ಗೀತಾ ಪಠಣ, ಕುರಾನ್ ಪಠಣದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಸಂವಿಧಾನ ಪಠಣಕ್ಕೆ ಕಾಂಗ್ರೆಸ್ ನಿರ್ಧಾರ
x

ಗೀತಾ ಪಠಣ, ಕುರಾನ್ ಪಠಣದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ 'ಸಂವಿಧಾನ ಪಠಣ'ಕ್ಕೆ ಕಾಂಗ್ರೆಸ್ ನಿರ್ಧಾರ

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ, ಡಿಸೆಂಬರ್ 20 ರಂದು ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ 'ಸಂವಿಧಾನ ಪಠಣ' ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.


Click the Play button to hear this message in audio format

ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಬೃಹತ್ ಭಗವದ್ಗೀತೆ ಪಠಣ ಮತ್ತು ಫೆಬ್ರವರಿಯಲ್ಲಿ ಕುರಾನ್ ಪಠಣ ಕಾರ್ಯಕ್ರಮ ನಡೆಸುವುದಾಗಿ ಅಮಾನತುಗೊಂಡಿರುವ ಟಿಎಂಸಿ ಶಾಸಕರೊಬ್ಬರು ಘೋಷಿಸಿದ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ತನ್ನ ಜಾತ್ಯತೀತ ನಿಲುವು ಪ್ರದರ್ಶಿಸಲು ಮುಂದಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ, ಡಿಸೆಂಬರ್ 20 ರಂದು ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ 'ಸಂವಿಧಾನ ಪಠಣ' ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಗುರುವಾರ (ಡಿಸೆಂಬರ್ 11) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸುಭಂಕರ್ ಸರ್ಕಾರ್, "ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 'ಸಹಸ್ರ ಕಂಠೇ ಸಂವಿಧಾನ ಪಾಠ' (ಸಾವಿರ ಧ್ವನಿಗಳಲ್ಲಿ ಸಂವಿಧಾನ ಪಠಣ) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದರು.

"ಡಿಸೆಂಬರ್ 20 ರಂದು ಮಧ್ಯಾಹ್ನ 1 ಗಂಟೆಗೆ ಕೋಲ್ಕತ್ತಾದ ಹೃದಯ ಭಾಗ ಧರ್ಮತಲಾದ ರಾಣಿ ರಾಶ್ಮೋನಿ ರಸ್ತೆಯಲ್ಲಿ 100 ಜನರು ಸಂವಿಧಾನವನ್ನು ಪಠಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯ, ಧರ್ಮ, ಮತ್ತು ಜಾತಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಮೂಲಭೂತ ಹಕ್ಕುಗಳನ್ನು ನೀಡುತ್ತದೆ" ಎಂದು ಅವರು ಹೇಳಿದರು. ಸಾಂವಿಧಾನಿಕ ರಕ್ಷಣೆಗಳ ಮೇಲಿನ ಕಳವಳ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಈ ಕಾರ್ಯಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳ ಸಾಂಕೇತಿಕ ಪ್ರತಿಪಾದನೆಯಾಗಿದೆ ಎಂದು ಸರ್ಕಾರ್ ಸ್ಪಷ್ಟಪಡಿಸಿದರು.

ರಾಜಕೀಯ ಜಿದ್ದಾಜಿದ್ದಿನ ಹಿನ್ನೆಲೆ

ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ 15 ವರ್ಷಗಳ ಟಿಎಂಸಿ ಆಡಳಿತವನ್ನು ಅಂತ್ಯಗೊಳಿಸಲು ವಿರೋಧ ಪಕ್ಷಗಳು ಸಜ್ಜಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಡಿಸೆಂಬರ್ 7 ರಂದು ಬಿಜೆಪಿ ಬೆಂಬಲದೊಂದಿಗೆ 'ಸನಾತನ ಸಂಸ್ಕೃತಿ ಸಂಸದ್' ಆಯೋಜಿಸಿದ್ದ 'ಪಾಂಚ್ ಲೊಕ್ಕೊ ಕಂಠೇ ಗೀತಾ ಪಾಠ' (ಐದು ಲಕ್ಷ ಧ್ವನಿಗಳಲ್ಲಿ ಗೀತಾ ಪಠಣ) ಕಾರ್ಯಕ್ರಮ ಭಾರೀ ಸದ್ದು ಮಾಡಿತ್ತು. ಪ್ರತಿಯಾಗಿ, ಅಮಾನತುಗೊಂಡಿರುವ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಫೆಬ್ರವರಿಯಲ್ಲಿ ಕುರಾನ್ ಪಠಣ ಕಾರ್ಯಕ್ರಮ ಆಯೋಜಿಸುವುದಾಗಿ ಘೋಷಿಸಿದ್ದರು. ಈ ಧಾರ್ಮಿಕ ಕಾರ್ಯಕ್ರಮಗಳ ನಡುವೆ, ಕಾಂಗ್ರೆಸ್ ಸಂವಿಧಾನವನ್ನು ಮುನ್ನೆಲೆಗೆ ತರುವ ಮೂಲಕ ತನ್ನ ಜಾತ್ಯತೀತ ನಿಲುವನ್ನು ಸ್ಪಷ್ಟಪಡಿಸಲು ಯತ್ನಿಸುತ್ತಿದೆ.

ಗೀತಾ ಪಠಣ ಕಾರ್ಯಕ್ರಮದಲ್ಲಿ ಗಲಾಟೆ: ಮೂವರ ಬಂಧನ

ಡಿಸೆಂಬರ್ 7 ರಂದು ಗೀತಾ ಪಠಣ ಕಾರ್ಯಕ್ರಮದ ವೇಳೆ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಚಿಕನ್ ಪ್ಯಾಟೀಸ್ ಮಾರುತ್ತಿದ್ದ ಇಬ್ಬರು ಆಹಾರ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಂಸಾಹಾರ ಮಾರಾಟ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವಕರ ಗುಂಪೊಂದು, ಮಾರಾಟಗಾರರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಆಹಾರವನ್ನು ಚೆಲ್ಲಿ, ಕಿವಿ ಹಿಡಿಸಿ ಬಸ್ಕಿ ಹೊಡೆಸಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಟಿಎಂಸಿ ಮತ್ತು ಸಿಪಿಐ(ಎಂ) ಪಕ್ಷಗಳು ರಾಜ್ಯದ ಜಾತ್ಯತೀತತೆಗೆ ಧಕ್ಕೆ ತರುವ ಯತ್ನ ಎಂದು ಆರೋಪಿಸಿ ಬಿಜೆಪಿಯನ್ನು ಗುರಿಯಾಗಿಸಿ ತೀವ್ರ ಖಂಡನೆ ವ್ಯಕ್ತಪಡಿಸಿವೆ.

Read More
Next Story