತಂತ್ರಗಾರಿಕೆಯ ನಡುವೆಯೂ ಮುಸ್ಲಿಂ ಸಮುದಾಯದಲ್ಲಿ ಕೆಲವು ಅಸಮಾಧಾನಗಳು ಕೇಳಿಬರುತ್ತಿವೆ. ಮುಸ್ಲಿಂ ನಾಯಕರಾದ ಅಜಂ ಖಾನ್ ಅಥವಾ ಇರ್ಫಾನ್ ಸೋಲಂಕಿ ಅವರ ವಿರುದ್ಧ ಕ್ರಮ ಕೈಗೊಂಡಾಗ ಅಖಿಲೇಶ್ ಪ್ರಬಲವಾಗಿ ಪ್ರತಿಭಟಿಸಲಿಲ್ಲ ಎಂಬ ಟೀಕೆ ಇದೆ.

ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಕಡಿಮೆ ಟಿಕೆಟ್ ನೀಡಲಾಗಿತ್ತು. ಮೊರಾದಾಬಾದ್‌ನಲ್ಲಿ ಎಸ್.ಟಿ. ಹಸನ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ವರ್ಗಗಳನ್ನು ಓಲೈಸುವ ಭರದಲ್ಲಿ ಮುಸ್ಲಿಂ ಸಮಸ್ಯೆಗಳನ್ನು ಅಖಿಲೇಶ್ ಬದಿಗಿರಿಸುತ್ತಿದ್ದಾರೆ ಎಂಬುದು ಓವೈಸಿ ವಾದ.

ಅಂಕಿಅಂಶಗಳ ಲೆಕ್ಕಾಚಾರ

2024ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಅಖಿಲೇಶ್ ಅವರನ್ನು ಕೈಬಿಟ್ಟಿರಲಿಲ್ಲ. ಅಂಕಿಅಂಶಗಳ ಪ್ರಕಾರ ಶೇ. 92 ರಷ್ಟು ಮುಸ್ಲಿಂ ಮತದಾರರು ಯುಪಿಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಗೆ ಮತ ನೀಡಿದ್ದರು. ಸಂವಿಧಾನ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ಮತಗಳು ಎಸ್‌ಪಿ ಪರವಾಗಿ ಒಗ್ಗೂಡಿದ್ದವು.

ಬಿಜೆಪಿಯ 'ಬಿ ಟೀಮ್' ಎಂದ ಎಸ್‌ಪಿ

ಓವೈಸಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಸ್‌ಪಿ ವಕ್ತಾರ ಫಕ್ರುಲ್ ಹಸನ್ ಚಾಂದ್, "ಓವೈಸಿ ಬಿಜೆಪಿಯ 'ಬಿ ಟೀಮ್' ಎಂಬುದು ಎಲ್ಲರಿಗೂ ತಿಳಿದಿದೆ. ಬಿಎಂಸಿ ಚುನಾವಣೆಯಲ್ಲಿ ಅವರ ಒಳಒಪ್ಪಂದ ಬಯಲಾಗಿದೆ. ಯುಪಿಯಲ್ಲಿ ಪಿಡಿಎ (PDA) ಒಗ್ಗಟ್ಟಾಗಿದ್ದು, ಅಖಿಲೇಶ್ ಜೊತೆಗಿದೆ" ಎಂದಿದ್ದಾರೆ.

ಮಾಯಾವತಿ ಜೊತೆ ಮೈತ್ರಿ ಸಾಧ್ಯತೆಯೇ?

ರಾಜಕೀಯ ವಿಶ್ಲೇಷಕರ ಪ್ರಕಾರ, ಓವೈಸಿ ಒಬ್ಬರೇ ಯುಪಿಯಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿಲ್ಲ. ಆದರೆ, ಅವರು ಇತ್ತೀಚೆಗೆ ಮಾಯಾವತಿ ಅವರನ್ನು ಹೊಗಳುತ್ತಿರುವುದು ಹೊಸ ಮೈತ್ರಿಯ ಮುನ್ಸೂಚನೆ ನೀಡುತ್ತಿದೆ. ಒಂದು ವೇಳೆ ಬಿಎಸ್‌ಪಿ ಮತ್ತು ಎಐಎಂಐಎಂ ಒಂದಾದರೆ, ಪಶ್ಚಿಮ ಉತ್ತರ ಪ್ರದೇಶದ ಸಮೀಕರಣಗಳು ಬದಲಾಗಬಹುದು.

Read More
Next Story