Leadership fight in the hands of the government: Lingayat MLAs show of strength after Dalit CMs weapon
x

ಸಚಿವ ಎಂ.ಬಿ. ಪಾಟೀಲ್‌

ಗದ್ದುಗೆ ಗುದ್ದಾಟ: ʼದಲಿತ ಸಿಎಂʼ ಅಸ್ತ್ರದ ಬೆನ್ನಲ್ಲೇ ಲಿಂಗಾಯತ ಶಾಸಕರ 'ಶಕ್ತಿ ಪ್ರದರ್ಶನʼ

ಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿರುವುದು ನಿಜ. ಇದರಲ್ಲಿ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ ಮುಗಿದ ನಂತರ ಹೆಚ್ಚಾದ ಅಧಿಕಾರ ಹಸ್ತಾಂತರ ಹಾಗೂ ನಾಯಕತ್ವದ ಗೊಂದಲ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಸಮುದಾಯಗಳ ಹೆಸರಲ್ಲಿ ಶಾಸಕರು ಸಭೆ ನಡೆಸುತ್ತಿರುವುದು ಮತ್ತೊಮ್ಮೆ ನಾಯಕತ್ವದ ಬಿಕ್ಕಟಿಗೆ ಸಾಕ್ಷಿಯಾಗಬಹುದೆ ಎಂಬ ಮಾತು ರಾಜಕೀಯವಲಯದಲ್ಲಿ ಕೇಳಿ ಬರುತ್ತಿದೆ.

ಸೋಮವಾರ(ಫೆ.2) ಸದನದಲ್ಲಿ "ನಾನು ಹಾಗೂ ಡಿಸಿಎಂ ಹಾಲುಸಕ್ಕರೆಯಂತಿದ್ದೇವೆ," ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, ಸಿಎಂ ಸೇರಿದಂತೆ 136 ಶಾಸಕರು ನನ್ನ ಪರವಾಗಿದ್ದಾರೆ ಎನ್ನುವ ಮೂಲಕ ಸಿಎಂ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದರು. ಅದರ ಬೆನ್ನಲ್ಲೇ ಮಂಗಳವಾರ(ಫೆ.3) ರಾತ್ರಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿ ದಲಿತ ಸಿಎಂ ಅಸ್ತ್ರವನ್ನು ಮತ್ತೆ ಮುನ್ನೆಲೆಗೆ ತಂದಿದ್ದರು.

ಇದರ ನಡುವೆಯೇ ಲಿಂಗಾಯತ ಶಾಸಕರುಗಳೂ ಇತ್ತೀಚೆಗೆ ಸಭೆ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಬುಧವಾರ(ಫೆ.4) ಮಾತನಾಡಿದ ಸಚಿವ ಎಂ.ಬಿ. ಪಾಟೀಲ್‌, "ಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ಸೋಮವಾರ(ಫೆ.2) ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿರುವುದು ನಿಜ. ಇದರಲ್ಲಿ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ. ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸರ್ವೇಸಾಮಾನ್ಯ" ಎಂದು ತಿಳಿಸಿದರು.

ಲಿಂಗಾಯತ ಶಾಸಕರ ಶಕ್ತಿ ಪ್ರದರ್ಶನ

ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 57 ಜನರಿಗೆ ಟಿಕೆಟ್ ಕೊಟ್ಟಿತ್ತು. ಇದರಲ್ಲಿ 34 ಜನ ಗೆದ್ದಿದ್ದರು. ಇತ್ತೀಚೆಗೆ ನಡೆದ ಸಭೆಗೆ ಇವರಲ್ಲಿ 28 ಜನ ಬಂದಿದ್ದರು. ಸಚಿವರ ಪೈಕಿ ಎಸ್‌. ಎಸ್. ಮಲ್ಲಿಕಾರ್ಜು‌ನ‌ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ. ಉಳಿದ ಎಲ್ಲ ಲಿಂಗಾಯತ ಸಚಿವರೂ ಬಂದಿದ್ದರು. ಬಿಜೆಪಿ ಕೂಡ 70 ಲಿಂಗಾಯತರಿಗೆ ಟಿಕೆಟ್ ಕೊಟ್ಟಿತ್ತು. ಆ ಪಕ್ಷದಿಂದಲೂ 17 ಜನ ನಮ್ಮವರು (ಲಿಂಗಾಯತರು) ಶಾಸಕರಾಗಿದ್ದಾರೆ ಎಂದರು.

ಸಭೆ ಮೂಲಕ ಪರೋಕ್ಷ ಸಂದೇಶ

"ಸಭೆಯಲ್ಲಿ ನಮ್ಮ ಸಮುದಾಯಕ್ಕೆ ಸರ್ಕಾರದ ನಾನಾ ಹಂತಗಳಲ್ಲಿ ಸಿಗಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮುಂತಾದ ವಿಚಾರ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ನಮ್ಮ ಸಮುದಾಯವು ಹೊಂದಿರುವ ಶಾಸಕರ ಸಂಖ್ಯೆಯು ನಮ್ಮ ಸಮುದಾಯ ಎಷ್ಟು ದೊಡ್ದದು ಎನ್ನುವುದನ್ನು ತೋರಿಸುತ್ತದೆ. ಜನಪ್ರತಿನಿಧಿಗಳಾದ ಮೇಲೆ ಸಮುದಾಯದ ಹಿತವನ್ನೂ ನೋಡಬೇಕಾಗುತ್ತದೆ ಎಂದು ಹೇಳುವ ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸೃಷ್ಠಿಯಾದರೆ ಸಿಎಂ ಹಾಗೂ ಡಿಸಿಎಂ ಹುದ್ದೆಗಳಿಗೆ ತಮ್ಮ ಸಮುದಾಯವನ್ನು ಪರಿಗಣಿಸಬೇಕು," ಎಂದು ಪರೋಕ್ಷವಾಗಿ ಲಿಂಗಾಯತ ಸಮುದಾಯದ ಶಾಸಕರ ಸಭೆ ಹೈಕಮಾಂಡ್‌ಗೆ ಸಂದೇಶ ನೀಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Read More
Next Story