ಎಐಎಂಐಎಂ ಹೈದರಾಬಾದ್ ಮೇಲೆ ಹಿಡಿತ ಸಾಧಿಸಿದ್ದು ಹೇಗೆ?
ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದ್ ಅಲ್-ಮುಸ್ಲಿಮಿನ್ (ಎಐಎಂಐಎಂ) ಚುನಾವಣೆ ಚಿಹ್ನೆಯಾದ ಗಾಳಿಪಟವು ಹಳೆಯ ಹೈದರಾಬಾದ್ ನಗರದಲ್ಲಿ ಗಗನಕ್ಕೇರಿದೆ. 1984ರಿಂದ ಎಐಎಂಐಎಂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದು, ಈವರೆಗೆ ಒಂದೇ ಒಂದು ಚುನಾವಣೆಯಲ್ಲಿ ಸೋತಿಲ್ಲ.
ಫೆಡರಲ್ ತೆಲಂಗಾಣ ಸ್ಥಳೀಯ ಮತದಾರರು ಮತ್ತು ವಿಶ್ಲೇಷಕರೊಂದಿಗೆ ನಡೆಸಿದ ಮಾತುಕತೆಯಿಂದ, ಮುಸ್ಲಿಂ ಜನಸಂಖ್ಯೆ ಮೇಲಿನ ಹಿಡಿತ ಮತ್ತು ಆಡಳಿತ ಪಕ್ಷದೊಂದಿಗಿನ ಸೌಹಾರ್ದಯುತ ಸಂಬಂಧದಿಂದ ಪಕ್ಷ ನಾಲ್ಕು ದಶಕ ಕಾಲ ನಿರಂತರ ಗೆಲುವು ಸಾಧಿಸಿದೆ ಎಂದು
ತಿಳಿದುಬಂದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಪಕ್ಷ ಹೈದರಾಬಾದ್ ಕ್ಷೇತ್ರದಿಂದ ಗೆಲ್ಲಲು ಈ ಅಂಶಗಳು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ.
ಸಾಂಪ್ರದಾಯಿಕ ಮುಸ್ಲಿಂ ಮತ ಬ್ಯಾಂಕ್; ಹೆಸರು ಹೇಳಲಿಚ್ಛಿಸದ ಹಳೆನಗರದ ನಿವಾಸಿಯೊಬ್ಬರು, ಮುಸ್ಲಿಂ ಮತದಾರರು ಅರ್ಧಕ್ಕಿಂತ ಹೆಚ್ಚು(ಶೇ.59)ಇರುವ ಕಾರಣ ಪಕ್ಷ ಸತತವಾಗಿ ಗೆಲುತ್ತಿದೆ ಎನ್ನುತ್ತಾರೆ. ಜೊತೆಗೆ, ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಶೇ.4.2, ಪರಿಶಿಷ್ಟ ಪಂಗಡದ ಶೇ.1.3 ಮತ್ತು ಶೇ.0.1 ಕ್ರೈಸ್ತ ಮತದಾರರಿದ್ದಾರೆ.
ಹೈದರಾಬಾದ್ ಲೋಕಸಭೆ ಕ್ಷೇತ್ರದಲ್ಲಿ 11 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಇವರಲ್ಲಿ ಹೆಚ್ಚಿನವರು ಕೂರ್ಮಗುಡ, ಕಾರವಾನ್, ಇಂದಿರಾನಗರ, ಪ್ರಶಾಂತ್ ನಗರ, ವಿನಯ್ ನಗರ, ಸಂತೋಷ ನಗರ, ಸಿಂಗರೇಣಿ ಕಾಲನಿ, ಜಿಯಗುಡ, ಬಾಪುನಗರ, ಶಿವಾಜಿನಗರ, ಲಕ್ಷ್ಮೀನಗರ, ಸಂಜಯ್ ನಗರ, ಕೇಶವಸ್ವಾಮಿನಗರ, ನರಸಿಂಹನಗರ, ಸಿಂಗರೇಣಿ ಹಟ್ಸ್, ನ್ಯೂ ಸತ್ಯನಾರಾಯಣ ನಗರ ಕಾಲನಿ, ಚೇಲಾಪುರ, ತಲಾಬ್ ಕಟ್ಟಾ, ಭವಾನಿನಗರ, ವೆಂಕಟೇಶ್ ನಗರ, ಕರ್ವಾನ್ ಸಾಹು, ದುರ್ಗಾನಗರ, ಹೀರಾನಗರ ಮತ್ತು ಬಂಡ್ಲಗುಡ ಪ್ರದೇಶಗಳಲ್ಲಿ ನೆಲೆಸಿದ್ದಾರೆ.
