
Internal Reservation| ಒಳ ಮೀಸಲು ಸುಳಿಯಲ್ಲಿ ಪ್ರಾತಿನಿಧ್ಯದ ಮಾನದಂಡ; ಏನಿದು ʼರೋಸ್ಟರ್ ಬಿಂದುʼ ವಿವಾದ?
ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದಿರುವಿಕೆ ಆಧರಿಸಿ ʼಪ್ರವರ್ಗ ಎʼ ರೋಸ್ಟರ್ ಬಿಂದು 1 ರಲ್ಲಿ, ʼಪ್ರವರ್ಗ ಬಿʼಗೆ ರೋಸ್ಟರ್ ಬಿಂದು 9 ಹಾಗೂ ʼಪ್ರವರ್ಗ ಸಿʼಗೆ ರೋಸ್ಟರ್ ಬಿಂದು 15 ರಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿಯಲ್ಲಿ ರೋಸ್ಟರ್ ಬಿಂದುಗಳು ಬರೀ ಅಂಕಿ ಅಂಶಗಳಲ್ಲ, ಶೋಷಿತ ಸಮುದಾಯಗಳ ಬದುಕಿನ ದಿಕ್ಸೂಚಿಗಳಂತಿವೆ. ದುರ್ಬಲರಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನ ಒದಗಿಸಲು ಬಳಸುವ ಮಾನದಂಡವೂ ಆಗಿದೆ.
ಎಲ್.ಜಿ. ಹಾವನೂರ ಆಯೋಗದ ಕ್ರಾಂತಿಕಾರಕ ನಿರ್ಧಾರದೊಂದಿಗೆ ಪರಿಶಿಷ್ಟರಿಗೆ ಸಮರ್ಪಕ ಪ್ರಾತಿನಿಧ್ಯ ಒದಗಿಸುತ್ತಾ ಬಂದಿರುವ ಈ ರೋಸ್ಟರ್ ವ್ಯವಸ್ಥೆಯೇ ಇಂದು ಒಳ ಮೀಸಲಾತಿ ಸುಳಿಯಲ್ಲಿ ಎಡ-ಬಲದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.
ಒಂದೆಡೆ ದಶಕಗಳಿಂದ ಪ್ರಾತಿನಿಧ್ಯ ವಂಚಿತವಾಗಿರುವ ಎಡಗೈ ಸಮುದಾಯಕ್ಕೆ ರೋಸ್ಟರ್ ಬಿಂದು 1 ನಿಗದಿಪಡಿಸಿರುವುದು ಬೆಳವಣಿಗೆಗೆ ಪೂರಕವಾಗಿದ್ದರೆ, ಮತ್ತೊಂದೆಡೆ ರೋಸ್ಟರ್ ಬಿಂದು 9 ನಿಗದಿಪಡಿಸಿರುವುದರಿಂದ ಅವಕಾಶಗಳು ಕೈತಪ್ಪುವ ಆತಂಕದಲ್ಲಿ ಬಲಗೈ ಸಮುದಾಯವು ರೋಸ್ಟರ್ ಅನ್ನೇ ಪ್ರಶ್ನಿಸುತ್ತಿದೆ.
ಒಳ ಮೀಸಲಾತಿ ಕುರಿತು ಗೊಂದಲ ಸೃಷ್ಟಿಸಿದ ಸರ್ಕಾರದ ನಿರ್ಧಾರಗಳು, ನೇಮಕಾತಿ ವಿಳಂಬ, ಇದರ ಹಿಂದಿರುವ ಷಡ್ಯಂತ್ರ್ಯದ ಆರೋಪಗಳು ಇದೀಗ ಒಳ ಮೀಸಲಾತಿ ಜಾರಿಯನ್ನೇ ಕಗ್ಗಂಟಾಗಿಸಿದೆ.
