
ಸ್ಥಳೀಯ ಚುನಾವಣೆಯಲ್ಲಿ ಶರದ್ ಪವಾರ್ ಬಣದೊಂದಿಗೆ ಮೈತ್ರಿ: ಮಹಾಯುತಿ ಸರ್ಕಾರಕ್ಕೆ ಧಕ್ಕೆಯಿಲ್ಲ ಎಂದ ಅಜಿತ್ ಪವಾರ್
ಈ ಅಚ್ಚರಿಯ ಮೈತ್ರಿಯು ರಾಜ್ಯದ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿ ಬಿರುಕು ಮೂಡಿಸಬಹುದು ಎಂಬ ವದಂತಿಗಳನ್ನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಮುಂಬರುವ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ-ಎಸ್‌ಪಿ ಬಣಗಳು ಕೈಜೋಡಿಸಿವೆ. ಈ ಅಚ್ಚರಿಯ ಮೈತ್ರಿಯು ರಾಜ್ಯದ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿ ಬಿರುಕು ಮೂಡಿಸಬಹುದು ಎಂಬ ವದಂತಿಗಳನ್ನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, "ಸ್ಥಳೀಯ ಮಟ್ಟದಲ್ಲಿ ಎರಡೂ ಬಣಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮತಗಳು ವಿಭಜನೆಯಾಗುತ್ತವೆ ಎಂಬುದು ಕಾರ್ಯಕರ್ತರಿಗೆ ತಿಳಿದಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಎರಡೂ ಕಡೆಯ ಕಾರ್ಯಕರ್ತರು ಒಂದಾಗಿ ಹೋರಾಡಲು ನಿರ್ಧರಿಸಿದ್ದಾರೆ. ಇದು ಕೇವಲ ಸ್ಥಳೀಯ ಮಟ್ಟದ ತಂತ್ರಗಾರಿಕೆಯಾಗಿದ್ದು, ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ಮಹಾಯುತಿ ಮೈತ್ರಿಗೂ ಮುನ್ನವೇ ಒಪ್ಪಂದ
ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಮೈತ್ರಿಗಾಗಿ ನಮ್ಮನ್ನು ಸಂಪರ್ಕಿಸಿದ್ದು ತಡವಾಯಿತು ಎಂದು ಅಜಿತ್ ಪವಾರ್ ತಿಳಿಸಿದರು. "ನಮ್ಮ ಕಾರ್ಯಕರ್ತರು ಈಗಾಗಲೇ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅಷ್ಟೊತ್ತಿಗಾಗಲೇ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೂ ಆರಂಭವಾಗಿತ್ತು. ಹಾಗಾಗಿ ಶಿಂದೆ ಬಣದೊಂದಿಗೆ ಮೈತ್ರಿ ಸಾಧ್ಯವಾಗಲಿಲ್ಲ," ಎಂದರು.
ಈ ಮೈತ್ರಿಯನ್ನು ಸಮರ್ಥಿಸಿಕೊಂಡ ಅಜಿತ್ ಪವಾರ್ ಹಳೆಯ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದರು. "1999 ರಿಂದಲೂ ಎನ್‌ಸಿಪಿ ಮತ್ತು ಕಾಂಗ್ರೆಸ್ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಿವೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದವು. ಅದೇ ರೀತಿ 2017ರಲ್ಲಿ ಬಿಜೆಪಿ ಮತ್ತು ಶಿವಸೇನೆ ಕೂಡ ಮುಂಬೈ ಹಾಗೂ ಠಾಣೆ ಸ್ಥಳೀಯ ಚುನಾವಣೆಗಳಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದವು. ಹೀಗಾಗಿ ಈಗ ನಡೆಯುತ್ತಿರುವುದು ಹೊಸದೇನಲ್ಲ," ಎಂದು ಅವರು ವಿವರಿಸಿದರು.
ಜನವರಿ 16ಕ್ಕೆ ಫಲಿತಾಂಶ
ಜನವರಿ 15 ರಂದು ಮತದಾನ ನಡೆಯಲಿದ್ದು, ಜನವರಿ 16 ರಂದು ಫಲಿತಾಂಶ ಪ್ರಕಟವಾಗಲಿದೆ. "ಸ್ಥಳೀಯ ಮಟ್ಟದಲ್ಲಿ ನಾವು ಪರಸ್ಪರ ಸ್ಪರ್ಧಿಸಿದರೂ ಅಥವಾ ಮೈತ್ರಿ ಮಾಡಿಕೊಂಡರೂ, ಜನವರಿ 16ರ ನಂತರವೂ ಮಹಾರಾಷ್ಟ್ರ ಸರ್ಕಾರ ಎಂದಿನಂತೆ ಸುಗಮವಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ," ಎಂದು ಅಜಿತ್ ಪವಾರ್ ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯು ಮಹಾರಾಷ್ಟ್ರ ರಾಜಕೀಯದಲ್ಲಿ ಪವಾರ್ ಕುಟುಂಬದ ಪುನರ್ಮಿಲನದ ಸೂಚನೆಯೇ ಅಥವಾ ಕೇವಲ ಚುನಾವಣಾ ತಂತ್ರವೇ ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಜೋರಾಗಿದೆ.

