ಅನರ್ಹ ಭೀತಿಯಲ್ಲಿ ಸುಬ್ಬಾರೆಡ್ಡಿ; ಬಾಗೇಪಲ್ಲಿಯಲ್ಲಿ ಚಿಗುರಿದ ಕೆಂಬಾವುಟದ ಆಸೆ
x

ಅನರ್ಹ ಭೀತಿಯಲ್ಲಿ ಸುಬ್ಬಾರೆಡ್ಡಿ; ಬಾಗೇಪಲ್ಲಿಯಲ್ಲಿ ಚಿಗುರಿದ 'ಕೆಂಬಾವುಟ'ದ ಆಸೆ

ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ ಕಾರಣಕ್ಕೆ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದ್ದು, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.


Click the Play button to hear this message in audio format

ಬಯಲುಸೀಮೆಯ ಬಾಗೇಪಲ್ಲಿ ಎಂದರೆ ಕೇವಲ ಒಂದು ವಿಧಾನಸಭಾ ಕ್ಷೇತ್ರವಲ್ಲ. ಅದು ಸಿದ್ಧಾಂತಗಳ ಸಂಘರ್ಷದ ಭೂಮಿ. ದಶಕಗಳ ಕಾಲ 'ಕೆಂಬಾವುಟ'ದ ಭದ್ರಕೋಟೆಯಾಗಿದ್ದ ಈ ನೆಲದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕತ್ವ ಅಸಿಂಧುಗೊಂಡ ಬಳಿಕ ಮತ್ತೆ ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾಗುತ್ತಿದೆ. ಮತ್ತೊಂದೆಡೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಸುಬ್ಬಾರೆಡ್ಡಿ ಅವರು ನ್ಯಾಯಾಲಯದ ಆದೇಶಕ್ಕೆ ಎದುರು ನೋಡುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನದ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಪೀಠವು ಅಸಿಂಧು ಎಂದು ಘೋಷಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಹೆಚ್ಚಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸುಬ್ಬಾರೆಡ್ಡಿ ಮೇಲ್ಮನವಿ ಸಲ್ಲಿಸಿದ್ದಾರೆ. ಟ್ರಯಲ್ ರನ್ ನಡೆದ ಬಳಿಕವಷ್ಟೇ ಕ್ಷೇತ್ರದ ಸಮಗ್ರ ಚಿತ್ರಣ ದೊರೆಯಲಿದೆ.

ಅಸಿಂಧು ಏಕೆ?

2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಸುಬ್ಬಾರೆಡ್ಡಿ ಅವರು, ತಮ್ಮ ಆಸ್ತಿ ಮತ್ತು ತೆರಿಗೆ ಬಾಕಿ ವಿವರಗಳನ್ನು ಮರೆಮಾಚಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸುಮಾರು 1.3 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಹೊಂದಿದ್ದರೂ, ಅಫಿಡವಿಟ್‌ನಲ್ಲಿ 'ಶೂನ್ಯ' (Nil) ಎಂದು ಸುಳ್ಳು ಮಾಹಿತಿ ನೀಡಿದ್ದನ್ನು 'ಭ್ರಷ್ಟ ಅಭ್ಯಾಸ' (Corrupt Practice) ಎಂದು ಪರಿಗಣಿಸಿ, ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿತ್ತು. ಎರಡನೇ ಸ್ಥಾನದಲ್ಲಿದ್ದ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರನ್ನು ವಿಜಯಿ ಎಂದು ಘೋಷಿಸಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.

ತೀರ್ಪು ಬಂದ ತಕ್ಷಣ, ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ (Stay) ನೀಡುವಂತೆ ಅವರ ಪರ ವಕೀಲರು ಕೋರಿದ್ದರು. ಆದರೆ, ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಸುಬ್ಬಾರೆಡ್ಡಿ, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದರೆ ಮಾತ್ರವೇ ಶಾಸಕ ಸ್ಥಾನದಲ್ಲಿ ಮುಂದುವರಿಯಬಹುದು.

ಒಂದು ವೇಳೆ ಇಲ್ಲಿಯೂ ಸಹ ಸುಬ್ಬಾರೆಡ್ಡಿಗೆ ಹಿನ್ನಡೆಯಾದರೆ, ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಕ್ಷೇತ್ರ ಖಾಲಿಯಾದ 6 ತಿಂಗಳೊಳಗೆ ಚುನಾವಣಾ ಆಯೋಗವು ಉಪಚುನಾವಣೆ ನಡೆಸಬೇಕಾಗುತ್ತದೆ.

