
ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು: ಇನ್‌ಸ್ಟಾಗ್ರಾಮ್ ಪೋಸ್ಟ್ ಹುಟ್ಟುಹಾಕಿದ ಅನುಮಾನ
ಬುಧವಾರ (ಜ.27) ಸಾಧ್ವಿ ಅವರನ್ನು ಜೋಧ್‌ಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ತಪಾಸಣೆ ಮಾಡುವ ಮೊದಲೇ ಅವರು ಮೃತಪಟ್ಟಿದ್ದರು ಎಂದು ಘೋಷಿಸಲಾಗಿತ್ತು.
ರಾಜಸ್ಥಾನದ ಧಾರ್ಮಿಕ ಬೋಧಕಿ ಸಾಧ್ವಿ ಪ್ರೇಮ್ ಬೈಸಾ ಅವರ ಸಾವು ಇದೀಗ ನಿಗೂಢ ಸ್ವರೂಪ ಪಡೆದುಕೊಂಡಿದ್ದು,. ಜ್ವರಕ್ಕೆ ಕಾಂಪೌಂಡರ್ ನೀಡಿದ ಇಂಜೆಕ್ಷನ್ ಪಡೆದ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಸಾವಿನ ಸುತ್ತ ಹಲವು ಪ್ರಶ್ನೆಗಳು ಎದ್ದಿವೆ.
ಬುಧವಾರ (ಜ.27) ಸಾಧ್ವಿ ಅವರನ್ನು ಜೋಧ್‌ಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ತಪಾಸಣೆ ಮಾಡುವ ಮೊದಲೇ ಅವರು ಮೃತಪಟ್ಟಿದ್ದರು ಎಂದು ಘೋಷಿಸಲಾಯಿತು.
ವೈದ್ಯ ಪ್ರವೀಣ್ ಜೈನ್ ಅವರು ಹೇಳುವಂತೆ, ಆಸ್ಪತ್ರೆಗೆ ತರುವಾಗ ಸಾಧ್ವಿ ದೇಹದಲ್ಲಿ ಚಲನೆ ಇರಲಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸಲಹೆ ನೀಡಿದರು. ಆದರೆ, ಸಾಧ್ವಿ ಅವರ ತಂದೆ ವೀರಮ್ ನಾಥ್ ಸಲಹೆ ತಿರಸ್ಕರಿಸಿ ತಮ್ಮ ಖಾಸಗಿ ವಾಹನದಲ್ಲಿ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಾಧ್ವಿಗೆ ಜ್ವರವಿದ್ದ ಕಾರಣ ಆಶ್ರಮಕ್ಕೆ ಕಾಂಪೌಂಡರ್ ಒಬ್ಬರನ್ನು ಕರೆಸಲಾಗಿತ್ತು. ಅವರು ಇಂಜೆಕ್ಷನ್ ನೀಡಿದ ಐದು ನಿಮಿಷಗಳಲ್ಲೇ ಅವರು ಪ್ರಜ್ಞೆ ತಪ್ಪಿದರು," ಎಂದು ಸ್ವತಃ ಗುರುವೂ ಆಗಿರುವ ಅವರ ತಂದೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಕಾಂಪೌಂಡರ್‌ನನ್ನು ವಶಕ್ಕೆ ಪಡೆದಿದ್ದಾರೆ.
ನಿಗೂಢ ಇನ್‌ಸ್ಟಾಗ್ರಾಮ್ ಪೋಸ್ಟ್
ಪ್ರಕರಣದ ಕುತೂಹಲ ಹೆಚ್ಚಿಸಿರುವುದು ಸಾಧ್ವಿ ಮೃತಪಟ್ಟ ನಾಲ್ಕು ಗಂಟೆಗಳ ನಂತರ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟವಾದ ಪೋಸ್ಟ್. "ನಾನು ಸನಾತನ ಧರ್ಮ ಪ್ರಚಾರಕ್ಕಾಗಿ ಪ್ರತಿ ಕ್ಷಣ ಬದುಕಿದ್ದೇನೆ... ಆದಿ ಗುರು ಶಂಕರಾಚಾರ್ಯರು ಮತ್ತು ಸಾಧು-ಸಂತರಿಗೆ ಪತ್ರ ಬರೆದು ಅಗ್ನಿಪರೀಕ್ಷೆಗೆ ಕೋರಿದ್ದೆ. ವಿಧಿಯಾಟ ಬೇರೆಯೇ ಇತ್ತು. ನಾನು ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಜೀವಿತಾವಧಿಯಲ್ಲಿ ಸಿಗದ ನ್ಯಾಯ, ನನ್ನ ಸಾವಿನ ನಂತರವಾದರೂ ಸಿಗಲಿದೆ," ಎಂಬರ್ಥದ ಸಾಲುಗಳು ಅದರಲ್ಲಿವೆ.
ಈ ಪೋಸ್ಟ್ ಬಗ್ಗೆ ತಂದೆಯನ್ನು ಪ್ರಶ್ನಿಸಿದಾಗ, "ಸಹವರ್ತಿ ಗುರುವೊಬ್ಬರು ಈ ಸಂದೇಶವನ್ನು ಕಳುಹಿಸಿದ್ದಾರೆ," ಎಂದು ಅವರು ಉತ್ತರಿಸಿದ್ದಾರೆ.
ಸಿಬಿಐ ತನಿಖೆಗೆ ಒತ್ತಾಯ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ನಾಯಕ ಮತ್ತು ಸಂಸದ ಹನುಮಾನ್ ಬೆನಿವಾಲ್, ಇದೊಂದು ಸಂಶಯಾಸ್ಪದ ಸಾವು ಎಂದಿದ್ದಾರೆ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಹಾಗೂ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

