
ಕಲ್ಚರ್ಪೆ ಬಳಿ ಕಾಡಾನೆಯೊಂದು ಆಯತಪ್ಪಿ ಪಾಳು ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
2024ರ ಜೂನ್‌ನಲ್ಲಿ ಮಡಿಕೇರಿಯ ವಿರಾಜಪೇಟೆ ಸಮೀಪದ ಪಲಂಗಾಲ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ 32 ಅಡಿ ಆಳದ ಬಾವಿಗೆ ಬಿದ್ದ 18 ರಿಂದ 20 ವರ್ಷದ ಗಂಡು ಕಾಡಾನೆಯೊಂದು ರಕ್ಷಣಾ ಕಾರ್ಯಾಚರಣೆ ವಿಫಲವಾಗಿ ಸಾವನ್ನಪ್ಪಿತ್ತು.
ಕಾಡು ಪ್ರಾಣಿಗಳು ಆಹಾರ ಮತ್ತು ನೀರನ್ನು ಅರಸಿ ನಾಡಿಗೆ ಬಂದು ಅಪಾಯಕ್ಕೆ ಸಿಲುಕುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಮೀಪದ ಪೆರಾಜೆ ಕಲ್ಚರ್ಪೆ ಬಳಿ ಕಾಡಾನೆಯೊಂದು ಆಯತಪ್ಪಿ ಪಾಳು ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಸೋಮವಾರ ಬೆಳಿಗ್ಗೆ ಸ್ಥಳೀಯರು ಗಮನಿಸಿದಾಗ ಬಾವಿಯಲ್ಲಿ ಆನೆ ಇರುವುದು ಬೆಳಕಿಗೆ ಬಂದಿದೆ.
ಆನೆಯು ಬಿದ್ದಿರುವ ಬಾವಿಯು ಸಾಕಷ್ಟು ಆಳವಿದ್ದು, ಅದರಲ್ಲಿ ಯಾವುದೇ ನೀರಿಲ್ಲ. ಮೇಲಕ್ಕೆ ಬರಲಾಗದೆ ಬಾವಿಯೊಳಗೆ ಕಾಡಾನೆ ಪರದಾಡುತ್ತಿದೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಜೆಸಿಬಿ ಯಂತ್ರವನ್ನು ತರಿಸಿಕೊಂಡು ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಬೇಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪುನರಾವರ್ತಿತ ಘಟನೆಗಳು :
ಕಾಡು ಪ್ರಾಣಿಗಳು ಬಾವಿಗೆ ಬೀಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ. 2024ರ ಜೂನ್‌ನಲ್ಲಿ ಮಡಿಕೇರಿಯ ವಿರಾಜಪೇಟೆ ಸಮೀಪದ ಪಲಂಗಾಲ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ 32 ಅಡಿ ಆಳದ ಬಾವಿಗೆ ಬಿದ್ದ 18 ರಿಂದ 20 ವರ್ಷದ ಗಂಡು ಕಾಡಾನೆಯೊಂದು ರಕ್ಷಣಾ ಕಾರ್ಯಾಚರಣೆ ವಿಫಲವಾಗಿ ಸಾವನ್ನಪ್ಪಿತ್ತು.
2023ರ ಆಗಸ್ಟ್‌ನಲ್ಲಿ ಸಾಗರ ತಾಲೂಕಿನ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದಲ್ಲಿ 20 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಕಾಡೆಮ್ಮೆಯ (ಕಾಡುಕೋಣ) ಮರಿಯನ್ನು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಕ್ರೇನ್ ಬಳಸಿ ಯಶಸ್ವಿಯಾಗಿ ರಕ್ಷಿಸಿದ್ದರು. ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಆನೇಕಲ್ ಬಳಿ 2025ರ ಏಪ್ರಿಲ್‌ನಲ್ಲಿ 30 ಅಡಿ ಆಳದ ಬಾವಿಗೆ ಬಿದ್ದಿದ್ದ ಎರಡು ಕಾಡಾನೆಗಳನ್ನು ತಮಿಳುನಾಡು ಅರಣ್ಯ ಇಲಾಖೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರಕ್ಷಿಸಿತ್ತು.
ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗುತ್ತಿದ್ದು, ತೆರೆದ ಬಾವಿಗಳಿಂದ ಪ್ರಾಣಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಅಪಾಯ ಎದುರಾಗುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

