ರಾಜ್ಯಸಭಾ ಚುನಾವಣೆ ಫಲಿತಾಂಶ:  ಜೆಡಿಎಸ್‌-ಬಿಜೆಪಿ ಮೈತ್ರಿ ಪರಿಣಾಮದ ಮುನ್ಸೂಚನೆ
x

ರಾಜ್ಯಸಭಾ ಚುನಾವಣೆ ಫಲಿತಾಂಶ: ಜೆಡಿಎಸ್‌-ಬಿಜೆಪಿ ಮೈತ್ರಿ ಪರಿಣಾಮದ ಮುನ್ಸೂಚನೆ

ಬಿಜೆಪಿಯ ಯಶವಂತಪುರ ಶಾಸಕ ಎಸ್‌ ಟಿ ಸೋಮಶೇಖರ್‌ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌ ಅವರು ಪಕ್ಷದ ವಿಪ್‌ ವಿರುದ್ಧ ನಡೆದುಕೊಂಡಿದ್ದಾರೆ.


Click the Play button to hear this message in audio format

ನಾಲ್ಕು ಸ್ಥಾನಗಳಿಗೆ ಐದನೇ ಅಭ್ಯರ್ಥಿ ಕಣಕ್ಕಿಳಿದ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ರಾಜ್ಯಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ತನ್ನ ಎಲ್ಲಾ ಅಭ್ಯರ್ಥಿಗಳನ್ನು ನಿರಾಯಾಸವಾಗಿ ಗೆಲ್ಲಿಸಿಕೊಂಡಿದ್ದರೆ, ಬಿಜೆಪಿ- ಜೆಡಿಎಸ್‌ ಮೈತ್ರಿಕೂಟ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಮಾತ್ರ ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ, ಬಿಜೆಪಿಯ ಇಬ್ಬರು ಶಾಸಕರು ವಿಪ್‌ ಉಲ್ಲಂಘಿಸಿ ಪಕ್ಷದ ಸೂಚನೆ ವಿರುದ್ಧ ನಿಲ್ಲುವ ಮೂಲಕ ದೊಡ್ಡ ಮುಜುಗರ ತಂದೊಡ್ಡಿದ್ದಾರೆ.

ಬಿಜೆಪಿಯ ಯಶವಂತಪುರ ಶಾಸಕ ಎಸ್‌ ಟಿ ಸೋಮಶೇಖರ್‌ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌ ಅವರು ಪಕ್ಷದ ವಿಪ್‌ ವಿರುದ್ಧ ನಡೆದುಕೊಂಡಿದ್ದಾರೆ. ಸೋಮಶೇಖರ್‌ ಅವರು ಅಡ್ಡಮತದಾನ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದರೆ, ಶಿವರಾಂ ಹೆಬ್ಬಾರ್‌ ಅವರು ಮತದಾನದಿಂದಲೇ ದೂರ ಉಳಿದು ಪಕ್ಷಕ್ಕೆ ಶಾಕ್‌ ಕೊಟ್ಟರು.

ಇಬ್ಬರು ಶಾಸಕರ ಬಂಡಾಯ ಒಂದು ಕಡೆ ಪಕ್ಷಕ್ಕೆ ಮುಜುಗರ ತಂದರೆ, ಮತ್ತೊಂದು ಕಡೆ ಹೆಚ್ಚುವರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರ ಸೋಲಿಗೂ ಕಾರಣವಾಯಿತು. ಜೊತೆಗೆ ಕುಪೇಂದ್ರ ರೆಡ್ಡಿ ಗೆಲುವಿಗೆ ಬಿಜೆಪಿ ಮತ್ತು ಜೆಡಿಎಸ್‌ ಮತಗಳ ಹೊರತಾಗಿಯೂ ಕೊರತೆ ಬೀಳುತ್ತಿದ್ದ ಐದು ಮತಗಳನ್ನು ಪಡೆಯುವಲ್ಲಿ ಮೈತ್ರಿಕೂಟ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್‌ ಶಾಸಕರ ಅಡ್ಡಮತ ಮತ್ತು ಪಕ್ಷೇತರರ ಮತಗಳ ಮೇಲೆ ಕಣ್ಣಿಟ್ಟು ತಂತ್ರ ಹೂಡಿದ್ದ ಜೆಡಿಎಸ್‌ ಮತ್ತು ಬಿಜೆಪಿ ನಾಯಕರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಪರಿಷತ್‌ ಚುನಾವಣೆಯಲ್ಲೂ ಹಿನ್ನಡೆ

