
ಸಚಿವ ಎಚ್.ಡಿ. ಕುಮಾರಸ್ವಾಮಿ
ಶಾಲಾ ಪಠ್ಯದಲ್ಲಿ ‘ಭಗವದ್ಗೀತೆ’ ಅಳವಡಿಕೆಗೆ ಎಚ್.ಡಿ.ಕೆ ಪತ್ರ: ಹಳೆಯ ಹೇಳಿಕೆ ಮುಂದಿಟ್ಟು ನೆಟ್ಟಿಗರ ಟೀಕೆ
ರಾಷ್ಟ್ರೀಯ ಶಿಕ್ಷಣ ನೀತಿಯು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ, ಗೀತೆಯ ಬೋಧನೆಗಳನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನೈತಿಕ ಮೌಲ್ಯ ಹಾಗೂ ಸಂಸ್ಕಾರವನ್ನು ಬಿತ್ತವ ಉದ್ದೇಶದಿಂದ ಶಾಲಾ ಪಠ್ಯಕ್ರಮದಲ್ಲಿ 'ಭಗವದ್ಗೀತೆ'ಯನ್ನು ಅಳವಡಿಸಬೇಕೆಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಆಶಯದಂತೆ ಈ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು
ಡಿಸೆಂಬರ್ 3ರಂದು ಬರೆದ ಪತ್ರದಲ್ಲಿ ಕುಮಾರಸ್ವಾಮಿಯವರು ಭಾರತದ ಸನಾತನ ಪರಂಪರೆ ಮತ್ತು ಜ್ಞಾನದ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಗೀತೆಯ ಸಾರವು ನಿಷ್ಕಾಮ ಕರ್ಮ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದನ್ನು ಕಲಿಸುತ್ತದೆ. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ 'ವಸುದೈವ ಕುಟುಂಬಕಂ' ಎಂಬ ಭಾರತೀಯ ಆದರ್ಶ ಮತ್ತು ಗೀತೆಯ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ, ಗೀತೆಯ ಬೋಧನೆಗಳನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಗವದ್ಗೀತೆಯ ಆಯ್ದ ಭಾಗಗಳನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಸ್ಥೈರ್ಯ ಮತ್ತು ಉತ್ತಮ ಚಾರಿತ್ರ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಇದು ಯುವಜನತೆಯನ್ನು ಜಾಗತಿಕ ಮಟ್ಟದಲ್ಲಿ ಶ್ರೇಷ್ಠರನ್ನಾಗಿ ಮಾಡಲು ಮತ್ತು ದೇಶದ ಜನಸಂಖ್ಯಾ ಲಾಭಾಂಶವನ್ನು ಬಲಪಡಿಸಲು ನೆರವಾಗಲಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ, ಶಿವಮೊಗ್ಗದ ಅನುಭವ ಪ್ರೇರಣೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನಾತನ ಧರ್ಮದ ತತ್ವಗಳನ್ನು ಪುನರುಚ್ಚರಿಸಿದ್ದನ್ನು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಸ್ಮರಿಸಿದ್ದಾರೆ. ಇದೇ ವೇಳೆ, ತಾವು ಶಿವಮೊಗ್ಗದಲ್ಲಿ ನಡೆದ ಗೀತಾ ಪಾರಾಯಣದಲ್ಲಿ ಭಾಗವಹಿಸಿದಾಗ, ಅಲ್ಲಿನ ಭಕ್ತಿಭಾವ ಮತ್ತು ಗೀತೆಯ ಶಕ್ತಿಯು ತಮಗೆ ಅದ್ಭುತ ಅನುಭವ ನೀಡಿತು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹಲವು ಪೋಷಕರು ಮತ್ತು ಸ್ಥಳೀಯ ಮುಖಂಡರು ಕೂಡ ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ತಮಗೆ ಮನವಿ ಮಾಡಿರುವುದಾಗಿ ಸಚಿವರು ಶಿಕ್ಷಣ ಸಚಿವರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರಹಾರ
ಒಂದೆಡೆ ಕುಮಾರಸ್ವಾಮಿ ಅವರು ಗೀತೆ ಅಳವಡಿಕೆಗೆ ಪತ್ರ ಬರೆದಿದ್ದರೆ, ಇನ್ನೊಂದೆಡೆ ಅವರ ಹಳೆಯ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. 2022ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಅಂದಿನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧಿಸುವ ಪ್ರಸ್ತಾಪ ಮಾಡಿದ್ದರು.
ಆ ಸಂದರ್ಭದಲ್ಲಿ ಜೆಡಿಎಸ್ ನಾಯಕರಾಗಿದ್ದ ಕುಮಾರಸ್ವಾಮಿ ಅವರು, "ಶಾಲೆಯಲ್ಲಿ ಭಗವದ್ಗೀತೆ ಕಲಿಸಿದರೆ ಮಕ್ಕಳ ಹೊಟ್ಟೆ ತುಂಬುತ್ತದೆಯೇ?" ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಇದೀಗ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಕೇಂದ್ರ ಸಚಿವರಾದ ಬಳಿಕ ಕುಮಾರಸ್ವಾಮಿ ಅವರ ನಿಲುವು ಬದಲಾಗಿರುವುದನ್ನು ಪ್ರಶ್ನಿಸಿರುವ ನೆಟ್ಟಿಗರು, ಅಂದಿನ ವಿಡಿಯೋ ಮತ್ತು ಹೇಳಿಕೆಗಳನ್ನು ಹಂಚಿಕೊಂಡು ವ್ಯಂಗ್ಯವಾಡುತ್ತಿದ್ದಾರೆ.

