ನಾಡೋಜ ಪದವಿಯ ಘನತೆಗೆ ಮಹೇಶ್‌ ಜೋಶಿ ಚ್ಯುತಿ: ವಾಪಸ್‌ ಪಡೆಯಲು ರಾಜ್ಯಪಾಲರಿಗೆ ಪತ್ರ
x

ನಾಡೋಜ ಪದವಿಯ ಘನತೆಗೆ ಮಹೇಶ್‌ ಜೋಶಿ ಚ್ಯುತಿ: ವಾಪಸ್‌ ಪಡೆಯಲು ರಾಜ್ಯಪಾಲರಿಗೆ ಪತ್ರ

ಭ್ರಷ್ಟಾಚಾರ ಆರೋಪದ ಮೇಲೆ ಕಸಾಪ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಮಹೇಶ್ ಜೋಶಿಗೆ ನೀಡಿರುವ 'ನಾಡೋಜ' ಗೌರವವನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಕಸಾಪ ಮಾಜಿ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಪತ್ರ ಬರೆದಿದ್ದಾರೆ.


Click the Play button to hear this message in audio format

ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಟ್ಟಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ 'ನಾಡೋಜ' ಪದವಿಯ ಪಾವಿತ್ರ್ಯತೆ ಬಗ್ಗೆ ಚರ್ಚೆ ಆರಂಭಗೊಂಡಿದೆ. ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪದ ಮೇಲೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಮಹೇಶ್ ಜೋಶಿ ಅವರಿಗೆ ನೀಡಿರುವ 'ನಾಡೋಜ' ಗೌರವವನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ಸಂಬಂಧ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಟ್‌ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಪತ್ರ ಬರೆದಿದ್ದಾರೆ. ಅಲ್ಲದೇ, ಅದರ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ, ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಮಹೇಶ್‌ ಜೋಶಿಯವರ ನಡವಳಿಕೆಯು ನಾಡೋಜ ಪದವಿಗೆ ಕಳಂಕ ತಂದಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ನಾಡೋಜ ಗೌರವವನ್ನು ಮಹೇಶ್ ಜೋಶಿಯವರು ಒಂದು ವೈಯಕ್ತಿಕ ಬಿರುದಿನಂತೆ ಬಳಸಿಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಸಂಶೋಧನೆ ನಡೆಸಿ ಪಿಎಚ್.ಡಿ ಪಡೆದವರು ಮಾತ್ರ ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಹೈಕೋರ್ಟ್‌ ಸ್ಪಷ್ಟ ಆದೇಶದಂತೆ, ಯಾವುದೇ ಗೌರವ ಡಾಕ್ಟರೇಟ್ ಅಥವಾ ನಾಡೋಜದಂತಹ ಗೌರವ ಪದವಿಗಳನ್ನು ಹೆಸರಿನ ಮುಂದೆ ಬಿರುದಿನಂತೆ ಬಳಸುವಂತಿಲ್ಲ. ಹೀಗಿದ್ದರೂ, ಮಹೇಶ್ ಜೋಶಿಯವರು ತಮ್ಮ ಅಧಿಕೃತ ಲೆಟರ್‌ಹೆಡ್‌ಗಳು, ಆಹ್ವಾನ ಪತ್ರಿಕೆಗಳು, ವಿಸಿಟಿಂಗ್ ಕಾರ್ಡ್‌ಗಳು ಮತ್ತು ನ್ಯಾಯಾಲಯದ ದಾಖಲೆಗಳಲ್ಲಿಯೂ ನಾಡೋಜ ಎಂದು ಬಳಸುತ್ತಾ ಬಂದಿದ್ದಾರೆ. ಇದು ಕೇವಲ ನಿಯಮದ ಉಲ್ಲಂಘನೆಯಲ್ಲದೆ, ನ್ಯಾಯಾಂಗ ನಿಂದನೆಯೂ ಆಗುತ್ತದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗೌರವ ಪೂರ್ವಕವಾಗಿ ನೀಡಿದ ಪದವಿಯನ್ನು ಅಹಂಕಾರದ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿರುವುದು ನಾಡಿನ ವಿದ್ವತ್ ವಲಯದಲ್ಲಿ ಅಸಮಾಧಾನ ಮೂಡಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಇರದ ರೀತಿಯಲ್ಲಿ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿಯವರನ್ನು ಸರ್ಕಾರ ಅಮಾನತುಗೊಳಿಸಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತ, ದಾಖಲೆಗಳ ತಿರುಚುವಿಕೆ ಮತ್ತು ಸರ್ವಾಧಿಕಾರಿ ಧೋರಣೆಗಳಂತಹ ಗಂಭೀರ ಆರೋಪಗಳು ಇವರ ಮೇಲೆ ಸಾಬೀತಾಗುತ್ತಿವೆ. ಪ್ರಸ್ತುತ ಕಸಾಪಕ್ಕೆ ಸರ್ಕಾರಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದು ಸಂಸ್ಥೆಯ ಇತಿಹಾಸಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದೆ. ಕನ್ನಡದ ಹಿರಿಯ ಸಾಹಿತಿಗಳಿಗೆ, ಚಿಂತಕರಿಗೆ ಮತ್ತು ಪರಿಷತ್ತಿನ ಸದಸ್ಯರಿಗೆ ಕಿರುಕುಳ ನೀಡಿರುವುದು, ಕಾನೂನಿನ ಬೆದರಿಕೆ ಹಾಕಿರುವುದು ಮತ್ತು ಒಡೆದಾಳುವ ನೀತಿಯನ್ನು ಅನುಸರಿಸಿರುವುದು ಮಹೇಶ್ ಜೋಶಿಯವರ ವ್ಯಕ್ತಿತ್ವದ ತೋರಿಸುತ್ತದೆ. ಇಂತಹ ನಡವಳಿಕೆಯುಳ್ಳ ವ್ಯಕ್ತಿಗೆ ಹಂಪಿ ವಿಶ್ವವಿದ್ಯಾಲಯದ ಅತ್ಯುನ್ನತ ಗೌರವ ಇರುವುದು ಸಮಸ್ತ ಕನ್ನಡಿಗರಿಗೆ ಮಾಡುವ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಮಹೇಶ್ ಜೋಶಿಯವರ ವಿರುದ್ಧ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ನಡೆದ ಒಂದು ಘಟನೆ ಅತ್ಯಂತ ಆಘಾತಕಾರಿಯಾಗಿದೆ. ಸರ್ಕಾರದ ಸಹಕಾರ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಡೆಸುತ್ತಿರುವ ತನಿಖೆಯಿಂದ ತಪ್ಪಿಸಿಕೊಳ್ಳಲು, ಮಹೇಶ್ ಜೋಶಿಯವರು ತಮ್ಮ ಸೋದರಿಯ ತಿಥಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂಬ ನೆಪವೊಡ್ಡಿ ವಿಮಾನದ ಟಿಕೆಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ನಂತರ ಆ ಟಿಕೆಟ್‌ಗಳನ್ನು ತಾವೇ ರದ್ದುಪಡಿಸಿರುವುದು ತನಿಖೆಯಿಂದ ಬಯಲಾಗಿದೆ. ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿ ವಂಚಿಸಲು ಯತ್ನಿಸಿದ ಈ ಕೃತ್ಯವನ್ನು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿ ಖಂಡಿಸಿದ್ದಾರೆ. ನಾಡೋಜ ಪುರಸ್ಕೃತ ವ್ಯಕ್ತಿ ನ್ಯಾಯಾಲಯದಂತಹ ಪವಿತ್ರ ಸ್ಥಾನಕ್ಕೆ ಸುಳ್ಳು ಮಾಹಿತಿ ನೀಡುವುದು ಆ ಪದವಿಯ ಘನತೆಯನ್ನು ಮಣ್ಣುಪಾಲು ಮಾಡಿದಂತಾಗಿದೆ. ಇಂತಹ ವ್ಯಕ್ತಿತ್ವದವರಿಗೆ ಗೌರವ ಪದವಿ ಮುಂದುವರಿಯುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ ಎಂದು ತಿಳಿಸಿದ್ದಾರೆ.

