
ಶಾಸಕ ವಿನಯ್ ಕುಲಕರ್ಣಿ
ಯೋಗೇಶ್ ಗೌಡ ಹತ್ಯೆ ಪ್ರಕರಣ: ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು
ವಿಜಯಪುರ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಅಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ತರುವಾಯ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಹಲವು ತಿಂಗಳಿಂದ ಜೈಲಿನಲ್ಲಿದ್ದ ಶಾಸಕರಿಗೆ ತಾತ್ಕಾಲಿಕವಾಗಿ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
ಪ್ರಕರಣದ ವಿಚಾರಣೆಯನ್ನು ಮುಂದಿನ ಎರಡು ತಿಂಗಳೊಳಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿನಯ್ ಕುಲಕರ್ಣಿ ಪರ ವಕೀಲರಾದ ಶರಣಗೌಡ ಪಾಟೀಲ್ ಅವರ ತಂಡ ಸತತ ಕಾನೂನು ಹೋರಾಟ ನಡೆಸಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಜಾಮೀನು ರದ್ದಾಗಿದ್ದ ಹಿನ್ನೆಲೆ
ಈ ಹಿಂದೆ ಇದೇ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ವಿನಯ್ ಕುಲಕರ್ಣಿ ಅವರು ಸಾಕ್ಷಿದಾರರನ್ನು ಬೆದರಿಸುವ ಹಾಗೂ ಹಣದ ಆಮಿಷವೊಡ್ಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಶಾಸಕರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ನಿಖರ ದಾಖಲೆಗಳನ್ನು ಕಲೆಹಾಕಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಈ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಜಾಮೀನು ರದ್ದಾದ ಬೆನ್ನಲ್ಲೇ ಅವರನ್ನು ಬಂಧಿಸಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಕಾನೂನು ಹೋರಾಟದಲ್ಲಿ ಸಿಕ್ಕ ತಾತ್ಕಾಲಿಕ ಜಯ
ವಿಜಯಪುರ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಅಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ತರುವಾಯ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಇದೀಗ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದ ಅಂತಿಮ ವಿಚಾರಣೆಯನ್ನು ಕೇವಲ ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಿರುವುದರಿಂದ ಶಾಸಕರಿಗೆ ತಾತ್ಕಾಲಿಕವಾಗಿ ಬಿಡುಗಡೆಯ ಭಾಗ್ಯ ಸಿಕ್ಕಿದ್ದರೂ, ಕಾನೂನು ಪ್ರಕ್ರಿಯೆ ನಿರ್ಣಾಯಕ ಹಂತವನ್ನು ತಲುಪಿದೆ.
ಏನಿದು ಯೋಗೇಶ್ ಗೌಡ ಹತ್ಯೆ ಪ್ರಕರಣ?
2016ರ ಜುಲೈ 15ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು ಜಿಮ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆ ಚುರುಕುಗೊಂಡಾಗ ಈ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಅವರನ್ನು ಸಿಬಿಐ ಬಂಧಿಸಿತ್ತು. ಸತತ ಒಂಬತ್ತು ತಿಂಗಳ ಜೈಲುವಾಸದ ಬಳಿಕ ೨೦೨೧ರ ಆಗಸ್ಟ್ ತಿಂಗಳಲ್ಲಿ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಅಚ್ಚರಿಯೆಂದರೆ, ಕ್ಷೇತ್ರ ಪ್ರವೇಶಕ್ಕೇ ನಿರ್ಬಂಧವಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಗಮನ ಸೆಳೆದಿದ್ದರು.
ಧಾರವಾಡದಲ್ಲಿ ಬೆಂಬಲಿಗರ ಸಂಭ್ರಮಾಚರಣೆ
ತಮ್ಮ ನೆಚ್ಚಿನ ನಾಯಕನಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿನಯ್ ಕುಲಕರ್ಣಿ ಅವರ ಬೆಂಬಲಿಗರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಬೆಂಬಲಿಗರು, ಶಾಸಕರ ಪರವಾಗಿ ಜಯಘೋಷಗಳನ್ನು ಕೂಗಿದರು. ಪರಸ್ಪರ ಸಿಹಿ ಹಂಚಿ, ಜೈಕಾರ ಹಾಕುವ ಮೂಲಕ ತಮ್ಮ ನಾಯಕ ಶೀಘ್ರದಲ್ಲೇ ಮತ್ತೆ ತಮ್ಮ ನಡುವೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ಸಂಭ್ರಮಿಸಿದರು.

