16ನೇ ಹಣಕಾಸು ಆಯೋಗ: ದಕ್ಷಿಣ ರಾಜ್ಯಗಳ 50% ಬೇಡಿಕೆಗೆ ಕೇಂದ್ರ ಬಜೆಟ್‌ನಲ್ಲಿ ಮನ್ನಣೆ?
ತೆರಿಗೆ ಹಣದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬುದು ರಾಜ್ಯಗಳ ಕೂಗು. ಅದರಲ್ಲೂ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ದೊಡ್ಡ ಮಟ್ಟಿನ ಪ್ರತಿಭಟನೆಯನ್ನೇ ಮಾಡಿವೆ.

ಒಂದು ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಲಿರುವ 2026-27 ಮುಂಗಡ ಪತ್ರದ ಮೇಲೆ ಈ ಹೊಸ ನಿಬಂಧನೆಗಳು ಹೆಚ್ಚಿನ ಪ್ರಭಾವ ಬೀರುವ ನಿರೀಕ್ಷೆ ಹೊಂದಲಾಗಿದೆ.
ಹಣಕಾಸು ಆಯೋಗದ ಶಿಫಾರಸುಗಳು 2026ರ ಏಪ್ರಿಲ್ ಒಂದರಿಂದ 2031ರ ಮಾರ್ಚ್ 31ರವರೆಗೆ ಐದು ವರ್ಷಗಳ ಅವಧಿಯನ್ನು ಹೊಂದಿದೆ. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 27ರಿಂದ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸರ್ಕಾರವು ತನ್ನ ವಾರ್ಷಿಕ ಆರ್ಥಿಕ ಸಮೀಕ್ಷೆಯನ್ನು ಕೂಡ ಗುರುವಾರ 27ರಂದು ಸಂಸತ್ತಿನಲ್ಲಿ ಮಂಡಿಸಿದೆ.
ಸಂವಿಧಾನದ ಮೂಲಕ ಕಡ್ಡಾಯಗೊಳಿಸಿದಂತೆ ಹಣಕಾಸು ಆಯೋಗದ ಶಿಫಾರಸುಗಳನ್ನು ಕೂಡ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಮಂಡಿಸಲಾಗುತ್ತದೆ. 2025ರ ನವೆಂಬರ್ 17ರಂದು ಆಯೋಗದ ಅಧ್ಯಕ್ಷರಾದ ಅರವಿಂದ್ ಪನಗೇರಿಯಾ ಅವರು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ವರದಿಯನ್ನು ಸಲ್ಲಿಸಿದ್ದರು. ಇದಕ್ಕೂ ಮೊದಲು 2024ರ ನವೆಂಬರ್ 29ರಂದು ಕೇಂದ್ರ ಸಂಪುಟವು ಹಣಕಾಸು ಆಯೋಗದ ಪ್ರಸ್ತಾವನೆಗಳಿಗೆ ಸಮ್ಮತಿ ಸೂಚಿಸಿತ್ತು. ನಂತರ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಸುಮಾರು ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಿ ಶಿಫಾರಸುಗಳನ್ನು ಸಿದ್ಧಪಡಿಸಿತ್ತು.
ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಂಪನ್ಮೂಲಗಳನ್ನು ಒಂದು ನಿರ್ದಿಷ್ಟ ಸೂತ್ರದ ಆಧಾರದಲ್ಲಿ ಹೇಗೆ ಹಂಚಿಕೆ ಮಾಡಬೇಕು ಎಂಬುದನ್ನು ಹಣಕಾಸು ಆಯೋಗವು ತೀರ್ಮಾನಿಸುತ್ತದೆ. ತೆರಿಗೆಗಳ ವಿಭಜನಾ ಸಂಗ್ರಹದಿಂದ ಇದನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ (ನೇರವಾಗಿ) ಮತ್ತು ರಾಜ್ಯಗಳ ನಡುವೆ (ಸಮತಲವಾಗಿ) ಹಂಚಿಕೆ ಮಾಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ವಿಭಜನೆಯನ್ನು ನಿರ್ಧರಿಸುವುದರ ಹೊರತಾಗಿ ಕೇಂದ್ರದಿಂದ ರಾಜ್ಯಗಳಿಗೆ ವರ್ಗಾಯಿಸಲಾಗುವ ಸಹಾಯಾನುಧಾನಗಳನ್ನು (Grants-in-aid) ನಿಯಂತ್ರಿಸಲು ಯಾವ ತತ್ವಗಳನ್ನು ಅನುಸರಿಸಬೇಕು ಎಂಬುದನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಕೂಡ 16ನೇ ಹಣಕಾಸು ಆಯೋಗಕ್ಕೆ ನೀಡಲಾಗಿದೆ. ಇದರ ಜೊತೆಗೇ ಪಂಚಾಯತ್ ಮತ್ತು ಪುರಸಭೆಗಳ ಸಂಪನ್ಮೂಲಗಳನ್ನು ವೃದ್ಧಿಸಲು ರಾಜ್ಯಗಳ ನಿಧಿಯನ್ನು ಇನ್ನಷ್ಟು ಬಲಪಡಿಸಲು ಅಗತ್ಯವಿರುವ ಕ್ರಮಗಳನ್ನು ಸೂಚಿಸುವ ಕಾರ್ಯವನ್ನೂ ನೀಡಲಾಗಿದೆ.
