ಬಜೆಟ್‌ 2026: ಐಟಿ-ಬಿಟಿ, ನವೋದ್ಯಮಗಳಿಗೆ ತೆರಿಗೆ ವಿನಾಯಿತಿ: ರಾಜ್ಯದ ನಿರೀಕ್ಷೆ ಅಪಾರ
x

ಎಐ ಆಧಾರಿತ ಚಿತ್ರ 

ಬಜೆಟ್‌ 2026: ಐಟಿ-ಬಿಟಿ, ನವೋದ್ಯಮಗಳಿಗೆ 'ತೆರಿಗೆ ವಿನಾಯಿತಿ': ರಾಜ್ಯದ ನಿರೀಕ್ಷೆ ಅಪಾರ

ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಐಟಿ-ಬಿಟಿ, ಸ್ಟಾರ್ಟ್‌ಆಪ್‌ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ, ಹೆಚ್ಚಿನ ಅನುದಾನ ಮತ್ತು ಉತ್ತೇಜನಕಾರಿ ಕ್ರಮ ಘೋಷಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.


Click the Play button to hear this message in audio format

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ ಮೇಲೆ ಸಿಲಿಕಾನ್‌ ಸಿಟಿಯ ಐಟಿ-ಬಿಟಿ ಮತ್ತು ನವೋದ್ಯಮ ಕ್ಷೇತ್ರ ಅಪಾರ ನಿರೀಕ್ಷೆ ಇಟ್ಟುಕೊಂಡಿವೆ. ದೇಶದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವಲಯವು ಪ್ರಮುಖ ಕ್ಷೇತ್ರವಾಗಿರುವುದರಿಂದ ಈ ಬಾರಿ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ, ಹೆಚ್ಚಿನ ಅನುದಾನ ಮತ್ತು ಉತ್ತೇಜನಕಾರಿ ಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಕೇಂದ್ರದ ಬಜೆಟ್‌ನಲ್ಲಿ ಐಟಿ-ಬಿಟಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಹೆಚ್ಚಿನ ಅನುದಾನ, ತೆರಿಗೆ ಸಡಿಲಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಐಟಿ ನೌಕರರಿಗೆ ಉನ್ನತ ತಂತ್ರಜ್ಞಾನ ತರಬೇತಿ ನೀಡಲು ವಿಶೇಷ ಯೋಜನೆ ರೂಪಿಸುವ ಸಾಧ್ಯತೆ ಇದೆ. ಸ್ಟಾರ್ಟ್‌ಆಪ್‌ಗಳಿಗೆ ತೆರಿಗೆ ವಿನಾಯಿತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇದೆ. ಸ್ಟಾರ್ಟ್‌ಆಪ್‌ಗಳು ಪ್ರತಿಭಾವಂತ ನೌಕರರನ್ನು ಆಕರ್ಷಿಸಲು ಉದ್ಯೋಗಿ ಸ್ಟಾಕ್‌ ಆಯ್ಕೆ ಯೋಜನೆ ಪ್ರಮುಖ ಯೋಜನೆಯಾಗಿದೆ. ಕಂಪನಿಯು ತನ್ನ ನೌಕರರಿಗೆ ರಿಯಾಯಿತಿ ದರದಲ್ಲಿ ಷೇರುಗಳನ್ನು ಖರೀದಿಸಲು ಅವಕಾಶ ನೀಡುವ ಯೋಜನೆಯಾಗಿದೆ. ಇದು ನೌಕರರನ್ನು ಕಂಪನಿಯ ಮಾಲೀಕತ್ವದಲ್ಲಿ ಪಾಲುದಾರರನ್ನಾಗಿ ಮಾಡಲಾಗುತ್ತದೆ. ಕಂಪನಿಯ ಬೆಳವಣಿಗೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸುಮಾರು 1.59 ಲಕ್ಷ ಸ್ಟಾರ್ಟ್‌ಅಪ್‌ಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂಬುದು ಕಂಪನಿಗಳ ಮನವಿಯಾಗಿದೆ.

ಕಂಪನಿಗಳು ವಿಲೀನಗೊಂಡಾಗ ಅಥವಾ ಸ್ವಾಧೀನ ಪ್ರಕ್ರಿಯೆ ನಡೆದಾಗ, ಅವುಗಳ ನಷ್ಟ ಮುಂದಿನ ವರ್ಷಕ್ಕೆ ಕೊಂಡೊಯ್ಯುವ ಸೌಲಭ್ಯವನ್ನು ಕೇವಲ ಉತ್ಪಾದನಾ ವಲಯಕ್ಕೆ ಸೀಮಿತಗೊಳಿಸದೆ, ಐಟಿ ಸೇವಾ ಸಂಸ್ಥೆಗಳಿಗೂ ವಿಸ್ತರಿಸಬೇಕು ಎಂಬುದು ಐಟಿ ವಲಯದ ಆಗ್ರಹವಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯೊಂದಿಗೆ ನವೋದ್ಯಮಗಳ ಆವಿಷ್ಕಾರಗಳು ಪ್ರಮುಖ ಪಾತ್ರವಹಿಸಲಿವೆ. ಈ ಹಿನ್ನೆಲೆಯಲ್ಲಿ ಬಜೆಟ್‌ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಇತರ ಜಿಲ್ಲೆಗಳಿಗೂ ಐಟಿ ವಿಸ್ಗರಿಸುವ ಘೋಷಣೆ ನಿರೀಕ್ಷೆ