ಅಸದ್ ಭಾಯ್ ಮೇಲೆ ಏಕೆ ಮಮತೆ?: ಹಳೆಯ ನಗರದಲ್ಲಿರುವ ಸಮುದಾಯದ ಪ್ರತಿಯೊಂದು ಸಣ್ಣ ಅಗತ್ಯವನ್ನೂ ನೋಡಿಕೊಳ್ಳುವುದರಿಂದ ಓವೈಸಿ ಕುಟುಂಬಕ್ಕೆ ಮುಸ್ಲಿಮರು ಮತ ಹಾಕುತ್ತಾರೆ ಎಂದು ಚಂದ್ರಾಯನ ಗುಟ್ಟಾ ನಿವಾಸಿ ಬವರ್ಚಿ ಸೈಯದ್ ಗಫಾರ್ ಹೇಳಿದರು. 'ಸಲಾರ್ ಸಾಬ್' (ಸಲಾವುದ್ದೀನ್ ಓವೈಸಿ) ಅವರಿಂದ ಅವರ ಮಗ ಮತ್ತು ಪಕ್ಷದ ಪ್ರಸ್ತುತ ಅಧ್ಯಕ್ಷ ಅಸಾದುದ್ದೀನ್ ಓವೈಸಿಯವರೆಗೆ ಕಳೆದ ನಾಲ್ಕು ದಶಕಗಳಿಂದ ಓವೈಸಿ ಕುಟುಂಬಕ್ಕೆ ಗಫಾರ್ ಮತ ಹಾಕುತ್ತಿದ್ದಾರೆ.
ʻನನಗೆ ಏಳು ಹೆಣ್ಣುಮಕ್ಕಳು ಸೇರಿದಂತೆ ಒಂಬತ್ತು ಮಕ್ಕಳಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಗಂಡು ಮಕ್ಕಳು ಬ್ಯಾಟರಿ ಅಂಗಡಿಯಲ್ಲಿ, ಪತ್ನಿ ಮನೆ ಸಹಾಯಕಿಯಾಗಿ ಮತ್ತು ನಾನು ಫಂಕ್ಷನ್ ಹಾಲ್‌ಗಳಲ್ಲಿ ಅಡುಗೆ ಮಾಡುತ್ತೇನೆ. ನಮ್ಮ ಕಷ್ಟದಲ್ಲಿ ಸಹಾಯ ಮಾಡುವ ಅಸದ್ ಭಾಯ್ (ಅಸಾದುದ್ದೀನ್ ಓವೈಸಿ) ಅವರನ್ನು ನನ್ನ ಕುಟುಂಬ ಪ್ರೀತಿಸುತ್ತದೆ. ರಂಜಾನ್ ತಿಂಗಳಲ್ಲಿ ಬಡವರಿಗೆ ಉಚಿತ ರೇಷನ್ ಮತ್ತು ಬಟ್ಟೆ ನೀಡುತ್ತದೆ. ಕಾಯಿಲೆ ಬಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇದನ್ನು ಸಾಧ್ಯವಾಗಿಸಿದ ಅಸದ್ ಭಾಯ್ ಅವರಿಗೆ ನಾನು ಖಂಡಿತ ಮತ ಹಾಕುತ್ತೇನೆʼ ಎಂದರು.
ಮಜ್ಲಿಸ್ ಪಕ್ಷಕ್ಕೆ ಮತ: ಚಾರ್ಮಿನಾರ್ ಪ್ರದೇಶದ ಶೂ ಅಂಗಡಿಯ ಮಾಲೀಕ ಮೊಹಮ್ಮದ್ ಸೊಹೈಲ್ ಅವರ ಕುಟುಂಬ 'ಮಜ್ಲಿಸ್ ಪಕ್ಷ' (ಎಐಎಂಐಎಂ)ಕ್ಕೆ ಮತ ಹಾಕಿದೆ. ʻಹಳೆಯ ನಗರದ ಅಭಿವೃದ್ಧಿಗೆ ಎಐಎಂಐಎಂ ಮಾತ್ರ ಸಹಾಯ ಮಾಡುತ್ತದೆ. ಯಾವುದೇ ಚುನಾವಣೆಯಲ್ಲಿ ತಾನು ಅದಕ್ಕೆ ಮತ ಹಾಕುತ್ತೇನೆʼ ಎಂದು ಸೊಹೈಲ್ ಹೇಳುತ್ತಾರೆ.
