Save Gajendra| ವೀರಪ್ಪನ್‌ ಕಾಡಿನಲ್ಲಿ ಒಂಟಿಯಾಗಿದ್ದ ವೃದ್ಧ ಗಜೇಂದ್ರನಿಗೆ ಕೊನೆಗೂ ಸಂಗಾತಿಗಳ ಸಾಂಗತ್ಯ!
x
ಒಂಟಿತನ ಅನುಭವಿಸುತ್ತಿದ್ದ ಗಜೇಂದ್ರ ಆನೆ.

Save Gajendra| ವೀರಪ್ಪನ್‌ ಕಾಡಿನಲ್ಲಿ ಒಂಟಿಯಾಗಿದ್ದ ವೃದ್ಧ ಗಜೇಂದ್ರನಿಗೆ ಕೊನೆಗೂ ಸಂಗಾತಿಗಳ ಸಾಂಗತ್ಯ!

ಕಾಡುಗಳ್ಳ ವೀರಪ್ಪನ್ ಅಲೆದಾಡಿದ್ದ ಸುವರ್ಣಾವತಿ ಜಲಾಶಯದ ಹಿನ್ನೀರಿನ ಬೂದಿಪಡಗ-ಪುಣಜನೂರು ಅರಣ್ಯ ಪ್ರದೇಶದಲ್ಲಿ ಗಜೇಂದ್ರನನ್ನು ಒಬ್ಬಂಟಿಯಾಗಿ ಕಟ್ಟಿಹಾಕಲಾಗಿತ್ತು


Click the Play button to hear this message in audio format

ದಶಕಗಳ ಕಾಲ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿ ಕಂಗೊಳಿಸುತ್ತಿದ್ದ, ಸುಮಾರು 70 ವರ್ಷದ ವಯೋವೃದ್ಧ ಆನೆ 'ಗಜೇಂದ್ರ' ಇದೀಗ ಬದುಕಿನ ಸಂಧ್ಯಾಕಾಲದಲ್ಲಿ ತೀವ್ರ ಶೋಚನೀಯ ಸ್ಥಿತಿ ತಲುಪಿದ್ದಾನೆ !

ಒಂದು ಕಾಲದಲ್ಲಿ ಬಂಡೀಪುರ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಟ್ಟ ಕಾಡುಗಳಲ್ಲಿ ನಡೆದ ಅನೇಕ ಕ್ಲಿಷ್ಟಕರ ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ 'ಅಭಿಮನ್ಯು'ವಿನಷ್ಟೇ ಪವರ್‌ಫುಲ್ ಆಗಿ, ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದ ಈ ದೈತ್ಯನಿಗೆ ಈಗ ವಯಸ್ಸಾಗಿದೆ. ಆದರೆ, ವಯಸ್ಸಿಗಿಂತ ಹೆಚ್ಚಾಗಿ ಆತನನ್ನು ಈಗ ಕಾಡುತ್ತಿರುವುದು ತೀವ್ರ ಒಂಟಿತನ.

ಅಂತೂ 63 ವರ್ಷದ ಗಜೇಂದ್ರನನ್ನು ನಾಗರಹೊಳೆಯ ಮತ್ತಿಗೋಡು ಆನೆಶಿಬಿರಕ್ಕೆ ಮಂಗಳವಾರ ಸ್ಥಳಾಂತರ ಮಾಡಲಾಯಿತು. ಚಾಮರಾಜನಗರ ಜಿಲ್ಲೆ ಬೂದಿಪಗಡದಲ್ಲಿ ಏಕಾಂತ ಅನುಭವಿಸುತ್ತಿರುವ ಈ ವೃದ್ಧ ಆನೆ ಈಗ ತನ್ನ ವೃದ್ಧಾಪ್ಯ ಅನುಭವಿಸಲು ಅರಾಮದಾಯಕ ವಾತಾವರಣ ಸೃಷ್ಟಿಸಲು ಸಾರ್ವಜನಿಕರ ಒತ್ತಾಸೆಯಂತೆ ಸರ್ಕಾರ ಸೌಕರ್ಯ ಕಲ್ಪಿಸಿದೆ.

ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಗಳಾಗಿದ್ದು, ಒಂಟಿತನವನ್ನು ಅನುಭವಿಸುವುದು ಅವುಗಳಿಕೆ ತುಂಬಾ ಕಷ್ಟ. ಹಾಗೆಯೇ ಈ ಗಜೇಂದ್ರನೂ ಒಂಟಿತನದಿಂದ ಕೃಶವಾಗಿತ್ತು. ಕಾಡಿಗೆ ಮೇಯಲು ಬಿಟ್ಟರೆ, ಇತರ ಕಾಡಾನೆಗಳ ದಾಳಿಗೂ ಒಳಗಾಗುತ್ತಿತ್ತು. ಹೀಗಾಗಿ ಸುರಕ್ಷಿತ ಆನೆ ಶಿಬಿರಕ್ಕೆ ಗಜೇಂದ್ರನನ್ನು ಸ್ಥಳಾಂತರಿಸಬೇಕು ಎಂದು "Save Gajendra"ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವೂ ನಡೆಯುತ್ತಿತ್ತು. ಹಲವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಹಾಗಾಗಿ, ಮಂಗಳವಾರ (31/3/2026) ಮಧ್ಯಾಹ್ನ ಬೂದಿಪಡಗದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿ, ಇಲಾಖೆಯ ಆನೆ ರಕ್ಷಣೆ ವಾಹನದಲ್ಲಿ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಯಾಕೆ ಗಜೇಂದ್ರ ಮೂಲೆಗುಂಪಾದ?

ಗಜೇಂದ್ರ ಆನೆ ಮೈಸೂರು ವಿಶ್ವವಿಖ್ಯಾತ ದಸರಾದಲ್ಲಿ ಹಲವು ವರ್ಷಗಳ ಕಾಲ ಪಾಲ್ಗೊಂಡಿದ್ದ ಅಂಬಾರಿ ಹೊರಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಕೆಲವು ವರ್ಷಗಳ ಹಿಂದೆ (2018) ಮಾವುತ ಶಂಕರನನ್ನು ಮತ್ತು ಮತ್ತೊಂದು ಆನೆಯನ್ನು ಬಲಿ ಪಡೆದ ಕಾರಣಕ್ಕೆ ನಿರ್ಲಕ್ಷಕ್ಕೆ ಒಳಗಾಯಿತು. ಆಗಿನಿಂದ ಗಜೇಂದ್ರ ಆನೆಯನ್ನು ಅನಿವಾರ್ಯವಾಗಿ ಮೂಲೆಗುಂಪು ಮಾಡಲಾಯಿತು.

ಆಗಿನಿಂದ ಗಜೇಂದ್ರ ಆನೆಯು ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಕೆ.ಗುಡಿ ಆನೆ ಶಿಬಿರದಲ್ಲಿತ್ತು. ಆಗ ಕೆಲವು ಆನೆಗಳು ಅಲ್ಲಿದ್ದವು. ಆದರೆ ಬರಬರುತ್ತಾ ಅಲ್ಲಿನ ಆನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಆದ್ದರಿಂದ ಕೆ.ಗುಡಿ ಆನೆ ಶಿಬಿರವು ಖಾಲಿಯಾಗುವ ಮೂಲಕ ಗಜೇಂದ್ರ ಆನೆಯು ಏಕಾಂಗಿಯಾಯಿತು. ಅದನ್ನು ಇತ್ತೀಚೆಗೆ ಬೂದಿಪಡಗ ಆನೆ ಕ್ಯಾಂಪ್‌ಗೆ ಸ್ಥಳಾಂತರ ಮಾಡಲಾಯಿತು. ಆ ಕ್ಯಾಂಪ್‌ನಲ್ಲೂ ಬೇರೆ ಆನೆಗಳಿಲ್ಲದೆ ಸದ್ಯ ಒಂಟಿಯಾಗಿದ್ದು, ಅದನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆಯಿತ್ತು. ʼಜಸ್ಟೀಸ್ ಫಾರ್ ಗಜೇಂದ್ರʼ(Justice For Gajendra) ಎಂಬ ಹೆಸರಿನಲ್ಲಿ ಆನೆಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಡಿಯೋಗಳನ್ನು ಮಾಡಿ ಹರಿಯಬಿಟ್ಟಿದ್ದರು.

