DK Shivakumar| ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ರೂ. ಆಮಿಷ: ಆಪರೇಷನ್ ಕಮಲ ವಿಫಲಗೊಳಿಸಿದ ಡಿಕೆಶಿ!
x
ಡಿ.ಕೆ. ಶಿವಕುಮಾರ್(ಸಂಗ್ರಹ ಚಿತ್ರ)

DK Shivakumar| ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ರೂ. ಆಮಿಷ: 'ಆಪರೇಷನ್ ಕಮಲ' ವಿಫಲಗೊಳಿಸಿದ ಡಿಕೆಶಿ!

Operation Kamala| ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ರೂ. ಆಮಿಷ ಒಡ್ಡಿ ಆಪರೇಷನ್ ಕಮಲಕ್ಕೆ ಯತ್ನಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.


Click the Play button to hear this message in audio format

ಒಡಿಶಾದಿಂದ ಬಿಡದಿಗೆ ಬಂದು ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ 'ಆಪರೇಷನ್ ಕಮಲ'ದ ಯತ್ನ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಅಡ್ಡ ಮತದಾನಕ್ಕಾಗಿ ನಮ್ಮ ಶಾಸಕರಿಗೆ ತಲಾ 5 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಈ ಹೈಡ್ರಾಮಾ ಕುರಿತಾದ ಸಂಪೂರ್ಣ ವಿವರಗಳನ್ನು ಬಿಚ್ಚಿಟ್ಟರು.

ಬ್ಯಾಟರಾಯನಪುರ ನಿವಾಸಿಯ ಸಹಾಯ, ಖಾಲಿ ಚೆಕ್ ಆಮಿಷ!

"ಒಡಿಶಾದಿಂದ ಬಂದಿದ್ದ ನಾಲ್ವರು ವ್ಯಕ್ತಿಗಳು ಬ್ಯಾಟರಾಯನಪುರದ ನಿವಾಸಿ ಸುರೇಶ್ ಎಂಬಾತನ ಸಹಾಯದಿಂದ ರೂಮ್ ಬುಕ್ ಮಾಡಿದ್ದರು. ನಮ್ಮ ಶಾಸಕರಿಗೆ ತಲಾ 5 ಕೋಟಿ ರೂ. ಹಣ ಹಾಗೂ ಖಾಲಿ ಚೆಕ್‌ಗಳ ಆಮಿಷ ಒಡ್ಡಿದ್ದರು. ಆದರೆ, ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಬಗ್ಗದೆ ತಕ್ಷಣವೇ ಈ ವಿಚಾರವನ್ನು ನಮ್ಮ ಗಮನಕ್ಕೆ ತಂದರು," ಎಂದು ಡಿಕೆಶಿ ವಿವರಿಸಿದರು.

ಇಬ್ಬರ ಬಂಧನ: ಪೊಲೀಸರ ವಶಕ್ಕೆ ಖಾಲಿ ಚೆಕ್‌ಗಳು

ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರನ್ನು ಈಗಾಗಲೇ ಪೊಲೀಸರು ಹಿಡಿದಿದ್ದು, ಅವರು ಆಪರೇಷನ್ ಕಮಲದ ಉದ್ದೇಶದಿಂದಲೇ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಉಳಿದ ಇಬ್ಬರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಈಗಾಗಲೇ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಖರ್ಗೆ ಭೇಟಿ ಮಾಡಿದ ಒಡಿಶಾ ಶಾಸಕರು

ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ನಮ್ಮ ಪಕ್ಷದ ಶಾಸಕರು ತಮ್ಮ ಆಸೆಯಂತೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸೋಮವಾರ ಬೆಳಿಗ್ಗೆ ಅವರು ಒಡಿಶಾಗೆ ವಾಪಸ್ ಪ್ರಯಾಣ ಬೆಳೆಸಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ," ಎಂದರು.

ಟ್ರಬಲ್ ಶೂಟರ್ ಮಂದಹಾಸ!

ಪಕ್ಷಕ್ಕೆ ಎದುರಾದ ಸಂಕಷ್ಟವನ್ನು ಮತ್ತೊಮ್ಮೆ ಯಶಸ್ವಿಯಾಗಿ ನಿಭಾಯಿಸಿದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, "ಯಾವುದೇ ಟ್ರಬಲ್ ಇಲ್ಲ. ಇಂತಹ ಪರಿಸ್ಥಿತಿಗಳನ್ನು ನಾವು ಎದುರಿಸುತ್ತಲೇ ಇರುತ್ತೇವೆ. ನಾನು ಸದಾ ಮಂದಹಾಸದಿಂದ ಇರುತ್ತೇನೆ ಮತ್ತು ನನ್ನ ಆತ್ಮಸಾಕ್ಷಿಯನ್ನು ನಂಬುತ್ತೇನೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More
Next Story