ರೋಸ್ಟರ್ ಬಿಂದುಗಳ ಪರಿಷ್ಕರಣೆ ಇತಿಹಾಸ
1952ರವರೆಗೂ ಮೀಸಲಾತಿ ಸೌಲಭ್ಯದ ರೋಸ್ಟರ್ ಬಿಂದುಗಳಲ್ಲಿ ಎಸ್‌ಸಿ 7, ಎಸ್‌ಟಿ 15ನೇ ಸ್ಥಾನದಲ್ಲಿ ಮೀಸಲಾತಿಯ ಲಾಭ ಪಡೆಯುತ್ತಿತ್ತು. 1961ರಲ್ಲಿ ನಾಗನಗೌಡ ಸಮಿತಿಯು ಇತರೆ ಹಿಂದುಳಿದ ವರ್ಗಗಳಿಗೂ ಮೀಸಲಾತಿಯನ್ನು ವರ್ಗೀಕರಿಸಿತು. ಅಲ್ಲಿಯವರೆಗೂ ಸಾಮಾನ್ಯ ವರ್ಗಗಳೇ ರೋಸ್ಟರ್ ಬಿಂದುಗಳಲ್ಲಿ ಮೊದಲ ಆದ್ಯತೆ ಪಡೆದಿದ್ದವು.
1979 ರ ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ ಎಲ್.ಜಿ.ಹಾವನೂರ ಆಯೋಗವು ಕ್ರಾಂತಿಕಾರಕ ಬದಲಾವಣೆ ತಂದಿತು. ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಮರ್ಪಕ ಪ್ರಾತಿನಿಧ್ಯದ ಅಗತ್ಯತೆ ಮನಗಂಡು ರೋಸ್ಟರ್ ಬಿಂದು 1 ಹಾಗೂ 2 ರಲ್ಲಿ ಕ್ರಮವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳನ್ನು ಇರಿಸಲಾಯಿತು.
1987-88 ರಲ್ಲಿ ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಮತ್ತೆ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ 1ರಲ್ಲಿ ಎಸ್ಸಿ, 2ರಲ್ಲಿ ಸಾಮಾನ್ಯ ಅಭ್ಯರ್ಥಿ ಹಾಗೂ 3 ರಲ್ಲಿ ಎಸ್‌ಟಿಗೆ ಪ್ರಾತಿನಿಧ್ಯ ಕಲ್ಪಿಸಲಾಯಿತು. 1995 ರಲ್ಲಿ ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಆರ್.ಕೆ. ಸಬರ್‌ವಾಲ್ ಆಯೋಗವು ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿತು. ಆಗ ರೋಸ್ಟರ್ ಬಿಂದು 1ರಲ್ಲಿ ಪರಿಶಿಷ್ಟ ಜಾತಿ, 3ರಲ್ಲಿ ಪರಿಶಿಷ್ಟ ಪಂಗಡ ಬಂದಿತು.
2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 15ರಿಂದ 17 ಹಾಗೂ ಶೇ3 ರಿಂದ 7ಕ್ಕೆ ಹೆಚ್ಚಿಸಲಾಯಿತು. ಆಗಲೂ ರೋಸ್ಟರ್ ಬಿಂದುಗಳ ಪೈಕಿ 1ರಲ್ಲಿ ಎಸ್‌ಸಿಗೆ ಅವಕಾಶ ನೀಡಲಾಗಿದೆ.
ಹಿಂದುಳಿದಿರುವಿಕೆ ಆಧರಿಸಿ ಪರಿಷ್ಕರಣೆ
ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಾದ ಬಳಿಕ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಲಾಗಿದೆ. ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳನ್ನಾಗಿ ವರ್ಗೀಕರಿಸಿ, ಅದರ ಆಧಾರದ ಮೇಲೆ ಸರ್ಕಾರ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿದೆ.
ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದಿರುವಿಕೆ ಆಧರಿಸಿ ʼಪ್ರವರ್ಗ ಎʼ ರೋಸ್ಟರ್ ಬಿಂದು 1 ರಲ್ಲಿ, ʼಪ್ರವರ್ಗ ಬಿʼಗೆ ರೋಸ್ಟರ್ ಬಿಂದು 9 ಹಾಗೂ ʼಪ್ರವರ್ಗ ಸಿʼಗೆ ರೋಸ್ಟರ್ ಬಿಂದು 15 ರಲ್ಲಿ ಸ್ಥಾನ ಕಲ್ಪಿಸಲಾಗಿದೆ. ರೋಸ್ಟರ್ ಬಿಂದುಗಳ ಆಧಾರದ ಮೇಲೆ ನೇಮಕಾತಿಗೆ ಮೀಸಲಾತಿ ಸಿಗಲಿದೆ.
