
ಡಿಸಿಎಂ ಡಿ.ಕೆ. ಶಿವಕುಮಾರ್
ಕೇಂದ್ರ ಬಜೆಟ್‌ನಲ್ಲಿ ಕೊಟ್ಟ ಮಾತು ತಪ್ಪಿದ ಬಿಜೆಪಿ: ಭದ್ರಾ ಮೇಲ್ದಂಡೆ ಅನುದಾನಕ್ಕಾಗಿ ಡಿಕೆಶಿ ಆಗ್ರಹ
ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿಟ್ಟಿದ್ದೇವೆ. ಕೋವಿಡ್ ಸೇರಿದಂತೆ ಅನೇಕ ಆರೋಪಗಳಿವೆ. ನಾವು ಅವುಗಳನ್ನು ಬಯಲು ಮಾಡೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವಾಗಲೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಯಾರೂ ಧ್ವನಿ ಎತ್ತುತ್ತಿಲ್ಲ. ಇವರೆಲ್ಲರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ(ಜ.30) ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೇಂದ್ರ ಬಜೆಟ್‌ನಲ್ಲಿ ಕೊಟ್ಟ ಮಾತನ್ನೇ ಉಳಿಸಿಕೊಂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇನೆ ಎಂದು ಹೇಳಿ ಇದುವರೆಗೂ ಕೊಟ್ಟಿಲ್ಲ” ಎಂದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದರು.
ಬಿಜೆಪಿ ಹಗರಣಗಳ ಬಯಲು
ಕಾಂಗ್ರೆಸ್ ಭ್ರಷ್ಟಾಚಾರ ಎಂದು ಬಿಜೆಪಿ ಪೋಸ್ಟರ್ ಅಭಿಯಾನ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ರಾಜಿನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿಟ್ಟಿದ್ದೇವೆ. ಕೋವಿಡ್ ಸೇರಿದಂತೆ ಅನೇಕ ಆರೋಪಗಳಿವೆ. ನಾವು ಅವುಗಳನ್ನು ಬಯಲು ಮಾಡೋಣ. ರಾಜಕೀಯ ಮಾಡಬೇಕಲ್ಲ ಎಂದು ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಮುಗಿಯಲಿ” ಎಂದರು.
ನರೇಗಾ ರಹಿತ ಯೋಜನೆಯಿಂದ ಯಾರಿಗೂ ಅನುಕೂಲವಿಲ್ಲ
“ಮುಖ್ಯಮಂತ್ರಿಗಳು ಸದನದಲ್ಲಿ ಮನರೇಗಾ ವಿಚಾರವಾಗಿ ಪ್ರಸ್ತಾಪ ಮಾಡಿದ್ದು, ಇದನ್ನು ಕಾರ್ಯಕಲಾಪ ಸಲಹಾ ಸಮಿತಿ ಮುಂದಿಟ್ಟು ತೀರ್ಮಾನ ಮಾಡಬೇಕು ಎಂದು ಸಭಾಧ್ಯಕ್ಷರು ತಿಳಿಸಿದ್ದರು. ಅದರಂತೆ ಗುರುವಾರ(ಜ.29) ಇದರ ಬಗ್ಗೆ ಚರ್ಚೆಯಾಗಿದೆ. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಏಕೆ ರದ್ದು ಮಾಡಬೇಕು ಎಂದು ನಾವು ತಿಳಿಸುತ್ತೇವೆ. ಏಕೆಂದರೆ ಈಗಿರುವ ಪರಿಸ್ಥಿತಿಯಲ್ಲಿ ಯಾವ ರಾಜ್ಯದಲ್ಲಿಯೂ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈಗ ನಾಲ್ಕೈದು ತಿಂಗಳು ವ್ಯವಸಾಯದ ಕಾಲ. ಈ ಸಮಯದಲ್ಲಿ ರೈತರು ಅವರವರ ಕೂಲಿಯನ್ನು ಪಡೆದುಕೊಳ್ಳುತ್ತಿದ್ದರು. ಇಂತಹ ಸಮಯದಲ್ಲಿಯೇ ನರೇಗಾ ಯೋಜನೆ ತೆಗೆದು ಹಾಕಿದರೆ ಯಾರಿಗೂ ಏನೂ ಅನುಕೂಲವಾಗುವುದಿಲ್ಲ. ಮಾನವ ದಿನಗಳನ್ನು 125 ದಿನಗಳಿಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಬಹುದು. ಆದರೆ ಬೇರೆ ಸಮಯದಲ್ಲಿ ಇಷ್ಟು ದಿನಗಳ ಕಾಲ ಕೆಲಸ ನೀಡಲು ಸಾಧ್ಯವಿಲ್ಲ. ಒಂದೊಂದು ಪಂಚಾಯತಿಗೆ ತಲಾ 1.5 ಕೋಟಿ ರೂ. ಅನುದಾನ ನಷ್ಟವಾಗಲಿದ್ದು, ಜಾಬ್ ಕಾರ್ಡ್ ಹೊಂದಿರುವವರಿಗೂ ನಷ್ಟ” ಎಂದರು.
ಮಂಗನ ಕಾಯಿಲೆ: ಪರಿಹಾರ ಪರಿಶೀಲನೆ
ಮಂಗನ ಕಾಯಿಲೆಯಿಂದ ಮೃತಪಡುವವರಿಗೆ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಪರಿಶೀಲಿಸಿ ತಿಳಿಸುತ್ತೇನೆ ಎಂದು ಹೇಳಿದರು.
ನರೇಗಾಗೆ ಬಿಜೆಪಿ ಕೊಡಲಿ ಪೆಟ್ಟು: ಸಚಿವೆ ಹೆಬ್ಬಾಳ್ಕರ್
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ "ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕಿದೆ. ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು. ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ಜಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯಿತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರವ್ಯಾಪಿ ಆಂದೋಲನ
ಉದ್ಯೋಗ ಖಾತ್ರಿಯಲ್ಲಿ ಆರು ಕೋಟಿ ಕುಟುಂಬದ ಪರವಾಗಿ ರಾಷ್ಟ್ರವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ ಎಂದು ಪ್ರಶ್ನಿಸಿದರು.
ರಾಜ್ಯ ಪೊಲೀಸರಿಂದ ಉತ್ತಮ ತನಿಖೆ
ಬೆಳಗಾವಿ ಗಡಿ ಭಾಗ ಚೋರ್ಲ ಘಾಟ್‌ನಲ್ಲಿ 2,000 ರೂ. ನೋಟ್ ಕಂತೆಯ 400 ಕೋಟಿ ರೂ. ಸಿಕ್ಕಿದೆ ಎನ್ನವ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಹಣ ಯಾರದ್ದು ಎಂದು ತಿಳಿಯಬೇಕು, ಗುಜರಾತ್‌ನಿಂದ ಬಂದಿದೆ ಎನ್ನಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜಎಪಿಯವರು ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ ಎಂದರು.

