Odisha MLAs| ರಾಜ್ಯಸಭಾ ಚುನಾವಣೆ: ಅಡ್ಡ ಮತದಾನದ ಭೀತಿ, ಬಿಡದಿ ರೆಸಾರ್ಟ್‌ಗೆ ಒಡಿಶಾ ಕಾಂಗ್ರೆಸ್ ಶಾಸಕರು ಶಿಫ್ಟ್!
x
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಡಿಶಾ ಕಾಂಗ್ರೆಸ್‌ ಶಾಸಕರು

Odisha MLAs| ರಾಜ್ಯಸಭಾ ಚುನಾವಣೆ: ಅಡ್ಡ ಮತದಾನದ ಭೀತಿ, ಬಿಡದಿ ರೆಸಾರ್ಟ್‌ಗೆ ಒಡಿಶಾ ಕಾಂಗ್ರೆಸ್ ಶಾಸಕರು ಶಿಫ್ಟ್!

Rajya sabha Election| ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ತಡೆಯಲು ಒಡಿಶಾ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಬಿಡದಿ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಮತ್ತೆ ಟ್ರಬಲ್‌ ಶೂಟರ್‌ ಡಿಕೆಶಿ ಅಖಾಡಕ್ಕಿಳಿದಿದ್ದಾರೆ.


Click the Play button to hear this message in audio format

ಒಡಿಶಾದ ರಾಜ್ಯಸಭಾ ಚುನಾವಣೆಗೆ 'ರೆಸಾರ್ಟ್ ರಾಜಕೀಯ'ದ ಬಿಸಿ ತಟ್ಟಿದೆ. ಬಿಜೆಪಿಯ 'ಆಪರೇಷನ್ ಕಮಲ' ಮತ್ತು ಅಡ್ಡ ಮತದಾನದ ಭೀತಿಯಿಂದ ಕಂಗಾಲಾಗಿರುವ ಕಾಂಗ್ರೆಸ್ ಹೈಕಮಾಂಡ್, ತನ್ನ ಶಾಸಕರನ್ನು ರಕ್ಷಿಸಲು ಸಿಲಿಕಾನ್ ಸಿಟಿಯನ್ನು ಆರಿಸಿಕೊಂಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಣ್ಗಾವಲಿನಲ್ಲಿ ಒಡಿಶಾದ ಶಾಸಕರು ಈಗ ಬಿಡದಿಯ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ಒಡಿಶಾದಲ್ಲಿ 4 ರಾಜ್ಯಸಭಾ ಸ್ಥಾನಗಳ ಚುನಾವಣೆಯು ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ಶಾಸಕರನ್ನು ಸೆಳೆಯಬಹುದು ಎಂಬ 'ಅಡ್ಡ ಮತದಾನದ' ಭೀತಿಯಿಂದಾಗಿ, ಒಡಿಶಾದ 14 ಕಾಂಗ್ರೆಸ್ ಶಾಸಕರ ಪೈಕಿ 9 ಮಂದಿ ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಬೆಂಗಳೂರಿಗೆ ಆಗಮನ ಮತ್ತು ಬಿಗಿ ಭದ್ರತೆ

ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಅಧ್ಯಕ್ಷರ ಮಾರ್ಗದರ್ಶನದಂತೆ ಶಾಸಕರು ಭುವನೇಶ್ವರದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದರು. ಅಲ್ಲಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರು ಶಾಸಕರನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ.

ಚುನಾವಣಾ ಅಖಾಡದ ಲೆಕ್ಕಾಚಾರ

ಒಡಿಶಾದ 4 ರಾಜ್ಯಸಭಾ ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ವಿವರ ಹೀಗಿದೆ:

• ಬಿಜೆಪಿ ಅಭ್ಯರ್ಥಿಗಳು: ಮನ್ಮೋಹನ್ ಸಮಾಲ್ ಮತ್ತು ಸುಜೀತ್ ಕುಮಾರ್.

• ಬಿಜೆಡಿ ಅಭ್ಯರ್ಥಿ: ಡಾ. ಸಂತ್ರಪ್ಟ್ ಮಿಶ್ರಾ (ನವೀನ್ ಪಟ್ನಾಯಕ್ ಅವರ ಆಪ್ತ ಕಾರ್ಯದರ್ಶಿ).

• ಸಾಮಾನ್ಯ ಅಭ್ಯರ್ಥಿ (BJD & Congress ಬೆಂಬಲಿತ): ಡಾ. ದತ್ತೇಶ್ವರ್ ಹೋಟಾ.

