
ಅನ್ನದಾತನ ಕೈ ಹಿಡಿಯುವ ಕನ್ಯೆಯರಿಗೆ 'ಸ್ಪೆಷಲ್ ಗಿಫ್ಟ್'? ಸರ್ಕಾರಕ್ಕೆ ಶಾಸಕನ ವಿಶೇಷ ಮನವಿ
ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕೃಷಿಕರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ ವಿಶೇಷ ಭತ್ಯೆ ನೀಡುವಂತೆ ಒತ್ತಾಯಿಸಿದ್ದಾರೆ.
ನಗರದ ಐಷಾರಾಮಿ ಬದುಕು, ಕೈತುಂಬಾ ಸಂಬಳ ಬರುವ ಐಟಿ ಕೆಲಸಗಾರನಿಗೆ ಕನ್ಯೆ ಕೊಡಲು ಸರತಿ ಸಾಲಿನಲ್ಲಿ ನಿಲ್ಲುವ ಪೋಷಕರು, ಅನ್ನ ನೀಡುವ ರೈತನಿಗೆ ಹೆಣ್ಣು ಕೊಡಲು ಮಾತ್ರ ಏಕೋ ಹಿಂದೇಟು ಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಕೃಷಿಯನ್ನೇ ನಂಬಿದ ಸಾವಿರಾರು ಯುವಕರು ಮದುವೆ ವಯಸ್ಸು ಮೀರುತ್ತಿದ್ದರೂ ಕನ್ಯೆ ಸಿಗದೇ 'ಬ್ರಹ್ಮಚಾರಿ'ಗಳಾಗಿ ಉಳಿಯುತ್ತಿದ್ದಾರೆ. ಇದೊಂದು ಸಾಮಾಜಿಕ ಆತಂಕ. ಈ ಗಂಭೀರ ಸಮಸ್ಯೆಯನ್ನು ಮನಗಂಡ ಕುಣಿಗಲ್ ಶಾಸಕರು ಈಗ ಮುಖ್ಯಮಂತ್ರಿಗಳ ಮುಂದೆ ಒಂದು ವಿನೂತನ ಬೇಡಿಕೆ ಇಟ್ಟಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಯುವಕರು ಎದುರಿಸುತ್ತಿರುವ ಮದುವೆಯ ಸಮಸ್ಯೆಯನ್ನು ಹೋಗಲಾಡಿಸಲು ಡಾ. ಎಚ್.ಡಿ. ರಂಗನಾಥ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೃಷಿಕರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ ವಿಶೇಷ ಭತ್ಯೆ ಮತ್ತು ವಿಶಿಷ್ಟ ಸ್ಥಾನಮಾನ ನೀಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಫೆಬ್ರವರಿ 18ರಂದು ಬರೆದ ಈ ಪತ್ರದಲ್ಲಿ ಶಾಸಕರು ಉಲ್ಲೇಖಿಸಿರುವ ಪ್ರಮುಖ ಅಂಶಗಳು ಹೀಗಿವೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕವನ್ನೇ ಜೀವನೋಪಾಯವಾಗಿಸಿಕೊಂಡಿರುವ ಅನೇಕ ಯುವಕರಿಗೆ 30 ವರ್ಷ ದಾಟಿದರೂ ಕನ್ಯೆ ಸಿಗುತ್ತಿಲ್ಲ. ಯುವತಿಯರು ಮತ್ತು ಅವರ ಪೋಷಕರು ಕೃಷಿ ಕುಟುಂಬಗಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕೃಷಿ ಜೀವನ ಶೈಲಿಯನ್ನು ಒಪ್ಪಿ ರೈತರ ಮನೆಗೆ ಸೊಸೆಯಾಗಿ ಬರುವ ಯುವತಿಯರಿಗೆ ಸರ್ಕಾರವು 'ವಿಶೇಷ ಭತ್ಯೆ' (Allowance) ನೀಡುವ ಯೋಜನೆಯನ್ನು ರೂಪಿಸಬೇಕು. ಇದರ ಜೊತೆಗೆ ಅಂತಹ ಮಹಿಳೆಯರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನ ನೀಡುವ ಮೂಲಕ ರೈತ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು.
ಇಂತಹ ನೀತಿಯಿಂದ ಗ್ರಾಮೀಣ ಭಾಗದಲ್ಲಿ ಯುವಕರು ಕೃಷಿಯಲ್ಲಿ ಮುಂದುವರಿಯಲು ಪ್ರೇರಣೆ ಸಿಗುತ್ತದೆ. ಇದು ಹಳ್ಳಿಗಳಿಂದ ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಮತ್ತು ಗ್ರಾಮೀಣ ಬದುಕಿನ ಬಗ್ಗೆ ಸಮಾಜದಲ್ಲಿರುವ ಕೀಳರಿಮೆ ಹೋಗಲಾಡಿಸಲು ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕುಣಿಗಲ್ ತಾಲೂಕಿನ ಪರಿಸ್ಥಿತಿ
ತಮ್ಮ ಕ್ಷೇತ್ರವಾದ ಕುಣಿಗಲ್ ಸೇರಿದಂತೆ ರಾಜ್ಯದ ಅನೇಕ ಭಾಗಗಳು ಕೃಷಿಯನ್ನೇ ಅವಲಂಬಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತ ಯುವಕರು ಮದುವೆಯಾಗದೆ ಉಳಿಯುತ್ತಿರುವುದು ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ ಎಂದು ರಂಗನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿವೇಶನದಲ್ಲಿ ಚರ್ಚೆಗೆ ಮನವಿ
ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿ, ಬಜೆಟ್‌ನಲ್ಲಿ ರೈತ ಕುಟುಂಬಗಳ ಹಿತದೃಷ್ಟಿಯಿಂದ ವಿಶೇಷ ಯೋಜನೆಯನ್ನು ಘೋಷಿಸುವಂತೆ ಅವರು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದಾರೆ.

