
ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ
ಪ್ರಧಾನಿ ಮೋದಿ ಮೌನ ಹೇಡಿತನದ ಪರಮಾವಧಿ; ಸಂಸದೀಯ ಇತಿಹಾಸದಲ್ಲೇ ಇದೇ ಮೊದಲು: ಸಿದ್ದರಾಮಯ್ಯ ವಾಗ್ದಾಳಿ
ಪ್ರಧಾನಿ ಮೋದಿ ಭಯದಿಂದ ಸಂಸತ್ತಿಗೆ ಬರುವುದಿಲ್ಲ ಎಂದು ರಾಹುಲ್ ಗಾಂಧಿ ಮುಂಚಿತವಾಗಿಯೇ ಎಚ್ಚರಿಸಿದ್ದರು. ಅವರ ಮಾತು ಈಗ ನಿಜವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು "ಹೇಡಿತನದ ಪರಮಾವಧಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (X) ಪೋಸ್ಟ್ ಮಾಡಿರುವ ಅವರು, "ಭಾರತದ ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯವರ ಉತ್ತರವೇ ಇಲ್ಲದೆ ರಾಷ್ಟ್ರಪತಿಗಳ ವಂದನಾ ನಿರ್ಣಯ ಅಂಗೀಕಾರವಾಗಿದೆ. ಸಂಸತ್ತಿನಿಂದ ತಪ್ಪಿಸಿಕೊಳ್ಳುವ ಪ್ರಧಾನಿ, ಉತ್ತರದಾಯಿತ್ವದಿಂದಲೂ ತಪ್ಪಿಸಿಕೊಳ್ಳುತ್ತಿದ್ದಾರೆ," ಎಂದು ಟೀಕಿಸಿದ್ದಾರೆ.
ವಿಪಕ್ಷಗಳ ಧ್ವನಿ ಹತ್ತಿಕ್ಕುವ ಯತ್ನ
ಸರ್ಕಾರ ಮೊದಲು ವಿರೋಧ ಪಕ್ಷದ ಬಾಯಿಯನ್ನು ಮುಚ್ಚಿಸಿತು, ನಂತರ ತಾನೂ ಮೌನಕ್ಕೆ ಶರಣಾಯಿತು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. "ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದಾಗ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಪುಸ್ತಕವನ್ನು ದಾಖಲೆಗೆ ಸೇರಿಸಲು ಮುಂದಾದಾಗ, ಅವರಿಗೆ ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಲಾಗಿಲ್ಲ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೀನಾ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿಯವರು ಸೇನಾ ಮುಖ್ಯಸ್ಥರಿಗೆ ಕೇವಲ "ಜೋ ಉಚಿತ್ ಸಂಜೋ, ವೋ ಕರೋ" (ನಿಮಗೆ ಸರಿ ಅನಿಸಿದ್ದನ್ನು ಮಾಡಿ) ಎಂದು ಹೇಳಿದ್ದಾಗಿ ನರವಣೆ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಜಾರಿಕೊಳ್ಳುವ ನಾಯಕತ್ವದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುವುದು ಮೋದಿಯವರಿಗೆ ಇಷ್ಟವಿರಲಿಲ್ಲ. ಆ ಕಾರಣಕ್ಕಾಗಿಯೇ ಭಾರತದ ಬಹುಸಂಖ್ಯಾತ ಜನರನ್ನು ಪ್ರತಿನಿಧಿಸುವ ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲಾಯಿತು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಭವಿಷ್ಯ ನಿಜವಾಯಿತು
"ಪ್ರಧಾನಿ ಮೋದಿ ಭಯದಿಂದ ಸಂಸತ್ತಿಗೆ ಬರುವುದಿಲ್ಲ ಎಂದು ರಾಹುಲ್ ಗಾಂಧಿ ಮುಂಚಿತವಾಗಿಯೇ ಎಚ್ಚರಿಸಿದ್ದರು. ಅವರ ಮಾತು ಈಗ ನಿಜವಾಗಿದೆ. ತಮ್ಮ ನಿರ್ಧಾರಗಳ ಬಗ್ಗೆ ವಿಶ್ವಾಸವಿರುವ ನಾಯಕ ಚರ್ಚೆಯಿಂದ ಅಥವಾ ಸದನದಿಂದ ಪಲಾಯನ ಮಾಡುವುದಿಲ್ಲ," ಎಂದು ಸಿಎಂ ಲೇವಡಿ ಮಾಡಿದ್ದಾರೆ.
ಸ್ಪೀಕರ್ ನಡವಳಿಕೆ ಬಗ್ಗೆಯೂ ಟೀಕೆ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಡವಳಿಕೆಯನ್ನೂ ಪ್ರಶ್ನಿಸಿರುವ ಸಿದ್ದರಾಮಯ್ಯ, "ಸಂಸದೀಯ ಸಂಪ್ರದಾಯಗಳಿಗೆ ವಿರುದ್ಧವಾದ ಈ ನಡೆಯನ್ನು ಸಮರ್ಥಿಸಿಕೊಂಡ ಸ್ಪೀಕರ್ ಅವರ ಪಕ್ಷಪಾತದ ವರ್ತನೆ ಲೋಕಸಭೆಯ ಘನತೆಗೆ ಧಕ್ಕೆ ತಂದಿದೆ. ಸ್ಪೀಕರ್ ಆದವರು ಸಂಸತ್ತನ್ನು ರಕ್ಷಿಸಬೇಕೇ ಹೊರತು ಕಾರ್ಯಾಂಗಕ್ಕೆ ಗುರಾಣಿಯಾಗಬಾರದು," ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಸತ್ತನ್ನು ದುರ್ಬಲಗೊಳಿಸುವ, ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಟೊಳ್ಳು ಮಾಡುವ ದೊಡ್ಡ ಸಂಚಿನ ಭಾಗವಿದು. ಭಯ, ಮೌನ ಮತ್ತು ಪಲಾಯನವಾದದಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

