
ಗ್ರಾಮ ಪಂಚಾಯತಿ ಹಕ್ಕುಗಳ ರಕ್ಷಣೆಗೆ ಸಚಿವ ಪ್ರಿಯಾಂಕ್ ಖರ್ಗೆ 95 ಸಾವಿರ ‘ಪತ್ರಾಸ್ತ್ರ’
ಗ್ರಾ.ಪಂ. ಸದಸ್ಯರು ಕೇವಲ ಫಲಾನುಭವಿಗಳ ಪಟ್ಟಿ ಮಾಡುವವರಾಗಬಾರದು. ಅವರು ಸರ್ಕಾರದ ಯೋಜನೆಗಳ ಹಿಂದಿನ ರಾಜಕೀಯ ಮತ್ತು ಆರ್ಥಿಕ ತತ್ವಗಳನ್ನು ಅರಿಯಬೇಕು ಎಂಬುದನ್ನು ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು ಕೇವಲ ಆಡಳಿತಾತ್ಮಕ ಘಟಕಗಳಲ್ಲ, ಅವು ಅಧಿಕಾರ ವಿಕೇಂದ್ರೀಕರಣದ ಜೀವನಾಡಿಗಳು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ಹೊಸ ಯೋಜನೆಗಳು ಈ ಸ್ವಾಯತ್ತ ಸಂಸ್ಥೆಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆಯೇ ಎಂಬ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೈಗೊಂಡಿರುವ ‘ಜಾಗೃತಿ ಪತ್ರ ಅಭಿಯಾನ’ ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ರಾಜ್ಯದ 95 ಸಾವಿರ ಹಾಲಿ ಮತ್ತು ನಿಕಟಪೂರ್ವ ಗ್ರಾಮ ಪಂಚಾಯತಿ ಸದಸ್ಯರಿಗೆ ನೇರವಾಗಿ ಪತ್ರ ಬರೆಯುವ ಮೂಲಕ, ಹಳ್ಳಿಯ ಜನಪ್ರತಿನಿಧಿಗಳನ್ನು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಎಚ್ಚರಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಈ ಅಭಿಯಾನವು ಅತ್ಯಂತ ವ್ಯವಸ್ಥಿತವಾಗಿದೆ. ದಿನನಿತ್ಯ ಸಾವಿರಾರು ಪತ್ರಗಳು ಅಂಚೆ ಮೂಲಕ ನೇರವಾಗಿ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪುತ್ತಿವೆ. ಈ ಅಭಿಯಾನದ ಪ್ರಮುಖ ಉದ್ದೇಶ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ಮನರೇಗಾ) ಮತ್ತು ಕೇಂದ್ರದ ನೂತನ ವಿಬಿ ಗ್ರಾಮ್ ಜಿ ಯೋಜನೆಗಳ ನಡುವಿನ ವ್ಯತ್ಯಾಸವನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವುದಾಗಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮ ಪಂಚಾಯತಿ ಸದಸ್ಯರು ಕೇವಲ ಫಲಾನುಭವಿಗಳ ಪಟ್ಟಿ ಮಾಡುವವರಾಗಬಾರದು. ಅವರು ಸರ್ಕಾರದ ಯೋಜನೆಗಳ ಹಿಂದಿನ ರಾಜಕೀಯ ಮತ್ತು ಆರ್ಥಿಕ ತತ್ವಗಳನ್ನು ಅರಿಯಬೇಕು. ಯೋಜನೆಗಳು ಹೇಗೆ ಗ್ರಾಮೀಣ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂಬುದನ್ನು ತಿಳಿಸುವುದು ಈ ಅಭಿಯಾನದ ಮುಖ್ಯ ಆಶಯವಾಗಿದೆ. ಮನರೇಗಾ ಕೇವಲ ಒಂದು ಯೋಜನೆಯಲ್ಲ, ಅದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಒಂದು ಕಾನೂನುಬದ್ಧ ಹಕ್ಕು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕನಿಗೂ ವರ್ಷಕ್ಕೆ ಕನಿಷ್ಠ 100 ದಿನಗಳ ಕಾಲ ಕೆಲಸ ಮಾಡುವ ಹಕ್ಕನ್ನು ನೀಡುತ್ತದೆ. ಕಾರ್ಮಿಕ ಕೆಲಸ ಕೇಳಿದಾಗ ಸರ್ಕಾರ ಕೆಲಸ ನೀಡಲೇಬೇಕು, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು. ಯಾವ ಕೆಲಸ ಮಾಡಬೇಕು ಎಂಬುದನ್ನು ಗ್ರಾಮ ಸಭೆಯಲ್ಲಿ ಗ್ರಾಮಸ್ಥರೇ ನಿರ್ಧರಿಸುತ್ತಾರೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯ ಶಕ್ತಿ. ಮನರೇಗಾದಲ್ಲಿ ಮಹಿಳೆಯರಿಗೆ ಸಮಾನ ವೇತನ ಮತ್ತು ಆದ್ಯತೆ ಇರುವುದರಿಂದ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಯೋಜನೆಯು ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಬಡತನ ನಿರ್ಮೂಲನೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಆದರೆ ಈಗ ಈ ಹಕ್ಕು ಆಧಾರಿತ ವ್ಯವಸ್ಥೆಯನ್ನು ಸವಲತ್ತು ಆಧಾರಿತ ವ್ಯವಸ್ಥೆಯನ್ನಾಗಿ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಗ್ರಾಮ್ ಜಿ ಯೋಜನೆಯ ಕಾರ್ಯವೈಖರಿ ಮನರೇಗಾಕ್ಕಿಂತ ಭಿನ್ನವಾಗಿದೆ. ಸ್ವಾಯತ್ತತೆಯ ಹರಣ ಹೊಸ ಕಾಯ್ದೆಗಳು ಮತ್ತು ಯೋಜನೆಗಳು ಗ್ರಾಮ ಪಂಚಾಯತಿಗಳ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರದತ್ತ ಕೊಂಡೊಯ್ಯುತ್ತಿವೆ. ಹೊಸ ಆಪ್‌ಗಳು ಮತ್ತು ತಾಂತ್ರಿಕ ಅಡೆತಡೆಗಳಿಂದಾಗಿ ಸಾಮಾನ್ಯ ಕಾರ್ಮಿಕರಿಗೆ ಕೆಲಸ ಸಿಗುವುದು ಕಷ್ಟವಾಗುತ್ತಿದೆ. ಇದು ವಿಶೇಷವಾಗಿ ಮಹಿಳಾ ಕಾರ್ಮಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಯೋಜನೆಯ ರೂಪುರೇಷೆಗಳು ಸ್ಥಳೀಯ ಜನಪ್ರತಿನಿಧಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಿ, ಅಧಿಕಾರಿಶಾಹಿಯ ಹಿಡಿತವನ್ನು ಹೆಚ್ಚಿಸುತ್ತವೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಆಶಯ ಹಾಗೂ ಗ್ರಾಮ ಸ್ವರಾಜ್ಯ
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಮತ್ತು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳ ಆಶಯವೆಂದರೆ ಸ್ಥಳೀಯ ಸರ್ಕಾರಗಳಿಗೆ ಅಧಿಕಾರ ನೀಡುವುದಾಗಿದೆ. ಪ್ರಿಯಾಂಕ್ ಖರ್ಗೆ ಅವರು ತಮ್ಮ ಪತ್ರದಲ್ಲಿ ಇದನ್ನೇ ಒತ್ತಿ ಹೇಳಿದ್ದಾರೆ. ಕೇಂದ್ರದ ಹೊಸ ನೀತಿಗಳು ಗ್ರಾಮೀಣ ಭಾಗದ ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಸ್ವಾಭಿಮಾನಿ ಜೀವನಕ್ಕೆ ಪೆಟ್ಟು ನೀಡುತ್ತಿವೆ. ಈ ವರ್ಗಗಳ ಜನರು ಕೆಲಸಕ್ಕಾಗಿ ಬೇಡುವ ಸ್ಥಿತಿಗೆ ತಲುಪಬಾರದು. ಬದಲಾಗಿ ಹಕ್ಕಿನಿಂದ ಕೆಲಸ ಪಡೆಯುವಂತಿರಬೇಕು ಎಂದಿದ್ದಾರೆ.
95 ಸಾವಿರ ಪತ್ರಗಳ ರಾಜಕೀಯ ಹಾಗೂ ಸಾಮಾಜಿಕ ಸಂದೇಶ
ಯಾವುದೇ ಒಂದು ಸರ್ಕಾರಿ ಆದೇಶದ ಮೂಲಕ ಮಾಹಿತಿ ನೀಡುವುದಕ್ಕಿಂತ, ವೈಯಕ್ತಿಕವಾಗಿ ಪತ್ರ ಬರೆಯುವುದು ಒಂದು ಭಾವನಾತ್ಮಕ ಮತ್ತು ಬಲವಾದ ರಾಜಕೀಯ ಸಂವಹನ ತಂತ್ರವಾಗಿದೆ. 95 ಸಾವಿರ ಹಾಲಿ ಮತ್ತು ಮಾಜಿ ಸದಸ್ಯರನ್ನು ತಲುಪುವುದು ಎಂದರೆ, ರಾಜ್ಯದ ಪ್ರತಿಯೊಂದು ಹಳ್ಳಿಯ ಪ್ರಭಾವಿ ಧ್ವನಿಗಳನ್ನು ತಲುಪಿದಂತೆ. ಈ ಅಭಿಯಾನವು ಜನಪ್ರತಿನಿಧಿಗಳಲ್ಲಿ ಈ ಕೆಳಗಿನ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಕೇಂದ್ರದ ಯೋಜನೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಅವು ಪಂಚಾಯತಿಗಳ ಹಕ್ಕುಗಳನ್ನು ಹೇಗೆ ಕಬಳಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿದೆ. ಗ್ರಾಮೀಣ ಜನರ ಹಕ್ಕುಗಳು ಕ್ರಮೇಣ ಕುಗ್ಗುತ್ತಿರುವಾಗ, ಸ್ಥಳೀಯ ನಾಯಕರು ಸುಮ್ಮನೆ ಕೂರಬಾರದು. ಪಕ್ಷಾತೀತವಾಗಿ ಗ್ರಾಮಗಳ ಏಳಿಗೆಗಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಒಂದಾಗುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