ಬೆಂಗಳೂರು, ಮೈಸೂರಿನಲ್ಲಿ ಐಟ್‌ ಹಬ್‌ ಇದೆ. ಇದನ್ನು ಇತರೆ ಜಿಲ್ಲೆಗಳಿಗೆ ವಿಸ್ತರಿಸಲು ಕೇಂದ್ರದ ನೆರವು ಘೋಷಣೆಯಾಗುವ ನಿರೀಕ್ಷೆಯಲ್ಲಿದೆ. ಅಂತರರಾಷ್ಟ್ರೀಯ ಮಟ್ಟದ ಮೂಲಸೌಕರ್ಯಗಳನ್ನು ಉತ್ತೇಜಿಸಲು ಹೆಚ್ಚಿನ ಅನುದಾನ ಘೋಷಣೆಯಾಗುವ ಸಾಧ್ಯತೆ ಇದೆ ಎಂಬುದು ಸರ್ಕಾರದ ಅಶಾವಾದವಾಗಿದೆ. ಎಐ, ಸೆಮಿಕಂಡಕ್ಟರ್‌ಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಯವಾಗಿದೆ.

ಸ್ಟಾರ್ಟ್‌ಆಪ್‌ಗಳಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಬೇಕು ಎಂದು ಕೇಂದ್ರವನ್ನು ಕೋರಲಾಗಿದೆ. ಆದರೆ, ಈ ಬಗ್ಗೆ ಘೋಷಣೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಅಲ್ಲದೇ, ಎಐ ಮತ್ತು ಡಿಜಿಟಲ್‌ ತಂತ್ರಜ್ಞಾನದಲ್ಲಿ ರಾಜ್ಯದ ಯುವಜನತೆಗೆ ತರಬೇತಿ ನೀಡಲು ವಿಶೇಷ ಕೇಂದ್ರಗಳ ಸ್ಥಾಪನೆಯ ಅಗತ್ಯ ಇದೆ. ಇದು ಕೇಂದ್ರದಿಂದ ಲಭ್ಯವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ದೇಶದ ಆರ್ಥಿಕತೆಗೆ ಅತಿ ಹೆಚ್ಚು ಜಿಎಸ್‌ಟಿ ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರದಿಂದ ಹೆಚ್ಚಿನ ಹಂಚಿಕೆ ಮತ್ತು ಐಟಿ ವಲಯಕ್ಕೆ ಪೂರಕ ಬಜೆಟ್ ಇರಬೇಕೆಂಬುದು ಮುಖ್ಯ ನಿರೀಕ್ಷೆಯಾಗಿದೆ ಎಂದು ಮೂಲಗಳು ಹೇಳಿವೆ.

ಸೀಡ್ ಫಂಡ್ ಯೋಜನೆಗೆ ಮರುಜೀವ ಸಾಧ್ಯತೆ

2021ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು 'ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್' ಅನ್ನು ಆರಂಭಿಸಿತ್ತು. ಹೊಸ ಉದ್ಯಮಗಳು ಕೇವಲ ಕಲ್ಪನೆಯ ಹಂತದಿಂದ ಮಾರುಕಟ್ಟೆಗೆ ಪ್ರವೇಶಿಸಲು ಈ ಯೋಜನೆಯಡಿ 50 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಗಾಗಿ ಮೀಸಲಿಟ್ಟಿದ್ದ 945 ಕೋಟಿ ಅನುದಾನವು 2025ಕ್ಕೆ ಮುಕ್ತಾಯಗೊಂಡಿದೆ. ಯೋಜನೆಯು ಯಶಸ್ಸು ಕಂಡಿದ್ದು, ಇದನ್ನು ಐಟಿ ವಲಯ ಮತ್ತು ಸ್ಟಾರ್ಟ್‌ ಆಪ್‌ ಕ್ಷೇತ್ರವು ಗಮನಿಸಿದೆ. ಹೀಗಾಗಿ ಈ ಸೀಡ್ ಫಂಡ್ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದ್ದು, ಯೋಜನೆಯನ್ನು ಮುಂದುವರಿಸುವ ನಿರೀಕ್ಷೆ ಇದೆ. ಇದು ಹೊಸ ಉದ್ಯಮಿಗಳಿಗೆ ಬಂಡವಾಳದ ಕೊರತೆ ನೀಗಿಸಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ಮೂಲಸೌಕರ್ಯ ವಲಯವು ಆದ್ಯತಾ ವಲಯವಾಗಿದೆ. ಮೆಟ್ರೋಗಳ ವಿಸ್ತರಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೇ, ರಾಜ್ಯ ಸರ್ಕಾರಗಳು ಸಹ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಕ್ರಮ ಕೈಗೊಳ್ಳಬೇಕು,ವಿ. ರವಿಚಂದರ್‌, ಮೂಲಸೌಕರ್ಯ ತಜ್ಞ

