CM condemns brutal murder of school student in Orugadur, Shimoga
x

ಸಿಎಂ ಸಿದ್ದರಾಮಯ್ಯ ಹಾಗೂ ಮೃತ ವಿದ್ಯಾರ್ಥಿ ಸಂಕೇತ್‌

ಶಿವಮೊಗ್ಗದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯ ಬರ್ಬರ ಹತ್ಯೆ, ಸಿಎಂ ಖಂಡನೆ

ಕೊಲೆಗೈದವರು ಯಾರೇ ಆಗಿರಲಿ, ಉದ್ದೇಶವೇನೇ ಇರಲಿ, ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


Click the Play button to hear this message in audio format

ಶಿವಮೊಗ್ಗ ನಗರದ ಸಮೀಪವಿರುವ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಥಳಿಸಿ ಬರ್ಬರವಾಗಿ ಹತ್ಯೆಗೈದಿರುವ ಅಮಾನವೀಯ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಈ ಭೀಕರ ಘಟನೆಯಲ್ಲಿ ಭಾಗಿಯಾದವರು ಚಿಕ್ಕ ವಯಸ್ಸಿನ ಹುಡುಗರು ಎಂಬ ವಿಚಾರ ತಮಗೆ ತೀವ್ರ ದಿಗ್ಭ್ರಮೆ ತರಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದೀರ್ಘ ಮಾಧ್ಯಮ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಗಳು, ಕೊಲೆಗೈದವರು ಯಾರೇ ಆಗಿರಲಿ, ಅವರ ಹಿಂದಿನ ಉದ್ದೇಶವೇನೇ ಇರಲಿ, ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ಕಿಡಿಗೇಡಿಗಳು ನೂರು ಬಾರಿ ಯೋಚಿಸಬೇಕಾದಂತಹ ಕಠಿಣ ಸ್ಥಿತಿಯನ್ನು ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೇ ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಪೊಲೀಸರು ಬಂಧಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆ ಕೊಡಿಸುವ ಮೂಲಕ ಮೃತನ ಸಾವಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೊಂದ ಕುಟುಂಬಕ್ಕೆ ಮುಖ್ಯಮಂತ್ರಿಗಳು ವಾಗ್ದಾನ ಮಾಡಿದ್ದಾರೆ.

ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗೆ ಕಿವಿಮಾತು

ವಿದ್ಯಾರ್ಥಿಗಳು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಂಡು ತಮ್ಮ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ಬಾಲ್ಯದಲ್ಲೇ ದ್ವೇಷ, ಹಿಂಸೆ ಮತ್ತು ಅಪರಾಧ ಕೃತ್ಯಗಳ ದುರ್ಬುದ್ಧಿ ಬೆಳೆಸಿಕೊಳ್ಳುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಇಂತಹ ಮನಸ್ಥಿತಿ ಇರುವವರು ದುಶ್ಚಟಗಳಿಗೆ ದಾಸರಾದರೆ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗುವುದು ಖಚಿತ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಚಲನವಲನಗಳು ಹಾಗೂ ಸ್ನೇಹವಲಯದ ಮೇಲೆ ತೀವ್ರ ನಿಗಾ ವಹಿಸಬೇಕು. ಮಕ್ಕಳು ಹಾದಿ ತಪ್ಪುತ್ತಿರುವುದು ಗಮನಕ್ಕೆ ಬಂದರೆ ತಕ್ಷಣವೇ ತಿದ್ದಿ ಬುದ್ಧಿ ಹೇಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಇದರ ಜೊತೆಗೆ, ಶಾಲೆಯ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಕೃತ್ಯಗಳು ನಡೆಯದಂತೆ ಶಾಲಾ ಆಡಳಿತ ಮಂಡಳಿಗಳು ಸಹ ಕಟ್ಟೆಚ್ಚರ ವಹಿಸಬೇಕು ಹಾಗೂ ಅಗತ್ಯಬಿದ್ದರೆ ಮುಲಾಜಿಲ್ಲದೆ ಪೊಲೀಸರ ನೆರವು ಪಡೆಯಬೇಕು ಎಂದು ಅವರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.

ಶಾಂತಿ ಕಾಪಾಡಲು ಸಾರ್ವಜನಿಕರಲ್ಲಿ ಸಿಎಂ ಮನವಿ

ಇದೇ ವೇಳೆ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ವದಂತಿಗಳು ಅಥವಾ ಪ್ರಚೋದನೆಗಳಿಗೆ ಕಿವಿಗೊಡದೆ ಅತ್ಯಂತ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಈ ಸೂಕ್ಷ್ಮ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಅಥವಾ ಅಶಾಂತಿ ಸೃಷ್ಟಿಸುವ ಕೃತ್ಯಗಳಲ್ಲಿ ತೊಡಗುವವರ ವಿರುದ್ಧವೂ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Read More
Next Story