ಪ್ರಸ್ತುತ, ʼಪ್ರವರ್ಗ ಬಿʼಯಲ್ಲಿ ಬರುವ ಬಲಗೈ ಸಮುದಾಯ ಹೊಸ ರೋಸ್ಟರ್ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, 1995 ರಲ್ಲಿ ಜಾರಿಯಲ್ಲಿ ರೋಸ್ಟರ್ ಬಿಂದುಗಳ ಅನ್ವಯ ನೇಮಕಾತಿ ನಡೆಸುವಂತೆ ಪಟ್ಟು ಹಿಡಿದಿದೆ. ಅಂದರೆ ಒಟ್ಟಾರೆ ಪರಿಶಿಷ್ಟ ಜಾತಿಗೆ ಅನ್ವಯವಾಗುವಂತಹ ರೋಸ್ಟರ್ ಬಿಂದುಗಳಲ್ಲೇ ಮೀಸಲಾತಿ ನೀಡಿ ನೇಮಕಾತಿ ನಡೆಸಬೇಕೆಂಬುದು ಬಲಗೈ ಸಮುದಾಯದ ಆಗ್ರಹವಾಗಿದೆ.
ಒಳ ಮೀಸಲಾತಿ ಜಾರಿಗೆ ‘ಬಲಗೈ’ ಅಡ್ಡಿ
ಹೊಸ ರೋಸ್ಟರ್ ಪದ್ಧತಿಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಹೆಚ್ಚು ಸ್ಥಾನಮಾನ ಸಿಗಲಿದೆ. ಹುದ್ದೆ, ಬಡ್ತಿಗಳಲ್ಲೂ ಪ್ರಾಶಸ್ತ್ಯ ದೊರೆಯಲಿದೆ ಎಂಬ ಆತಂಕದಿಂದ ಬಲಗೈ ಸಮುದಾಯ ಒಳ ಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದೆ.
ಒಳ ಮೀಸಲಾತಿ ಜಾರಿಯಾದ ಬಳಿಕ ಸೃಷ್ಟಿಸುವ ಹೊಸ ಹುದ್ದೆಗಳಿಗೆ ಪರಿಷ್ಕೃತ ರೋಸ್ಟರ್ ಬಳಸಬೇಕು. ಈಗಾಗಲೇ ಬಾಕಿ ಇರುವ ಹುದ್ದೆಗಳಿಗೆ 1995 ರ ರೋಸ್ಟರ್ ಬಿಂದುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಹಾಗಾದಲ್ಲಿ ಬಾಕಿ ಇರುವ 2.84 ಲಕ್ಷ ಹುದ್ದೆಗಳಲ್ಲಿ ಎಡಗೈ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಗುವುದಿಲ್ಲ ಎಂದು ಮಾದಿಗ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮಾ.27ಕ್ಕೇ ಸಂಪುಟ ಸಭೆ ನಿಗದಿ ಹಿಂದಿದೆಯೇ ಷಡ್ಯಂತ್ರ್ಯ?
ರಾಜ್ಯ ಸರ್ಕಾರ ಮಾ.27 ರಂದೇ ವಿಶೇಷ ಸಂಪುಟ ಸಭೆ ಕರೆದಿರುವುದರ ಹಿಂದೆ ಹುನ್ನಾರ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಿಶಿಷ್ಟ ಜಾತಿಯ ಶೇ15 ಮೀಸಲಾತಿಯಲ್ಲೇ ಒಳ ಮೀಸಲಾತಿ ಒದಗಿಸಬೇಕೆಂದು ಎಡಗೈ ಸಮುದಾಯ ಪಟ್ಟು ಹಿಡಿದಿದೆ. ಈ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ.
