
ಕಾಂಗ್ರೆಸ್ ಸಿದ್ದಪಡಿಸಿರುವ ಎಐ ಚಿತ್ರ
ಪ್ರಧಾನಿ ಮೋದಿ ತಾಯಿ ಕುರಿತು ಎಐ ವಿಡಿಯೋ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಸೆಪ್ಟೆಂಬರ್ 10 ರಂದು ಬಿಹಾರ ಕಾಂಗ್ರೆಸ್ ಹಂಚಿಕೊಂಡಿರುವ ಈ ಎಐ ವಿಡಿಯೋದಲ್ಲಿ, ಪ್ರಧಾನಿ ಮೋದಿಯವರಿಗೆ ತಮ್ಮ ತಾಯಿ ಕನಸಿನಲ್ಲಿ ಬಂದು, "ಬಿಹಾರ ಚುನಾವಣೆಯಲ್ಲಿ ಮತಗಳನ್ನು ಕದಿಯುತ್ತಿದ್ದೀಯಲ್ಲಾ" ಎಂದು ಗದರಿಸುವಂತೆ ಚಿತ್ರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದಿವಂಗತ ತಾಯಿ ಹೀರಾಬೆನ್ ಅವರನ್ನು ಒಳಗೊಂಡ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಿಡಿಯೋವನ್ನು ಬಿಹಾರ ಕಾಂಗ್ರೆಸ್ ಘಟಕವು ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 10 ರಂದು ಬಿಹಾರ ಕಾಂಗ್ರೆಸ್ ಹಂಚಿಕೊಂಡಿರುವ ಈ ಎಐ ವಿಡಿಯೋದಲ್ಲಿ, ಪ್ರಧಾನಿ ಮೋದಿಯವರಿಗೆ ತಮ್ಮ ತಾಯಿ ಕನಸಿನಲ್ಲಿ ಬಂದು, "ಬಿಹಾರ ಚುನಾವಣೆಯಲ್ಲಿ ಮತಗಳನ್ನು ಕದಿಯುತ್ತಿದ್ದೀಯಲ್ಲಾ" ಎಂದು ಗದರಿಸುವಂತೆ ಚಿತ್ರಿಸಲಾಗಿದೆ.
ಬಿಜೆಪಿ ಆಕ್ರೋಶ
ಈ ವಿಡಿಯೋ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, "ಅಸಹ್ಯಕರ ವಿಡಿಯೋ ಹಂಚಿಕೊಳ್ಳುವ ಮೂಲಕ ಬಿಹಾರ ಕಾಂಗ್ರೆಸ್ ಎಲ್ಲಾ ಮಿತಿಗಳನ್ನು ಮೀರಿದೆ. ಈ ಪಕ್ಷವು ಗಾಂಧಿವಾದಿಯಲ್ಲ, ಮಹಿಳೆಯರು ಮತ್ತು ಮಾತೃಶಕ್ತಿಯನ್ನು ಅವಮಾನಿಸುವುದೇ ಕಾಂಗ್ರೆಸ್‌ನ ಗುಣ" ಎಂದು ಕಿಡಿಕಾರಿದ್ದಾರೆ.
ಹಿರಿಯ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಕೂಡ, "ರಾಜಕೀಯ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂಬುದನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ತೋರಿಸುತ್ತಿವೆ. ರಾಜಕೀಯ ಕೆಸರೆರಚಾಟಕ್ಕಾಗಿ ಬೇರೆಯವರ ತಾಯಿಯನ್ನು ನಿಂದಿಸುತ್ತಿರುವುದನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ," ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಮರ್ಥನೆ
ಆದಾಗ್ಯೂ, ಕಾಂಗ್ರೆಸ್ ನಾಯಕ ತಾರೀಕ್ ಅನ್ವರ್ ಈ ವಿಡಿಯೋವನ್ನು ಸಮರ್ಥಿಸಿಕೊಂಡಿದ್ದಾರೆ. "ತಾಯಿಯೊಬ್ಬಳು ತನ್ನ ಮಗನಿಗೆ ಬುದ್ಧಿ ಹೇಳುವ ಪ್ರಸಂಗದಲ್ಲಿ ಟೀಕಿಸುವುದಕ್ಕೆ ಏನಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.