ʻಅಸದ್ ಭಾಯ್ ಯಾವಾಗಲೂ ಲಭ್ಯವಿರುತ್ತಾರೆ ಮತ್ತು ಬಡವರಿಗೆ ಸಹಾಯ ಮಾಡುತ್ತಾರೆ. ಅವರ ನೆರವಾಗುವ ಸ್ವಭಾವದಿಂದ ಮತದಾರ ರು ಅವರ ಬೆನ್ನಿಗೆ ನಿಂತಿದ್ದಾರೆ. ಇದರಿಂದಾಗಿ ಕಳೆದ 40 ವರ್ಷಗಳಿಂದ ಎಐಎಂಐಎಂ ಹೈದರಾಬಾದ್ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಯಲ್ಲಿ ಜಯ ಗಳಿಸುತ್ತಿದೆʼ ಎಂದು ಹೇಳಿದರು.
ನಮಗೆ ಜಗಳ ಬೇಡ- ಹಿಂದೂಗಳು: ಕ್ಷೇತ್ರದ ಹಿಂದೂ ಮತದಾರರು ವಿಭಿನ್ನ ಕಥೆ ಹೇಳುತ್ತಾರೆ. ತಾವು ಈ ಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುವುದರಿಂದ ಎಐಎಂಐಎಂಗೆ ಮತ ಹಾಕಲು ಬಲವಂತಪಡಿಸಲಾಗಿದೆ. ಇಲ್ಲವಾದಲ್ಲಿ ತಮ್ಮನ್ನು ಪ್ರತ್ಯೇಕಿಸಿ 'ಗುರಿ' ಪಡಿಸುವ ಆತಂಕ ಕೆಲವರಲ್ಲಿದೆ.
ʻಇದರಿಂದ ಎಐಎಂಐಎಂಗೆ ಮತ ಹಾಕುತ್ತಿದ್ದೇನೆ. ಆದರೆ, ಈ ಬಾರಿ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದೇನೆʼ ಎಂದು ಪಟಬಸ್ತಿಯ ಲಾಲ್ ದರ್ವಾಜ ಪ್ರದೇಶದ ಮಾರಾಟಗಾರ ಕನಕಲಾರ ಅಶೋಕ್ ಹೇಳಿದರು. ಪದವಿ ಪಡೆದರೂ ಕೆಲಸ ಸಿಗದ ಕಾರಣ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಬೇಕಾಯಿತು ಎಂದು ಅಶೋಕ್ ಹೇಳಿದ್ದಾರೆ. ʻಪಟಬಸ್ತಿ ಚಾರ್ಮಿನಾರ್ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಮಜ್ಲಿಸ್ ವಿರೋಧಿಸಿದರೆ, ನಮ್ಮಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆʼ ಎಂದರು.
ಬಿಜೆಪಿಯ ನಗಣ್ಯ ಅಸ್ತಿತ್ವ: ಈ ಪ್ರದೇಶದಲ್ಲಿ ಬಿಜೆಪಿ ಅಸ್ತಿತ್ವ ನಗಣ್ಯವಾಗಿರುವುದರಿಂದ, ಹಿಂದೂ ಮತದಾರರು ಬೆಂಬಲಿಸುತ್ತಿಲ್ಲ; ಬದಲಿಗೆ ಮಜ್ಲಿಸ್ ಗೆ ಮತ ಹಾಕಬೇಕಾಗುತ್ತದೆ ಎಂದು ಹೇಳಿದರು. ʻಅನೇಕ ಹಿಂದೂಗಳು ಎಐಎಂಐಎಂಗೆ ಮತ ಹಾಕುತ್ತಾರೆ. ಏಕೆಂದರೆ, ಅವರಿಗೆ ಕಲಹ ಬೇಕಿಲ್ಲ. ಬಿಜೆಪಿ ಅಭ್ಯರ್ಥಿಗಳು ಹಿಂದೂಗಳಿಗೆ ಸಾಕಷ್ಟು ಆಶ್ವಾಸನೆ ನೀಡುವುದಿಲ್ಲ. ಆದ್ದರಿಂದ ಓಲ್ಡ್ ಟೌನ್ ನ ಹಿಂದೂ ಮತದಾರರು ಕೂಡ ಮಜ್ಲಿಸ್ ಬೆಂಬಲಿಸುತ್ತಾರೆʼ ಎಂದು ಹೇಳಿದರು.
