
Karnataka legislative session: ಡ್ರಗ್ಸ್ ವಿರುದ್ಧ ಜಾಗೃತಿಗೆ ಶಾಸಕ ಧೀರಜ್ ಮುನಿರಾಜು ಆಗ್ರಹ
ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. 2026ರ ಸಾಲಿನ ಈ ಅಧಿವೇಶನದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.
ವಿಧಾನ ಮಂಡಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಿದ್ದು, ಸರ್ಕಾರದ ಸಾಧನೆಗಳು ಮತ್ತು ಮುಂಬರುವ ಯೋಜನೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಮಾಜಿ ಸಚಿವ ಎನ್. ಸುರೇಶ್ ಕುಮಾರ್ ಅವರು ಧರ್ಮಸ್ಥಳದ ಕುರಿತಾದ ಎಸ್‌ಐಟಿ ತನಿಖಾ ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದು, ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
Live Updates
- 30 Jan 2026 5:57 PM IST
ರಾಜ್ಯ ಸರ್ಕಾರದಿಂದ ಹಿಂದೂಗಳ ಟಾರ್ಗೆಟ್: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ
ಹಿಂದೂಗಳನ್ನ ಈ ಸರ್ಕಾರ ಟಾರ್ಗೆಟ್ ಮಾಡಿದೆ. ನನ್ನ ಮೇಲೆ 15 ಕೇಸ್ ಹಾಕಿದ್ದಾರೆ. ಆದರೆ ಬಾಂಗ್ಲಾದೇಶ ಮಾದರಿಯಲ್ಲೇ ರಾಜ್ಯಪಾಲರ ಓಡಿಸಬೇಕು ಅನ್ನೋ ಶಾಸಕನ ಮೇಲೆ ಕೇಸ್ ಹಾಕುವುದಿಲ್ಲ. ರಾಜ್ಯಪಾಲರನ್ನ ಓಡಿಸಬೇಕು ಎಂದು ಹೇಳವ ಕಾಂಗ್ರೆಸ್ ಎಂಎಲ್‌ಸಿ ಮೇಲೆ ಒಂದೂ ಕೇಸ್ ಹಾಕುವುದಿಲ್ಲ. ಈ ಸರ್ಕಾರ ಪಿಕ್ ಆಂಡ್ ಚೂಸ್ ಮಾಡುತ್ತಿದೆ. ತನ್ನವರನ್ನು ರಕ್ಷಣೆ ಮಾಡಿ, ಹಿಂದೂಗಳ ಮೇಲೆ ಕೇಸ್ ಹಾಕೋ ಸರ್ಕಾರ ಇದು ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ತೆರಿಗೆ ಹಣ ಬಳಸಿ ಜನರ ದಿಕ್ಕು ತಪ್ಪಿಸಲು ನೀವು ಜಾಹೀರಾತು ನೀಡುತ್ತಿದ್ದಾರೆ. ಸರ್ಕಾರದ ಹಣ ಬಳಸಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ಪ್ರತೀ ಇಲಾಖೆಯಲ್ಲಿ ಹಗರಣ ನಡೆಯುತ್ತಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದನ್ನ ರಾಜ್ಯಪಾಲರ ಭಾಷಣದಲ್ಲಿ ಸೇರಿಸಬೇಕಿತ್ತು ಎಂದು ತಿಳಿಸಿದರು.

