
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ
ನಟೇಶ್ ಬಡ್ತಿ ವಿವಾದ: ಸಿಎಸ್ ಶಾಲಿನಿ ರಜನೀಶ್ ಹೆಸರಿಸಿದ್ದಕ್ಕೆ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ
ನಟೇಶ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ನಾನು ಮಾಡಿರುವ ಭ್ರಷ್ಟಾಚಾರದ ಆರೋಪ ಸುಳ್ಳಲ್ಲ. ಕೇವಲ ಈ ಸಂದರ್ಭದಲ್ಲಿ ಸಿಎಸ್ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಮಾತ್ರ ಕ್ಷಮೆ ಕೇಳಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕ್ಷಮೆಯಾಚಿಸಿದ್ದಾರೆ. ಆದರೆ, ನಟೇಶ್ ಬಡ್ತಿಗಾಗಿ ಲಂಚ ನೀಡಿರುವುದು ನಿಜ ಎಂಬ ತಮ್ಮ ನಿಲುವಿಗೆ ಬದ್ಧ ಎಂದಿದ್ದಾರೆ.
ಭಾನುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ನಟೇಶ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ನಾನು ಮಾಡಿರುವ ಭ್ರಷ್ಟಾಚಾರದ ಆರೋಪ ಸುಳ್ಳಲ್ಲ. ಕೇವಲ ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಮಾತ್ರ ಕ್ಷಮೆ ಕೇಳಿದ್ದೇನೆ. ಈ ಪ್ರಕರಣದಲ್ಲಿ ನನಗೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದ ವಿನೋದ್ ಎಂಬಾತ ಈಗ ಉಲ್ಟಾ ಹೊಡೆದಿದ್ದಾನೆ," ಎಂದು ತಿಳಿಸಿದ್ದಾರೆ.
'ಪ್ರಭಾವಿ' ವ್ಯಕ್ತಿಗೆ ಲಂಚ?
ನಟೇಶ್ ಬಡ್ತಿ ಪಡೆಯಲು ಪ್ರಭಾವಿ ವ್ಯಕ್ತಿಯೊಬ್ಬರಿಗೆ ಲಂಚ ನೀಡಿರುವುದು ಸತ್ಯ ಎಂದು ವಿನೋದ್ ಈ ಹಿಂದೆ ಒಪ್ಪಿಕೊಂಡಿದ್ದನು ಮತ್ತು ಅದಕ್ಕೆ ಪೂರಕವಾದ ಕೆಲವು ಸಾಕ್ಷ್ಯಗಳನ್ನು ನೀಡಿದ್ದನು. "ಆ 'ಪ್ರಭಾವಿ' ವ್ಯಕ್ತಿ ಯಾರು ಎಂಬುದು ತನಿಖೆಯಿಂದ ಹೊರಬರಬೇಕಿದೆ. ವಿನೋದ್ ಈಗ ಮಾತು ಬದಲಿಸಿರಬಹುದು, ಆದರೆ ಸತ್ಯ ಮರೆಮಾಚಲು ಸಾಧ್ಯವಿಲ್ಲ," ಎಂದು ಪ್ರತಿಪಾದಿಸಿದ್ದಾರೆ.
ಸಿಎಂ ವಿರುದ್ಧ ವಾಗ್ದಾಳಿ
ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧವೂ ಹೇಳಿಕೆ ನೀಡಿರುವ ಅವರು, "14 ನಿವೇಶನಗಳನ್ನು ಕಾನೂನುಬದ್ಧವಾಗಿ ಪಡೆದಿದ್ದೇವೆ ಎಂದು ವಿಧಾನಸೌಧದಲ್ಲಿ ಆರ್ಭಟಿಸಿದ್ದ ಮುಖ್ಯಮಂತ್ರಿಗಳು, ನಾನು ಪ್ರಕರಣ ದಾಖಲಿಸಿದ ಕೂಡಲೇ ತಮ್ಮ ತಪ್ಪೊಪ್ಪಿಕೊಂಡು ನಿವೇಶನಗಳನ್ನು ವಾಪಸ್ ನೀಡಿದರು. ಅದಕ್ಕಿಂತ ದೊಡ್ಡ ತಪ್ಪನ್ನೇನೂ ನಾನು ಮಾಡಿಲ್ಲ. ನಡೆಯುವಾಗ ಕೆಲವು ಸಲ ಎಡವುದು ಸಹಜ," ಎಂದು ಮಾರ್ಮಿಕವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ ?
ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಬಂದಿದ್ದ ಮುಡಾ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ಪ್ರಮುಖ ಅಧಿಕಾರಿ ಎನ್ನಲಾದ ಡಿ.ಬಿ.ನಟೇಶ್ ಅವರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಆಗಿ ಮುಂಬಡ್ತಿ ನೀಡಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿ ಪತ್ರ ಬರೆದಿದ್ದರು. ಅಲ್ಲದೆ, ಮುಡಾ ಹಗರಣವನ್ನು ಮುಚ್ಚಿ ಹಾಕಲು ತಮಗೆ ಹಣದ ಆಮಿಷವೊಡ್ಡಲಾಗಿದೆ ಎಂದೂ ಅವರು ಆರೋಪಿಸಿದ್ದರು.

