ಸಾರಿಗೆ ನೌಕರರ ʻಬೆಂಗಳೂರು ಚಲೋʼ ಫೆ. 19ಕ್ಕೆ: ರಾಜ್ಯಾದ್ಯಂತ ಬಸ್ ಸಂಚರಿಸುತ್ತಾ?
x
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ

ಸಾರಿಗೆ ನೌಕರರ ʻಬೆಂಗಳೂರು ಚಲೋʼ ಫೆ. 19ಕ್ಕೆ: ರಾಜ್ಯಾದ್ಯಂತ ಬಸ್ ಸಂಚರಿಸುತ್ತಾ?

KSRTC Strike| ಫೆಬ್ರವರಿ 19 ರಂದು ಬೆಂಗಳೂರು ಚಲೋಗೆ ಸಾರಿಗೆ ನೌಕರರ ಕರೆ ನೀಡಿದ್ದಾರೆ. ಫೆಬ್ರವರಿ 20 ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಭೀತಿ ಇದೆ.


Click the Play button to hear this message in audio format

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು ಮತ್ತೊಮ್ಮೆ ಮುಷ್ಕರದ ಕಹಳೆ ಮೊಳಗಿಸಿದ್ದಾರೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಈ ಬಾರಿ ‘ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂಬ ದೃಢ ನಿರ್ಧಾರದೊಂದಿಗೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.

ಫೆಬ್ರವರಿ 19ಕ್ಕೆ ‘ಬೆಂಗಳೂರು ಚಲೋ’

ಕಳೆದ ಬಾರಿ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರ ನಿಧನದ ಹಿನ್ನೆಲೆಯಲ್ಲಿ ‘ಬೆಂಗಳೂರು ಚಲೋ’ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆದರೆ, ಈಗ ಫೆಬ್ರವರಿ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ನೌಕರರು ಜಮಾಯಿಸಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮುಖಂಡರು ಸುದ್ದಿಗೋಷ್ಠಿ ನಡೆಸಲಿದ್ದು, ಮುಂದಿನ ಹೋರಾಟದ ಹಾದಿಯನ್ನು ಘೋಷಿಸಲಿದ್ದಾರೆ.

ಫೆ. 20ರಿಂದ ಬಸ್ ಸಂಚಾರ ಬಂದ್?

ಫೆಬ್ರವರಿ 19ರ ಪ್ರತಿಭಟನೆಯ ಬೆನ್ನಲ್ಲೇ, ಫೆಬ್ರವರಿ 20ರಿಂದ ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ನಾಲ್ಕೂ ನಿಗಮಗಳ ನೌಕರರು ಕೆಲಸಕ್ಕೆ ಗೈರುಹಾಜರಾಗಿ ಮುಷ್ಕರ ಮುಂದುವರಿಸುವ ಸಾಧ್ಯತೆ ಇದೆ. ಒಂದು ವೇಳೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಸರ್ಕಾರದ ಬಿಗಿ ಕ್ರಮದ ಮುನ್ಸೂಚನೆ

ಸಾರಿಗೆ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದ್ದು, ಪ್ರತಿಭಟನಾ ನಿರತ ನೌಕರರ ವಿರುದ್ಧ 'ಎಸ್ಮಾ' (ESMA) ಜಾರಿ ಮಾಡುವ ಅಥವಾ ವೇತನ ಕಡಿತದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬಸ್ ಸಂಚಾರ ಸ್ಥಗಿತದ ಬಗ್ಗೆ ಅಧಿಕೃತ ಆದೇಶ ಹೊರಬೀಳದಿದ್ದರೂ, ನೌಕರರ ನಿರ್ಧಾರದ ಮೇಲೆ ಸಂಚಾರ ವ್ಯವಸ್ಥೆ ಅವಲಂಬಿತವಾಗಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

• ವೇತನ ಬಾಕಿ ಪಾವತಿ: ಕಳೆದ 38 ತಿಂಗಳ ವೇತನದ ಹಿಂಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.

• ವೇತನ ಪರಿಷ್ಕರಣೆ: 1-1-2024ಕ್ಕೆ ಅನ್ವಯವಾಗುವಂತೆ ನೂತನ ವೇತನ ಶ್ರೇಣಿ ಜಾರಿಗೊಳಿಸಬೇಕು.

• ಸಮಾನ ವೇತನ: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಬೇಕು.

• ಕಿರುಕುಳ ಮುಕ್ತಿ: ಕೆಲಸದ ಅವಧಿಯಲ್ಲಿ ಅಧಿಕಾರಿಗಳಿಂದ ಕಾರ್ಮಿಕರಿಗೆ ನೀಡಲಾಗುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು.

Read More
Next Story