ತಮ್ಮ ಅಭ್ಯರ್ಥಿ ಗೆಲ್ಲಿಸಲಾಗದ ಹಿನ್ನಡೆ ಮತ್ತು ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸೂಚನೆ ಧಿಕ್ಕರಿಸಿರುವುದು ರಾಜ್ಯಸಭಾ ಚುನಾವಣೆಯ ಆಚೆಗೂ ಮೈತ್ರಿಕೂಟದ ಹೊಂದಾಣಿಕೆಗೆ ಪೆಟ್ಟು ಕೊಟ್ಟಿದೆ. ವಾರದ ಹಿಂದಷ್ಟೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸೋಲುಕಂಡಿದ್ದರು. ಹಾಗೆ ನೋಡಿದರೆ, ಆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ನೀಡಿ ಒಗ್ಗಟ್ಟಿನಿಂದ ಮಿತ್ರಪಕ್ಷ ಜೆಡಿಎಸ್‌ ಅಭ್ಯರ್ಥಿಯ ಗೆಲುವಿಗೆ ಕೈಜೋಡಿಸಿದ್ದರೆ, ಗೆಲುವು ಕಷ್ಟವಿರಲಿಲ್ಲ. ಆದರೆ, ಹಾಗಾಗಲಿಲ್ಲ. ಪರಿಣಾಮವಾಗಿ ಚುನಾವಣಾ ಕಣದಲ್ಲಿದ್ದ ಜೆಡಿಎಸ್‌ ಮುಖಂಡ ಎ ಪಿ ರಂಗನಾಥ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಸೋಲುಕಂಡರು ಎಂಬುದು ಸ್ವತಃ ಮಿತ್ರಪಕ್ಷಗಳ ನಡುವೆ ಕೇಳಿಬರುತ್ತಿರುವ ಮಾತು.

ವಿಧಾನ ಪರಿಷತ್‌ ಚುನಾವಣೆಯ ಬೆನ್ನಲ್ಲೇ ಇದೀಗ ರಾಜ್ಯಸಭಾ ಚುನಾವಣೆಯಲ್ಲೂ ಮೈತ್ರಿಕೂಟ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಇದೀಗ ರಾಜ್ಯಸಭಾ ಚುನಾವಣೆಯಲ್ಲೂ ಮೈತ್ರಿಕೂಟದ ತಂತ್ರಗಾರಿಕೆ ಕೈಕೊಟ್ಟಿದೆ. ಕಣಕ್ಕಿಳಿಸಿದ ಹೆಚ್ಚುವರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸಲು ಬೇಕಾದ ಚುನಾವಣಾ ತಂತ್ರಗಾರಿಕೆಯ ವಿಷಯದಲ್ಲಿ ಮೈತ್ರಿಕೂಟದ ಉಭಯ ಪಕ್ಷಗಳ ವರಸೆ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಾಯಿತು. ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಗೆಲುವಿಗೆ ಬೇಕಾದ ೪೫ ಮತಗಳ ಬದಲಿಗೆ ೪೭ ಮತ ಹಾಕಿದ್ದರಿಂದ ಜೆಡಿಎಸ್‌ ಅಭ್ಯರ್ಥಿಗೆ ಎರಡು ಮತ ಕೊರತೆಯಾದವು. ಆ ಎರಡು ಮತ ಬಂದಿದ್ದರೂ ರೆಡ್ಡಿ ಗೆಲುವು ಸಾಧ್ಯವಿರಲಿಲ್ಲ ಎಂಬುದು ವಾಸ್ತವವಾದರೂ, ಮಿತ್ರಪಕ್ಷಗಳ ನಡುವಿನ ಪರಸ್ಪರ ಹೊಂದಾಣಿಕೆ ಎಷ್ಟರಮಟ್ಟಿಗೆ ಬೆಸೆದಿದೆ ಎಂಬುದಕ್ಕೆ ಆ ಮತಗಳು ಸಾಕ್ಷಿಯಾದವು.

ಹಾಗೇ, ಪಕ್ಷೇತರರ ಮತಗಳನ್ನು ಸೆಳೆಯುವ ವಿಷಯದಲ್ಲಿ ಕೂಡ ಬಿಜೆಪಿ ಹೆಚ್ಚು ಆಸಕ್ತಿ ತೋರಲಿಲ್ಲ. ಹಾಗಾಗಿ ಇಬ್ಬರು ಪಕ್ಷೇತರರು ಮತ್ತು ತಲಾ ಒಬ್ಬ ಶಾಸಕರನ್ನು ಹೊಂದಿರುವ ಎರಡು ಸಣ್ಣ ಪಕ್ಷಗಳ ಮತಗಳು ಕೂಡ ನಿರಾಯಾಸವಾಗಿ ಕಾಂಗ್ರೆಸ್‌ ಪಾಲಾದವು.

