
ಡಿಸಿಎಂ ಡಿ.ಕೆ. ಶಿವಕುಮಾರ್
ದಾವಣಗೆರೆ ಉಪಚುನಾವಣೆ: ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್
ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಆಸೆ ಇರುವುದು ಸಹಜ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಸಮಾಧಾನಗೊಂಡವರನ್ನು ಸಮರ್ಥಿಸಿಕೊಂಡರು.
ಮುಂಬರುವ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವವರ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಅವರು, ಮಂಗಳವಾರ ವಿಮಾನ ನಿಲ್ದಾಣ ಮತ್ತು ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ದಾವಣಗೆರೆಯಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರೆಲ್ಲರೂ ಪಕ್ಷದ ನಾಯಕರೇ ಆಗಿದ್ದು, ಪಕ್ಷದ ಮುಖಂಡರೆಲ್ಲರೂ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಎಲ್ಲವೂ ಶೀಘ್ರದಲ್ಲೇ ಸರಿಹೋಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಆಸೆ ಇರುವುದು ಸಹಜ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಸಮಾಧಾನಗೊಂಡವರನ್ನು ಸಮರ್ಥಿಸಿಕೊಂಡರು.
ಕುಟುಂಬ ರಾಜಕಾರಣದ ಆರೋಪಕ್ಕೆ ತಿರುಗೇಟು
ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಅವರು, "ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಎಲ್ಲಾ ಪಕ್ಷಗಳಲ್ಲೂ ಇದು ಇದ್ದೇ ಇದೆ" ಎಂದು ತಿರುಗೇಟು ನೀಡಿದರು. ದಾವಣಗೆರೆ ರಾಜಕಾರಣದಲ್ಲಿ ಶಾಮನೂರು ಕುಟುಂಬದ ಮೂವರು ಮೊದಲಿನಿಂದಲೂ ಸಕ್ರಿಯರಾಗಿದ್ದಾರೆ. ಕಳೆದ ಐದಾರು ಲೋಕಸಭಾ ಚುನಾವಣೆಗಳಿಂದ ಪಕ್ಷ ಅಲ್ಲಿ ಸತತವಾಗಿ ಸೋಲುತ್ತಿತ್ತು. ಹೀಗಾಗಿ ದಾವಣಗೆರೆ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಪಕ್ಷವೇ ಬಲವಂತವಾಗಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಚುನಾವಣಾ ಕಣಕ್ಕಿಳಿಸಿತ್ತು. ಅವರು ಈಗ ಸಂಸದರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

