
ವಿಬಿ ಜಿ ರಾಮ್ ಜಿ ಯೋಜನೆ| ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗಲಿದೆಯೇ ಕಾಯ್ದೆ ವಿರೋಧಿ ನಿಲುವು?
ಕೇಂದ್ರ ಸರ್ಕಾರ ಈಗಾಗಲೇ ಅನುದಾನ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಸಗಿದೆ. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯದ ಪಾಲು ಏರಿಕೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಅಧಿವೇಶನದ ಮೂಲಕವೇ ಹೋರಾಟ ಆರಂಭಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ನಾಳೆಯಿಂದ (ಜ.22) ಆರಂಭವಾಗುವ 10 ದಿನಗಳ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ವಿಬಿ ಜಿ ರಾಮ್ ಜಿ ಚರ್ಚೆಗೆ ಎರಡು ದಿನ ಮೀಸಲಿಡಲಾಗಿದೆ. ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಭಾಷಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿ ನಿಲುವು ಪ್ರತಿಪಾದಿಸಲು ಸರ್ಕಾರ ತಯಾರಿ ನಡೆಸಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಭಾಷಣದಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯಪಾಲರು ನಿರಾಕರಿಸಿರುವ ಹಿನ್ನೆಲೆ ಕರ್ನಾಟಕದಲ್ಲಿ ಈಗ ಕುತೂಹಲ ಮೂಡಿಸಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡುವ ಭಾಷಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಯ ನಿಲುವು ಪ್ರಸ್ತಾಪಿಸುತ್ತಾರಾ, ಇಲ್ಲವೇ ನೆರೆ ರಾಜ್ಯಗಳ ರಾಜ್ಯಪಾಲರಂತೆ ವಿರೋಧದ ಪ್ರಸ್ತಾಪ ಕೈ ಬಿಡುತ್ತಾರಾ ಎಂಬುದು ಚರ್ಚೆಗೆ ಕಾರಣವಾಗಿದೆ.
ಮನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ತಂದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶವ್ಯಾಪಿ ʼನರೇಗಾ ಬಚಾವೋ ಆಂದೋಲನʼ ಹಮ್ಮಿಕೊಂಡಿದೆ. ಅದರಂತೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ವಿಬಿ ಜಿ ರಾಮ್‌ಜಿ ಯೋಜನೆ ಕುರಿತು ಚರ್ಚಿಸಿ, ಕೇಂದ್ರದ ನಿರ್ಧಾರ ವಿರೋಧಿಸಲು ತೀರ್ಮಾನಿಸಿದೆ. ಸಾಮಾನ್ಯವಾಗಿ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ಸಾಧನೆ ಬಿಂಬಿಸುವ ಸಿದ್ಧ ಭಾಷಣ ಮಾಡುವುದು ವಾಡಿಕೆ.
ಪ್ರಸ್ತುತ, ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಬೆಂಬಲಿತ ರಾಜ್ಯಪಾಲರಿದ್ದು, ಕೇಂದ್ರ ಸರ್ಕಾರ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧ ವ್ಯಕ್ತವಾಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ತಮಿಳುನಾಡು, ಕೇರಳದಲ್ಲಿ ಏನಾಗಿತ್ತು?
ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಲ್ಲಿ ದೋಷವಿದೆ ಎಂದು ಹೇಳಿ, ರಾಜ್ಯಪಾಲ ಆರ್.ಎನ್. ರವಿ ಅವರು ಭಾಷಣ ಓದದೇ ಸದನದಿಂದ ಹೊರ ನಡೆದಿದ್ದರು. ರಾಜ್ಯಪಾಲರ ಈ ನಡೆಯನ್ನು ಡಿಎಂಕೆ ಸರ್ಕಾರ ಟೀಕಿಸಿತ್ತು. ಅಲ್ಲದೇ ಸಂವಿಧಾನದ 176ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸರ್ಕಾರ, ಸಿದ್ದಪಡಿಸುವ ಭಾಷಣವನ್ನು ರಾಜ್ಯಪಾಲರು ಓದಬೇಕು. ಯಾವುದೇ ವೈಯಕ್ತಿಕ ಅಭಿಪ್ರಾಯ ಸೇರ್ಪಡೆ ಅಥವಾ ಭಾಷಣದಲ್ಲಿರುವ ಅಂಶಗಳನ್ನು ಕೈ ಬಿಡುವಂತಿಲ್ಲ ಎಂಬುದು ಸಂವಿಧಾನದಲ್ಲಿದೆ ಎಂದು ಡಿಎಂಕೆ ವಾದಿಸಿತ್ತು.