- 30 Jan 2026 5:31 PM IST
ಡ್ರಗ್ಸ್ ಪೆಡ್ಲರ್ಸ್, ಬಡವರ ಅಕ್ಕಿ ಸಾಗಿಸಿದವರು ಸಚಿವರ ಹಿಂಬಾಲಕರು: ಬಿ.ಪಿ ಹರೀಶ್ ಆರೋಪ
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಂದುವರೆದ ಚರ್ಚೆಯಲ್ಲಿ ಹರಿಹರ ಬಿಜೆಪಿ ಶಾಸಕ ಬಿ.ಪಿ ಹರೀಶ್ ಮಾತನಾಡಿ, ಕಳೆದ 20 ದಿನಗಳ ಹಿಂದೆ ದಾವಣಗೆರೆ ತಾಲ್ಲೂಕಿನಲ್ಲಿ ಮಣ್ಣನ್ನು ತೆಗೆಯುತ್ತಿದ್ದಾರೆ ಎಂದು ದೂರು ನೀಡಿದ್ದೆ. ಅವೆಲ್ಲವನ್ನೂ ದಾಖಲೆ ಸಮೇತ ಹೇಳುತ್ತಿದ್ದೇನೆ. ಸರ್ಕಾರಿ ಜಾಗವೂ ರಿಯಲ್ ಎಸ್ಟೇಟ್ ಮಾಫಿಯಾಗೆ ಒಳಗಾಗಿದೆ ಎಂದು ಆರೋಪ ಮಾಡಿದರು.
ಪೋಲಿಸ್ ಹಾಗೂ ಕೃಷಿ ಅಧಿಕಾರಿಗಳನ್ನ ಮಣ್ಣು ತೆಗೆಯುತ್ತಿದ್ದ ಗ್ರಾಮಕ್ಕೆ ನಾನೇ ಕರೆದುಕೊಂಡು ಹೋಗಿದ್ದೆ. ಅಧಿಕಾರಿಗಳು ಇದ್ದರೂ ಅದು ನಿಲ್ಲಿಸಿವ ಕೆಲಸವಾಗಲಿಲ್ಲ. ಪೊಲೀಸ್ ಅಧಿಕಾರಿಗಳ ಜೊತೆಗೆ ಹೋದರೂ ಮರುದಿನ ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ಸರ್ಕಾರಿ ಪಿಎ ಮೇಲೆ ಹಲ್ಲೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಕಾರ್ಯಕರ್ತರು ಖುದ್ದು ಠಾಣೆಗೆ ಹೋಗಿ ಪ್ರಶ್ನಿಸಿದರೂ, ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಏನೂ ಆಗಲಿಲ್ಲ. ಅಧಿಕಾರಿಗಳು ದುಷ್ಟರ ಕೈಗೊಂಬೆಗಳಾಗಿದ್ದಾರೆ ಎಂದು ತಿಳಿಸಿದರು.
ಹರಿಹರ ಭಾಗದ ಗಡಿ ಭಾಗದಲ್ಲಿ ಸರ್ಕಾರಿ ಆಸ್ತಿ ಕಬಳಿಸಿದ್ದಾರೆ ಎಂದು ಪತ್ರ ನೀಡಿದ್ದೆ. ಜಿಲ್ಲಾ ಸಚಿವರು ಸದನದಲ್ಲಿ ಎಷ್ಟೊತ್ತು ಇರುತ್ತಾರೆ ಎಂದು ತಿಳಿದಿಲ್ಲ. ಸದನಕ್ಕೆ ಬಂದಿರೋದನ್ನು ನೋಡೇ ಇಲ್ಲಾ, ಬರೀ ದೌರ್ಜನ್ಯ ನಡೆಸುತ್ತಿದ್ದಾರೆ. ಡ್ರಗ್ಸ್ ಪೆಡ್ಲರ್ಸ್‌ಗಳನ್ನು ಹಿಡಿದರು, ಅವರೆಲ್ಲಾ ಸಚಿವರ ಹಿಂಬಾಲಕರು. ನ್ಯಾಯಬೆಲೆ ಅಂಗಡಿಯ ಅಕ್ಕಿ ಸಾಗಿಸಿದವರು ಕೂಡ ಸಚಿವರ ಹಿಂಬಾಲಕರೇ. ನಾನು ದುಷ್ಟ, ಭ್ರಷ್ಟ ರಾಜಕಾರಣಿಗೆ ಹೆದರುವುದಿಲ್ಲ. ಅವರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ ಬಡವರ, ಅರಣ್ಯ ಇಲಾಖೆಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು.

