CM Siddaramaiah| ಸಚಿವರ ಉದಾಸೀನ ಪ್ರವೃತಿ… ಸರ್ಕಾರಕ್ಕೆ ಮುಜುಗರ- ಸಿಎಂ ಸಿದ್ದರಾಮಯ್ಯ ಗರಂ!
x
ಸಿಎಂ ಸಿದ್ಧರಾಮಯ್ಯ(ಸಂಗ್ರಹ ಚಿತ್ರ)

CM Siddaramaiah| ಸಚಿವರ ಉದಾಸೀನ ಪ್ರವೃತಿ… ಸರ್ಕಾರಕ್ಕೆ ಮುಜುಗರ- ಸಿಎಂ ಸಿದ್ದರಾಮಯ್ಯ ಗರಂ!

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡದ ಇಲಾಖೆಗಳ ವಿರುದ್ಧ ಸ್ಪೀಕರ್ ಯು.ಟಿ. ಖಾದರ್ ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.


Click the Play button to hear this message in audio format

ಕರ್ನಾಟಕ ವಿಧಾನಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಉದಾಸೀನದ ವಿರುದ್ಧ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಭಾಧ್ಯಕ್ಷರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ಮೀನಾಮೇಷ ಎಣಿಸುತ್ತಿದ್ದ ಇಲಾಖೆಗಳಿಗೆ 'ಸರ್ಜಿಕಲ್ ಸ್ಟ್ರೈಕ್' ಮಾದರಿಯ ಬಿಸಿ ಮುಟ್ಟಿಸಲಾಗಿದೆ. ಬಜೆಟ್ ಅಧಿವೇಶನದ 7ನೇ ದಿನವಾದ ಸೋಮವಾರ, ಸ್ಪೀಕರ್ ಯು.ಟಿ. ಖಾದರ್ ಅವರು ಸದನಕ್ಕೆ ಆಗಮಿಸಿದಾಗ ಸಚಿವರು ಮತ್ತು ಅಧಿಕಾರಿಗಳ ಗೈರುಹಾಜರಿ ಕಂಡು ಕೆಂಡಾಮಂಡಲರಾಗಿ ಸಭಾತ್ಯಾಗ ಮಾಡಿದ್ದರು. ಸಭಾಧ್ಯಕ್ಷರೇ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಸಿಎಂ ಸಿದ್ಧರಾಮಯ್ಯ ಅವರಿಗೆ ತೀವ್ರ ಮುಜುಗರಕ್ಕೀಡು ಮಾಡಿದೆ. ಹೀಗಾಗಿ ಈ ಘಟನೆ ಬೆನ್ನಲ್ಲೇ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಪತ್ರವೊಂದನ್ನು ಬರೆದಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ಯಂತ್ರದಲ್ಲಿನ ವಿಳಂಬ ನೀತಿಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಖಡಕ್ ಪತ್ರ ಬರೆದಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಕಾಲದಲ್ಲಿ ಉತ್ತರ ನೀಡದ ಇಲಾಖೆಗಳ ನಡೆಗೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಉತ್ತರವಿಲ್ಲದ ನೂರಾರು ಪ್ರಶ್ನೆಗಳು'

16ನೇ ವಿಧಾನಸಭೆಯ ಮೊದಲ ಅಧಿವೇಶನದಿಂದ (2023) ಹಿಡಿದು ಈಗ ನಡೆಯುತ್ತಿರುವ 9ನೇ ಅಧಿವೇಶನದವರೆಗೆ ಸಾವಿರಾರು ಪ್ರಶ್ನೆಗಳು ಕೇಳಲ್ಪಟ್ಟಿವೆ. ಆದರೆ, ಮಾರ್ಚ್ 16, 2026ರಂದು ನಡೆದ ಸದನಸಭೆಯ ಅಂಕಿ-ಅಂಶಗಳು ಆಘಾತಕಾರಿಯಾಗಿವೆ. ಅಂದು ಮಂಡಿಸಲಾದ 245 ಪ್ರಶ್ನೆಗಳಲ್ಲಿ ಕೇವಲ 90 ಪ್ರಶ್ನೆಗಳಿಗೆ ಮಾತ್ರ ಉತ್ತರ ಒದಗಿಸಲಾಗಿತ್ತು. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಇಲಾಖೆಗಳು ಇನ್ನೂ ಮೌನವಾಗಿವೆ.