ಉಪಚುನಾವಣೆಯಾದರೆ ಹೇಗಿದೆ ಕಣ?

ಒಂದು ವೇಳೆ ಉಪಚುನಾವಣೆ ನಡೆದರೆ, ಅದು ಕಾಂಗ್ರೆಸ್, ಸಿಪಿಐ(ಎಂ) ಮತ್ತು ಬಿಜೆಪಿ ನಡುವಿನ ತೀವ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಕಳೆದ ಚುನಾವಣೆಯಲ್ಲಿ ಸುಬ್ಬಾರೆಡ್ಡಿ ಅವರು ಸುಮಾರು 19,000 ಮತಗಳ ಅಂತರದಿಂದ ಗೆದ್ದಿದ್ದರು. ಈಗಿನ ಕಾನೂನು ಸಮರ ಅವರ ಪ್ರತಿಷ್ಠೆಗೆ ಧಕ್ಕೆ ತಂದಿರುವುದರಿಂದ ಮತದಾರರ ತೀರ್ಪು ಕುತೂಹಲಕಾರಿಯಾಗಿದೆ.

ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ, ಸಿಪಿಐ(ಎಂ) ಮುಖಂಡರು ಮತ್ತು ಕಾರ್ಯಕರ್ತರು ಬಾಗೇಪಲ್ಲಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಕ್ಷೇತ್ರವು ಸಾಂಪ್ರದಾಯಿಕವಾಗಿ ಸಿಪಿಐ(ಎಂ) ಭದ್ರಕೋಟೆಯಾಗಿದ್ದು, ಸುಬ್ಬಾರೆಡ್ಡಿ ಅವರ ಪದಚ್ಯುತಿಯು ತಮಗೆ ಮರಳಿ ಅಧಿಕಾರ ಹಿಡಿಯಲು ಸಿಕ್ಕ ದೊಡ್ಡ ಅವಕಾಶ ಎಂದು ಅವರು ಭಾವಿಸಿದ್ದಾರೆ. ಈಗಾಗಲೇ ಸಿಪಿಐ(ಎಂ) ನಾಯಕರು ತಕ್ಷಣವೇ ಉಪಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು ಕಾನೂನು ಹೋರಾಟದಲ್ಲಿ ಗೆದ್ದಿದ್ದರೂ, ಕೋರ್ಟ್ ಅವರನ್ನು ವಿಜಯಿ ಎಂದು ಘೋಷಿಸದ ಕಾರಣ ಅವರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೂ, ಶಾಸಕರು 'ಸರ್ಕಾರಕ್ಕೆ ಮತ್ತು ಜನರಿಗೆ ಮೋಸ ಮಾಡಿದ್ದಾರೆ' ಎಂದು ಬಿಂಬಿಸುವ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಸದ್ಯಕ್ಕೆ ಸುಬ್ಬಾರೆಡ್ಡಿ ಅವರು ಶಾಸಕ ಸ್ಥಾನ ಕಳೆದುಕೊಂಡಿರುವುದು ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕ್ಷೇತ್ರದಲ್ಲಿ ಸುಬ್ಬಾರೆಡ್ಡಿ ಅವರ ವರ್ಚಸ್ಸೇ ಪಕ್ಷದ ಬಲವಾಗಿತ್ತು. ಈಗ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆಯದಿದ್ದರೆ, ಕಾಂಗ್ರೆಸ್ ಹೊಸ ಅಭ್ಯರ್ಥಿಯ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಬಹುದು.

ಹೇಗಿದೆ ಬಾಗೇಪಲ್ಲಿ?