ಈ ನಡುವೆ, ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ವಿಪ್‌ ವಿರುದ್ಧ ನಡೆದುಕೊಂಡಿದ್ದು ಕೂಡ ಬಿಜೆಪಿಗೆ ಮಾತ್ರವಲ್ಲದೆ ಮೈತ್ರಿಕೂಟಕ್ಕೆ ಹಿನ್ನಡೆ ತಂದಿತು. ಜೊತೆಗೆ ಮೈತ್ರಿ ಪಕ್ಷಗಳ ಶಾಸಕರಿಗೇ ಮೈತ್ರಿಯ ಬಗ್ಗೆ ವಿಶ್ವಾಸವಿಲ್ಲ ಎಂಬ ಸಂದೇಶವನ್ನೂ ಈ ಚುನಾವಣೆ ರವಾನಿಸಿದೆ ಎಂಬ ಪ್ರತಿಪಕ್ಷಗಳ ಟೀಕೆಗೂ ಈ ಬೆಳವಣಿಗೆ ಕಾರಣವಾಗಿದೆ.

ಮುಂದಿನ ಪರಿಣಾಮಗಳು ಕುತೂಹಲಕಾರಿ

ಒಂದರ ಮೇಲೆ ಮತ್ತೊಂದರಂತೆ ರಾಜ್ಯದ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟಕ್ಕೆ ಉಂಟಾದ ಈ ಸೋಲು ಮತ್ತು ಹಿನ್ನಡೆ, ಮುಂದಿನ ದಿನಗಳಲ್ಲಿ ಮೈತ್ರಿಯ ಮೇಲೆ ಬೀರಬಹುದಾದ ಪರಿಣಾಮಗಳೇನು ಎಂಬುದು ಸದ್ಯಕ್ಕೆ ಕಾದುನೋಡಬೇಕಾದ ಸಂಗತಿ.

ಏಕೆಂದರೆ, “ಈ ಹಿನ್ನಡೆಗಳು ಉಭಯ ಪಕ್ಷಗಳ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಮತ್ತು ಅನುಮಾನಗಳಿಗೆ ಕಾರಣವಾಗಿವೆ. ಪಕ್ಷದ ನಾಯಕರ ಮಟ್ಟದಲ್ಲಿ ನಡೆದಿರುವ ಮೈತ್ರಿಯು ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಮಟ್ಟದಲ್ಲಿಯೂ ಹೊಂದಾಣಿಕೆಯಾಗಲು ಸಮಯ ಬೇಕಾಗಬಹುದು. ಅದರಲ್ಲೂ ಬೆಂಗಳೂರು ಸೇರಿದಂತೆ ಜೆಡಿಎಸ್‌ ಪ್ರಭಾವ ಹೆಚ್ಚಿರುವ ಕಡೆಗಳಲ್ಲಿ ಬಿಜೆಪಿ ಜೊತೆ ಹಿಂದಿನಿಂದಲೂ ಇರುವ ಪೈಪೋಟಿ ಮತ್ತು ಜಿದ್ದನ್ನು ಮರೆತು ಪರಸ್ಪರ ಕೈಜೋಡಿಸುವುದು ದಿಢೀರ್‌ ಆಗಿ ಆಗುವಂತಹದ್ದಲ್ಲ” ಎನ್ನುತ್ತಾರೆ ಹೆಸರು ಹೇಳಬಯಸದ ಜೆಡಿಎಸ್‌ ಪ್ರಮುಖರೊಬ್ಬರು.

ರಾಜಕಾರಣದ ಪರಸ್ಪರ ಹೊಂದಾಣಿಕೆ ಎಂಬುದು ಮೇಲ್ಮಟ್ಟದಲ್ಲಿ, ಐಷಾರಾಮಿ ಹೋಟೆಲುಗಳಲ್ಲಿ ದಿನ ಬೆಳಗಾಗುವುದರಲ್ಲಿ ನಡೆಯುವ ಸಂಗತಿ. ಆದರೆ, ಆ ಹೊಂದಾಣಿಕೆ ಬೀದಿಯ ಕಾರ್ಯಕರ್ತರ ನಡುವೆ ಆಗುವುದು ಅಷ್ಟು ಸರಳವಿಲ್ಲ. ಸ್ವತಃ ಶಾಸಕರ ನಡುವೆಯೇ ಅಂತಹದ್ದೊಂದು ಹೊಂದಾಣಿಕೆ ಇಲ್ಲ ಎಂದಾದರೆ, ಕಾರ್ಯಕರ್ತರ ನಡುವೆ ಅದನ್ನು ನಿರೀಕ್ಷಿಸುವುದು ಹೇಗೆ? ಎಂಬುದು ಅವರ ಪ್ರಶ್ನೆ.

ಆ ಹಿನ್ನೆಲೆಯಲ್ಲಿ ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ಈ ಮೈತ್ರಿಕೂಟದ ಪ್ರಯೋಗ ಮತ್ತು ವಿಧಾನಪರಿಷತ್‌ ಹಾಗೂ ರಾಜ್ಯಸಭಾ ಚುನಾವಣೆಗಳ ಹಿನ್ನಡೆಗಳು ಬೀರುವ ಪರಿಣಾಮಗಳು ಈಗ ಉಭಯ ಪಕ್ಷಗಳ ನಾಯಕರ ಚಿಂತೆಗೆ ಕಾರಣವಾಗಿವೆ.

Read More
Next Story