Bengaluru-Mysore Railway | Cultural city closer to the capital; Acceleration for economic activity!
x

ಸಾಂದರ್ಭಿಕ ಚಿತ್ರ

Bangalore Mysore Expressway|ಬೆಂಗಳೂರು ಮೈಸೂರು ರೈಲ್ವೇ: ʼಎಕ್ಸ್‌ಪ್ರೆಸ್‌ವೇʼಗಿಂತಲೂ ಬಲು ಬೇಗ

ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಾಮಾನ್ಯವಾಗಿ 2.30 ರಿಂದ 3.30 ಗಂಟೆಗಳ ಪ್ರಯಾಣದ ಅವಧಿ ತೆಗೆದುಕೊಳ್ಳಲಿವೆ. ಆದರೆ, ಇದೀಗ ರೈಲ್ವೆ ಇಲಾಖೆ ರೈಲಿನ ವೇಗ ಹೆಚ್ಚಿಸುವುದರಿಂದ ಪ್ರಯಾಣದ ಅವಧಿ ಒಂದು ಗಂಟೆಗೆ ಇಳಿಯಲಿದೆ.


Click the Play button to hear this message in audio format

ʼಎಕ್ಸ್‌ಪ್ರೆಸ್‌ ವೇʼ ನಿರ್ಮಾಣದ ಬಳಿಕ ತಗ್ಗಿರುವ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಪ್ರಯಾಣದ ಅವಧಿ ಇದೀಗ ಇನ್ನಷ್ಟು ಕಡಿಮೆಯಾಗಲಿದೆ. ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲುಗಳ ವೇಗವನ್ನು ಭಾರತೀಯ ರೈಲ್ವೆ ಹೆಚ್ಚಿಸಿದ್ದು, ಕೇವಲ ಒಂದರಿಂದ ಒಂದೂವರೆಗೆ ಗಂಟೆಯಲ್ಲೇ ಮೈಸೂರು ತಲುಪಬಹುದಾಗಿದೆ.

ಹೌದು, ಪ್ರಸ್ತುತ ಎರಡೂ ನಗರಗಳ ನಡುವೆ ಎಕ್ಸ್‌ಪ್ರೆಸ್‌ ರೈಲುಗಳ ಸರಾಸರಿ ವೇಗವು ಗಂಟೆಗೆ 55ರಿಂದ 110 ಕಿ.ಮೀ ಇದ್ದು, ಈಗ ವೇಗವನ್ನು ಗಂಟೆಗೆ 135 ಕಿ. ಮೀ.ಗೆ ಹೆಚ್ಚಿಸಲು ನಿರ್ಧರಿಸಿರುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಅಲ್ಲದೇ, ಪ್ರವಾಸೋದ್ಯಮ, ವ್ಯಾಪಾರ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ.

ವಂದೇ ಭಾರತ್‌, ಶತಾಬ್ದಿಯಂತಹ ರೈಲುಗಳು ಬೆಂಗಳೂರಿನಿಂದ ಮೈಸೂರು ತಲುಪಲು ಸುಮಾರು 2 ರಿಂದ 2.5 ಗಂಟೆ ಸಮಯ ತೆಗೆದುಕೊಳ್ಳಲಿವೆ. ವೇಗ ಹೆಚ್ಚಳದಿಂದ ಪ್ರಯಾಣದ ಅವಧಿ ಒಂದರಿಂದ ಒಂದೂವರೆ ಗಂಟೆಗೆ ಇಳಿಯಲಿದೆ. ಆ ಮೂಲಕ ಮೈಸೂರು ಎಕ್ಸ್‌ಪ್ರೆಸ್‌ ವೇ ಗಿಂತಲೂ ಬೇಗನೇ ಮೈಸೂರು ತಲುಪಬಹುದಾಗಿದೆ.

ರೈಲುಗಳ ವೇಗಮಿತಿ ಎಷ್ಟಿದೆ?