ಗಜೇಂದ್ರನ ʼಆ ಎರಡುʼ ಕಾರಣಗಳಿಗೆ ಒಂಟಿತನ ಶಿಕ್ಷೆಯಾಗಿತ್ತು!

ಗಜೇಂದ್ರನ ಏಕಾಂಗಿತನಕ್ಕೆ ಆತನ ಗತಕಾಲದ ಕರಾಳ ಘಟನೆಯೊಂದು ಕಾರಣವಾಗಿದೆ. ಆನೆಗಳಿಗೆ ಮತ್ತು ಬರುವುದು ನೈಸರ್ಗಿಕ ಪ್ರಕ್ರಿಯೆ. ಆದರೆ, ಒಮ್ಮೆ ಗಜೇಂದ್ರನಿಗೆ ತೀವ್ರವಾಗಿ ಮತ್ತೇರಿದಾಗ ನಡೆದ ಆ ಎರಡು ಘಟನೆಗಳು ಆತನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು.

ಗಜೇಂದ್ರ ದಾಳಿ ನಡೆಸಿ ಮಾವುತ ಶಂಕರ ಮೃತಪಟ್ಟಿದ್ದರು (ಎಡದಿಂದ ಮೊದಲನೆ ಚಿತ್ರ)

ಮತ್ತಿನ ಭರದಲ್ಲಿ ಆತ ತನ್ನದೇ ಮಾವುತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲದೆ, ತನ್ನ ನೆಚ್ಚಿನ ಒಡನಾಡಿಯಾಗಿದ್ದ ಮತ್ತೊಂದು ಆನೆಯ (ಶ್ರೀರಾಮ) ಮೇಲೂ ಭೀಕರವಾಗಿ ದಾಳಿ ಮಾಡಿದ್ದ. ಗಜೇಂದ್ರ ತಳ್ಳಿದ ಅಗಾಧ ಬಲಕ್ಕೆ ಆ ಆನೆ ಅರ್ಧ ಜೀವವಾಗಿ, ಕೊನೆಗೆ ಮೃತಪಟ್ಟಿತು. ಉದ್ದೇಶಪೂರ್ವಕವಲ್ಲದಿದ್ದರೂ, ಪ್ರಕೃತಿಸಹಜ ಮತ್ತಿನಿಂದಾಗಿ ನಡೆದ ಈ ದುರಂತದ ನಂತರ ಗಜೇಂದ್ರನ ಬದುಕು ಸಂಪೂರ್ಣ ಬದಲಾಯಿತು ಮತ್ತು ಆತನನ್ನು ಇತರ ಆನೆಗಳಿಂದ ಪ್ರತ್ಯೇಕಿಸುವ ಅನಿವಾರ್ಯತೆ ಸೃಷ್ಟಿಯಾಯಿತು.

ಆನೆಗಳು ಮೂಲತಃ ಅತೀವ ಸೂಕ್ಷ್ಮ ಸಂವೇದನೆಯುಳ್ಳ ಸಾಮಾಜಿಕ ಜೀವಿಗಳು. ಅವು ಸದಾ ತಮ್ಮ ಗುಂಪಿನೊಂದಿಗೆ, ಸಮಾನ ಮನಸ್ಕ ಒಡನಾಡಿಗಳೊಂದಿಗೆ ಇರಲು ಬಯಸುತ್ತವೆ. ಯಾವುದೇ ಆನೆಯು ಒಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ. ಆದರೆ, ತನ್ನ ಬಹುಕಾಲದ ಒಡನಾಡಿಗಳಾಗಿದ್ದ 'ಶ್ರೀರಾಮ' ಮತ್ತು 'ದುರ್ಗಾ' ಆನೆಗಳನ್ನು ಕಳೆದುಕೊಂಡ ಗಜೇಂದ್ರ, ಇದೀಗ ಸಂಪೂರ್ಣ ಏಕಾಂಗಿಯಾಗಿದ್ದಾನೆ.