ಶೇ.50ರಷ್ಟು ಪಾಲು: ರಾಜ್ಯಗಳ ಹಕ್ಕೊತ್ತಾಯ
ತೆರಿಗೆಗಳ ಹಂಚಿಕೆಯ ವಿಚಾರದಲ್ಲಿ ಹಣಕಾಸು ಆಯೋಗದ ಶಿಫಾರಸುಗಳು ರಾಜ್ಯಗಳ ಪಾಲಿಗೆ ನಿಜವಾದ ಸಂಜೀವಿನಿಯಾಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳು ಹಂಚಿಕೆಯಲ್ಲಿ ಶೇ.50ರಷ್ಟು ಹೆಚ್ಚಿನ ಪಾಲನ್ನು ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿರುವುದರಿಂದ ಈ ಬಾರಿಯ ಶಿಫಾರಸುಗಳ ಬಗ್ಗೆ ಭಾರೀ ಕುತೂಹಲ ಮೂಡಿದೆ.
14ನೇ ಹಣಕಾಸು ಆಯೋಗದ ಅಡಿಯಲ್ಲಿ ಈ ಪ್ರಮಾಣವು ಶೇ.42ರಷ್ಟಿತ್ತು. 15ನೇ ಹಣಕಾಸು ಆಯೋಗದಲ್ಲಿ ಇದನ್ನು ಶೇ.41ಕ್ಕೆ ಇಳಿಸಲಾಗಿತ್ತು. ಹದಿನಾರನೇ ಹಣಕಾಸು ಆಯೋಗವು ನಾನಾ ರಾಜ್ಯಗಳ ಜೊತೆಗೆ ನಡೆಸಿದ ಸಮಾಲೋಚನೆಯ ಸಂದರ್ಭದಲ್ಲಿ ತಮ್ಮ ಪಾಲನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂಬುದು ರಾಜ್ಯಗಳ ಆಗ್ರಹವಾಗಿತ್ತು.
ಆದರೆ ಇದನ್ನು ಶೇ.40ರ ಆಜೂಬಾಜಿನಲ್ಲಿ ಇಡಬೇಕು ಎಂಬುದು ಕೇಂದ್ರದ ಆಶಯವಾಗಿದೆ. ಸರ್ಕಾರದ ಸೂಚನೆಯಂತೆ ಈ ಹಣಕಾಸು ಹಂಚಿಕೆಯನ್ನು ಕಾರ್ಯ ದಕ್ಷತೆ ಜೊತೆಗೆ ಜೋಡಿಸಲಾಗುತ್ತದೆ. ಅಂದರೆ ಹಣಕಾಸನ್ನು ಜಾಣ್ಮೆಯಿಂದ ಮತ್ತು ಶಿಸ್ತಿನಿಂದ ನಿರ್ವಹಿಸುವ ರಾಜ್ಯಗಳಿಗೆ ಈ ಮೂಲಕ ಪ್ರತಿಫಲ ಸಿಗುವ ನಿರೀಕ್ಷೆ ಹೊಂದಲಾಗಿದೆ.
`ಆದಾಯದ ಅಂತರʼ ಎಂಬ ಮಾನದಂಡ
ಆಯೋಗದ ಶಿಫಾರಸಿನಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ ಸಮತಲವಾದ ಹಂಚಿಕೆ. ಅಂದರೆ ರಾಜ್ಯಗಳ ನಡುವೆಯೇ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ನಿರ್ಧರಿಸುವುದು.