ಇನ್ನು ಕೇರಳ ವಿಧಾನಸಭೆಯಲ್ಲೂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಬಿಟ್ಟಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಕೇಂದ್ರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ತಮಿಳುನಾಡು, ಕೇರಳ ವಿರೋಧಿಸಿರುವುದರಿಂದ ರಾಜ್ಯಪಾಲರ ಈ ನಡೆ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರದ ವಿರುದ್ಧ ನಿರ್ಣಯಕ್ಕೆ ತೀರ್ಮಾನ
ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಸಿದ್ಧಪಡಿಸಿ ನೀಡಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಅಂಶಗಳು ಇವೆ ಎಂಬ ಮಾಹಿತಿ ಹರಿದಾಡುತ್ತಿದೆ.
ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಯಿಂದ ಗಂಭೀರವಾದ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳು ಎದುರಾಗಲಿವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮತ್ತು ಬಡವರ ಜೀವನೋಪಾಯದ ಭದ್ರತೆ ಕಸಿಯಲಿದೆ. ನರೇಗಾ ವ್ಯವಸ್ಥೆ ದುರ್ಬಲಗೊಳಿಸಿದ ಪರಿಣಾಮ ಗ್ರಾಮೀಣ ಭಾಗದ ಲಕ್ಷಾಂತರ ಜನರು ಸಂಕಷ್ಟ ಎದುರಿಸಲಿದ್ದಾರೆ ಎಂಬ ಅಂಶಗಳು ಭಾಷಣದಲ್ಲಿ ಇರಲಿವೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಅನುದಾನ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಸಗಿದೆ. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯದ ಪಾಲು ಏರಿಕೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಕೇರಳ, ತಮಿಳುನಾಡು ಸೇರಿದಂತೆ ಆರೇಳು ರಾಜ್ಯಗಳು ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಹೋರಾಟ ರೂಪಿಸಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಸಂಸತ್ತಿನಲ್ಲಿ ಅಂಗೀಕರಿಸಿರುವ ಕಾಯ್ದೆಯನ್ನು ವಿಧಾನಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಹೇಳುತ್ತಿದೆ. ಹಾಗಾಗಿ ರಾಜ್ಯಪಾಲರ ಭಾಷಣದಿಂದಲೇ ಅಧಿವೇಶನಕ್ಕೆ ಗ್ರಹಣ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಹಿಂದಿನಿಂದಲೂ ಸರ್ಕಾರ –ರಾಜ್ಯಪಾಲರ ಮಧ್ಯೆ ತಿಕ್ಕಾಟ
ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಪ್ರಸಂಗ, ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣವನ್ನು ರಾಜ್ಯಪಾಲರು ವಿರೋಧಿಸಿದ್ದ ಹಿನ್ನೆಲೆ ಸಾಕಷ್ಟಿದೆ.
2009 ರಿಂದ 2014 ರ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭೂ ಹಗರಣಗಳಿಗೆ ಸಂಬಂಧಿಸಿದಂತೆ 15 ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದರು. ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಹಂಸರಾಜ್ ಭಾರದ್ವಾಜ್ ಅವರನ್ನು ರಾಜ್ಯಪಾಲರ ಹುದ್ದೆಯಿಂದ ಕಿತ್ತುಹಾಕುವಂತೆ ಬಿಜೆಪಿ ಆಗ್ರಹಿಸಿತ್ತು.
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಅಧಿಕಾರ ಹಿಡಿಯಲು ಮುಂದಾದರೂ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸಲು 15 ದಿನ ಕಾಲಾವಕಾಶ ನೀಡಿದ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮ ವಿವಾದಕ್ಕೀಡಾಗಿತ್ತು. ಲೋಕಾಯುಕ್ತ ನೇಮಕದಂತಹ ವಿಷಯದಲ್ಲೂ ರಾಜ್ಯ ಸರ್ಕಾರ ಮತ್ತು ವಜುಬಾಯಿ ವಾಲಾ ನಡುವೆ ಭಿನ್ನಾಭಿಪ್ರಾಯಗಳಿಗೆ ಆಸ್ಪದ ನೀಡಿತ್ತು.
ಪ್ರಸ್ತುತ, ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹ್ಲೋತ್ ಕೂಡ 2024 ರಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರ ಅಧಿಕಾರ ಕಸಿಯುವ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು.
ಕಾಯ್ದೆಯಲ್ಲಿ ಕುಲಪತಿ ನೇಮಕ ಮಾಡುವ ಅಧಿಕಾರವನ್ನು ರಾಜ್ಯಪಾಲರಿಂದ ಕಸಿದು ಮುಖ್ಯಮಂತ್ರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ, ಸಾಮಾಜಿಕ ಬಹಿಷ್ಕಾರ ನಿರ್ಮೂಲನೆ ವಿಧೇಯಕವನ್ನು ಎರಡು ಮೂರು ಬಾರಿ ವಾಪಸ್ ಕಳುಹಿಸಿದ್ದರು. ಇದು ಸರ್ಕಾರ ಹಾಗೂ ಲೋಕಭವನದ ಸಂಘರ್ಷಕ್ಕೆ ಕಾರಣವಾಗಿತ್ತು.

