Tiger deaths continue in MM Hills: Tiger carcass found near Gundal dam!
x

ಸಾಂದರ್ಭಿಕ ಚಿತ್ರ

ಎಂ.ಎಂ.ಹಿಲ್ಸ್‌ನಲ್ಲಿ ನಿಲ್ಲದ ಹುಲಿಗಳ ಸಾವು; ಗುಂಡಾಲ್‌ ಡ್ಯಾಂ ಬಳಿ ಹುಲಿ ಮೃತದೇಹ ಪತ್ತೆ!

ಕರ್ನಾಟಕದ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕಳೆದ ಐದು ವರ್ಷಗಳಲ್ಲಿ ಒಟ್ಟು 75 ಹುಲಿಗಳು ಮೃತಪಟ್ಟಿರುವುದು ಕಳವಳ ಮೂಡಿಸಿದೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಒಟ್ಟು ಐದು ಹುಲಿಗಳ ಸಾವು ಮಾಸುವ ಮುನ್ನವೇ ಕೊಳ್ಳೆಗಾಲದ ಗುಂಡಾಲ್‌ ಅಣೆಕಟ್ಟು ಸಮೀಪ ಭಾನುವಾರ ಮತ್ತೊಂದು ಹುಲಿಯ ಕಳೇಬರ ಪತ್ತೆಯಾಗಿದೆ.

ಹುಲಿಯ ಸಾವಿನ ಕುರಿತು ಇನ್ನಷ್ಟು ವಿವರಗಳು ಲಭ್ಯವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇದು ನೈಸರ್ಗಿಕ ಸಾವೋ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಸಂಭವಿಸಿದ ಸಾವೋ ಎಂಬುದು ತನಿಖೆಯಿಂದ ದೃಢಪಡಲಿದೆ.

ಬಿಆರ್‌ಟಿ ಹುಲಿ ಅಭಯಾರಣ್ಯದ ಕೊಳ್ಳೇಗಾಲ ಶ್ರೇಣಿಯಲ್ಲಿ ಬರುವ ಗುಂಡಾಲ್‌ ಅಣೆಕಟ್ಟು ಬಳಿ 2024 ಜೂನ್‌ನಲ್ಲಿ ಹುಲಿಯೊಂದು ಮೃತಪಟ್ಟಿತ್ತು. ಆ ಹುಲಿಯ ಭುಜಕ್ಕೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಹುಲಿಗಳ ಕಾದಾಟದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು.

ನಿಲ್ಲದ ವ್ಯಾಘ್ರಗಳ ಸಾವು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಳಿಯ ಮಲೆ ಮಹದೇಶ್ವರ (ಎಂ.ಎಂ.ಹಿಲ್ಸ್‌) ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ 2025 ಜೂನ್‌ ತಿಂಗಳಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದವು. ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ವಿಷಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ ಎಂದು ಹೇಳಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಅಧಿಕಾರಿಗಳು ಬಂಧಿಸಿದ್ದರು.

ಐದು ವರ್ಷದಲ್ಲಿ 75 ಹುಲಿಗಳ ಸಾವು

ಕರ್ನಾಟಕದ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕಳೆದ ಐದು ವರ್ಷಗಳಲ್ಲಿ ಒಟ್ಟು 75 ಹುಲಿಗಳು ಮೃತಪಟ್ಟಿರುವುದು ಕಳವಳ ಮೂಡಿಸಿದೆ. 2020 ರಿಂದ 2025 ಆಗಸ್ಟ್ರ ನಡುವೆ 75 ಹುಲಿಗಳು ಸಾವನ್ನಪ್ಪಿವೆ ಎಂದು ʼಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿದೆ. ಈ ಸಾವುಗಳಲ್ಲಿ ಹೆಚ್ಚಿನವು ನೈಸರ್ಗಿಕವಾಗಿದ್ದರೂ ಉಳಿದ ಸಾವುಗಳು ವಿಷಪ್ರಾಶನ, ಬೇಟೆ ಮತ್ತು ಮಾನವ ಪ್ರೇರಿತ ಬೆದರಿಕೆಗಳಿಂದ ಸಂಭವಿಸಿವೆ ಎಂದು ಉಲ್ಲೇಖಿಸಲಾಗಿದೆ.

ನಾಗರಹೊಳೆಯಲ್ಲಿ 26 ಹುಲಿಗಳು ಮತ್ತು ಬಂಡೀಪುರ ಅರಣ್ಯದಲ್ಲಿ 22 ಹುಲಿಗಳು ಈ ಐದು ವರ್ಷಗಳ ಅವಧಿಯಲ್ಲಿ ಮೃತಪಟ್ಟಿವೆ. ಬಿಳಿಗಿರಿ ರಂಗನಾಥ ದೇವಾಲಯ (ಬಿಆರ್‌ಟಿ) ಹುಲಿ ಅಭಯಾರಣ್ಯ ಮತ್ತು ಮಲೆ ಮಹದೇಶ್ವರ (ಎಂಎಂ) ಬೆಟ್ಟಗಳಂತಹ ಇತರ ಸಂರಕ್ಷಿತ ಪ್ರದೇಶಗಳಲ್ಲಿ ಕ್ರಮವಾಗಿ ಎಂಟು ಮತ್ತು ಐದು ಹುಲಿಗಳು ಮೃತಪಟ್ಟಿವೆ.

ಅರಣ್ಯ ಸಚಿವರ ಸ್ಪಷ್ಟನೆ

ಕಳೆದ ಐದು ವರ್ಷದಲ್ಲಿ ಮೃತಪಟ್ಟ 75 ಹುಲಿಗಳಲ್ಲಿ 62 ಹುಲಿಗಳು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ಉಳಿದ ಹುಲಿಗಳು ಕಾಯಿಲೆ, ಗಂಡು ಹುಲಿಗಳ ನಡುವಿನ ಸಂಘರ್ಷದಿಂದ ಮೃತಪಟ್ಟಿವೆ. ಉಳಿದ 13 ಹುಲಿಗಳಲ್ಲಿ ಆರು ಹುಲಿಗಳಿಗೆ ವಿಷಪ್ರಾಶನ ಮಾಡಲಾಗಿದ್ದು, ಇದರಲ್ಲಿ ಎಂಎಂ ಹಿಲ್ಸ್‌ನಲ್ಲಿ ಐದು ಸೇರಿವೆ ಎಂದು ತಿಳಿಸಿದ್ದರು.

Read More
Next Story