ಒಂದೆಡೆ ಹೈಕೋರ್ಟ್ ಶೇ 56ರಷ್ಟು ಮೀಸಲಾತಿಗೆ ತಡೆ ನೀಡಿದರೆ, ಮತ್ತೊಂದರೆ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಗೊಂದಲಕ್ಕೆ ಕಾರಣವಾಗಿದೆ. ಒಳ ಮೀಸಲಾತಿ ಕುರಿತ ಮಸೂದೆಗೆ ರಾಜ್ಯಪಾಲರು ಎತ್ತಿದ್ದ ಆಕ್ಷೇಪಗಳಿಗೂ ಸಮರ್ಪಕ ಉತ್ತರ ಕೊಟ್ಟಿರಲಿಲ್ಲ. ಎರಡನೇ ಬಾರಿ ಮಸೂದೆಗೆ ಅಂಕಿತ ಹಾಕಲೇಬೇಕಾದ ಅನಿವಾರ್ಯತೆಯಲ್ಲಿ ರಾಜ್ಯಪಾಲರು ಸಿಲುಕಿದ್ದರು. ಎಲ್ಲಾ ಗೊಂದಲಗಳಿಗೆ ರಾಜ್ಯಪಾಲರೇ ಕಾರಣ ಎಂದು ಬಿಂಬಿಸುವ ಪ್ರಯತ್ನವನ್ನೂ ಸರ್ಕಾರ ನಡೆಸಿತ್ತು. ಅದು ಸಾಧ್ಯವಾಗಲಿಲ್ಲ.
ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವ ಮುನ್ಸೂಚನೆ ದೊರೆತ ಕೂಡಲೇ ದಿಢೀರ್ ಸಂಪುಟ ಸಭೆ ಕರೆದು 56ಸಾವಿರ ಹುದ್ದೆಗಳಿಗೆ ಶೇ50 ರ ಮೀಸಲಾತಿಯಲ್ಲೇ ನೇಮಕಾತಿ ನಡೆಸಲು ತೀರ್ಮಾನಿಸಲಾಯಿತು. ತರಾತುರಿಯಲ್ಲಿ ಅಧಿಸೂಚನೆಯನ್ನೂ ಹೊರಡಿಸಿತು. ಈ ಎಲ್ಲ ಬೆಳವಣಿಗೆಗಳ ಹಿಂದೆ ಬಲಗೈ ಸಮುದಾಯದ ಷಡ್ಯಂತ್ರ್ಯವಿದೆ ಎಂಬುದು ಎಡಗೈ ಸಮುದಾಯಗಳ ಆರೋಪ.
ರಾಜ್ಯ ಸರ್ಕಾರ ತಂದಿರುವ ಹೊಸ ರೋಸ್ಟರ್ ವ್ಯವಸ್ಥೆ
30 ದಿನ ಮುಗಿದರೆ ಅಧಿಸೂಚನೆ ರದ್ದಾಗಲ್ಲ
ಯಾವುದೇ ಅಧಿಸೂಚನೆ ಜಾರಿಯಾಗಿ 30 ದಿನ ಕಳೆದರೆ ಅದನ್ನು ರದ್ದುಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದನ್ನೇ ನೆಪ ಮಾಡಿಕೊಂಡ ಬಲಗೈ ಸಮುದಾಯದ ಸಚಿವರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಮಾ.5 ಹಾಗೂ 12ರಂದು ಸಚಿವ ಸಂಪುಟಕ್ಕೆ ಒಳ ಮೀಸಲಾತಿ ವಿಚಾರ ಚರ್ಚೆಗೆ ಬಾರದಂತೆ ನೋಡಿಕೊಂಡರು. ಬೇಕೆಂತಲೇ ಮಾ.27ಕ್ಕೆ ಸಚಿವ ಸಂಪುಟ ಸಭೆ ನಿಗದಿಪಡಿಸಲಾಗಿದೆ. 56 ಸಾವಿರ ಹುದ್ದೆಗಳ ನೇಮಕಾತಿಗೆ ಫೆ.27ರಂದು ಅಧಿಸೂಚನೆ ಹೊರಡಿಸಿದ್ದು, ಫೆ.27ಕ್ಕೆ ಒಂದು ತಿಂಗಳು ಪೂರ್ಣವಾಗಲಿದೆ. ಫೆ.28 ರಿಂದ ಯಾವುದೇ ಕಾರಣಕ್ಕೂ ಅಧಿಸೂಚನೆ ರದ್ದುಪಡಿಸಲು ಆಗುವುದಿಲ್ಲ. ಆಗ ಅನಿವಾರ್ಯವಾಗಿ ಹಳೆಯ ಮೀಸಲು ಹಾಗೂ ರೋಸ್ಟರ್ ಅನ್ವಯವೇ ನೇಮಕಾತಿ ನಡೆಸಬಹುದು ಎಂಬುದು ಸರ್ಕಾರದ ನಡೆಯ ಹಿಂದಿನ ಉದ್ದೇಶವಾಗಿದೆ.
