ರಾಜ್ಯದಲ್ಲಿ ಸರ್ಕಾರದ ಸಾಧನೆ ಶೂನ್ಯ : ಬಿ.ವೈ. ವಿಜಯೇಂದ್ರ ವಾಗ್ದಾಳಿ
x

ರಾಜ್ಯದಲ್ಲಿ ಸರ್ಕಾರದ ಸಾಧನೆ ಶೂನ್ಯ : ಬಿ.ವೈ. ವಿಜಯೇಂದ್ರ ವಾಗ್ದಾಳಿ

ಮುಂದಿನ ದಿನಗಳದ್ದು ಅನೇಕ ಚುನಾವಣೆಗಳ ದಿನಗಳಾಗಿದ್ದು, ಕಾರ್ಯಕರ್ತರ ಚುನಾವಣೆ ಮುಂದೆ ಬರಲಿದೆ. ಎಲ್ಲಾ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.


Click the Play button to hear this message in audio format

ಕಾಂಗ್ರೆಸ್‌ ಪಕ್ಷವು ದೇಶದಲ್ಲಿ ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್‌ನಲ್ಲಿ ಇಂದು ಆಯೋಜಿಸಲಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರು ಮತ್ತು ದಲಿತರ ಹತ್ಯೆಗಳು ಹೆಚ್ಚುತ್ತಿವೆ. ಸುರತ್ಕಲ್, ಯಲ್ಲಾಪುರದಲ್ಲಿನ ಹತ್ಯೆ ಇದಕ್ಕೆ ಸಾಕ್ಷಿಯಾಗಿವೆ. ಯಲ್ಲಾಪುರದ ದಲಿತ ಮಹಿಳೆ ಹತ್ಯೆ, ಕೊಪ್ಪಳದಲ್ಲಿ ದಲಿತ ವ್ಯಕ್ತಿಯ ಹತ್ಯೆಯಾದರೂ ಪರಿಹಾರ ನೀಡಿಲ್ಲ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾವೇರಿ ನದಿಯ ಉಗಮಸ್ಥಾನ ಮೈಸೂರು ಮಾದಕವಸ್ತುಗಳಿಗೆ ಉಗಮ ಸ್ಥಾನವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ರಾಜ್ಯ ಸರ್ಕಾರದ ಚಳಿ ಬಿಡಿಸುವ ಕೆಲಸವನ್ನು ಬಿಜೆಪಿ ರಾಜ್ಯ ಘಟಕ ಮಾಡುತ್ತಲೇ ಬಂದಿದೆ. ಮುಂದಿನ ದಿನಗಳದ್ದು ಅನೇಕ ಚುನಾವಣೆಗಳ ದಿನಗಳಾಗಿದ್ದು, ಕಾರ್ಯಕರ್ತರ ಚುನಾವಣೆ ಮುಂದೆ ಬರಲಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಬೇಕು. ಜಿಬಿಎ ಚುನಾವಣೆಯೂ ಬರಲಿದೆ. ಈ ನಡುವೆ ವಿಧಾನಸಭೆಯ ಎರಡು ಉಪ ಚುನಾವಣೆಗಳು ಬರಲಿದೆ. ಬಾಗೇಪಲ್ಲಿ ಉಪ ಚುನಾವಣೆಯೂ ಇದ್ದು, ಸರಣಿ ಚುನಾವಣೆಗಳು ಮುಂದಿನ ಆರೇಳು ತಿಂಗಳು ನಡೆಯಲಿವೆ. ಈ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಕರ್ನಾಟಕವು ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಫಲಿತಾಂಶ ತರಬೇಕು ಎಂದು ತಿಳಿಸಿದರು. ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಎಲ್ಲ ಹಿಂದುಳಿದ ಸಮುದಾಯಗಳನ್ನು, ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆಯನ್ನು ಸಂಪೂರ್ಣವಾಗಿ ಮರೆತಿದೆ ಎಂದು ಟೀಕಿಸಿದರು.

ಮೋದಿ ಜಾಗತಿಕ ಸಮರ್ಥ ನಾಯಕ

ಬಿಜೆಪಿ ಜಗತ್ತಿನಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ನಾಯಕತ್ವ ಹೊಂದಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿಶ್ವಗುರುವಾಗುವ ಸಂಕಲ್ಪದೊಂದಿಗೆ ಅವರು ದೇಶವನ್ನು ಮುನ್ನಡೆಸಲಾಗುತ್ತಿದೆ. ಸ್ವರಾಜ್ಯದ ಕನಸು ಬಿತ್ತಿದ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನೂ ಆಚರಿಸಲಾಗುತ್ತಿದೆ. ಇಂಥ ದೊಡ್ಡ ಪಕ್ಷದ ನೇತೃತ್ವವನ್ನು ಯುವಕ ನಿತಿನ್ ನಬೀನ್ ಅವರಿಗೆ ನೀಡಿದ್ದು, ಯುವಶಕ್ತಿಗೆ ಹೆಮ್ಮೆಯ ವಿಚಾರ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2047ನೇ ಇಸವಿಗೆ ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕವಾಗಿದೆ. ಭಾರತವನ್ನು ಯುಪಿಎ ಸರ್ಕಾರ ಇದ್ದಾಗ ಆರ್ಥಿಕವಾಗಿ ಗುರುತಿಸುತ್ತಿರಲಿಲ್ಲ. ಅಂತಹ ಭಾರತವು ಇದೀಗ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ನರೇಂದ್ರ ಮೋದಿ ದಿಟ್ಟ ನಾಯಕತ್ವ ಕಾರಣ. ವಿದೇಶಾಂಗ ನೀತಿ, ರಾಜತಾಂತ್ರಿಕ ನಡೆಯ ಪರಿಣಾಮವಾಗಿ ಯುರೋಪ್ ಒಕ್ಕೂಟವು ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಕೂಡ ಭಾರತದ ಜೊತೆಗಿನ ಸಂಬಂಧ ಉತ್ತಮ ಪಡಿಸಲು ತೆರಿಗೆ ಪ್ರಮಾಣವನ್ನು ಇಳಿಸಿದೆ. ನರೇಂದ್ರ ಮೋದಿ ಅವರಿಗೆ 25ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಗೌರವ ನೀಡಿವೆ. ಇದು ಮೋದಿ ಅವರ ನಾಯಕತ್ವಕ್ಕೆ ಸಿಕ್ಕಿದ ಗೌರವ ಎಂದು ಬಣ್ಣಿಸಿದರು.

ಕೇಂದ್ರ ಚುನಾವಣಾ ಆಯೋಗವು ಎಸ್‍ಐಆರ್ ಮಾಡುತ್ತಿದ್ದು, ರಾಜ್ಯದಲ್ಲೂ ಬರಲಿರುವ ಎಸ್‍ಐಆರ್ ಸಂಬಂಧ ಜಾಗ್ರತೆ ವಹಿಸಬೇಕಾಗಿದೆ. ವಿಬಿ ಜಿ ರಾಮ್ ಜಿ ಮೂಲಕ ಭ್ರಷ್ಟಾಚಾರ ನಿವಾರಣೆಗೆ ಸರ್ಕಾರ ಮುಂದಾಗಿದೆ. ಆದರೆ, ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ ಮತ್ತು ಹಳೆಯ ಚಾಳಿಯನ್ನು ಮುಂದುವರೆಸಿದೆ ಎಂದರು.

Read More
Next Story