ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
x

ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಚುನಾವಣಾ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಿ. ಮುನಿರಾಜು ಅವರು 2023ರ ಜೂನ್ 24ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು.


Click the Play button to hear this message in audio format

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸುಬ್ಬಾರೆಡ್ಡಿ ಅವರಿಗೆ ಅತ್ಯುನ್ನತ ನ್ಯಾಯಾಲಯದಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದ್ದು, ಶಾಸಕರಾಗಿ ಮುಂದುವರಿಯಲು ಅವಕಾಶ ದೊರಕಿದೆ.

ತಮ್ಮ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರಿದ್ದ ದ್ವಿಸದಸ್ಯ ಪೀಠವು ಕೈಗೆತ್ತಿಕೊಂಡಿತ್ತು. ಸುದೀರ್ಘ ವಾದ ಆಲಿಸಿದ ನ್ಯಾಯಪೀಠವು, ಹೈಕೋರ್ಟ್ ನೀಡಿದ್ದ ತೀರ್ಪಿಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರಾಳಿ ಅಭ್ಯರ್ಥಿ, ಕೇಂದ್ರ ಚುನಾವಣಾ ಆಯೋಗ ಹಾಗೂ ಇತರ ಸಂಬಂಧಪಟ್ಟ ವ್ಯಕ್ತಿಗಳಿಗೆ ಅಫಿಡವಿಟ್ ಮತ್ತು ಕೌಂಟರ್ ಅಫಿಡವಿಟ್ ಸಲ್ಲಿಸಲು ಆರು ವಾರಗಳ ಕಾಲಾವಕಾಶವನ್ನು ನೀಡಿ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಪರಾಜಿತ ಅಭ್ಯರ್ಥಿಯ ಹೋರಾಟ

2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಎರಡನೇ ಸ್ಥಾನ ಪಡೆದಿದ್ದ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು, ಇದೇ ವರ್ಷದ ಫೆಬ್ರವರಿ 16ರಂದು ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಮಹತ್ವದ ಆದೇಶ ಹೊರಡಿಸಿತ್ತು. ಈ ದಿಢೀರ್ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಚುನಾವಣಾ ಫಲಿತಾಂಶದ ವಿವರ

ಕಳೆದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಎನ್. ಸುಬ್ಬಾರೆಡ್ಡಿ ಅವರು ಭಾರಿ ಜನಬೆಂಬಲದೊಂದಿಗೆ 82,128 ಮತಗಳನ್ನು ಪಡೆದು ಭರ್ಜರಿ ಜಯಶಾಲಿಯಾಗಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಅವರು 62,949 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿ ಸೋಲು ಅನುಭವಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಿ. ಮುನಿರಾಜು ಅವರು 2023ರ ಜೂನ್ 24ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣವು ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು, ಶಾಸಕರ ಪರವಾಗಿ ಮಧ್ಯಂತರ ತಡೆಯಾಜ್ಞೆ ಸಿಕ್ಕಿರುವುದರಿಂದ ಅಂತಿಮ ತೀರ್ಪು ಬರುವವರೆಗೆ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಯಾವುದೇ ಕುತ್ತು ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡುವ ಅಂತಿಮ ತೀರ್ಪು ಬಾಗೇಪಲ್ಲಿ ಕ್ಷೇತ್ರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

Read More
Next Story