ರೈಲ್ವೆ ಇಲಾಖೆಯ ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು ಸರಾಸರಿ 40 ರಿಂದ 50 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಸೂಪರ್ ಫಾಸ್ಟ್ ರೈಲುಗಳು 55 ರಿಂದ 65 ಕಿ.ಮೀ. ಸರಾಸರಿ ವೇಗವನ್ನು ಹೊಂದಿರುತ್ತವೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಸಾಮಾನ್ಯವಾಗಿ ಗಂಟೆಗೆ 130 ರಿಂದ 140 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುತ್ತವೆ. ಕೆಲವು ಮಾರ್ಗಗಳಲ್ಲಿ, ಅವು 140 ಕಿ.ಮೀ. ವೇಗದಲ್ಲಿ ಸಂಚರಿಸಲು ಅನುಮತಿ ಹೊಂದಿವೆ.

ಪ್ರವಾಸೋದ್ಯಮಕ್ಕೆ ಉತ್ತೇಜನ

ಸಾಂಸ್ಕೃತಿಕ ನಗರಿಯಾದ ಮೈಸೂರು ಹಾಗೂ ಬೆಂಗಳೂರು ನಗರಗಳು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ರೈಲುಗಳ ವೇಗ ಹೆಚ್ಚಿಸುವುದರಿಂದ ಪ್ರವಾಸಿಗರು ಯಾವುದೇ ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದಂತೆ ಪ್ರಯಾಣಿಸಬಹುದಾಗಿದೆ. ಜತೆಗೆ ಮೈಸೂರಿಗೆ ಒಂದು ದಿನದ ಪ್ರವಾಸ ಮಾಡಿ ಹಿಂದಿರುಗುಬಹುದಾಗಿದೆ. ಇದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಲಾಭವಾಗಲಿದೆ.

ಆರ್ಥಿಕ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್

ಬೆಂಗಳೂರು ಮತ್ತು ಮೈಸೂರು ನಡುವೆ ರೈಲುಗಳು ವೇಗವಾಗಿ ಚಲಿಸುವುದರಿಂದ ಸಾವಿರಾರು ಉದ್ಯೋಗಿಗಳಿಗೂ ಸಹಾಯವಾಗಲಿದೆ. ಪ್ರಸ್ತುತ, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಬರುವವರು ಗಂಟೆಗಟ್ಟಲೇ ಜನದಟ್ಟಣೆಯ ನಡುವೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಸಣ್ಣ ಕೆಲಸದ ನಿಮಿತ್ತ ಬಂದರೂ ಇಡೀ ದಿನ ಪ್ರಯಾಣದಲ್ಲೇ ಕಳೆದುಹೋಗಲಿದೆ. ಹೀಗಿರುವಾಗ ರೈಲುಗಳ ವೇಗ ಹೆಚ್ಚಳವು ದೈನಂದಿನ ಕೆಲಸಗಳಿಗೆ ಬರುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

ತ್ವರಿತವಾಗಿ ಬೆಂಗಳೂರಿಗೆ ಬಂದು ಹೋಗುವುದರಿಂದ ಬೆಂಗಳೂರಿನ ಜನದಟ್ಟಣೆಯೂ ಕಡಿಮೆಯಾಗಲಿದೆ. ಅಗ್ಗದ ದರದಲ್ಲಿ ಪ್ರಯಾಣಿಸಬಹುದು. ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯದಂತಹ ಮಾರ್ಗಮಧ್ಯೆ ನಗರಗಳ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯೂ ಅಭಿವೃದ್ಧಿ ಹೊಂದಲಿದೆ.

ಎಕ್ಸ್‌ಪ್ರೆಸ್‌ವೇ ಮೇಲಿನ ಒತ್ತಡ ಕಡಿಮೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಅಪಘಾತಗಳ ಭಯ ಮತ್ತು ಟೋಲ್ ದರಗಳ ಹೊರೆ ಹೆಚ್ಚಾಗಿದೆ. ರೈಲುಗಳ ವೇಗ ಹೆಚ್ಚಾದಾಗ ಜನರು ರಸ್ತೆ ಪ್ರಯಾಣಕ್ಕಿಂತ ರೈಲು ಪ್ರಯಾಣವನ್ನು ಹೆಚ್ಚು ಅವಲಂಬಿಸಲಿದ್ದಾರೆ. ಇದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಜತೆಗೆ ರಸ್ತೆ ಅಪಘಾತಗಳನ್ನು ತಗ್ಗಿಸಲಿದೆ.

