
Resort Politics| ಒಡಿಶಾ ಶಾಸಕರು ಮೈಸೂರು ನೋಡಲು ಬಂದಿದ್ದಾರೆ ಎಂದ ಡಿಕೆಶಿ!
ʼಒಡಿಶಾ ಶಾಸಕರು ಮೈಸೂರು ನೋಡಲು ಬಂದಿದ್ದಾರೆ' ಎಂದು ಹೇಳುವ ಮೂಲಕ ರೆಸಾರ್ಟ್ ರಾಜಕೀಯದ ಆರೋಪವನ್ನುಡಿ.ಕೆ.ಶಿವಕುಮಾರ್ ತಳ್ಳಿಹಾಕಿದ್ದಾರೆ. ಶಾಸಕರ ರಕ್ಷಣೆ ಜವಾಬ್ದಾರಿ ಹೊತ್ತಿರುವ ಅವರು, 'ಕಾಲವೇ ಎಲ್ಲವನ್ನೂ ನಿರ್ಣಯಿಸಲಿದೆ ಎಂದರು.
ಒಡಿಶಾ ರಾಜ್ಯದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಗೂ ಬಿಜೆಪಿಯ ಆಪರೇಷನ್ ಕಮಲದ ಭೀತಿ ಹಿನ್ನಲೆಯಲ್ಲಿ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾದ ಕೈ ಶಾಸಕರಿಗೆ ಡಿ.ಕೆ.ಶಿವಕುಮಾರ್ ಆತಿಥ್ಯವಿದೆ. ಬಿಡದಿ ರೆಸಾರ್ಟ್‌ಗೆ ಕರೆತರುವ ಮೂಲಕ ರೆಸಾರ್ಟ್ ರಾಜಕೀಯವನ್ನು ಮರು ಆರಂಭಿಸಿದ್ದಾರೆ, ಎಂಬ ಆರೋಪಗಳ ನಡುವೆಯೇ, ಅಚ್ಚರಿ ಹೇಳಿಕೆ ನೀಡದ್ದಾರೆ.
"ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ”. “ಅವರು ಯಾವ ಕಾರಣಕ್ಕೆ ಬಂದಿದ್ದಾರೆ ಎಂದು ಗೊತ್ತಿಲ್ಲ. ಆ ರಾಜ್ಯದ ಪ್ರಾದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಕರೆ ಮಾಡಿ ನಮ್ಮ ಶಾಸಕರು ಬರುತ್ತಿದ್ದಾರೆ ಎಂದು ಕೇಳಿದರು. ಪಕ್ಷದ ವಿಚಾರ ಇರಬೇಕು, ನಾನೇ ಹೋಗಿ ಭೇಟಿ ಮಾಡುವೆ ಎಂದು ಹೇಳಿದ್ದೇನೆ. ಅವರಿಗೆ ಮೈಸೂರು ನೋಡುವ ಆಸೆ ಇದೆ. ಅವರು ನಾವು ಬರುತ್ತೇವೆ ಎಂದು ತಿಳಿಸಿದಾಗ, ನಾನು ಬನ್ನಿ ಎಂದು ಹೇಳಿದೆ. ಆರಾಮವಾಗಿ ಇರುವ ಜಾಗ ಬೇಕು ಎಂದು ಕೇಳಿದರು, ಹೀಗಾಗಿ ಅವರಿಗೆ ವ್ಯವಸ್ಥೆ ಮಾಡಿದ್ದೇವೆ” ಎನ್ನುವ ಮೂಲಕ ರೆಸಾರ್ಟ್ ರಾಜಕೀಯದ ಆರೋಪದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ.
"ನಾನು ಪಕ್ಷ ಹೇಳಿದ್ದನ್ನು ಮಾಡಬೇಕು. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ಅಡ್ಡ ಮತದಾನ ನಡೆಯುತ್ತಿರುತ್ತದೆ. ಇದು ಹೊಸತೇನಲ್ಲ. ನನ್ನ ಭೇಟಿಗೆ ಸಮಯ ಕೇಳಿದರು. ನಾನು ಅಧಿವೇಶನ ನಡೆಯುತ್ತಿದೆ. ಇಲ್ಲಿಗೆ ಬರಬೇಡಿ ಕಲಾಪ ಮುಗಿಸಿಕೊಂಡು ನಾನೇ ಬರುತ್ತೇನೆ ಎಂದು ಹೇಳಿದ್ದೆ," ಎಂದರು.
“ನನಗೆ ಯಾವ ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ. ಬೆಂಗಳೂರು ಸುರಕ್ಷಿತ. ಹೀಗಾಗಿ ಅವರು ಇಲ್ಲಿಗೆ ಬಂದು ವೀಕ್ಷಣೆ ಮಾಡಬೇಕು ಎಂದು ಹೇಳಿದರು, ಅವರು ನಮ್ಮ ಸಹೋದ್ಯೋಗಿಗಳು, ಅವರು ಬರುತ್ತಾರೆ ಎಂದಾಗ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ನನಗೆ ಈ ವಿಚಾರವಾಗಿ ಕೇಳಿದಾಗ, ನಾನು ಬನ್ನಿ ಎಂದು ಹೇಳಿರುವೆ. ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ಸಮಯದಿಂದಲೂ ಮಾಡಿಕೊಂಡು ಬರುತ್ತಿರುವೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ, ಮಧ್ಯಪ್ರದೇಶ ಸೇರಿದಂತೆ ಅನೇಕ ಬಾರಿ ಈ ಕೆಲಸ ಮಾಡಿದ್ದೇನೆ” ಎಂದರು.
