ಸಾಂಸ್ಕೃತಿಕ ಸಂಸ್ಥೆಯಲ್ಲಿ ಎಡ-ಬಲ ಸಂಘರ್ಷ: ಮಹೇಶ್‌ ಜೋಶಿ ಪಕ್ಕಕ್ಕೆ ಸರಿಸಿ‌ ಆಡಳಿತಾಧಿಕಾರಿ ನೇಮಿಸಲು ‌ಕಾರಣವೇನು?
x

ಸಾಂಸ್ಕೃತಿಕ ಸಂಸ್ಥೆಯಲ್ಲಿ ಎಡ-ಬಲ ಸಂಘರ್ಷ: ಮಹೇಶ್‌ ಜೋಶಿ ಪಕ್ಕಕ್ಕೆ ಸರಿಸಿ‌ ಆಡಳಿತಾಧಿಕಾರಿ ನೇಮಿಸಲು ‌ಕಾರಣವೇನು?

ಮಹೇಶ್‌ ಜೋಶಿ ವಿರುದ್ಧ ಕೇವಲ ಭ್ರಷ್ಟಾಚಾರ ಆರೋಪಗಳು ಮಾತ್ರವಲ್ಲದೇ ಜಿಲ್ಲಾ ಘಟಕಗಳ ನೇಮಕಾತಿಯಲ್ಲಿ ಸಮುದಾಯ ಆಧಾರಿತ ಪ್ರಭಾಗಳು ಹೆಚ್ಚಾಗಿದ್ದವು ಎಂಬ ಮಾತುಗಳು ಕೇಳಿಬಂದಿವೆ.


Click the Play button to hear this message in audio format

ಕನ್ನಡ ನಾಡು-ನುಡಿಯ ಸಂರಕ್ಷಣೆ, ಕನ್ನಡ ಭಾಷೆಗೆ ಶ್ರಮಿಸುತ್ತಿರುವ ಶತಮಾನದ ಸಾಂಸ್ಕೃತಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌, ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ಕೇಂದ್ರ ಬಿಂದುವಾಗಿದೆ. ಚಿಂತಕರ ಚಾವಡಿಯಲ್ಲಿ ಸಮಾಜ ಸೇವೆ, ಸಾಹಿತ್ಯ ಅಭಿವೃದ್ದಿ, ಕನ್ನಡ ಭಾಷಾ ಪ್ರಚಾರ ಎಂಬ ಮೂಲ ಉದ್ದೇಶಗಳು ಇತ್ತೀಚೆಗೆ ಎಡಪಂಥೀಯ ಮತ್ತು ಬಲಪಂಥೀಯ ಪ್ರಭಾವದ ಘರ್ಷಣೆಗೆ ಕಾರಣವಾಗಿದೆ.

ಸಾಹಿತ್ಯ ಸೇವೆ ಮತ್ತು ಸಾಂಸ್ಕೃತಿಕ ಏಕತೆ ಎಂಬ ಉದ್ದೇಶದಿಂದ ಜನ್ಮತಳೆದ ಪರಿಷತ್‌ನಲ್ಲಿ ಜಾತಿ ಆಧಾರಿತ ಗುಂಪುಗಳ ಪ್ರಭಾವ, ಅಧಿಕಾರ ಹಂಚಿಕೆ ಕಂಡು ಬರುತ್ತಿದ್ದು, ಸಾಹಿತ್ಯ ವಲಯದಲ್ಲಿ ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ. ಪರಿಷತ್‌ಗೆ ಯಾರೇ ಅಧ್ಯಕ್ಷರಾದರೂ ಸೈದ್ಧಾಂತಿಕ ರಾಜಕೀಯ ಕಾಣಬಹುದು. ಕೆಲವೊಬ್ಬರಲ್ಲಿ ಸೈದ್ಧಾಂತಿಕ ರಾಜಕೀಯವಿದ್ದರೂ ಸಂಪೂರ್ಣವಾಗಿ ಒಂದೆಡೆ ವಾಲದೆ ಸಮತೋಲನವಾಗಿ ತೂಗಿಸಿಕೊಂಡು ಹೋಗಿರುವ ಉದಾಹರಣೆಗಳಿವೆ. ಆದರೆ ಅಧ್ಯಕ್ಷ ಮಹೇಶ್‌ ಜೋಶಿ ಆಡಳಿತಾವಧಿಯಲ್ಲಿ ತುಸು ಹೆಚ್ಚಾಗಿಯೇ ಇಂತಹ ವಾತಾವರಣವಿದ್ದು, ಬಲಪಂಥದ ಕಡೆ ಹೆಚ್ಚು ಒಲವು ತೋರಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