ಶಿಕ್ಷಣ ಮತ್ತು ಉದ್ಯೋಗದ ಅವಕಾಶ

ಮೈಸೂರಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಬೆಂಗಳೂರಿನಲ್ಲಿ ದೊಡ್ಡ ಕಂಪನಿಗಳಿವೆ. ವೇಗದ ರೈಲು ಸಂಪರ್ಕದಿಂದಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಎರಡೂ ನಗರಗಳ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ರಾಜಧಾನಿಗೆ ಕೆಲಸಕ್ಕೆ ಪ್ರಯಾಣ ಮಾಡಬಹುದು. ಎರಡೂ ನಗರಗಳ ಅವಧಿ ಕಡಿಮೆ ಇರುವುದರಿಂದ ದೊಡ್ಡ ಕಂಪನಿಗಳು ಮೈಸೂರಿನಲ್ಲಿಯೂ ಹೂಡಿಕೆ ಮಾಡಬಹುದಾಗಿದೆ.

ಕೇಂದ್ರ ಸಚಿವರಾದ ವಿ.ಸೋಮಣ್ಣ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ (ಏ.10) ಬೆಂಗಳೂರು - ಮೈಸೂರು ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ವಿಂಡೋ ಟ್ರೈಲಿಂಗ್ ಮೂಲಕ ವೀಕ್ಷಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು.

"ರೈಲುಗಳ ವೇಗದ ಮಿತಿಯನ್ನು ಪ್ರಾಯೋಗಿಕವಾಗಿ ಹೆಚ್ಚಳ ಮಾಡಲಾಗಿದೆ. ಎಲ್ಲ ರೈಲುಗಳ ವೇಗವನ್ನು ಹಂತ ಹಂತವಾಗಿ ‌ಹೆಚ್ಚಿಸಲಾಗುವುದು. ಇದರಿಂದ ಮೈಸೂರು- ಬೆಂಗಳೂರು ನಡುವೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ'' ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದರು.

"ಇದಲ್ಲದೇ ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ ಶೀಘ್ರವೇ ಮತ್ತೆರಡು ಮೆಮು ರೈಲುಗಳ ಸಂಚಾರ ಆರಂಭಿಸಲಾಗುವುದು. 6 ಸಾವಿರ ಕೋಟಿ ರೂ.ವೆಚ್ಚದಲ್ಲಿ ಮೆಗಾ ಕೋಚಿಂಗ್ ಕೇಂದ್ರ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 707 ಹೊಸ ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿಂದ ಕನಕಪುರ ಮಾರ್ಗವಾಗಿ ಚಾಮರಾಜನಗರದವರೆಗೆ 142 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ 1,200 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಯೋಜನೆಗೆ ಅಸಹಕಾರ ತೋರಿದೆ, ಅಲ್ಲದೇ ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೂ ಸಹಕಾರ ಕೊಡುತ್ತಿಲ್ಲ" ಎಂದು ಆರೋಪಿಸಿದ್ದರು.

ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಎಚ್‌.ಡಿ. ಕುಮಾರಸ್ವಾಮಿ ರೈಲಿನಲ್ಲಿ ಪ್ರಯಾಣಿಸಿ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಬೆಂಗಳೂರು ಮೈಸೂರು ನಡುವಿನ ಪ್ರಮುಖ ನಗರವಾದ ಮಂಡ್ಯ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಮುಂಚೂಣಿ ನಗರವಾಗಿದೆ. ಅಲ್ಲದೆ ಪ್ರವಾಸೋದ್ಯಮ ವಲಯದಲ್ಲೂ ಪ್ರಮುಖವಾಗಿದೆ. ಹೀಗಾಗಿ ಮಂಡ್ಯದ ರೈಲ್ವೆ ನಿಲ್ದಾಣವನ್ನು ಅತ್ಯಧುನಿಕ ಮತ್ತು ಸ್ವಸಜಿತ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಎಂದು ಸಾರ್ವಜನಿಕರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.

Read More
Next Story