ಮೂಲಸೌಕರ್ಯ ಕ್ಷೇತ್ರದಲ್ಲಿನ ನಿರೀಕ್ಷೆಗಳು

ಬಜೆಟ್‌ನಲ್ಲಿ ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ಲಭ್ಯವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಮೆಟ್ರೋ ವಿಸ್ತರಣೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡುವ ಸಾಧ್ಯತೆ ಇದೆ. ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳು ಕಾನೂನಾತ್ಮಕ ಗೊಂದಲಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

ಮೆಟ್ರೋ, ಬೆಂಗಳೂರು-ಕನಕಪುರ ರಸ್ತೆಯನ್ನು 6 ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೃಹತ್‌ ಕೈಗಾರಿಕಾ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿಗೆ ಅಗತ್ಯ ಇರುವ ಯೋಜನೆ ಮತ್ತು ರಾಜ್ಯದ ವಿವಿಧೆಡೆ ಇರುವ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ನಿರೀಕ್ಷೆ ಮಾಡಲಾಗಿದೆ. ಮೆಟ್ರೋ 2ನೇ ಹಂತದ ಪರಿಷ್ಕೃತ ದರಕ್ಕೆ ಒಪ್ಪಿಗೆ, ಮೆಟ್ರೋ 3ಎ ಹಂತಕ್ಕೆ ಅನುಮೋದನೆ, ಆರ್‌ಆರ್‌ಟಿಎಸ್ ಯೋಜನೆಗೆ ಬೆಂಬಲ, ಮಿಟ್ಟಗಾನಹಳ್ಳಿ ಕೆರೆ ಬಳಿ ವಿವಿಧ ಹಂತದ ತ್ಯಾಜ್ಯ ವಿಲೇವಾರಿಗೆ ಅನುಮತಿ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳಿಗೆ ಅನುಮತಿಗೆ ಒತ್ತಾಯಿಸಿರುವುದು ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಮೆಟ್ರೋ 2ನೇ ಹಂತದ ಯೋಜನೆ ಪೂರ್ಣಗೊಳಿಸುವ ಪರಿಷ್ಕೃತ ವೆಚ್ಚ 26,405 ಕೋಟಿ ರೂ.ನಿಂದ 40,425 ಕೋಟಿವರೆಗೆ ಏರಿಕೆಯಾಗಿದ್ದು, ಈ ಪ್ರಸ್ತಾವನೆಯನ್ನು ಕೇಂದ್ರ ಸಚಿವಾಲಯಕ್ಕೆ ಕಳೆದ ವರ್ಷದ ಜೂ.9 ರಂದು ಕಳುಹಿಸಿಕೊಟ್ಟಿತ್ತು. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿದೆ ಎಂಬ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿದ ಪ್ರಸ್ತಾವನೆಯಲ್ಲಿ ಮೆಟ್ರೋ 3ಎ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ. ಮೇಲ್ಲೇತುವೆ ಹಾಗೂ 14.45 ಕಿ.ಮೀ. ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ಅಂದಾಜು ಮಾಡಲಾಗಿದೆ.

ಈ ನಡುವೆ, ಬೆಂಗಳೂರು- ಕನಕಪುರ ರಸ್ತೆಯನ್ನು 6 ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರವು ಕೇಂದ್ರದ ನೆರವು ಕೋರಿದೆ. ಹೆಬ್ಬಾಳ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೇಲ್ಲೇತುವೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕೋರಿದ್ದು, ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸಿದೆ. ಹೆಚ್ಚುವರಿ ಅನುದಾನ ಸಿಕ್ಕರೆ ರಸ್ತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗಿದೆ. ರೈಲ್ವೆ ಕ್ಷೇತ್ರದಲ್ಲೂ ರಾಜ್ಯಕ್ಕೆ ಹೆಚ್ಚಿನ ನಿರೀಕ್ಷೆಯಿದೆ. ಈ ಬಾರಿ ಡಬಲ್ ಟ್ರ್ಯಾಕಿಂಗ್, ಹೊಸ ರೈಲು ಮಾರ್ಗಗಳು ಮತ್ತು ನಿಲ್ದಾಣ ಅಭಿವೃದ್ಧಿಗೆ ಈ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ. ಬಜೆಟ್‌ ಮಂಡನೆ ಬಳಿಕ ಯಾವೆಲ್ಲಾ ಸೌಲಭ್ಯ ರಾಜ್ಯಕ್ಕೆ ಸಿಗಲಿದೆ ಎಂಬುದು ಗೊತ್ತಾಗಲಿದೆ.

Read More
Next Story