ಬಲಗೈ ಸಮುದಾಯದಿಂದ ಅಪಪ್ರಚಾರ
ರೋಸ್ಟರ್ ಪದ್ಧತಿ ಕುರಿತು ಬಲಗೈ ಸಮುದಾಯ ಅಪಪ್ರಚಾರ ನಡೆಸುತ್ತಿದೆ. 1976 ರಿಂದ 2025 ರವರೆಗೆ ರೋಸ್ಟರ್ ಬಿಂದು 1 ರಲ್ಲಿ ಪರಿಶಿಷ್ಟ ಜಾತಿಯೇ ಇದೆ. ಒಳ ಮೀಸಲಾತಿ ವರದಿ ಆಧರಿಸಿ ಮೀಸಲಾತಿ ಸೌಲಭ್ಯವನ್ನು ಸಮನಾಗಿ ಹಂಚಲು ʼಪ್ರವರ್ಗ ಎʼ ಅನ್ನು ರೋಸ್ಟರ್ ಬಿಂದು 1 ರಲ್ಲಿ ಇಡಲಾಗಿದೆ. ಪ್ರವರ್ಗ ಬಿ ಯನ್ನು ರೋಸ್ಟರ್ ಬಿಂದು 9 ರಲ್ಲಿ ಇಡಲಾಗಿದೆ. ʼಪ್ರವರ್ಗ ಎʼಗೆ ಮತ್ತೆ ಮೀಸಲಾತಿ ಅವಕಾಶ ಸಿಗುವುದು ರೋಸ್ಟರ್ ಬಿಂದು 23, 41, 53, 75 ಹಾಗೂ 93 ರಲ್ಲಿ. ಸರ್ಕಾರದ ರೋಸ್ಟರ್ ಬಿಂದುಗಳ ಪರಿಷ್ಕರಣೆ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿದೆ. ವಿಶ್ವವಿದ್ಯಾಲಯದ ನೇಮಕಾತಿಗಳಲ್ಲಿ ಆಗಿರುವ ತೊಂದರೆಯನ್ನೇ ಮುಂದಿಟ್ಟುಕೊಂಡು ಬಲಗೈ ಸಮುದಾಯ ಒಳ ಮೀಸಲಾತಿ ಹಾಗೂ ರೋಸ್ಟರ್ ವ್ಯವಸ್ಥೆ ವಿರೋಧಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ ನೌಕರರ ಸಂಘದ ಅಧ್ಯಕ್ಷ ಸುಮಂತ್ ಕಟ್ಟೀಮನಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಈಗಾಗಲೇ ಕಲ್ಯಾಣ ಕರ್ನಾಟಕ ವೃಂದ ಹುದ್ದೆಗಳಲ್ಲಿ 371ಜೆ ಅನ್ವಯ ಮೀಸಲಾತಿ ನೀಡಲಾಗುತ್ತಿದೆ. ಅದೇ ಮಾನದಂಡದಲ್ಲಿ ಪರಿಶಿಷ್ಟ ಜಾತಿಗಳನ್ನು ಎ, ಬಿ,ಸಿ ಎಂದು ವರ್ಗೀಕರಿಸಲಾಗಿದೆ. 100 ಹುದ್ದೆಗಳಲ್ಲಿ 20 ಹುದ್ದೆಗಳು ಪರಿಶಿಷ್ಟರಿಗೆ ಮೀಸಲಾಗಲಿವೆ. ಇಲ್ಲಿ ಪ್ರಾತಿನಿಧ್ಯ ಸಿಗದವರಿಗೆ ಮೊದಲ ಆಧ್ಯತೆ ನೀಡಬೇಕು. ಕಡಿಮೆ ಪ್ರಾತಿನಿಧ್ಯ ಇರುವವರಿಗೆ ನಂತರದ ಅವಕಾಶ ನೀಡಬೇಕು.