ಕೇವಲ ಸಾಹಿತ್ಯ ಪರಿಷತ್ತು ಮಾತ್ರವಲ್ಲದೆ, ಈ ಹಿಂದೆ ದೂರದರ್ಶನದಲ್ಲಿ ಉನ್ನತ ಹುದ್ದೆಯಲ್ಲಿದ್ದಾಗಲೂ ಮಹೇಶ್ ಜೋಶಿಯವರ ಮೇಲೆ ಇಂತಹದೇ ಆರೋಪಗಳಿದ್ದವು ಎಂಬುದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿನ ಸಿಬ್ಬಂದಿಗೆ ಕಿರುಕುಳ ನೀಡಿರುವುದು, ಅನೇಕರ ವೃತ್ತಿಜೀವನವನ್ನು ಹಾಳುಗೆಡವಿರುವುದು ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಪರೋಕ್ಷವಾಗಿ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. 2012ರಲ್ಲಿ ಇವರಿಗೆ ನಾಡೋಜ ನೀಡುವಾಗಲೇ ಇವರ ಹಿನ್ನೆಲೆಯ ಬಗ್ಗೆ ಸರಿಯಾದ ಪರಿಶೀಲನೆ ನಡೆದಿಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದಿದ್ದಾರೆ.

ಮಹೇಶ್ ಜೋಶಿಯವರ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಅವರಿಗೆ ನೀಡಿರುವ 'ನಾಡೋಜ' ಗೌರವವನ್ನು ತಕ್ಷಣವೇ ಹಿಂಪಡೆಯಬೇಕು.ಈ ಕುರಿತು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಬೇಕು. ಸರ್ಕಾರದ ಗುಪ್ತಚರ ಇಲಾಖೆ ಅಥವಾ ತನಿಖಾ ಸಂಸ್ಥೆಗಳ ಮೂಲಕ ಅವರ ಮೇಲಿರುವ ಆರೋಪಗಳ ಕುರಿತು ಮಾಹಿತಿ ಸಂಗ್ರಹಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಮುಂದೆ ಬೇರೆಯವರು ಇಂತಹ ನಡವಳಿಕೆಯನ್ನು ಅನುಸರಿಸದಂತೆ ಮತ್ತು ನಾಡೋಜ ಪದವಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ಕಠಿಣ ಸಂದೇಶವಾಗಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story