ಇತರ ಆನೆಗಳನ್ನು ಕೆ.ಗುಡಿ ಶಿಬಿರಕ್ಕೆ ಈಗಾಗಲೇ ಸ್ಥಳಾಂತರಿಸಲಾಗಿದ್ದು, ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅಲೆದಾಡಿದ್ದ ಸುವರ್ಣಾವತಿ ಜಲಾಶಯದ ಹಿನ್ನೀರಿನ ಬೂದಿಪಡಗ-ಪುಣಜನೂರು ಅರಣ್ಯ ಪ್ರದೇಶದಲ್ಲಿ ಗಜೇಂದ್ರನನ್ನು ಮಾತ್ರ ಒಬ್ಬಂಟಿಯಾಗಿ ಕಟ್ಟಿಹಾಕಲಾಗಿತ್ತು. ಜತೆಯಾಗಿದ್ದ ಆನೆಗಳೆಲ್ಲ ದೂರವಾಗಿ, ದಿನದ ಬಹುಪಾಲು ಸಮಯವನ್ನು ಒಂಟಿಯಾಗಿಯೇ ಕಳೆಯುತ್ತಿರುವ ಈ ವೃದ್ಧ ಆನೆ ತೀವ್ರ ಮಾನಸಿಕ ವೇದನೆ ಮತ್ತು ಖಿನ್ನತೆಯಿಂದ ನರಳುತ್ತಿತ್ತು.

ಗಜೇಂದ್ರನಿಗೆ ಕಾಡಾನೆಗಳ ಭೀತಿ!

ಈ ಮಾನಸಿಕ ಆಘಾತದ ಜತೆಗೆ, ಭೌತಿಕವಾಗಿಯೂ ಗಜೇಂದ್ರನಿಗೆ ಕಾಡಾನೆಗಳ ಭೀತಿ ಎದುರಾಗಿತ್ತು. ವೃದ್ಧಾಪ್ಯದಲ್ಲಿರುವ ಆತನನ್ನು ಮೇಯಲು ಕಾಡಿಗೆ ಬಿಟ್ಟರೆ, ಅಲ್ಲಿನ ಬಲಿಷ್ಠ ಹಾಗೂ ಮದಗಜಗಳಿಂದ ಆತನ ಜೀವಕ್ಕೆ ತೀವ್ರ ಅಪಾಯವಿತ್ತು. ಒಂದು ಕಾಲದಲ್ಲಿ ಎಂತಹುದ್ದೇ ಕಾಡಾನೆಯನ್ನಾದರೂ ಮಣಿಸುತ್ತಿದ್ದ ಗಜೇಂದ್ರನಿಗೆ, ಮುಪ್ಪಿನ ಕಾರಣದಿಂದಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ದೈಹಿಕ ಸಾಮರ್ಥ್ಯ ಕ್ಷೀಣಿಸಿದೆ. ಹಾಗೆಂದು ಆತನನ್ನು ಕಾಡಿಗೆ ಬಿಡಲು ಅರಣ್ಯ ಇಲಾಖೆಗೆ ಭಯ, ಹಾಗೆಯೇ ಸದಾ ಕಾಲ ಸರಪಳಿಯಲ್ಲಿ ಕಟ್ಟಿಹಾಕಲೂ ಸಾಧ್ಯವಿಲ್ಲ. ಈ ತ್ರಿಶಂಕು ಸ್ಥಿತಿಯಲ್ಲಿ ಗಜೇಂದ್ರ ಒದ್ದಾಡುತ್ತಿದ್ದ!