ಬಿಜೆಪಿಯವರೆ ಪಿತಾಮಹರು
“ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ರಾಜಕೀಯ ಪಕ್ಷಗಳಿಗೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ರಂಗದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ವಿಚಾರ ಇದು. ಅವರು ಇಲ್ಲಿಗೆ ಬಂದಿರುವಾಗ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆ” ಎಂದು ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನಮಗೆ ಯಾವ ಟಾಸ್ಕ್ ಕೂಡ ಇಲ್ಲ. ರಾಜ್ಯಸಭಾ ಚುನಾವಣೆ ಇರುವ ಕಾರಣಕ್ಕೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ನಮ್ಮವರ ಮೇಲೆ ಒತ್ತಡವಿದೆ. ದೊಡ್ಡ, ದೊಡ್ಡ ಆಫರ್ ಗಳನ್ನು ಕೊಡುತ್ತಿದ್ದಾರೆ. 14 ರಿಂದ15 ಜನ ಎಂಎಲ್ ಎಗಳು ಇಲ್ಲಿಗೆ ಬಂದಿದ್ದಾರೆ. ಬಿಜೆಡಿ, ಕಮ್ಯುನಿಸ್ಟ್ ಪಕ್ಷ ಹಾಗೂ ನಾವು ಜಂಟಿಯಾಗಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇವೆ. ಬಿಜೆಪಿ ಮಾಡುವುದು ಮಾಡುತ್ತದೆ, ನಾವು ಮಾಡೋದು ಮಾಡುತ್ತೇವೆ ಎಂದರು.
ಯಾರ್ಯಾರು ಬಂದಿದ್ದಾರೆ?
ಒಡಿಶಾದ ವಿಧಾನಸಭೆಯ ಒಟ್ಟು ಸದಸ್ಯ ಬಲ 147 ಇದೆ. ಹೀಗಾಗಿ 4 ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸಿದ್ದು, ಬಿಜೆಪಿ 3, ಬಿಜೆಡಿ 1 ಹಾಗೂ ಬಿಜೆಡಿ-ಕಾಂಗ್ರೆಸ್ ಸಂಯುಕ್ತ ಅಭ್ಯರ್ಥಿಯಾಗಿ ಒಬ್ಬರು ಸ್ಪರ್ಧಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಡಿಯ ಸಂಯುಕ್ತ ಅಭ್ಯರ್ಥಿಯಾಗಿ ಖ್ಯಾತ ಯುರೋಲಾಜಿಸ್ಟ್ ಡಾ. ದತ್ತೇಶ್ವರ್ ಹೋಟ ಸ್ಪರ್ಧಿಸಲಿದ್ದಾರೆ. ಈ ಚುನಾವಣೆ ಗೆಲ್ಲಲು ಒಟ್ಟು 30 ಮತಗಳ ಅವಶ್ಯಕತೆ ಇದೆ. ಇದರಲ್ಲಿ ಬಿಜೆಡಿಯ 18, ಕಾಂಗ್ರೆಸ್‌ನ 14, ಸಿಪಿಐ (ಎಂ)ನ 1 ಮತ ಸೇರಿ, ಒಟ್ಟು 32 ಮತಗಳು ಕಾಂಗ್ರೆಸ್ ಬಳಿ ಇವೆ. ಇದರಲ್ಲಿ ಮೊದಲ ಭಾರಿ ಶಾಸಕರಾಗಿರುವ ಕಾಂಗ್ರೆಸ್ ನ 8 ಮಂದಿಯ ಮತಗಳನ್ನು ಕಸಿದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.
ಹೀಗಾಗಿ ಒಡಿಶಾದ ಕೈ ಶಾಸಕರಾದ ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ, ಪ್ರಫುಲ್ಲ ಪ್ರಧಾನ್, ಸತ್ಯಜಿತ್ ಗೋಮಂಗೋ ಅವರುಗಳು ಡಿಕೆಶಿಯ ಉಸ್ತುವಾರಿಯಲ್ಲಿ ಬಿಡದಿಯ ವಂಡರ್ ಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಶನಿವಾರ ಸಂಜೆ, ವಂಡರ್ ಲಾ ಗೆ ಭೇಟಿ ನೀಡಿದ ಡಿಕೆಶಿ, ಒಡಿಶಾ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಎಐಸಿಸಿ ಕಾರ್ಯದರ್ಶಿ ಮಯೂರ್ ಜೈಕುಮಾರ್, ಶಾಸಕರಾದ ಎಚ್ ಸಿ ಬಾಲಕೃಷ್ಣ, ಸಿ ಪಿ ಯೋಗೇಶ್ವರ್, ಒಡಿಸ್ಸಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಇದ್ದರು.