ಮಹೇಶ್‌ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆ ಮತ್ತು ಹಣಕಾಸಿನ ಅವ್ಯವಹಾರದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರವು ಹಾಲಿ ಆಡಳಿತ ಮಂಡಳಿಯನ್ನು ವಜಾ ಮಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ. ಮುಂದಿನ ಮೂರು ತಿಂಗಳು ಅಥವಾ ಹಣಕಾಸಿನ ಅವ್ಯವಹಾರದ ತನಿಖೆ ಮುಗಿಯುವವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಹೇಶ್‌ ಜೋಶಿ ವಿರುದ್ಧ ಕೇವಲ ಭ್ರಷ್ಟಾಚಾರ ಆರೋಪಗಳು ಮಾತ್ರವಲ್ಲದೇ, ಪರಿಷತ್‌ನ ಆಂತರಿಕ ಚುನಾವಣೆಯಿಂದ ಹಿಡಿದು ಜಿಲ್ಲಾ ಘಟಕಗಳ ನೇಮಕಾತಿವರೆಗೆ ಸಮುದಾಯ ಆಧಾರಿತ ಪ್ರಭಾವಗಳು ಹೆಚ್ಚಾಗಿದ್ದವು. ಕೆಲವು ಜಿಲ್ಲೆಗಳಲ್ಲಿ ಪರಿಷತ್ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ನಿರ್ದಿಷ್ಟ ಸಮುದಾಯಗಳ ಪ್ರಭಾವದಿಂದ ಆಯ್ಕೆಯಾಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಪರಿಷತ್ ಸದಸ್ಯರ ಸಂಘಟನೆಗಳ ಪ್ರಕಾರ ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ ವೇದಿಕೆಯಂತಾಗಿದೆ. ಇಲ್ಲಿ ಸಾಹಿತ್ಯಕ್ಕಿಂತಲೂ ರಾಜಕೀಯ ಗುಂಪುಗಳ ಪ್ರಭಾವ ಹೆಚ್ಚಾಗಿದೆ. ಹೊಸ ಸದಸ್ಯತ್ವ ನೀಡುವಾಗಲೂ ಜಾತಿ-ಸಮುದಾಯದ ಆಧಾರದ ಮೇಲೆ ನಡೆಯುತ್ತಿದೆ. ಮಹೇಶ್ ಜೋಶಿ ಅವರ ನೇತೃತ್ವದ ಆಡಳಿತದ ವಿರುದ್ಧವೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. ಅವರ ವಿರೋಧಿಗಳು, ಪರಿಷತ್‌ನ ಪ್ರಮುಖ ಹುದ್ದೆಗಳಲ್ಲಿ ತಮ್ಮ ಸಮುದಾಯದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ, ಸಾಹಿತ್ಯ ಸಂಘಟನೆಗಳ ಹಿತಾಸಕ್ತಿಗಿಂತಲೂ ತಮ್ಮ ರಾಜಕೀಯ ಪ್ರಭಾವ ಉಳಿಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ.