ದಕ್ಷಿಣ ಭಾರತದ 'ಪುಟ್ಟ ರಷ್ಯಾ' ಎಂದೇ ಕರೆಯಲ್ಪಡುತ್ತಿದ್ದ ಈ ಕ್ಷೇತ್ರದಲ್ಲಿ ರೈತ ಸಂಘಟನೆಗಳು ಮತ್ತು ಕೂಲಿ ಕಾರ್ಮಿಕರ ಹೋರಾಟಗಳು ರಾಜಕೀಯದ ದಿಕ್ಸೂಚಿಯಾಗಿದ್ದವು. ಎಷ್ಟೋ ವರ್ಷಗಳ ಕಾಲ ಇಲ್ಲಿ ಕಾಂಗ್ರೆಸ್ ಮತ್ತು ಜನತಾ ದಳದ ಅಬ್ಬರದ ನಡುವೆಯೂ ಸಿಪಿಐ(ಎಂ) ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿತ್ತು. 2013ರ ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮೊದಲ ಬಾರಿಗೆ ಪಕ್ಷೇತರನಾಗಿ ಗೆಲುವು ಸಾಧಿಸಿದ್ದ ಎಸ್.ಎನ್. ಸುಬ್ಬಾರೆಡ್ಡಿ 'ಕೆಂಬಾವುಟ'ದ ಕೋಟೆಯನ್ನು ಭೇದಿಸಿ ಸತತ ಮೂರು ಬಾರಿ ಶಾಸಕರಾಗಿದ್ದರು. ಅದರಲ್ಲೂ ಎರಡು ಬಾರಿ ಕಾಂಗ್ರೆಸ್‌ನಿಂದಲೇ ಗೆಲುವು ಸಾಧಿಸಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ)ನಿಂದ ಸ್ಪರ್ಧಿಸಿದ್ದ ಮುನಿವೆಂಕಟಪ್ಪ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಮ್ಮಲ್ಲಿಯ ಸಾಕಷ್ಟು ಸಮಸ್ಯೆ ಇತ್ತು. ನಮ್ಮ ನಾಯಕರಾದ ಜಿ.ವಿ.ಶ್ರೀರಾಮರೆಡ್ಡಿ ಅವರು ಮೃತ ಪಟ್ಟಿದ್ದರು. ಜತೆಗೆ ಒಂದಷ್ಟು ನಾಯಕರು ಪಕ್ಷದಿಂದ ದೂರ ಉಳಿದಿದ್ದರು..ಹೀಗೆ ಅನೇಕ ಗೊಂದಲಗಳಿಂದಾಗಿ ನಾವು ಜನರ ಮುಂದೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೀಗ ಎಲ್ಲ ಗೊಂದಲಗಳು ಬಗೆಹರಿದಿವೆ. ಸಿಪಿಐ(ಎಂ)ನ ಹೋರಾಟಗಳಿಗೆ ಜನರೆ ಬೆಂಬಲ ನೀಡುತ್ತಿದ್ದಾರೆ. ಈ ಭಾರಿ ಚುನಾವಣೆಯಾದರೆ, ಮತ್ತೆ ಕೆಂಬಾವುಟ ಕ್ಷೇತ್ರದಲ್ಲಿ ಹಾರಾಡಲಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಬಾಗೇಪಲ್ಲಿ ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಈ ಭಾರಿ ಉಪಚುನಾವಣೆಯಾದರೆ, ನಮ್ಮ ಸಿಪಿಐ(ಎಂ) ನಿಂದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಕಳೆದ ಭಾರಿ ನಮ್ಮ ಪಕ್ಷಕ್ಕೆ 20 ಸಾವಿರ ಮತ ನೀಡಿದ್ದರು. ಆದರೆ, ಹಣಬಲದಿಂದಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆದರೆ, ಈಗ ಎಷ್ಟೆ ಹಣ ಬಲ ಇದ್ದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಸುಬ್ಬಾರೆಡ್ಡಿ ಅವರ ಪ್ರಕರಣದಿಂದ ಹಿರಂಗಗೊಂಡಿದೆ. ಜಿ.ವಿ.ಶ್ರೀರಾಮರೆಡ್ಡಿ ಅವರು ಸಿಪಿಐ(ಎಂ) ನಿಂದ ಎರಡು ಭಾರಿ ಶಾಸಕರಾಗಿದ್ದರು. ಅವರ ದಾರಿಯಲ್ಲಿಯೇ ನಾವು ನಡೆಯುತ್ತಿದ್ದೆವೆ. ಸಿಪಿಐ(ಎಂ)ಅಧಿಕಾರಕ್ಕೆ ಬಂದರಷ್ಟೆ ಇಲ್ಲಿ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ಜನರಿಗೆ ಚೆನ್ನಾಗಿ ಗೊತ್ತು. ಈ ಭಾರಿಯ ಚುನಾವಣೆಯಲ್ಲಿ ಹಣ ಬಲದ ಎದುರು ನಮ್ಮ ಹೋರಾಟಗಳು ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಇದೆ. ಈ ಬಾರಿಯ ಚುನಾವಣೆಗೆ ಜನರು ನಮ್ಮ ಪರವಾಗಿದ್ದಾರೆ ಎಂದರು.

Read More
Next Story