Protest by employees demanding fulfillment of various demands, will transport traffic across the state be disrupted tomorrow?
x

ಕೆಎಸ್‌ಆರ್‌ಟಿಸಿ

ನಾಳೆ ಸಾರಿಗೆ ನೌಕರರಿಂದ 'ಬೆಂಗಳೂರು ಚಲೋ': ರಾಜ್ಯಾದ್ಯಂತ ಬಸ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ!

ಸಾರಿಗೆ ನೌಕರರ ಮುಖಂಡ ಅನಂತ್‌ ಸುಬ್ಬರಾವ್ ನಿಧನದ ಹಿನ್ನೆಲೆ ಕಳೆದ ಬಾರಿ ನಿರ್ಧರಿಸಲಾಗಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಇದೀಗ ಸಾರಿಗೆ ನೌಕರರು ಮತ್ತೊಮ್ಮೆ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.


Click the Play button to hear this message in audio format

ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಗುರುವಾರ (ಫೆ. 19) ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಈ 'ಬೆಂಗಳೂರು ಚಲೋ' ಮುಷ್ಕರದಲ್ಲಿ ಸಾವಿರಾರು ನೌಕರರು ಭಾಗವಹಿಸಲಿದ್ದು, ರಾಜ್ಯಾದ್ಯಂತ ಬಸ್ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರು ಒಗ್ಗಟ್ಟಾಗಿ ಪ್ರತಿಭಟನೆಗೆ ಇಳಿದಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೌಕರರ ಪ್ರಮುಖ ಬೇಡಿಕೆಗಳೇನು?

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಪ್ರಮುಖ ಬೇಡಿಕೆಗಳಿವೆ. 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ. 15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೂಡಲೇ ಪಾವತಿಸಬೇಕು. 2024ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಸರ್ಕಾರ ಈ ಬೇಡಿಕೆಗಳಿಗೆ ಪೂರ್ಣ ಒಪ್ಪಿಗೆ ಸೂಚಿಸಿಲ್ಲ. 2024ರ ಬದಲಿಗೆ 2026ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಮತ್ತು 38 ತಿಂಗಳ ಹಿಂಬಾಕಿ ಬದಲಿಗೆ ಕೇವಲ 20 ತಿಂಗಳ ಬಾಕಿ ಹಣ ನೀಡುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಈ ಪ್ರಸ್ತಾಪವನ್ನು ಒಪ್ಪದ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಸಾರಿಗೆ ನಿಗಮಕ್ಕೆ ಕೋಟ್ಯಂತರ ನಷ್ಟ?

ಪ್ರತಿ ದಿನ ರಾಜ್ಯದ ನಾಲ್ಕು ನಿಗಮಗಳಿಂದ ಸುಮಾರು 25,000ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. 'ಶಕ್ತಿ' ಯೋಜನೆ ಜಾರಿಯಾದ ಬಳಿಕ (2025ರ ನವೆಂಬರ್ ಅಂಕಿಅಂಶಗಳ ಪ್ರಕಾರ) ನಿಗಮವು ದಿನವೊಂದಕ್ಕೆ ಸರಾಸರಿ 15.32 ಕೋಟಿ ರೂ. ಆದಾಯ ಗಳಿಸುತ್ತಿದೆ. ಪ್ರತಿದಿನ 30 ಲಕ್ಷಕ್ಕೂ ಹೆಚ್ಚು ಕಿ.ಮೀ ಸಂಚರಿಸುವ ಬಸ್‌ಗಳಲ್ಲಿ ಸುಮಾರು 34.70 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಮುಷ್ಕರದಿಂದಾಗಿ ನಿಗಮಕ್ಕೆ ಬೃಹತ್ ಆರ್ಥಿಕ ನಷ್ಟದ ಜೊತೆಗೆ, ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲವಾಗುವ ಆತಂಕ ಎದುರಾಗಿದೆ.

Read More
Next Story