ಚಾರ್ಮಿನಾರ್‌ನ ಜಾಮಾ ಮಸೀದಿಯಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಸಮಯದಲ್ಲಿ(ಮಧ್ಯಾಹ್ನ 1.30) ಹತ್ತಿರದ ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಗಂಟೆ ಬಾರಿಸಲಾಗುತ್ತದೆ ಮತ್ತು ಆರತಿ ಎತ್ತಲಾಗುತ್ತದೆ. ಶಸ್ತ್ರಸಜ್ಜಿತ ಪೊಲೀಸರ ಮೇಲ್ವಿಚಾರಣೆಯಲ್ಲಿ ಪೂಜೆ ನಡೆಯುತ್ತದೆ ಎಂದು ಅಶೋಕ್ ವಿವರಿಸಿದರು.
ಮಜ್ಲಿಸ್ ಗೆಲುವಿನ ಓಟ: ಹೈದರಾಬಾದ್ ಸಂಸದೀಯ ಕ್ಷೇತ್ರ ಮಲಕ್‌ಪೇಟ್, ಕಾರ್ವಾನ್, ಗೋಶಾಮಹಲ್, ಚಾರ್ಮಿನಾರ್, ಚಂದ್ರಾಯನ ಗುಟ್ಟಾ, ಯಾಕುತ್‌ಪುರ ಮತ್ತು ಬಹದ್ದೂರ್‌ಪುರ ಸೇರಿದಂತೆ 15 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿ ಶೇ. 73.34 ಅಧಿಕ ಸಾಕ್ಷರತೆ ಇದೆ.
ಅಸಾದುದ್ದೀನ್ ಅವರ ತಂದೆ ಸಲಾವುದ್ದೀನ್ ಅವರು 1984 ರಲ್ಲಿ ಮೊದಲ ಬಾರಿಗೆ ಇಲ್ಲಿ ಗೆದ್ದರು ಮತ್ತು ಆನಂತರ ಐದು ಅವಧಿ ಜಯ ಸಾಧಿಸಿದರು(1989, 1991, 1996, 1998, 1999). ಅಸಾದುದ್ದೀನ್ 2004 ರಲ್ಲಿ ಮೊದಲ ಬಾರಿ 1,00,000 ಅಂತರದಲ್ಲಿ ಗೆದ್ದರು. ಆನಂತರ 2009, 2014 ಮತ್ತು 2019 ರಲ್ಲ ಗೆಲುವು ಸಾಧಿಸಿದರು.
ಪ್ರಚಾರ ಆರಂಭ: ಅಸಾದುದ್ದೀನ್ ಅವರು ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣ ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿದರು. ಇತ್ತೀಚೆಗೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಪ್ರಾಬಲ್ಯದ ಕೊಳೆಗೇರಿಗಳಲ್ಲಿನ ಬಡವರನ್ನು ಭೇಟಿಯಾದರು. ಪಕ್ಷ ಇಫ್ತಾರ್ ಔತಣಕೂಟಗಳನ್ನುಕೂಡ ಆಯೋಜಿಸಿದೆ. ಮಾರ್ಚ್ 2 ರಂದು ಎಐಎಂಐಎಂನ ಪುನರುಜ್ಜೀವನ ದಿನದಂದು (1958 ರಲ್ಲಿ ಮೌಲ್ವಿ ಅಬ್ದುಲ್ ವಾಹೆದ್ ಓವೈಸಿ ಅವರಿಂದ ಆರಂಭ) ಬೃಹತ್ ಚುನಾವಣಾ ಪೂರ್ವ ಸಭೆಯನ್ನು ಆಯೋಜಿಸಿತ್ತು.
ಕಾಂಗ್ರೆಸ್ ಸರ್ಕಾರದ ಜೊತೆ ಒಡನಾಟ: ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರದಲ್ಲಿದ್ದಾಗ ಸೌಹಾರ್ದ ಸಂಬಂಧ ಹೊಂದಿದ್ದ ಎಐಎಂಐಎಂ, ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದೊಟ್ಟಿಗೂ ಸ್ನೇಹ ಸಂಬಂಧ ಹೊಂದಿದೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿನಿಂದ ಮಜ್ಲಿಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.