ಬೈಲಾ ತಿದ್ದುಪಡಿಗೆ ಮುಂದಾಗಿದ್ದ ಮಹೇಶ್‌ ಜೋಶಿ

ಮಹೇಶ್‌ ಜೋಶಿ ತಮಗೆ ಬಂದಂತೆ ಬೈಲಾ ತಿದ್ದುಪಡಿಗೆ ಮುಂದಾಗಿದ್ದರು ಎಂದು ಹೇಳಲಾಗಿದೆ. ಮಹೇಶ್‌ ಜೋಶಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ತಿದ್ದುಪಡಿ ತರಲು ಮುಂದಾಗಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಪರಿಷತ್‌ನಲ್ಲಿ ಒಮ್ಮೆ ಅಧ್ಯಕ್ಷರಾದವರು ಸತತವಾಗಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬರುವುದಿಲ್ಲ. ಆದರೆ ಬೈಲಾಗೆ ತಿದ್ದುಪಡಿ ತಂದು ಮತ್ತೊಮ್ಮೆ ಅಧ್ಯಕ್ಷರಾಗುವ ಹುನ್ನಾರ ನಡೆಸಿದ್ದರು. ಇದಕ್ಕೆ ಪರಿಷತ್‌ನ ಸದಸ್ಯರಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೈಲಾ ತಿದ್ದುಪಡಿ ತರಲು ಪರಿಷತ್‌ನ ಕಾರ್ಯಪಾಲಕ ಸಮಿತಿ ಮತ್ತು ಸಾಮಾನ್ಯ ಸಭೆಯ ಅನುಮೋದನೆ ಪಡೆಯಲು ಮುಂದಾಗಿದ್ದರು. ಅಧ್ಯಕ್ಷರ ಅವಧಿಯು ಮೂರು ವರ್ಷಗಳಾಗಿದ್ದು, ಅದನ್ನು ಮಾಜಿ ಅಧ್ಯಕ್ಷ ಮನುಬಳಿಗಾರ್‌ ಐದು ವರ್ಷಕ್ಕೆ ಹೆಚ್ಚಿಸಿಕೊಂಡಿದ್ದರು. ನಂತರ ಬಂದ ಮಹೇಶ್‌ ಜೋಶಿ ಮತ್ತೆ ಐದು ವರ್ಷ ಮುಂದುವರಿಯಲು ಬೈಲಾ ತಿದ್ದುಪಡಿಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.

ಸಚಿವ ಸ್ಥಾನಮಾನ ಪಡೆದ ಅಧ್ಯಕ್ಷ

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸಚಿವ ದರ್ಜೆಯ ಸ್ಥಾನಮಾನ ಪಡೆದುಕೊಂಡಿರಲಿಲ್ಲ. ಆದರೆ, ಮಹೇಶ್‌ ಜೋಶಿ ತಮ್ಮ ಪ್ರಭಾವ ಬಳಸಿ ಸಚಿವ ಸ್ಥಾನಮಾನ ಪಡೆದುಕೊಂಡಿದ್ದರು. ಆದರೆ ಆ ಸ್ಥಾನವನ್ನು ಸದ್ಬಳಕೆ ಮಾಡಿಕೊಳ್ಳದೆ ಸದಸ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದರು. ಅಲ್ಲದೇ, ವ್ಯಾಪಕ ಭ್ರಷ್ಟಾಚಾರದ ಕುರಿತು ಸರ್ಕಾರಕ್ಕೆ ದೂರುಗಳು ಹೋಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ನೀಡಿದ್ದ ಸಚಿವ ದರ್ಜೆಯ ಸ್ಥಾನಮಾನವನ್ನು ಹಿಂಪಡೆಯಲಾಯಿತು.