ಹಿಂದಿನ 15ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ʼಆದಾಯದ ಅಂತರʼ ಎಂಬ ಮಾನದಂಡವು ಭಾರೀ ಕಳವಳಕ್ಕೆ ಕಾರಣವಾಗಿದ್ದನ್ನು ನೆನಪಿಸಿಕೊಳ್ಳಬಹುದು. ಅಂತಹ ಮಾನದಂಡವು ತೆರಿಗೆ ಹಣದ ಹಂಚಿಕೆಯಲ್ಲಿ ತಾರತಮ್ಯ ಸೃಷ್ಟಿಸುತ್ತದೆ ಎಂಬುದು ಟೀಕಾಕಾರರ ವಾದವಾಗಿತ್ತು.
ಹದಿನಾರನೇ ಹಣಕಾಸು ಆಯೋಗವು ಈ ʼಆದಾಯದ ಅಂತರʼ ಎಂಬ ಮಾನದಂಡದ ಪ್ರಾಮುಖ್ಯತೆಯನ್ನು ತಗ್ಗಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಹೆಚ್ಚು ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ರಾಜ್ಯಗಳು ಉತ್ತಮ ಅನುದಾನವನ್ನು ಪಡೆಯುವಂತೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.
ಮುಂಬರುವ ಜನಗಣತಿಯು ಹೊಸ ಸೂತ್ರದ ಅಡಿಯಲ್ಲಿ ರಾಜ್ಯಗಳ ಪಾಲನ್ನು ಮರುಹೊಂದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ ಜನಸಂಖ್ಯೆಯು ಕೂಡ ಹಂಚಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶವಾಗಿ ಮುಂದುವರಿಯಲಿದೆ.
ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ
ಹೊಸ ಆರ್ಥಿಕ ಚೌಕಟ್ಟಿನಲ್ಲಿ ಕಾರ್ಯದಕ್ಷತೆ ಮತ್ತು ಹಣಕಾಸಿನ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ. ಯಾವ ರಾಜ್ಯವು ಹಣಕಾಸು ನಿರ್ವಹಣೆಯಲ್ಲಿ ಶಿಸ್ತನ್ನು ಪ್ರದರ್ಶಿಸುತ್ತದೆ. ಮತ್ತು ವಿದ್ಯುತ್ ನಂತಹ ಕ್ಷೇತ್ರಗಳಲ್ಲಿ ಎರಡನೇ ಹಂತದ ಸುಧಾರಣೆಗಳನ್ನು ಜಾರಿಗೆ ತರುತ್ತದೆ. ಅಂತಹ ರಾಜ್ಯಗಳಿಗೆ ಹೆಚ್ಚಿನ ಪ್ರತಿಫಲ ಅಥವಾ ಅನುದಾನ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಇದು ʻಕಾರ್ಯಕ್ಷಮತೆ ಆಧಾರಿತ ಹಂಚಿಕೆʼಯ ಕಡೆಗೆ ಒಂದು ಪ್ರಮುಖ ಬದಲಾವಣೆಯಾಗಿದೆ. ಇಲ್ಲಿ ರಾಜ್ಯಗಳು ಕೇವಲ ಹಕ್ಕಿನ ಆಧಾರದ ಮೇಲೆ ಅನುದಾನವನ್ನು ಪಡೆಯುವುದಕ್ಕೆ ಬದಲಾಗಿ ಜವಾಬ್ದಾರಿಯುತ ಆಡಳಿತವನ್ನು ನಡೆಸಿದ್ದಕ್ಕಾಗಿ ಪ್ರೋತ್ಸಾಹಕಗಳನ್ನು ಪಡೆಯಲಿದೆ. 16ನೇ ಹಣಕಾಸು ಆಯೋಗವು ಈ ಅಂಶಗಳನ್ನು ತನ್ನ ಶಿಫಾರಸುಗಳನ್ನು ಅತ್ಯಂತ ಸ್ಪಷ್ಟವಾಗಿ ಸೇರ್ಪಡೆ ಮಾಡಿದೆ.
ಸ್ಥಳೀಯ ಸಂಸ್ಥೆಗಳ ಮೇಲೆ ಗಮನ
ಪಂಚಾಯತ್ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವ ನಿಧಿಯ ಮೇಲೂ ಈ ಶಿಫಾರಸುಗಳು ಒತ್ತು ನೀಡಿವೆ. ಅಭಿವೃದ್ಧಿ ಆದ್ಯತೆಗಳು ಕೇವಲ ಆರೋಗ್ಯ ಮತ್ತು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಅವುಗಳನ್ನೂ ಮೀರಿ ವಿಸ್ತರಿಸಬೇಕು ಎಂಬುದು ಆಯೋಗದ ಪ್ರತಿಪಾದನೆಯಾಗಿದೆ.