ರೇವಂತ್ , ಅಸಾದುದ್ದೀನ್ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಅವರನ್ನು ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಮಾಡಿದರು. ಮೂಸಿ ನದಿಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಲಂಡನ್ ಗೆ ಆಹ್ವಾನಿಸಿದರು. ಹೈದರಾಬಾದ್ ನಗರದ ಅಭಿವೃದ್ಧಿ ಕುರಿತ ಪರಿಶೀಲನೆ ಸಭೆಗಳಲ್ಲಿ ಅಕ್ಬರುದ್ದೀನ್ ಅವರ ಅಭಿಪ್ರಾಯಗಳಿಗೆ ಮುಖ್ಯಮಂತ್ರಿ ಪ್ರಾಮುಖ್ಯತೆ ನೀಡಿದರು.
ಡಮ್ಮಿ ಅಭ್ಯರ್ಥಿ ಕಣಕ್ಕಿಳಿಸಲು ವ್ಯವಹಾರ: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಎಂಐಎಂ ಜೊತೆ ಸ್ನೇಹ ಸ್ಥಾಪಿಸಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹಿಂದೂ ಮತಗಳನ್ನು ವಿಭಜಿಸಲು ಮತ್ತು ಬಿಜೆಪಿಗೆ ಅವಕಾಶಗಳನ್ನು ತಪ್ಪಿಸಲು, ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿ ಸಲು ನಾಯಕರು ನಿರ್ಧರಿಸಿದ್ದಾರೆ ಎಂದು ಎರಡೂ ಪಕ್ಷಗಳ ಮೂಲಗಳು ತಿಳಿಸಿವೆ. ಹೈದರಾಬಾದ್ ಕ್ಷೇತ್ರದಲ್ಲಿ ಅಸಾದುದ್ದೀನ್ ವಿರುದ್ಧ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರೇವಂತ್ ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇತ್ತೀಚೆಗೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎಐಎಂಐಎಂ ಅಭ್ಯರ್ಥಿಗಳಿಂದ ಪರಾಭವಗೊಂಡಿದ್ದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ರೇವಂತ್ ಅವರ ವರ್ತನೆಯಿಂದ ಕೋಪಗೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.
ಸಾನಿಯಾ ಸ್ಪರ್ಧೆಗೆ ಪ್ರಸ್ತಾವನೆ: ಹೈದರಾಬಾದ್‌ನಲ್ಲಿ ಅಸಾದುದ್ದೀನ್ ವಿರುದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಲು ತೆಲಂಗಾಣದ ಕಾಂಗ್ರೆಸ್ ಭಿನ್ನಮತೀಯ ನಾಯಕರು ಕೇಂದ್ರ ಚುನಾವಣಾ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ಎಐಎಂಐಎಂ ಈ ಬಾರಿಯೂ ಹೈದರಾಬಾದ್ ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಪಟಬಸ್ತಿಯ ರಾಜಕೀಯ ವಿಶ್ಲೇಷಕ ಮತ್ತು ಹಿರಿಯ ಪತ್ರಕರ್ತ ಮುಹಮ್ಮದ್ ಮುಜಾಹಿದ್ ʻಫೆಡರಲ್ ತೆಲಂಗಾಣʼಕ್ಕೆ ತಿಳಿಸಿದ್ದಾರೆ. ʻತನ್ನ ಅಭ್ಯರ್ಥಿಗಳ ವಿರುದ್ಧ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಮುಖ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಪಕ್ಷದ ಗೆಲುವಿಗೆ ಕಾರಣʼ ಎಂದು ಹೇಳಿದರು.
ʻಆಡಳಿತ ಪಕ್ಷದೊಟ್ಟಿಗೆ ಎಐಎಂಐಎಂ ಹೊಂದಾಣಿಕೆ ಕೆಲವು ದಶಕಗಳಿಂದ ನಡೆಯುತ್ತಿದೆ. ಮಜ್ಲಿಸ್ ಯಾರು ಅಧಿಕಾರದಲ್ಲಿದ್ದರೂ ಅವರಿಗೆ ಹತ್ತಿರವಾಗುತ್ತದೆ. ಆಡಳಿತ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡು ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಂತ್ರ ರೂಪಿಸುವುದು ಸಾಮಾನ್ಯʼ ಎಂದರು.