ಸೈದ್ಧಾಂತಿಕ ರಾಜಕಾರಣದಲ್ಲಿ ಮುಂದಿದ್ದರು

ಮಹೇಶ್‌ ಜೋಶಿ ಸೈದ್ಧಾಂತಿಕ ರಾಜಕಾರಣ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರೊಬ್ಬರು, ಪ್ರತಿಯೊಬ್ಬ ಅಧ್ಯಕ್ಷರಿಗೂ ಅವರದೇ ಆದ ಸೈದ್ಧಾಂತಿಕ ವಿಚಾರಧಾರೆಗಳು ಇದ್ದೇ ಇರುತ್ತದೆ. ಆದರೆ, ಅತಿಯಾಗಿ ಸೈದ್ಧಾಂತಿಕ ವಿಚಾರಗಳನ್ನು ತಮ್ಮ ಸ್ಥಾನಮಾನದ ಮೇಲೆ ಹೇರುತ್ತಿರಲಿಲ್ಲ. ಸಮತೋಲನದಿಂದ‌ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದರು. ಆದರೆ, ಮಹೇಶ್‌ ಜೋಶಿ ಅವರು ಎಡ-ಬಲ ಪಂಥೀಯ ಸಂಘರ್ಷವನ್ನುಂಟು ಮಾಡಿದ್ದರು. ಅತಿಯಾಗಿ ಬಲಪಂಥೀಯ ಧೋರಣೆಗಳನ್ನು ಅನುಸರಿಸುತ್ತಿದ್ದರು. ಇದರಿಂದ ಬಹಳಷ್ಟು ಸದಸ್ಯರಿಗೆ ಕಿರಿಕಿರಿಯಾಗುತ್ತಿದ್ದು, ಸಾಹಿತ್ಯ ಕಾರ್ಯಗಳಿಗಿಂತ ಹೆಚ್ಚಾಗಿ ಜಾತಿ ರಾಜಕೀಯವೇ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೊದಲು ಅಧ್ಯಕ್ಷರಾಗಿದ್ದ ಡಾ.ಮನುಬಳಿಗಾರ್‌, ಪುಂಡಲೀಕ ಹಾಲಂಬಿ, ಪ್ರೊ.ಚಂದ್ರಶೇಖರ್‌ ಪಾಟೀಲ್‌ (ಚಂಪಾ) ಇವರು ಸಹ ಸೈದ್ಧಾಂತಿಕ ವಿಚಾರಧಾರೆಗಳನ್ನು ಹೊಂದಿದ್ದರು. ಆದರೆ ಎಂದಿಗೂ ಅದನ್ನು ತಮ್ಮ ಅಧ್ಯಕ್ಷಗಿರಿಯಲ್ಲಿ ತೋರಿಸುತ್ತಿರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಧಕ್ಕೆ ತರದಂತೆ ನಡೆದುಕೊಂಡಿದ್ದರು. ಮನುಬಳಿಗಾರ್‌ ಬಲಪಂಥೀಯ ಕಡೆ ಒಲವು ತೋರಿದ್ದರೆ, ಚಂಪಾ ಎಡಪಂಥೀಯದತ್ತ ಆಸಕ್ತಿ ಹೊಂದಿದ್ದರು. ಆದರೆ ಎಂದಿಗೂ ಅವರ ಕಾರ್ಯವೈಖರಿಯಲ್ಲಿ ಇದನ್ನು ತೋರಿಸುತ್ತಿರಲಿಲ್ಲ. ಸಾಹಿತ್ಯ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಆದರೆ, ಮಹೇಶ್‌ ಜೋಶಿ ತಮ್ಮ ಸೈದ್ಧಾಂತಿಕ ವಿಚಾರಗಳನ್ನು ಅಧ್ಯಕ್ಷ ಸ್ಥಾನದ ಮೂಲಕ ಹೇರುತ್ತಿದ್ದರು. ಸಾಹಿತ್ಯ ಕ್ಷೇತ್ರದ ಕೆಲಸಗಳಿಗಿಂತ ಹೆಚ್ಚಾಗಿ ಭ್ರಷ್ಟಾಚಾರದ ಕಡೆ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ದೂರುಗಳು ಸದಸ್ಯರಿಂದ ಕೇಳಿಬಂದಿವೆ.

