Tiger carcass found in Malemahadeshwar forest, Minister Khandre orders investigation
x

ಸಾಂದರ್ಭಿಕ ಚಿತ್ರ

ಮಲೆ ಮಹದೇಶ್ವರ ಅರಣ್ಯದಲ್ಲಿ ಹುಲಿಯ ಮೃತದೇಹ ಪತ್ತೆ; ತನಿಖೆಗೆ ಸಚಿವ ಖಂಡ್ರೆ ಆದೇಶ

ಮಲೆ ಮಹದೇಶ್ವರ ಬೆಟ್ಟದ ಅರಣ್ಯದ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಗುರುವಾರ(ಸೆ.2) ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತಂಡ ರಚಿಸುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.


Click the Play button to hear this message in audio format

ವನ್ಯಜೀವಿ ಸಪ್ತಾಹದ (ಅ.2 ರಿಂದ 8 ರವರೆಗೆ) ಆರಂಭದ ದಿನವೇ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹನೂರು ವಲಯ ಅರಣ್ಯದಲ್ಲಿ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ತನಿಖೆ ನಡೆಸುವಂತೆ ಪಿಸಿಸಿಎಫ್ ಅವರಿಗೆ ಆದೇಶ ನೀಡಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಅರಣ್ಯದ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಗುರುವಾರ (ಸೆ.2) ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಈ ಅರಣ್ಯದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸುವಂತೆ ಹೇಳಿದ್ದಾರೆ. ಹುಲಿ ಹತ್ಯೆಯಂತಹ ಘಟನೆಗಳು ಮರುಕಳುಹಿಸಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅನುವಾಗುವಂತೆ 8ದಿನಗಳಲ್ಲಿ ವರದಿ ಸಲ್ಲಿಸಬೇಕು. ಹುಲಿ ಹಂತಕರನ್ನು ಪತ್ತೆಮಾಡಿ ಕಾನೂನು ಪ್ರಕಾರ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಹುಲಿಯನ್ನು ಹತ್ಯೆ ಮಾಡಿರುವ ಘಟನೆಯು ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ಕಳ್ಳಬೇಟೆಗಾರರ ಉಪಸ್ಥಿತಿಗೆ ಸಾಕ್ಷಿಯಾಗಿದೆ ಎಂಬ ಅನುಮೂನಗಳು ಮೂಡುತ್ತಿವೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಹುಲಿಗಳ ಸಾವಿನ ಸಂಖ್ಯೆ ಹೆಚ್ಚಳ

ಇತ್ತೀಚೆಗೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಸುಮಾರು 15 ದಿನಗಳ ಎರಡು ಹುಲಿ ಮರಿಗಳು ಹಸಿವು ಮತ್ತು ನಿತ್ರಾಣದಿಂದ ಮೃತಪಟ್ಟಿದ್ದ ಘಟನೆ ಆ.14ರಂದು ನಡೆದಿತ್ತು. ಈ ಘಟನೆಯು ಜಿಲ್ಲೆಯಲ್ಲಿ ಹುಲಿಗಳ ಸರಣಿ ಸಾವಿಗೆ ಮತ್ತೊಂದು ಸೇರ್ಪಡೆಯಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿ ಮರಿಯ ಕಳೇಬರಗಳು ಪತ್ತೆಯಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 10-15 ದಿನಗಳ ಹಿಂದೆಯೇ ಈ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಅವುಗಳಿಗೆ ಸೂಕ್ತ ಆಹಾರ ಮತ್ತು ರಕ್ಷಣೆ ಸಿಗದ ಕಾರಣ ಹಸಿವಿನಿಂದ ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರು.

ವಿಷ ಪ್ರಾಶನದಿಂದ ಐದು ಹುಲಿ ಮೃತ

ಜೂನ್‌ 26ರಂದು ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿಗಳು ಅಸಹಜವಾಗಿ ಮೃತಪಟ್ಟಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಈ ಸಂಬಂಧ ತನಿಖೆಗೆ ಆದೇಶಿಸಿತ್ತು.

ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಲಿಖಿತ ಸೂಚನೆ ನೀಡಿದ್ದರು. ಎಂ.ಎಂ. ಹಿಲ್ಸ್‌ ಅರಣ್ಯದಲ್ಲಿ ಐದು ಹುಲಿಗಳು ಸಾವಿಗೀಡಾಗಿರುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು.

ಶಂಕಾಸ್ಪದವಾಗಿ ಮೃತಪಟ್ಟಿದ್ದ ಐದು ಹುಲಿಗಳ ದೇಹದಲ್ಲಿ ಮಾರಕ ಕೀಟನಾಶಕ 'ಕಾರ್ಬೋಫ್ಯುರಾನ್' ಪತ್ತೆಯಾಗಿದೆ ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಸದಸ್ಯ, ಸಿಸಿಎಫ್ ಟಿ.ಹೀರಾಲಾಲ್ ತಿಳಿಸಿದ್ದರು. ಮೃತಪಟ್ಟಿದ್ದ ಐದು ಹುಲಿಗಳ ಅಂಗಾಂಗಗಳ ಮಾದರಿಗಳನ್ನು ಎಫ್‌ಎಸ್‌ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆಗಳಲ್ಲಿ 'ಕಾರ್ಬೋಫ್ಯುರಾನ್' ಎಂಬ ವಿಷಕಾರಿ ಕೀಟನಾಶಕದ ಅಂಶ ಪತ್ತೆಯಾಗಿತ್ತು.

Read More
Next Story