
ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ ತಕ್ಷಣವೇ ನಿಲ್ಲಿಸಲು ಹೈಕೋರ್ಟ್ ಆದೇಶ: ನ್ಯಾಯಾಂಗ ನಿಂದನೆ ಎಚ್ಚರಿಕೆ
ಹಿಂದಿನ ವಿಚಾರಣೆ ವೇಳೆ, ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಚಾಮುಂಡಿ ಬೆಟ್ಟದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ಮೈಸೂರಿನ ಚಾಮುಂಡಿ ಬೆಟ್ಟದ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ, ಭವಿಷ್ಯದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾದರೆ ಅದನ್ನು 'ಗಂಭೀರ ನ್ಯಾಯಾಂಗ ನಿಂದನೆ' ಎಂದು ಪರಿಗಣಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ.
ಚಾಮುಂಡಿ ಬೆಟ್ಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತಹ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಪ್ರಮುಖ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ನ್ಯಾಯಾಲಯದ ಅಸಮಾಧಾನವೇಕೆ?
ಈ ಹಿಂದೆ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಚಾಮುಂಡಿ ಬೆಟ್ಟದಲ್ಲಿ ಯಾವುದೇ ಶಾಶ್ವತ ಕಾಮಗಾರಿಗಳನ್ನು ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಛಾಯಾಚಿತ್ರಗಳನ್ನು ಗಮನಿಸಿದರೆ ದೇವಾಲಯದ ಆವರಣದಲ್ಲಿ ಬೃಹತ್ ಮಟ್ಟದ ಶಾಶ್ವತ ನಿರ್ಮಾಣ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರದ ಈ ನಡೆಗೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿಗೆ ತರಾಟೆ, ಲೆಕ್ಕ ಕೇಳಿದ ಹೈಕೋರ್ಟ್
ದೇವಸ್ಥಾನದ ಆವರಣದಲ್ಲಿನ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಈ ಕಾಮಗಾರಿಗಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ 47 ಕೋಟಿ ರೂಪಾಯಿಗಳ ಅನುದಾನವನ್ನು ಯಾವೆಲ್ಲಾ ಕೆಲಸಗಳಿಗೆ ಬಳಸಲಾಗಿದೆ? ಇದುವರೆಗೆ ಎಷ್ಟು ಹಣ ವೆಚ್ಚ ಮಾಡಲಾಗಿದೆ? ಎಂಬ ಬಗ್ಗೆ ಎರಡು ವಾರಗಳಲ್ಲಿ ವಿವರವಾದ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ತಾಕೀತು ಮಾಡಿದೆ.
ಕಾಮಗಾರಿಯನ್ನು ಸಮರ್ಥಿಸಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪೀಠ, "ಕೇಂದ್ರ ಸರ್ಕಾರದಿಂದ 47 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂಬ ಕಾರಣ ನೀಡಿ ನಿರ್ಮಾಣ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿರುವ ಜಿಲ್ಲಾಧಿಕಾರಿಯ ನಡೆ ದುರುದ್ದೇಶಪೂರಿತ ಮಾತ್ರವಲ್ಲ, ಕಾನೂನಿನ ಪ್ರಕಾರ ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ. ಜಿಲ್ಲಾಧಿಕಾರಿಯಾದವರು ರಾಜ್ಯದ ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವರ ಆದ್ಯ ಕರ್ತವ್ಯ. ಹಣಕಾಸಿನ ಮಂಜೂರಾತಿ ಸಿಕ್ಕಿದೆ ಎಂಬ ಕಾರಣವು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಲು ಯಾರಿಗೂ ಪರವಾನಗಿ ನೀಡುವುದಿಲ್ಲ" ಎಂದು ತೀಕ್ಷ್ಣವಾಗಿ ನುಡಿದಿದೆ.

