By Election|ದಾವಣಗೆರೆ ದಕ್ಷಿಣ: ಮುಸ್ಲಿಂ ಮತ ಸೆಳೆಯುವುದೇ ಎಸ್‌ಡಿಪಿಐ? ಅಫ್ಸರ್‌ ಕೊಡ್ಲಿಪೇಟೆ ಹೇಳಿದ್ದೇನು?
x

By Election|ದಾವಣಗೆರೆ ದಕ್ಷಿಣ: ಮುಸ್ಲಿಂ ಮತ ಸೆಳೆಯುವುದೇ ಎಸ್‌ಡಿಪಿಐ? ಅಫ್ಸರ್‌ ಕೊಡ್ಲಿಪೇಟೆ ಹೇಳಿದ್ದೇನು?

ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್‌ ಕಡೆಗಣಿಸಿರುವುದು ಮುಸ್ಲಿಂ ಸಮುದಾಯವು ತಮ್ಮದೇ ಸಮುದಾಯದ ಅಭ್ಯರ್ಥಿಯ ಕಡೆ ಒಲವು ತೋರುವ ನಿರೀಕ್ಷೆ ಇದೆ.


Click the Play button to hear this message in audio format

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಈ ಬಾರಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಂಗ್ರೆಸ್‌ - ಬಿಜೆಪಿ ನಡುವಿನ ನೇರ ಹಣಾಹಣಿಯ ನಡುವೆ, ಮೂರನೇ ಶಕ್ತಿಯಾಗಿ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್‌ ಕೊಡ್ಲಿಪೇಟೆ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗಳ ಅಕಾಂಕ್ಷಿಗಳನ್ನು ನಿರ್ಲಕ್ಷಿಸಿದೆ. ಇದು ಕಾಂಗ್ರೆಸ್‌ನ ಮುಸ್ಲಿಂ ಮತಗಳು ಅಫ್ಸರ್‌ ಪರವಾಗಲಿವೆಯೇ? ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.80ಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಇಲ್ಲಿಯವರೆಗೆ ಈ ಸಮುದಾಯವು ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಬೆನ್ನಿಗೆ ನಿಲ್ಲುತ್ತಾ ಬಂದಿದೆ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಸಯ್ಯದ್ ಖಾಲೀದ್ ಅಹ್ಮದ್ ಮತ್ತು ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂಬ ಪ್ರಬಲ ಕೂಗು ಕೇಳಿಬಂದರೂ ಕಾಂಗ್ರೆಸ್‌ ಸೊಪ್ಪು ಹಾಕದಿರುವುದು ಆ ಸಮುದಾಯದಲ್ಲಿ ಬೇಸರ ಮೂಡಿದೆ. ಇದು ಅಫ್ಸರ್‌ ಕೊಡ್ಲಿಪೇಟೆಗೆ ವರವಾಗುವ ಸಾಧ್ಯತೆ ಇದೆ. ಎಲ್ಲಾ ಮುಸ್ಲಿಂ ಸಮುದಾಯಗಳು ಒಂದಾದರೆ ಇವರ ಗೆಲುವಿಗೆ ಸಹಕಾರಿಯಾಗಲಿದೆ.