• ಸ್ವತಂತ್ರ ಅಭ್ಯರ್ಥಿ (BJP ಬೆಂಬಲಿತ): ಮಾಜಿ ಕೇಂದ್ರ ಸಚಿವ ದಿಲೀಪ್ ರೇ.

ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಮತಗಳ ಅಗತ್ಯವಿದೆ. ಬಿಜೆಡಿ ತನ್ನ ಮೊದಲ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿಕೊಂಡಿದೆ. ಆದರೆ, ಕಾಂಗ್ರೆಸ್ ಬೆಂಬಲಿಸಿರುವ ಡಾ. ದತ್ತೇಶ್ವರ್ ಹೋಟಾ ಅವರ ಗೆಲುವಿಗೆ ಕಾಂಗ್ರೆಸ್‌ನ 14 ಶಾಸಕರ ಮತಗಳು ಅತ್ಯಂತ ಮುಖ್ಯವಾಗಿವೆ.

'ಆಪರೇಷನ್ ಕಮಲ'ದ ಭೀತಿ ಏಕೆ?

ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಗೆಲ್ಲಲು ಇನ್ನೂ ಸುಮಾರು 8 ರಿಂದ 10 ಮತಗಳ ಕೊರತೆಯಿದೆ. ಈ ಮತಗಳನ್ನು ಕಾಂಗ್ರೆಸ್ ಅಥವಾ ಬಿಜೆಡಿ ಪಾಳಯದಿಂದ ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ 'ಕುದುರೆ ವ್ಯಾಪಾರ' ತಪ್ಪಿಸಲು ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿನ ಸುರಕ್ಷಿತ ತಾಣಕ್ಕೆ ರವಾನಿಸಿದೆ.

ಮತ್ತೆ ಅಖಾಡಕ್ಕೆ ʻಟ್ರಬಲ್‌ ಶೂಟರ್‌ʼ

ಹಿಂದೆ ಗುಜರಾತ್ ಮತ್ತು ಮಹಾರಾಷ್ಟ್ರದ ಬಿಕ್ಕಟ್ಟಿನ ಸಮಯದಲ್ಲೂ ಕಾಂಗ್ರೆಸ್ ತನ್ನ ಶಾಸಕರನ್ನು ಡಿ.ಕೆ. ಶಿವಕುಮಾರ್ ಅವರ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಿತ್ತು. ಈಗಲೂ ಒಡಿಶಾ ಕಾಂಗ್ರೆಸ್ ಶಾಸಕರ ಜವಾಬ್ದಾರಿಯನ್ನು ಹೈಕಮಾಂಡ್ ಡಿಕೆಶಿಗೆ ವಹಿಸಿದೆ. ಮಾರ್ಚ್ 16 ರಂದು ಮತದಾನದ ದಿನದವರೆಗೆ ಈ ಶಾಸಕರು ಬಿಡದಿ ರೆಸಾರ್ಟ್‌ನಲ್ಲೇ ಉಳಿಯುವ ಸಾಧ್ಯತೆಯಿದೆ.

ಯಾವಾಗ ಚುನಾವಣೆ?

ಮಾರ್ಚ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ತಮ್ಮ ಶಾಸಕರನ್ನು ಬಿಜೆಪಿ ಸೆಳೆಯಬಹುದು ಎಂಬ 'ಆಪರೇಷನ್ ಕಮಲ' ಹಾಗೂ ಅಡ್ಡ ಮತದಾನದ ತೀವ್ರ ಆತಂಕ ಕಾಂಗ್ರೆಸ್ ಪಾಳಯವನ್ನು ಕಾಡುತ್ತಿದೆ. 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಸದ್ಯ ಆಡಳಿತಾರೂಢ ಬಿಜೆಪಿ 79 ಸ್ಥಾನಗಳೊಂದಿಗೆ ಬಲಿಷ್ಠವಾಗಿದ್ದರೆ, ವಿರೋಧ ಪಕ್ಷವಾದ ಬಿಜೆಡಿ 50 ಮತ್ತು ಕಾಂಗ್ರೆಸ್‌ 14 ಶಾಸಕರನ್ನು ಹೊಂದಿವೆ. ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಪ್ರತಿ ಮತವೂ ನಿರ್ಣಾಯಕವಾಗಿರುವುದರಿಂದ, ಕೇವಲ 14 ಸ್ಥಾನ ಹೊಂದಿರುವ ಕಾಂಗ್ರೆಸ್‌ಗೆ ತನ್ನ ಶಾಸಕರು ಅಡ್ಡ ಮತದಾನ ಮಾಡದಂತೆ ತಡೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

Read More
Next Story