ʻನನ್ನ ವಿರುದ್ಧ ಸಂಚು, ನಿಷ್ಪಕ್ಷಪಾತ ತನಿಖೆ ಮಾಡಿʼ- ಪೊಲೀಸರಿಗೆ ಸ್ನೇಹಮಯಿ ಕೃಷ್ಣ ಪತ್ರ
x
ಸಿಸಿಬಿ ಪೊಲೀಸರ ವಶದಲ್ಲಿರುವ ಸ್ನೇಹಮಯಿ ಕೃಷ್ಣ

ʻನನ್ನ ವಿರುದ್ಧ ಸಂಚು, ನಿಷ್ಪಕ್ಷಪಾತ ತನಿಖೆ ಮಾಡಿʼ- ಪೊಲೀಸರಿಗೆ ಸ್ನೇಹಮಯಿ ಕೃಷ್ಣ ಪತ್ರ

ಆರ್‌ಟಿಐ ಕಾರ್ಯಕರ್ತೆ ಪವಿತ್ರ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಅವರು ಬಸವೇಶ್ವರನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ.


Click the Play button to hear this message in audio format

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ತಮ್ಮ ವಿರುದ್ಧ ಆರ್‌ಟಿಐ ಕಾರ್ಯಕರ್ತೆ ಬಿ.ಎನ್. ಪವಿತ್ರ ದಾಖಲಿಸಿರುವ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಬಸವೇಶ್ವರನಗರ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ನೀಡಿದ ಮನವಿಯಲ್ಲಿ ಹಲವು ಪ್ರಮುಖಾಂಶಗಳನ್ನು ಉಲ್ಲೇಖಿಸಿದ್ದು, ತಮಗೆ ಕಳಂಕ ತರುವ ಸಲುವಾಗಿ ಸುಳ್ಳು ಪತ್ರ ಸೃಷ್ಟಿಸಲಾಗಿದೆ, ಈ ಬಗ್ಗೆ ತನಿಖೆ ನಡೆಸಿ ನಿಜವಾದ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ಪತ್ರದಲ್ಲಿ ವಿನಂತಿಸಿದ್ದಾರೆ.

ಸಿಸಿಬಿ ಪೊಲೀಸರ ವಶದಲ್ಲಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ದಾಖಲೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಆರ್‌ಟಿಐ ಕಾರ್ಯಕರ್ತೆ ಬಿ.ಎನ್. ಪವಿತ್ರ ದೂರಿನಾಧಾರದಲ್ಲಿ ಶನಿವಾರ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದೆ.

ಸ್ನೇಹಮಯಿ ಕೃಷ್ಣ ಮನವಿ ಪತ್ರದಲ್ಲೇನಿದೆ?

ಕಳೆದ ನವೆಂಬರ್‌ನಲ್ಲಿ ಪವಿತ್ರ ಅವರ ಚಿಕ್ಕಮ್ಮ ರಮಾದೇವಿ ಎಂಬುವವರು ತಮ್ಮನ್ನು ಸಂಪರ್ಕಿಸಿ, ವಿಜಯನಗರ ಎಸಿಪಿ ಚಂದನ್‌ಕುಮಾರ್ ಅವರಿಂದ ತಮಗೆ ಮತ್ತು ಮೈಲಾರಪ್ಪ ಎಂಬುವವರಿಗೆ ಕಿರುಕುಳವಾಗುತ್ತಿದೆ ಎಂದು ದೂರಿ ದಾಖಲೆಗಳನ್ನು ನೀಡಿದ್ದರು.

ಪವಿತ್ರ ಅವರ ಪತಿ ಸೋಮಶೇಖರ್ ಅವರ ಆತ್ಮಹತ್ಯೆಗೆ ಪವಿತ್ರ ಅವರೇ ಕಾರಣ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಈ ಸಾವಿನ ಪ್ರಕರಣವನ್ನು ಎಸಿಪಿ ಚಂದನ್‌ಕುಮಾರ್ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಸೋಮಶೇಖರ್ ಸಾವಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಡಿಸೆಂಬರ್ 1, 2025 ರಂದು ಮಹಾಲಕ್ಷ್ಮೀಪುರಂ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ತಮ್ಮ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಪತ್ರದ ಬಗ್ಗೆ ಸ್ನೇಹಮಯಿ ಕೃಷ್ಣ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 4 ರಂದು ಪವಿತ್ರ ಅವರಿಗೆ ಕಳುಹಿಸಲಾಗಿದೆ ಎನ್ನಲಾದ ಪತ್ರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಪತ್ರದಲ್ಲಿರುವ ಕೈಬರವಣಿಗೆ ತಮ್ಮದಾಗಲಿ ಅಥವಾ ಮೈಲಾರಪ್ಪ ಅವರದ್ದಾಗಲಿ ಅಲ್ಲ. ಅಲ್ಲದೆ, ಆ ಪತ್ರದಲ್ಲಿ ತಮ್ಮ ಸಹಿಯೂ ಇಲ್ಲದಿರುವುದು ಇದು ಯೋಜಿತ ಸಂಚು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ಪೊಲೀಸರಿಗೆ ಮಾಡಿರುವ ಮನವಿಗಳು

ತಮ್ಮ ಮೇಲಿನ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಈ ಕೆಳಗಿನ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ. ಆಕ್ಷೇಪಾರ್ಹ ಪತ್ರಗಳನ್ನು ಯಾವ ಅಂಚೆ ಕಚೇರಿಯಿಂದ ಕಳುಹಿಸಲಾಗಿದೆ ಎಂದು ಪತ್ತೆ ಹಚ್ಚಿ, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಸ್ನೇಹಮಯಿ ಕೃಷ್ಣ ಮತ್ತು ಮೈಲಾರಪ್ಪ ಅವರ ಮೊಬೈಲ್ ಕರೆಗಳು ಹಾಗೂ ಟವರ್ ಲೊಕೇಶನ್ ದಾಖಲೆಗಳನ್ನು ಪಡೆದು ಸತ್ಯಾಂಶ ಖಚಿತಪಡಿಸಿಕೊಳ್ಳಬೇಕು.

ಪತ್ರದ ಮೇಲಿನ ಕೈಬರವಣಿಗೆಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ವೈಜ್ಞಾನಿಕ ವರದಿ ಪಡೆಯಬೇಕು. ಈ ಪ್ರಕರಣವು ಎಸಿಪಿ ಚಂದನ್‌ಕುಮಾರ್ ಅವರ ಕುಮ್ಮಕ್ಕಿನಿಂದಲೇ ದಾಖಲಾಗಿರುವ ಅನುಮಾನವಿದೆ ಎಂದು ಅವರು ತಿಳಿಸಿದ್ದಾರೆ. ಆದುದರಿಂದ ಪವಿತ್ರ ಅವರ ಮೊಬೈಲ್ ಕರೆಗಳ ವಿವರ (CDR) ಪರಿಶೀಲಿಸಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Read More
Next Story