- 30 Jan 2026 5:11 PM IST
ಡ್ರಗ್ಸ್ ವಿರುದ್ಧ ಜಾಗೃತಿಗೆ ಶಾಸಕ ಧೀರಜ್ ಮುನಿರಾಜು ಆಗ್ರಹ
ಬೆಂಗಳೂರಿನ ಬಸವನಗುಡಿಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿದ್ದಾರೆ, 20 ವರ್ಷದ ಹುಡುಗಿಯೊಬ್ಬಳು ಪೆಡ್ಲರ್ ಆಗಿ ಬದಲಾಗಿದ್ದಾಳೆ. ಡ್ರಗ್ಸ್‌ನ ಜಾಲ ಹೆಚ್ಚಾಗಲು ಪೊಲೀಸರೇ ಕಾರಣ. ಈ ಜಾಲದಲ್ಲಿ ಪೊಲೀಸ್ ಪೇದೆಗಳು ಹೆಚ್ಚಾಗಿದ್ದಾರೆ. ಡ್ರಗ್ಸ್‌ಗೆ ಸಹಕಾರ ನೀಡುವ ಸಿಬ್ಬಂದಿಗಳ ಮೇಲೆ ಕ್ರಮ ವಹಿಸಬೇಕು ಹಾಗೂ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಬಿಜೆಪಿ ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

- 30 Jan 2026 5:05 PM IST
ಮಹಿಳಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಋತುಚಕ್ರರಜೆ: ಸರ್ಕಾರಕ್ಕೆ ಅಭಿನಂದಿಸಿದ ನಯಾನಾ ಮೋಟಮ್ಮ
ಶುಕ್ರವಾರ(ಜ.30) ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಋತುಚಕ್ರ ರಜೆಯ ಬಗ್ಗೆ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.
ರಾಜ್ಯ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡುತ್ತಿದೆ. ದ್ವಿತೀಯ ಪಿಯುಸಿ ಹಾಗೂ ಪದವಿ ಪೂರೈಸಿದ ಯುವತಿಯರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು, ಅಜೀಂ ಪ್ರೇಂಜಿ ಟ್ರಸ್ಟ್ 30,000 ಧನ ಸಹಾಯ ನೀಡುತ್ತಿದೆ.
ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರ ಎಂದು ಸಮೀಕ್ಷೆಯೊಂದರಲ್ಲಿ ತಿಳಿಸಿದೆ. ಈ ಮೂಲಕ ಬಿಜೆಪಿ ನಾಯಕರ ಆರೋಪಕ್ಕೆ ತಕ್ಕ ಉತ್ತರ ನೀಡಲಾಗಿದೆ. ಗಿಗ್ ಕಾರ್ಮಿಕರಿಗೆ ಸರ್ಕಾರ ಕಾನೂನು ತಂದಿದ್ದು, ಕಾರ್ಮಿಕರಿಗೆ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇಲ್ಲಿಯವರೆಗೂ 10,460 ಫಲಾನುಭವಿಗಳು ಯೋಜನೆಯ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

- 30 Jan 2026 2:02 PM IST
ವಿಧಾನಸಭೆ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ
ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಾಯಕರ ವಾಗ್ವದ ಹೆಚ್ಚಾದ ಹಿನ್ನೆಲೆ ಸ್ಪೀಕರ್ ಯು.ಟಿ. ಖಾದರ್ ಊಟದ ವಿರಾಮ ನೀಡಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

- 30 Jan 2026 1:55 PM IST
ಚುನಾವಣೆಯಲ್ಲಿ ಸೋಲಿಸುವಂತೆ ಶಾಸಕ ಜನಾರ್ದನರೆಡ್ಡಿಗೆ ಬಿ. ನಾಗೇಂದ್ರ ಸವಾಲು
ಬಳ್ಳಾರಿ ಬ್ಯಾನರ್ ವಿಷಯವಾಗಿ ಸದನದಲ್ಲಿ ಗಲಾಟೆ ಹೆಚ್ಚಾದ ಕಾರಣ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ವರದಿ ಬರಲಿ. ನಿಮ್ಮ ಊರುಗಳಲ್ಲಿ ಒಳ್ಳೆಯ ವಾತವರಣ ಬರಬೇಕು. ಆದರೆ ನೀವು ಈ ರೀತಿ ಮಾತನಾಡಿದರೆ ಆಗುತ್ತದಯೇ ಎಂದು ಉಭಯ ಶಾಸಕರನ್ನು ಸಮಾಧಾನಪಡಿಸಿದರು.