ಆಕಾಂಕ್ಷಿತ ಜಿಲ್ಲೆಗಳ ಹಣಕಾಸು ಸಾಮರ್ಥ್ಯ ಮತ್ತು ಅಭಿವೃದ್ಧಿಯ ಫಲಿತಾಂಶಗಳನ್ನು ಸುಧಾರಿಸುವ ಕಡೆಗೆ ಶಿಫಾರಸುಗಳಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ. ನಗರಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಉತ್ತಮ ಸಂಪನ್ಮೂಲ ಹಂಚಿಕೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
ಈ ವಿಧಾನವು ತಳಮಟ್ಟದ ಆಡಳಿತವನ್ನು ಬಲಪಡಿಸಲು ಮತ್ತು ಅಭಿವೃದ್ಧಿ ನಿಧಿಯನ್ನು ಹೆಚ್ಚು ಸಮತೋಲಿತವಾಗಿ ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
ವಿಪತ್ತು ಎದುರಿಸಲು ಸನ್ನದ್ಧತೆ
ಮತ್ತೊಂದು ನಿರ್ಣಾಯಕ ಅಂಶವೆಂದರೆ ವಿಪತ್ತು ನಿರ್ವಹಣೆ. ಎಲ್ಲಾ ರಾಜ್ಯಗಳಲ್ಲಿ ಭಾರತದ ಸನ್ನದ್ಧತೆ ಮತ್ತು ಸ್ಪಂದನಾ ವ್ಯವಸ್ಥೆಗಳನ್ನು ಸುಧಾರಿಸಲು ಕೇಂದ್ರದಿಂದ ವಿಶೇಷ ಅನುದಾನ ನೀಡುವಂತೆ ಆಯೋಗವು ಪ್ರಸ್ತಾಪಿಸಿದೆ. ವಿಪತ್ತು ಸಂಬಂಧಿತ ಧನಸಹಾಯವು ವ್ಯವಸ್ಥಿತವಾಗಿ ಲಭ್ಯವಾಗುವಂತೆ ಮಾಡುವುದು ಈ ನಿಬಂಧನೆಗಳ ಉದ್ದೇಶವಾಗಿದೆ, ಇದರಿಂದಾಗಿ ಬಿಕ್ಕಟ್ಟಿನ ಸಮಯದಲ್ಲಿ ತಾತ್ಕಾಲಿಕ ನಿರ್ಧಾರಗಳನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ. ವಿಪತ್ತು ನಿರ್ವಹಣೆಯ ಈ ಅಂಶವು ಮುಂಬರುವ ಐದು ವರ್ಷಗಳ ಕಾಲ ಹಣಕಾಸಿನ ಹೊಣೆಗಾರಿಕೆಗೆ ಮತ್ತೊಂದು ಆಯಾಮವನ್ನು ಸೇರ್ಪಡೆ ಮಾಡುತ್ತದೆ.
ಹಣ ಹಂಚಿಕೆ ಸರಿದೂಗಿಸುವ ಹೊಣೆ
ಈ ಶಿಫಾರಸುಗಳ ಅನುಷ್ಠಾನವು ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ಹಂಚಿಕೆ ಮಾಡುತ್ತಿಲ್ಲ ಎಂದು ಹಲವು ರಾಜ್ಯಗಳು ಆರೋಪಿಸಿದ್ದು, ಒಕ್ಕೂಟ ವ್ಯವಸ್ಥೆಯ ನ್ಯಾಯಸಮ್ಮತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
2026ರ ಬಜೆಟ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಪೈಪೋಟಿಯಿಂದ ಕೂಡಿದ ಬೇಡಿಕೆಗಳನ್ನು ಹೇಗೆ ಸರಿದೂಗಿಸುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕೇಂದ್ರದೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡಿರಲಿ ಅಥವಾ ಇಲ್ಲದಿರಲಿ, ಈ ಹಂಚಿಕೆಯು ಎಲ್ಲಾ ರಾಜ್ಯಗಳ ನಡುವೆ ಸಮಾನವಾಗಿ ಮತ್ತು ನ್ಯಾಯಯುತವಾಗಿ ವಿತರಣೆಯಾಗುತ್ತದೆಯೇ ಎಂಬುದನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.