ಹೊಸ ರೋಸ್ಟರ್‌ನಿಂದ ಸಮಸ್ಯೆ ಇಲ್ಲ
ರಾಜ್ಯ ಸರ್ಕಾರ ತಂದಿರುವ ಹೊಸ ರೋಸ್ಟರ್ ವ್ಯವಸ್ಥೆಯಲ್ಲಿ ಯಾರಿಗೂ ಸಮಸ್ಯೆ ಆಗುವುದಿಲ್ಲ. ಕನಿಷ್ಠ ಗ್ರಾಮ ಲೆಕ್ಕಿಗ, ಎಫ್‌ಡಿಎ, ಗೆಜೆಟೆಡ್ ಪ್ರೊಬೇಷನರಿ ಸೇರಿ ಯಾವುದೇ ಹುದ್ದೆ 20ಕ್ಕಿಂತ ಕಡಿಮೆ ಇರುವುದಿಲ್ಲ. ಹಾಗಾಗಿ ಯಾರಿಗೂ ಸಮಸ್ಯೆ ಬರುವುದಿಲ್ಲ. 20ಕ್ಕಿಂತ ಕಡಿಮೆ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಾಗ ಮಾತ್ರ ರೋಸ್ಟರ್ ವಿರೋಧಿಸುವವರಿಗೆ ಕೊಂಚ ಸಮಸ್ಯೆ ಆಗಬಹುದು. ಆದರೆ, ಈಗಷ್ಟೇ ಹೊಸದಾಗಿ ರೋಸ್ಟರ್ ತರಲಾಗಿದೆ. ಯಾವುದೇ ನೇಮಕಾತಿ ನಡೆದಿಲ್ಲ, ಹೀಗಿರುವಾಗಲೇ ಹೊಸ ರೋಸ್ಟರ್ ವ್ಯವಸ್ಥೆ ಬೇಡ ಎನ್ನುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಿಲುವು ಎಂದು ಸುಮನ್ ಕಟ್ಟೀಮನಿ ದೂರಿದರು.
ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಈಗಷ್ಟೇ ರೋಸ್ಟರ್ ಬಿಂದು 1 ರಲ್ಲಿ ಅವಕಾಶ ಸಿಕ್ಕಿದೆ. ಈಗಾಗಲೇ ಅವಕಾಶ ದೊರೆತು ಪ್ರಯೋಜನ ಪಡೆದಿದ್ದರೆ ವಿರೋಧಿಸುವುರಲ್ಲಿ ಅರ್ಥ ಇರುತ್ತಿತ್ತು. ಇನ್ನೂ ದಾಖಲೆಯಲ್ಲಷ್ಟೇ ಇರುವ ರೋಸ್ಟರ್ ವ್ಯವಸ್ಥೆಯನ್ನು ಬಲಗೈ ಸಮುದಾಯದವರು ವಿರೋಧಿಸುತ್ತಿರುವುದು ನೋಡಿದರೆ ಒಳ ಮೀಸಲಾತಿ ಸಹಿಸದವರು ಎಂಬುದು ವೇದ್ಯವಾಗುತ್ತದೆ. ವೃಥಾ ಅಪಪ್ರಚಾರ ನಡೆಸಲಾಗುತ್ತಿದೆ ಎಂದರು.