ಸದನದಲ್ಲಿ ನಡೆದಿದ್ದೇನು?

ಬಜೆಟ್ ಅಧಿವೇಶನದ 7ನೇ ದಿನವಾದ ಸೋಮವಾರ, ಸ್ಪೀಕರ್ ಯು.ಟಿ. ಖಾದರ್ ಅವರು ಸದನಕ್ಕೆ ಆಗಮಿಸಿದಾಗ ಸಚಿವರು ಮತ್ತು ಅಧಿಕಾರಿಗಳ ಗೈರುಹಾಜರಿ ಕಂಡು ಕೆಂಡಾಮಂಡಲವಾದರು. "ಒಟ್ಟು 230 ಪ್ರಶ್ನೆಗಳಲ್ಲಿ ಕೇವಲ 84ಕ್ಕೆ ಮಾತ್ರ ಉತ್ತರ ನೀಡಲಾಗಿದೆ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಇಲ್ಲಿ ಚರ್ಚಿಸದಿದ್ದರೆ ಸದನಕ್ಕೆ ಬರುವುದಾದರೂ ಏಕೆ? ಇದು ಮಂತ್ರಿಗಳಿಗಾಗಿ ನಡೆಸುವ ಕಲಾಪವಲ್ಲ" ಎಂದು ಗುಡುಗಿದ ಸ್ಪೀಕರ್, ಐದನೇ ಬಾರಿಯೂ ಸುಧಾರಣೆ ಕಾಣದ ಕಾರಣಕ್ಕೆ ಬೇಸತ್ತು ಪೀಠದಿಂದ ಎದ್ದು ಹೋಗುವ ಮೂಲಕ ಸಭಾತ್ಯಾಗ ಮಾಡಿದರು.

ಇಲಾಖೆಗಳ ಈ ಬೇಜವಾಬ್ದಾರಿತನದ ಬಗ್ಗೆ ವಿಧಾನಸಭೆಯ ಸಭಾಧ್ಯಕ್ಷರು (ಸ್ಪೀಕರ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಶಾಸಕರ ಹಕ್ಕುಗಳಿಗೆ ಮತ್ತು ಸದನದ ಘನತೆಗೆ ಚ್ಯುತಿ ತರುವ ವಿಷಯ ಎಂದು ಸಭಾಧ್ಯಕ್ಷರು ಎಚ್ಚರಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಆಕ್ಷನ್ ಮೂಡ್‌ಗೆ ಇಳಿದಿದ್ದಾರೆ.

ಅಧಿಕಾರಿಗಳ ತಲೆದಂಡ

ಸ್ಪೀಕರ್ ಯು.ಟಿ. ಖಾದರ್ ಅವರ ಈ ತೀವ್ರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಅತಿದೊಡ್ಡ ಮಟ್ಟದ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಎಂಟು ಇಲಾಖೆಗಳ ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ತಲೆದಂಡ ಮಾಡಲಾಗಿದೆ.

ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಎಂಟು ಪ್ರಮುಖ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಇದರಲ್ಲಿ ಪಶುಸಂಗೋಪನಾ ಇಲಾಖೆಯ ಆರ್. ವಿನೋತ್ ಪ್ರಿಯಾ, ವಸತಿ ಇಲಾಖೆಯ ಮೋಹನ್ ರಾಜ್ ಕೆ.ಪಿ, ಸಾರಿಗೆ ಇಲಾಖೆಯ ಎನ್.ವಿ ಪ್ರಸಾದ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಆರ್. ಗಿರೀಶ್, ಲೋಕಪಯೋಗಿ ಇಲಾಖೆಯ ಅಮಲಾನ್ ಆದಿತ್ಯ ಬಿಸ್ವಾಸ್ ಹಾಗೂ ಕಂದಾಯ ಇಲಾಖೆಯ ರಾಜೇಂದರ್ ಕುಮಾರ್ ಕಟಾರಿಯಾ ಸೇರಿದಂತೆ ಎಂಟು ಹಿರಿಯ ಅಧಿಕಾರಿಗಳು ಉತ್ತರಿಸದ ಕಾರಣಕ್ಕಾಗಿ ನೋಟಿಸ್‌ಗೆ ಗುರಿಯಾಗಿದ್ದಾರೆ. ಇದು ಇಲಾಖೆಗಳಲ್ಲಿನ ಉದಾಸೀನ ಪ್ರವೃತ್ತಿಗೆ ಸರ್ಕಾರ ನೀಡಿದ ಖಡಕ್ ಎಚ್ಚರಿಕೆಯಾಗಿದೆ.

