
NCERT ಪಠ್ಯಪುಸ್ತಕದಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' ಉಲ್ಲೇಖ: ಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್
8ನೇ ತರಗತಿ NCERT ಪಠ್ಯದಲ್ಲಿ ನ್ಯಾಯಾಂಗದ ವಿರುದ್ಧದ ಅವಹೇಳನಕಾರಿ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಸ್ತಕ ವಿತರಣೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
8ನೇ ತರಗತಿಯ NCERT ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' ಎಂಬ ಅಧ್ಯಾಯವನ್ನು ಸೇರಿಸಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ಪೀಠವು, ತಕ್ಷಣವೇ ಜಾರಿಗೆ ಬರುವಂತೆ ಈ ಪುಸ್ತಕದ ಮುದ್ರಣ ಮತ್ತು ವಿತರಣೆಯ ಮೇಲೆ "ಸಂಪೂರ್ಣ ನಿಷೇಧ" ಹೇರಿದೆ.
"ತಲೆದಂಡವಾಗಲೇಬೇಕು" ಸಿಜೆಐ ಖಡಕ್ ಎಚ್ಚರಿಕೆ
ಗುರುವಾರ (ಫೆಬ್ರವರಿ 26) ನಡೆದ ವಿಚಾರಣೆಯ ವೇಳೆ ಪೀಠವು ಅತ್ಯಂತ ಕಠಿಣ ಮಾತುಗಳಲ್ಲಿ ಎಚ್ಚರಿಕೆ ನೀಡಿತು."ಇದು ನ್ಯಾಯಾಂಗವನ್ನು ದೂಷಿಸಲು ಮಾಡಲಾದ ಆಳವಾದ ಮತ್ತು ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೆ ತಿಳಿಯಬೇಕು. ತಪ್ಪಿತಸ್ಥರ ತಲೆದಂಡವಾಗಲೇಬೇಕು" ಎಂದು ಸಿಜೆಐ ಗುಡುಗಿದ್ದಾರೆ.
ಇಂತಹ ಪಠ್ಯಗಳು ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆಯನ್ನು ಕುಂದಿಸುತ್ತವೆ. ಇದು ನ್ಯಾಯಾಂಗದ ಘನತೆಗೆ ಧಕ್ಕೆ ತರುವ ವ್ಯವಸ್ಥಿತ ಪ್ರಯತ್ನ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪುಸ್ತಕದ ಮೇಲೆ ಸಂಪೂರ್ಣ ನಿಷೇಧ
ನ್ಯಾಯಾಲಯವು ಈ ಪುಸ್ತಕದ ಭೌತಿಕ ಅಥವಾ ಡಿಜಿಟಲ್ ರೂಪದ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ಯಾರಾದರೂ ಇದನ್ನು ಹಂಚಲು ಪ್ರಯತ್ನಿಸಿದರೆ, ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.
NCERT ನಿರ್ದೇಶಕರಿಗೆ ಶೋಕಾಸ್ ನೋಟಿಸ್
ಪಠ್ಯಪುಸ್ತಕದಲ್ಲಿ ಇಂತಹ ವಿವಾದಾತ್ಮಕ ವಿಷಯ ಸೇರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ. NCERT ನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.
ಈ ಕೃತ್ಯವು 'ಕ್ರಿಮಿನಲ್ ನ್ಯಾಯಾಂಗ ನಿಂದನೆ' ವ್ಯಾಪ್ತಿಗೆ ಬರುತ್ತದೆ ಎಂದು ಕೋರ್ಟ್ ಹೇಳಿದೆ. ಬುಧವಾರ NCERT ನೀಡಿದ್ದ ಸ್ಪಷ್ಟನೆಯಲ್ಲಿ ಒಂದೂ 'ಕ್ಷಮೆ' ಎಂಬ ಪದವಿರಲಿಲ್ಲ, ಬದಲಿಗೆ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರದ ಕ್ಷಮೆಯಾಚನೆ
ವಿಚಾರಣೆಯ ಆರಂಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಶಿಕ್ಷಣ ಸಚಿವಾಲಯದ ಪರವಾಗಿ ಬೇಷರತ್ ಕ್ಷಮೆಯಾಚಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಲಾಗಿದೆ.
ಏನಿದು ವಿವಾದ?
8ನೇ ತರಗತಿ ಪಠ್ಯದಲ್ಲಿ ನ್ಯಾಯಾಂಗದ ಸಾಧನೆಗಳನ್ನು ಮರೆಮಾಚಿ, ಕೇವಲ ಭ್ರಷ್ಟಾಚಾರದ ಬಗ್ಗೆ ಒಂದು ಇಡೀ ಅಧ್ಯಾಯ ಮೀಸಲಿಡಲಾಗಿತ್ತು. ನೂರಾರು ದೂರುಗಳು ಬಂದಿವೆ ಎಂದು ಉಲ್ಲೇಖಿಸಿ, ನ್ಯಾಯಾಂಗವೇ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ ಎಂಬಂತೆ ಬಿಂಬಿಸಲಾಗಿದೆ. ದೇಶಾದ್ಯಂತ ಈ ಪುಸ್ತಕದ ಮಾರಾಟ ಮತ್ತು ಬೋಧನೆ ಸ್ಥಗಿತಗೊಳ್ಳಲಿದೆ.