ಮುಂದಿನ ಬೇಸಿಗೆಯ ದಿನಗಳು ಗಜೇಂದ್ರನ ಪಾಲಿಗೆ ಮತ್ತಷ್ಟು ಕಠಿಣವಾಗುವ ಮುನ್ಸೂಚನೆಗಳಿದ್ದವು. ಸುವರ್ಣಾವತಿ ಜಲಾಶಯದ ಹಿನ್ನೀರು ದಿನೇ ದಿನೇ ಬತ್ತುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಹಸಿರು ಮೇವಿನ ತೀವ್ರ ಕೊರತೆ ಎದುರಾಗುವ ಆತಂಕವಿತ್ತು. ಈ ಎಲ್ಲಾ ಭೌತಿಕ, ಮಾನಸಿಕ ಮತ್ತು ನೈಸರ್ಗಿಕ ಸವಾಲುಗಳಿಂದ ಈ ಮೂಕ ಜೀವಿಯನ್ನು ರಕ್ಷಿಸುವ ನಿಟ್ಟಿನಲ್ಲಿ, ಮಾರ್ಚ್ 13 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಬಿ. ಖಂಡ್ರೆ ಅವರಿಗೆ ಮನವಿಯೊಂದನ್ನು ಸಲ್ಲಿಸಲಾಗಿತ್ತು.

ಹಲವು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಪ್ರಸ್ತುತ ಬೂದಿಪಡಗಾ ಆನೆ ಶಿಬಿರದಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದ ಗಜೇಂದ್ರ ಆನೆಯನ್ನು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯಿತು.

ನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗಜೇಂದ್ರನ ಬವಣೆಗಳನ್ನು ಪತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದ್ದು, ಕೂಡಲೇ ಆತನನ್ನು ಇತರ ಆನೆಗಳ ಒಡನಾಟವಿರುವ ಕೆ.ಗುಡಿಯಂತಹ ಸುರಕ್ಷಿತ ಶಿಬಿರಕ್ಕೆ ವರ್ಗಾಯಿಸುವಂತೆ ಆಗ್ರಹಿಸಲಾಗಿತ್ತು.

ತನ್ನ ಯೌವನವನ್ನೆಲ್ಲಾ ನಾಡಿನ ಸೇವೆಗೆ, ಅರಣ್ಯ ಇಲಾಖೆಯ ಕಠಿಣ ಕಾರ್ಯಾಚರಣೆಗಳಿಗೆ ಮುಡಿಪಾಗಿಟ್ಟ ಈ ಗಜರಾಜನಿಗೆ, ಬದುಕಿನ ಕೊನೆಯ ದಿನಗಳಲ್ಲಿ ನೆಮ್ಮದಿ ಒದಗಿಸುವ ಪ್ರಯತ್ನ ಈಗ ನಡೆದಿದೆ. ಒಂಟಿತನದಿಂದ ಬಳಲುತ್ತಿರುವ ಗಜೇಂದ್ರನಿಗೆ ಮತ್ತಿಗೋಡಿನ ಒಡನಾಡಿ ಆನೆಗಳು ಯಾವ ರೀತಿ ಸಾಥ್‌ ನೀಡುತ್ತವೆ ಎಂಬುದನ್ನು ಇಲಾಖೆ ಅಧಿಕಾರಿಗಳು ಗಮನಿಸಬೇಕಿದೆ.

ಗಜೇಂದ್ರ ನಿಜವಾಗಿಯೂ ಗಜರಾಜ!