ಸಚಿವರಿಗೆ ಸಿಎಂ ಬರೆದ ಪತ್ರದಲ್ಲೇನಿದೆ?

ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರಿಗೂ ಖಡಕ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 16ನೇ ವಿಧಾನಸಭೆಯ ಮೊದಲ ಅಧಿವೇಶನದಿಂದ ಹಿಡಿದು ಈಗಿನ 9ನೇ ಅಧಿವೇಶನದವರೆಗೆ ಬಾಕಿ ಇರುವ ಪ್ರಶ್ನೆಗಳ ಪಟ್ಟಿಯನ್ನು ಲಗತ್ತಿಸಿರುವ ಅವರು, ಸರ್ಕಾರದ ಗಂಭೀರತೆಯನ್ನು ನೆನಪಿಸಿದ್ದಾರೆ. ವಿಶೇಷವಾಗಿ ಮಾರ್ಚ್ 16ರಂದು ನಡೆದ ಸದನದಲ್ಲಿ ಕೇಳಲಾದ 245 ಪ್ರಶ್ನೆಗಳ ಪೈಕಿ ಕೇವಲ 90 ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿರುವುದನ್ನು ಸಿಎಂ ಬೆಟ್ಟು ಮಾಡಿದ್ದಾರೆ.

ಸಚಿವರ ಈ ವಿಳಂಬ ಧೋರಣೆಯು ಶಾಸಕರು ಸದನದಲ್ಲಿ ಸಾರ್ವಜನಿಕ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಲು ಅಡ್ಡಿಯುಂಟುಮಾಡಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಾಗಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವ ವಿಷಯವಾಗಿದೆ. ಶಾಸಕರ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಸದನದ ಘನತೆಗೂ ಇದರಿಂದ ಚ್ಯುತಿ ಬಂದಿದೆ ಎಂದು ಪತ್ರದಲ್ಲಿ ಸಚಿವರಿಗೆ ಸಿಎಂ ಚಾಟಿ ಬೀಸಿದ್ದಾರೆ.

ಸಚಿವರಿಗೆ ಸಿಎಂ ನೀಡಿರುವ ಪ್ರಮುಖ ಸೂಚನೆಗಳು

ಕಾರ್ಯದರ್ಶಿಗಳ ವಿವರಣೆ: ಯಾವ ಕಾರಣಕ್ಕಾಗಿ ನಿಗದಿತ ಸಮಯದಲ್ಲಿ ಉತ್ತರಗಳನ್ನು ವಿಧಾನಮಂಡಲಕ್ಕೆ ಕಳುಹಿಸಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳು ತಕ್ಷಣವೇ ವಿವರಣೆ ನೀಡಬೇಕು.

ಶಾಸಕರಿಗೆ ಪತ್ರ: ಒಂದು ವೇಳೆ ತಕ್ಷಣಕ್ಕೆ ಉತ್ತರ ನೀಡಲು ಸಾಧ್ಯವಾಗದಿದ್ದರೆ, ಆ ಬಗ್ಗೆ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರ ಬರೆಯಬೇಕು.

ಸಮಯದ ಮಿತಿ: ಉತ್ತರ ಒದಗಿಸಲು ಅಗತ್ಯವಿರುವ ನಿರ್ದಿಷ್ಟ ಸಮಯವನ್ನು ಶಾಸಕರಿಗೆ ಮುಂಚಿತವಾಗಿಯೇ ತಿಳಿಸಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Read More
Next Story