ಶಾಸಕ ಜನಾರ್ದನರೆಡ್ಡಿ ಹಾಗೂ ಶಾಸಕ ನಾಗೇಂದ್ರ ಅವರ ನಡುವೆ ವಾಗ್ವಾದ ಹೆಚ್ಚಾದಾಗ, ನನ್ನನ್ನು ಸೋಲಿಸುತ್ತೀರಾ ? ಸೋಲಿಸಿ ನೋಡೋಣ ಅದನ್ನು ಜನರ ತೀರ್ಮಾನ ಮಾಡುತ್ತಾರೆ ಎಂದು ಜನಾರ್ದನರೆಡ್ಡಿಗೆ ಸವಾಲು ಹಾಕಿದರು. ನಮ್ಮ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಮಾಡಲಾಗುತ್ತಿದೆ, ನೀವು ಇದನ್ನು ವ್ಯೆಯಕ್ತಿಕವಾಗಿ ತೆಗೆದುಕೊಂಡಿದ್ದೀರಿ, ಬಳ್ಳಾರಿಯಲ್ಲಿ ನೋಡೋಣ ಬನ್ನಿ ಎಂದು ನಾಗೇಂದ್ರ ತಿಳಿಸಿದರು.

- 30 Jan 2026 1:35 PM IST
ಸದನದಲ್ಲೂ ಬಳ್ಳಾರಿ ಬ್ಯಾನರ್ ಗದ್ದಲ: ಆಡಳಿತ, ವಿಪಕ್ಷ ನಾಯಕರ ವಾಕ್ಸಮರ
ಬಳ್ಳಾರಿ ಬ್ಯಾನರ್ ಗಲಾಟೆಯ ಸದ್ದ ಸದನದಲ್ಲೂ ಕೇಳಿಸಿತು. ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕರ್ತನನ್ನ ಹುಡುಕಿ ಹೊಡೆಯುತ್ತೇವೆ ಎಂದು ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಾರೆ. ಬಹಿರಂಗವಾಗೇ ಅವರನ್ನ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಭರತ್ ರೆಡ್ಡಿ ಜೊತೆ ನನಗೆ ಸಂಬಧವೇನಿಲ್ಲ. ಆದರೆ ಅವರು ನನ್ನ ಪಕ್ಷದ ಶಾಸಕ. ಅವರನ್ನ ಪಾತಾಳದಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ ಎಂದು ಹೇಳುತ್ತಾರೆ. ನಮ್ಮ ಸರ್ಕಾರ ಬಂದಾಗ ಹುಡುಕಿ ಹೊಡೆಯುತ್ತೇವೆ ಎಂದು ಹೇಳಲಾಗುತ್ತಿದೆ.
ಸರ್ಕಾರವೇ ಇಲ್ಲ ಈಗಾಗಲೇ ಈ ರೀತಿ ಹೇಳುತ್ತಿದ್ದಾರೆ. ಇದು ಯಾವ ನ್ಯಾಯ ಸ್ವಾಮಿ ಎಂದು ಶಾಸಕ ಜನಾರ್ಧನ ರೆಡ್ಡಿಯವರನ್ನು ಶಾಸಕ ನಾಗೇಂದ್ರ ಪ್ರಶ್ನಿಸಿದರು.
