
ಡಿಸಿಎಂ ಡಿ.ಕೆ. ಶಿವಕುಮಾರ್
ಸಿಎಂ ಸೇರಿದಂತೆ ಎಲ್ಲರೂ ಬೆಂಬಲಕ್ಕಿದ್ದಾರೆ, ಹೈಕಮಾಂಡ್ ಜೊತೆಗಿನ ಗುಟ್ಟು ಬಹಿರಂಗಪಡಿಸಲ್ಲ: ಡಿಕೆಶಿ
ಎಲ್ಲರೂ ಕುಳಿತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕಿದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು. ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸೋಮವಾರ(ಜ.19) ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲರೂ ಕುಳಿತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು.
ಕಾಲ ಉತ್ತರಿಸಲಿದೆ
ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಮಾಧ್ಯಮಗಳು ರಾಹುಲ್ ಗಾಂಧಿ ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ. ಒಂದು ದಿನ ನಾವು ಜೊತೆಯಲ್ಲಿ ಕೂತು ಚರ್ಚೆ ಮಾಡಿರುವ ಫೋಟೋ ವರದಿ ಮಾಡಿದ್ದೀರಿ, ಮರುದಿನ ಭೇಟಿಯೇ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಕಾಲ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ಡಿ.ಕೆ. ಸುರೇಶ್ ಹೇಳಿಕೆ ಪ್ರತಿಕ್ರಿಯಿಸಿ, “ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮಗಳು ಕೂಡ ಹೇಳುತ್ತಿವೆ. ಯಾವಾಗ ಒಳ್ಳೆಯ ಸುದ್ದಿ ಬರಲಿದೆ ಎಂಬ ಬಗ್ಗೆ ನೋಡೋಣ, ಈಗ ಆ ಮಾತು ಯಾಕೆ ಎಂದರು.
ಒಮ್ಮೆಯೇ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ಕೂಡ ಚುನಾವಣೆ ನಡೆಸುವಂತೆ ತಿಳಿಸಿದೆ. ನಮ್ಮ ಸರ್ಕಾರ ಸಂವಿಧಾನದ 73, 74ನೇ ತಿದ್ದುಪಡಿಗೆ ಬದ್ಧವಾಗಿದೆ. ಯುವಕರಿಗೆ ಅಧಿಕಾರ ನೀಡಬೇಕು, ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು. ಈಗ ಐದು ಪಾಲಿಕೆಗಳಿಂದ 369 ವಾರ್ಡ್‌ಗಳನ್ನು ರಚಿಸಲಾಗಿದೆ. ಇನ್ನು ಬೆಂಗಳೂರಿನ ಹೊರವಲಯವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ನಮ್ಮ ಸರ್ಕಾರ ತೀರ್ಮಿನಿಸಿದೆ. ಇವುಗಳಿಗೆ ಇದ್ದ ಮೀಸಲಾತಿ ಸಮಸ್ಯೆ ಬಗೆಹರಿಸಲು ಸಿಎಂ ಹಾಗೂ ಸಚಿವರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಪಕ್ಷದ ಚಿಹ್ನೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ನಾವಿನ್ನೂ ಆ ಬಗ್ಗೆ ತೀರ್ಮಾನ ಮಾಡಿಲ್ಲ. ಒಂದೇ ಬಾರಿಗೆ ಎಲ್ಲವನ್ನು ನಡೆಸಲು ಚಿಂತನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಮತಪತ್ರ ಬಳಸುವುದರಲ್ಲಿ ತಪ್ಪಿಲ್ಲ
"ಜಿಬಿಎ ಚುನಾವಣೆಗೆ ಮತಪತ್ರ ಬಳಸುವುದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಯಾವ ರೂಪದಲ್ಲಿ ಚುನಾವಣೆ ನಡೆಸಲಾಗುವುದು ಎಂಬುದಕ್ಕಿಂತ ಮತದಾನ ನಡೆಯುವುದು ಬಹಳ ಮುಖ್ಯ. ಈಗ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ನಾವು ಈಗಾಗಲೇ ಬಿಎಲ್ಎಗಳ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದರೆ ಅವರಿಗೆ ಮತ್ತೆ ಅವಕಾಶ ಕಲ್ಪಿಸಬೇಕು ಹಾಗೂ ಅವರ ಹಕ್ಕನ್ನು ನೀಡಬೇಕು. ಅಧಿಕಾರಿಗಳ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕಾಗಿಯೇ ಇರುವ ಕಾನೂನು ಚೌಕಟ್ಟಿನಲ್ಲಿ ಚುನಾವಣಾ ಆಯೋಗ ಕೆಲಸ ಮಾಡಲಿದೆ” ಎಂದು ತಿಳಿಸಿದರು.