2022-23 ರಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಶಿವಮೊಗ್ಗ ವಿಶ್ವವಿದ್ಯಾಲಯವನ್ನು ಒಂದು ಘಟಕ ಎಂದು ಪರಿಗಣಿಸಿ ನೇಮಕಾತಿಗೆ ಆದೇಶ ಹೊರಡಿಸಿದ್ದರು. ಇದು ಯುಜಿಸಿ ನಿಯಮಾವಳಿಗೆ ವಿರುದ್ಧ ಎಂದು ಆದೇಶ ವಜಾಗೊಂಡಿತ್ತು. ಸಮಾಜ ಕಲ್ಯಾಣ ಸಚಿವರು ಅದನ್ನೇ ಮರು ಪ್ರಸ್ತಾಪಿಸುತ್ತಿರುವುದು ದುರದ್ದೇಶದಿಂದ ಕೂಡಿದೆ. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಸಂವಿಧಾನವೇ ಕಲಂ 16(4) ರಲ್ಲಿ ಅವಕಾಶ ಒದಗಿಸಿದೆ ಎಂದು ವಿವರಿಸಿದರು.
ರೋಸ್ಟರ್ ವ್ಯವಸ್ಥೆಗೆ ಬಲಗೈ ವಿರೋಧ ಏಕೆ?
ಸರ್ಕಾರಿ ಉದ್ಯೋಗ ಹಾಗೂ ಬಡ್ತಿಯಲ್ಲಿ 1 ರಿಂದ 100 ರವರೆಗೆ ರೋಸ್ಟರ್ ಬಿಂದುಗಳನ್ನು ಅಳವಡಿಸಲಾಗಿದೆ. ರೋಸ್ಟರ್ನ ಆರಂಭಿಕ ಬಿಂದುಗಳು ಒಂದು ನಿರ್ದಿಷ್ಟ ಗುಂಪಿಗೆ ಮೀಸಲಾದರೆ, ಉಳಿದ ಸಮುದಾಯಗಳಿಗೆ ಅವಕಾಶಗಳು ತಡವಾಗಿ ಸಿಗಲಿವೆ.
ಮೀಸಲಾತಿ ಪಟ್ಟಿಯಲ್ಲಿ ರೋಸ್ಟರ್ ಬಿಂದು ನಿಗದಿ ಮಾಡುವಾಗ ಆಯಾ ಸಮುದಾಯದ ಜನಸಂಖ್ಯೆ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರಸ್ತುತ, ಒಳಮೀಸಲಾತಿ ರೋಸ್ಟರ್‌ನಲ್ಲಿ ʼಪ್ರವರ್ಗ ಎʼ (ಮಾದಿಗ ಸಮುದಾಯ) 1ರಲ್ಲಿದ್ದು, ಹೆಚ್ಚಿನ ಪಾಲು ಸಿಗಲಿದೆ. ಬಲಗೈ ಸಮುದಾಯ (ಪ್ರವರ್ಗ ಬಿ) 9ನೇ ಸ್ಥಾನದಲ್ಲಿ ಕಡಿಮೆ ಪ್ರಾತಿನಿಧ್ಯ ಸಿಗಲಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
ಎಜೆ ಸದಾಶಿವ ಆಯೋಗದಿಂದಲೂ ವಿರೋಧ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ವಿಚಾರದಲ್ಲೂ ಬಲಗೈ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ವರದಿಯು ಮಾದಿಗ ಸಮುದಾಯಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ. ಬಲಗೈ ಸಮುದಾಯದ ಹಿತಾಸಕ್ತಿ ಕಡೆಗಣಿಸಿದೆ ಎಂದು ಆರೋಪಿಸಿತ್ತು. ಈಗ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಗೂ ಇದೇ ಆಕ್ಷೇಪ ವ್ಯಕ್ತಪಡಿಸುತ್ತಿದೆ. ನಾಗಮೋಹನ್ ದಾಸ್ ವರದಿಯು ಅವೈಜ್ಞಾನಿಕವಾಗಿದೆ. ಈ ವರದಿ ಆಧಾರದ ಮೇಲೆ ನಿಗದಿಪಡಿಸಿರುವ ರೋಸ್ಟರ್ ಬಿಂದುಗಳು ಕೂಡ ಸರಿಯಲ್ಲ ಎಂದು ತಗಾದೆ ತೆಗೆದಿದೆ.