ಈ ವೇಳೆ ನಾಗೇಂದ್ರ ಅವರ ಮಾತಿಗೆ ಶಾಸಕ ಜನಾರ್ಧನ ರೆಡ್ಡಿ ಆಕ್ಷೇಪ ವ್ಯಕ್ಪಡಿಸಿ, ಶ್ರೀರಾಮುಲು ಹುಡುಕಿ ಹೊಡೆಯುತ್ತೇವೆ ಅನ್ನಲಿಲ್ಲ, ಬದಲಾಗಿ, ಶಾಸಕ ಭರತ್ ರೆಡ್ಡಿ ಬಂಧನ ಮಾಡದಿದ್ದರೆ ಪಾತಾಳದಲ್ಲಿದ್ರೂ ಹುಡುಕಿ ತರುತ್ತೇವೆ ಎಂದು ಶ್ರೀರಾಮುಲು ಬಗ್ಗೆ ಸಮರ್ಥನೆ ಮಾಡಿಕೊಂಡರು.
ವಾಲ್ಮೀಕಿ ಸಮಾಜದಲ್ಲಿ ಶ್ರೀರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ. ನೂರು ಜನ್ಮ ಹುಟ್ಟಿ ಬಂದರೂ ಲೀಡರ್ ಆಗೋಕೆ ಆಗಲ್ಲ ಎಂದು ಗುಡುಗಿದರು. ಈ ವೇಳೆ ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು.

- 30 Jan 2026 1:21 PM IST
ಡಿಸಿಎಂ ಡಿ.ಕೆ. ಶಿವಕುಮಾರ್ ನಿಂದ ಗುತ್ತಿಗೆದಾರರಿಗೆ ಧಮ್ಕಿ: ಯತ್ನಾಳ್ ಆರೋಪ
ಡಿಸಿಎಂ ಡಿ.ಕೆ. ಶಿವಕುಮಾರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಉದ್ಯಮಿಗಳಿಗೆ, ಗುತ್ತಿಗೆದಾರಿಗೆ ದಮ್ಕಿ ಹಾಕಿ, ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ತಿಳಿಸಿದರು.
ಗುತ್ತಿಗೆದಾರರಿಗೆ ನನ್ನ ಮುಂದೆ ಆಟ ನಡೆಯೊಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟು ಹೋಗಿದೆ, ಸಿಎಂ ಸಿದ್ದರಾಮಯ್ಯ ಅವರೇ ಇನ್ನೂ ಎರಡು ವರ್ಷ ಅಧಿಕಾರವಧಿ ಇದೆ. ಸಿಎಂ ಅವರಿಗೆ ಹೈಕಮಾಂಡ್ ಕೆಲಸ ಮಾಡಲು ಬಿಡುತ್ತಿಲ್ಲ. ಹೈಕಮಾಂಡ್ ಎಲ್ಲವನ್ನೂ ಕಂಟ್ರೋಲ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ನಾಯಕತ್ವ ಗೊಂದಲದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸಿಎಲ್‌ಪಿ ಸಭೆಯಲ್ಲಿಯೂ ಕೂಡ ಇದೆ ಚರ್ಚೆಯಾಗಿದೆ. ಪೊಲೀಸರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡಬೇಕು ಎಂದರು.
ಅಜಿತ್ ಪವಾರ್ ಆರು ಬಾರಿ ಮಹಾರಾಷ್ಟ್ರ ಡಿಸಿಎಂ ಆಗಿದ್ದರು. ಲಕ್ಷಾಂತರ ರೂಪಾಯಿ ಆಸ್ತಿ ಮಾಡಿದ್ದರೂ, ನಮ್ಮ ಜೊತೆಗೆ ಬರುವುದಿಲ್ಲ. ಸಮಯ ಬಂದಾಗ ಯಾರು ತೆಗೆದುಕೊಂಡ ಹೋಗುವುದಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ರೀತಿ ಕೆಲಸ ಮಾಡಬೇಕು ಎಂದು ಸಿಎಂಗೆ ಸಲಹೆ ನೀಡಿದರು.
ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂಬ ಖ್ಯಾತಿ ಹೊಂದಿದ್ದಿರಿ. ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಅಪಕೀರ್ತಿ ಪಡೆದುಕೊಂಡು ಹೋಗಬೇಡಿ ಎಂದು ಹೇಳಿದರು.