ಮಧ್ಯಪ್ರದೇಶ, ಮಹರಾಷ್ಟ್ರ ಸೇರಿದಂತೆ ಬಂಡೀಪುರದಲ್ಲಿ ನಡೆದಿರುವ ಎಲ್ಲ ಆನೆ, ಹುಲಿ ಸೆರೆ ಕಾರ್ಯಚರಣೆಯಲ್ಲಿಯು ಗಜೇಂದ್ರ ಪಾಲ್ಗೊಂಡಿದ್ದ. ಮೈಸೂರು ದಸರಾದ ನಿಶಾನೆ ಆನೆಯಾಗಿಯೂ ಗಜೇಂದ್ರ ಹೆಸರುವಾಸಿಯಾಗಿದ್ದ. ʼದಸರಾ ಕ್ಯಾಫ್ಟನ್‌ ಅಭಿಮನ್ಯುವಿʼನಷ್ಟೆ ಪವರ್‌ ಫುಲ್‌ ಆಗಿರುವ ಗಜೇಂದ್ರ ಮಾವುತನನ್ನು ಹತ್ಯೆ ಮಾಡಿರಬಹುದು. ಮತ್ತೊಂದು ಆನೆಗೆ ಗಾಯಗೊಳಿಸಿ, ಆ ಆನೆಯ ಸಾವಿಗೂ ಕಾರಣವಾಗಿರಬಹುದು. ಆದರೆ, ಇದರಲ್ಲಿ ಗಜೇಂದ್ರನೇದು ತಪ್ಪಿದೆ? ಎಂಬ ವಾದ ವನ್ಯಜೀವಿ ಪ್ರಿಯರದ್ದು.

ಮೈಸೂರು ದಸರಾದ ನಿಶಾನೆ ಆನೆಯಾಗಿದ್ದ ಗಜೇಂದ್ರ

ಗಜೇಂದ್ರ ಮತ್ತಿನಲ್ಲಿದ್ದ ವೇಳೆಯಷ್ಟೆ ಹಲ್ಲೆ ನಡೆದಿದೆ. ಆನೆ ಸುಮ್ಮನೆ ತಳಿದರೂ ಸಹ ಮನುಷ್ಯರ ಅರ್ಧ ಜೀವ ಅಲ್ಲೆ ಹೋಗಿರುತ್ತದೆ. ಈ ಹಿಂದೆ ಅಭಿಮನ್ಯುವಿನ ಜತೆ ಕೆಲಸ ಮಾಡಿದ್ದ ಗಜೇಂದ್ರನಿಗೆ ಆಗ ಸಿಗುತ್ತಿದ್ದ ಗೌರವಗಳು, ಆತನ ಒಂದು ಸಣ್ಣ ತಪ್ಪಿನಿಂದ ಈಗ ದೊರೆಯುತ್ತಿಲ್ಲ ಎನ್ನುವುದು ವನ್ಯಜೀವಿ ಪ್ರೇಮಿಗಳ ಅಸಮಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಪಶು ವೈದ್ಯ ಡಾ. ಜಿ. ಮುಜುಬಿ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಗಜೇಂದ್ರ ಮಾತ್ರವಲ್ಲ, ಯಾವುದೇ ಆನೆಯಾದರೂ ಸಹ ಒಟ್ಟಿಯಾಗಿ ಇರಲು ಸಾಧ್ಯವಿಲ್ಲ. ಒಂಟಿತನದಿಂದ ಮಾನಸಿಕವಾಗಿ ಇನ್ನಷ್ಟು ಕುಗ್ಗುವ ಕಾರಣಕ್ಕೆ ಅಸಹಜ ಸಾವು ಉಂಟಾಗಬಹುದು ಎಂದರು.

ವಯೋವೃದ್ಧನಾಗಿರುವ ಗಜೇಂದ್ರನಿಗೆ ಕಾಡಿನಲ್ಲಿ ಮೇಯಲು ಬಿಟ್ಟಾಗ ಅಲ್ಲಿನ ಬಲಿಷ್ಠ ಕಾಡು ಆನೆಗಳಿಂದ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಇದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ದೈಹಿಕ ಸಾಮರ್ಥ್ಯ ಈಗ ಅವನಲ್ಲಿ ಕ್ಷೀಣಿಸಿದೆ ಎಂದು ಆನೆ ಪ್ರೇಮಿಯಾದ ಕೆ. ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

Read More
Next Story