Internal Reservation|ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ; ಒಳ ಮೀಸಲಾತಿ ಕುರಿತು ಸಚಿವರಿಂದ ಅಭಿಪ್ರಾಯ ಸಂಗ್ರಹ
x

Internal Reservation|ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ; ಒಳ ಮೀಸಲಾತಿ ಕುರಿತು ಸಚಿವರಿಂದ ಅಭಿಪ್ರಾಯ ಸಂಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಜೆ 7ಕ್ಕೆ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಒಳ ಮೀಸಲಾತಿ ಜಾರಿ ಕುರಿತು ನಿರ್ಣಾಯಕ ಚರ್ಚೆ ಸಾಧ್ಯತೆಯಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಒಳ ಮೀಸಲಾತಿ ಜಾರಿ ಕುರಿತು ಇಂದು ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.

ಸಂಜೆ 7 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಭೆ ಆಯೋಜನೆಯಾಗಿದ್ದು, ಒಳ ಮೀಸಲಾತಿ ಜಾರಿ ಕುರಿತಾದ ಪರ-ವಿರೋಧದ ಚರ್ಚೆಗಳು ಹಾಗೂ ಗೊಂದಲಗಳ ನಿವಾರಣೆಗೆ ಈ ಸಭೆ ಸಾಕ್ಷಿಯಾಗಲಿದೆ. ಕಳೆದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಇಂದು ಸಿಎಂ ಸಿದ್ದರಾಮಯ್ಯ ಅವರು ಸಚಿವರಿಂದ ಸಾಧಕ-ಬಾಧಕಗಳ ಬಗ್ಗೆ ನೇರ ಅಭಿಪ್ರಾಯ ಪಡೆಯಲಿದ್ದಾರೆ.

ಇಂದಿನ ಸಭೆಯಲ್ಲಿ ಸಚಿವರ ಅಭಿಪ್ರಾಯ, ಒಳ ಮೀಸಲಾತಿ ಜಾರಿಯ ಸಾಧಕ-ಬಾಧಕ, ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥ ಇನ್ನಿತರೆ ವಿಚಾರಗಳ ಕುರಿತು ಚರ್ಚಿಸಲಿದ್ದು, ನಾಳೆ(ಮಾ.27) ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ‌ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇಂದಿನ ಸಭೆಯಲ್ಲಿ ಕೇವಲ ಮೀಸಲಾತಿ ಮಾತ್ರವಲ್ಲದೆ, ಆಡಳಿತಾತ್ಮಕವಾಗಿ ಮಹತ್ವದ ಹಲವು ವಿಧೇಯಕಗಳಿಗೆ ಘಟನೋತ್ತರ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಲಿದೆ. ಮುಖ್ಯವಾಗಿ `ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ ವಿಧೇಯಕ 2026' ಹಾಗೂ `ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ 2026' ಸಮಾಲೋಚನೆಗೆ ಒಳಪಡಲಿವೆ. ಇದರೊಂದಿಗೆ ಜಲಸಂಪನ್ಮೂಲ ಇಲಾಖೆಯ 379 ಅಧಿಕಾರಿ ಮತ್ತು ನೌಕರರ ಜೇಷ್ಠತಾ ಪಟ್ಟಿಯ ಗೊಂದಲ ನಿವಾರಣೆ ಹಾಗೂ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ-2026ರ ಮಾದರಿ ನೀತಿ ಸಂಹಿತೆಯ ಅನ್ವಯದ ಕುರಿತು ಸಚಿವ ಸಂಪುಟಕ್ಕೆ ಮಾಹಿತಿ ನೀಡಲಾಗುತ್ತದೆ.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಆರ್‌ಬಿಎಸ್‌ಕೆ ಯೋಜನೆಯಡಿ ಬಾಕಿ ಇರುವ 23.30 ಕೋಟಿ ರೂಪಾಯಿಗಳ ಚಿಕಿತ್ಸಾ ಬಿಲ್‌ಗಳನ್ನು ಎಸ್‌ಎಎಸ್‌ಟಿ ಅನುದಾನದಿಂದ ಪಾವತಿಸುವ ಬಗ್ಗೆಯೂ ಸರ್ಕಾರ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಇನ್ನು ಲೋಕಾಯುಕ್ತ ಕಾಯ್ದೆಯಡಿ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲ್ಪಟ್ಟಿದ್ದ ಸಿಂದಗಿ ಉಪ ವಿಭಾಗದ ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ ಬಸಲಿಂಗಪ್ಪ ಗಿಡದಾನಪ್ಪಗೋಳ ಅವರ ಮೇಲಿನ ವಿಚಾರಣೆಯನ್ನು ಕೈಬಿಡುವ ಕುರಿತಾದ ಪ್ರಸ್ತಾವನೆಯೂ ಇಂದಿನ ಸಂಪುಟದ ಕಾರ್ಯಸೂಚಿಯಲ್ಲಿದೆ.

ಒಟ್ಟಾರೆಯಾಗಿ ಇಂದಿನ ಸಭೆಯು ರಾಜ್ಯದ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎನಿಸಿದೆ.

Read More
Next Story