- 30 Jan 2026 12:28 PM IST
ನೀರು-ಗಾಳಿಗೆ ಮಾತ್ರ ಇನ್ನೂ GST ಹಾಕಿಲ್ಲ!:ಬಿಜೆಪಿ ಶಾಸಕರಿಗೆ ರಾಮಲಿಂಗಾ ರೆಡ್ಡಿ ತಿರುಗೇಟು
ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಿದ ಮಾಜಿ ಸಚಿವ ಎನ್. ಸುರೇಶ್ ಕುಮಾರ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಒಂದೊಂದಾಗಿ ದರಗಳು ಹೆಚ್ಚಳವಾಗುತ್ತಿವೆ ಎಂದು ಪಟ್ಟಿ ಮಾಡುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ಶಾಸಕರು ದರ ಹೆಚ್ಚಳಕ್ಕೆ ಸರ್ಕಾರದ ನೀತಿಗಳೇ ಕಾರಣ ಎಂದು ಧ್ವನಿಗೂಡಿಸಿದಾಗ, ಸಚಿವ ಪ್ರಿಯಾಂಕ್ ಖರ್ಗೆ ಅವರು "ದೇಶದಲ್ಲಿ ದರಗಳನ್ನು ನಿರ್ಧರಿಸುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯವಲ್ಲ" ಎಂದು ಕೇಂದ್ರದತ್ತ ಬೆರಳು ತೋರಿಸಿದರು.
- 30 Jan 2026 12:20 PM IST
ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ!
ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಶಾಸಕ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ, ಗಾಂಧಿ ಮತ್ತು ಅಂಬೇಡ್ಕರ್ ಅವರ ಹೆಸರನ್ನು ಜಪಿಸುವ ಕಾಂಗ್ರೆಸ್‌ನ ವರ್ತನೆ 'ಭೂತದ ಬಾಯಲ್ಲಿ ಭಗವದ್ಗೀತೆ' ಬಂದಂತಿದೆ ಎಂದು ಲೇವಡಿ ಮಾಡಿದರು. ಒಂದು ಕಾಲದಲ್ಲಿ 415 ಸ್ಥಾನಗಳನ್ನು ಗೆಲ್ಲುತ್ತಿದ್ದ ಕಾಂಗ್ರೆಸ್ ಇಂದು 95 ಸ್ಥಾನಗಳಿಗೆ ಕುಸಿಯಲು ಬಡವರಿಗೆ ಹಾಗೂ ಗಾಂಧೀಜಿಯವರಿಗೆ ನೀಡಿದ 'ಮಕಮಲ್ ಟೋಪಿ' ಮತ್ತು ವಂಚನೆಯೇ ಕಾರಣ ಎಂದು ಟೀಕಿಸಿದ ಅವರು, ರಾಜ್ಯದ ತೆರಿಗೆ ಹಣವನ್ನು ಕೇಂದ್ರ ಲೂಟಿ ಮಾಡುತ್ತಿದೆ ಎಂಬ ಆಡಳಿತ ಪಕ್ಷದ ಆರೋಪವನ್ನು 'ಅರ್ಥಹೀನ' ಎಂದು ತಳ್ಳಿಹಾಕಿದರು.
ಹಿಂದೆ ಯುಪಿಎ ಅವಧಿಯಲ್ಲಿ 2ಜಿ ಹಗರಣದಂತಹ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗುತ್ತಿತ್ತು, ಆದರೆ ಪ್ರಧಾನಿ ಮೋದಿ ಬಂದ ಮೇಲೆ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಮೋದಿಯವರ ಮೇಲೆ ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆಯನ್ನು ತೋರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ 'ವಿಕಸಿತ ಭಾರತ'ದ ಸಂಕಲ್ಪವನ್ನು ವಿಜಯೇಂದ್ರ ಅವರು ಸಮರ್ಥಿಸಿಕೊಂಡರು.