2.50 ಕೋಟಿ ಬಳಕೆ ಪ್ರಮಾಣ ಪತ್ರ ಸಲ್ಲಿಸಿಲ್ಲ

ಪರಿಷತ್‌ನ 108ನೇ ವಾರ್ಷಿಕ ಅಧಿವೇಶನದ ವಾರ್ಷಿಕ ವರದಿಯಲ್ಲಿ ಹಾಗೂ 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಪರಿಷತ್ತಿನ ಕಚೇರಿಯ ವಾರ್ಷಿಕ ನಿರ್ವಹಣೆಯ ಕಾರ್ಯಗಳನ್ನು ವಿವಿಧ ಸಂಸ್ಥೆಗಳು ಕೈಗೊಂಡಿರುವುದರಲ್ಲಿ ಹಾಗೂ ಪರಿಷತ್ತಿನ ಕಾಮಗಾರಿಗಳಲ್ಲಿ ನ್ಯೂನತೆಗಳನ್ನು ಗಮನಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಸರ್ಕಾರದಿಂದ ಬಿಡುಗಡೆ ಮಾಡಿದ ಅನುದಾನದ ಪೈಕಿ 2.50 ಕೋಟಿ ಹಣದ ಬಳಕೆ ಪ್ರಮಾಣ ಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿಲ್ಲ. ಅನುದಾನ ವಿಧಿಸಲಾದ ಷರತ್ತು ಹಾಗೂ ನಿಬಂಧನೆಗಳ ರೀತ್ಯಾ ಬಳಸದೆ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಧ್ಯಕ್ಷರು ಆಡಳಿತದಿಂದ ದೂರ, ಜಿಲ್ಲಾ ಅಧ್ಯಕ್ಷರ ಸ್ಥಾನ ಅಬಾಧಿತ

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯಾಧ್ಯಕ್ಷರನ್ನು ಪರಿಷತ್ತಿನ ಆಡಳಿತದಿಂದ ದೂರ ಇಡಲಾಗಿದೆ. ಆದರೆ, ಉಳಿದ ಎಲ್ಲಾ ಜಿಲ್ಲಾಧ್ಯಕ್ಷರು ಎಂದಿನಂತೆ ಕಾರ್ಯಚಟುವಟಿಕೆಗಳನ್ನು ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಆಯಾ ಕೆಲಸಗಳ ಕುರಿತು ಆಡಳಿತಾಧಿಕಾರಿಯವರಿಗೆ ಲೆಕ್ಕಪತ್ರ ಸಲ್ಲಿಸಕು. ಯಾವುದೇ ಆರ್ಥಿಕ ಚಟುವಟಿಕೆ ನಡೆಸುವುದಿದ್ದರೂ ಆಡಳಿತಾಧಿಕಾರಿ ಅನುಮತಿ ಅಗತ್ಯವಾಗಿರುತ್ತದೆ.

ಮಹೇಶ್‌ ಜೋಶಿ ಭ್ರಷ್ಟಾಚಾರ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಈ ಹಿಂದೆ ನಾನು ಮತ್ತು ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದೇವೆ. ರಾಜ್ಯಾಧ್ಯಕ್ಷರು ಏಕಪಕ್ಷೀಯವಾಗಿ ತಾವೇ ಮಾತನಾಡಿ, ಕಾರ್ಯಕಾರಿ ಸಮಿತಿಯ ಚುನಾಯಿತ ಜಿಲ್ಲಾಧ್ಯಕ್ಷರಿಗೆ ಹಾಗೂ ಇತರ ಯಾರಿಗೂ ಮಾತನಾಡದಂತೆ ಕಾರ್ಯಕಾರಿ ಸಭೆ ನಡೆಸುತ್ತಿದ್ದ ನಡವಳಿಕೆಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿ, ರಾಜೀನಾಮೆ ನೀಡಿ ಹೊರಬಂದೆವು ಎಂದಿದ್ದಾರೆ.

Read More
Next Story