ಮುಸ್ಲಿಂ ಮತ ಸೆಳೆಯುವ ತಂತ್ರ

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಕೇವಲ ಒಬ್ಬ ಅಭ್ಯರ್ಥಿಯಲ್ಲ, ಬದಲಾಗಿ ಅವರು ಮುಸ್ಲಿಂ ಯುವ ಸಮುದಾಯದಲ್ಲಿ ಪ್ರಭಾವಿ ವಾಕ್ಚಾತುರ್ಯ ಹೊಂದಿರುವ ನಾಯಕ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರನ್ನು ಸೆಳೆಯಲು ಸತತವಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿಯವರೆಗೆ ಮುಸ್ಲಿಂ ಸಮುದಾಯವು ಅನಿವಾರ್ಯವಾಗಿ ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಾ ಬಂದಿತ್ತು. ಆದರೆ, ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್‌ ಕಡೆಗಣಿಸಿರುವುದರಿಂದ ಮುಸ್ಲಿಂ ಸಮುದಾಯವು ತಮ್ಮದೇ ಸಮುದಾಯದ ಅಭ್ಯರ್ಥಿಯ ಕಡೆ ಒಲವು ಮೂಡಿಸುವ ನಿರೀಕ್ಷೆ ಇದೆ. ಈ ನಡುವೆ, ಕೆಲವು ಮುಸ್ಲಿಮರು ಸಹ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವುದರಿಂದ ಒಂದಷ್ಟು ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಮರ್ಥ ಮುಸ್ಲಿಂ ನಾಯಕರು ಆಕಾಂಕ್ಷಿಗಳಾಗಿದ್ದರು. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಮುಸ್ಲಿಂ ಮುಖಂಡರು ತಮಗೊಂದು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಪಕ್ಷವು ಮತ್ತೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೇ ಮಣೆ ಹಾಕಿರುವುದು ಸಮುದಾಯದ ಒಳಗೊಳಗೆ ಅಸಮಾಧಾನದ ಕಿಚ್ಚು ಹಚ್ಚಿದೆ. 'ಮುಸ್ಲಿಂ ಮತಗಳು ನಮಗೆ ಪಕ್ಕಾ' ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಇದೆಯೇ? ಅಥವಾ ಲಿಂಗಾಯತ, ಮುಸ್ಲಿಂ ಮತಗಳ ಸಮತೋಲನ ಕಾಯ್ದುಕೊಳ್ಳುವ ಭರದಲ್ಲಿ ಮುಸ್ಲಿಂ ನಾಯಕತ್ವವನ್ನು ಹತ್ತಿಕ್ಕಲಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎನ್ನಲಾಗಿದೆ.

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಎಸ್‌ಡಿಪಿಐ ಅಭ್ಯರ್ಥಿ ಅಫ್ಸಲ್‌ ಕೊಡ್ಲಿಪೇಟೆ, ಕ್ಷೇತ್ರದ ಜನತೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕಳೆದ 40 ವರ್ಷಗಳಿಂದ ಕ್ಷೇತ್ರವು ಒಂದೇ ಕುಟುಂಬದ ಕೈಯಲ್ಲಿದೆ. ಇನ್ನಾದರೂ ಕ್ಷೇತ್ರವು ಆ ಕುಟುಂಬದಿಂದ ಮತ್ತೊಬ್ಬರ ಕೈಗೆ ಸೇರಬೇಕು ಎಂಬ ಉದ್ದೇಶದಿಂದ ಸ್ಪರ್ಧಿಸಲಾಗಿದೆ. ಹಾಸನ ಮೂಲತಃವಾದರೂ ಕ್ಷೇತ್ರದಲ್ಲಿಯೇ ಸ್ವಂತ ಕುಟುಂಬವನ್ನು ಹೊಂದಿದ್ದೇನೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ತರುವ ನಿರೀಕ್ಷೆ ಇದೆ ಎಂದು ಹೇಳಿದರು.

ಮತ ವಿಭಜನೆಯಿಂದ ಬಿಜೆಪಿಗೆ ಲಾಭ?

ರಾಜಕೀಯ ವಿಶ್ಲೇಷಕರ ಪ್ರಕಾರ, ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತಗಳು ವಿಭಜನೆಯಾದರೆ ಅದರ ನೇರ ಲಾಭ ಬಿಜೆಪಿಗೆ ಆಗಲಿದೆ. ಅಫ್ಸರ್‌ ಕೊಡ್ಲಿಪೇಟೆ ಅವರು ೮೦ ಸಾವಿರಕ್ಕೂಹೆಚ್ಚಿನ ಮತಗಳ ಪೈಕಿ ೩೦-೪೦ ಸಾವಿರ ಮತಗಳನ್ನು ಪಡೆದರೂ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಹಾದಿ ಅತ್ಯಂತ ಕಠಿಣವಾಗಲಿದೆ ಎನ್ನಲಾಗಿದೆ. ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವೆ ಹಂಚಿಹೋದರೆ, ಬಿಜೆಪಿಯ ಮತಬ್ಯಾಂಕ್‌ ಮತ್ತು ಹಿಂದುತ್ವದ ಆಧಾರದ ಮೇಲೆ ಗೆಲುವು ಸಾಧಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಹೀಗಾಗಿ, ಎಸ್‌ಡಿಪಿಐ ಪ್ರಬಲ ಸ್ಪರ್ಧೆ ನೀಡುವುದು ಬಿಜೆಪಿಗೆ ಪರೋಕ್ಷವಾಗಿ ವರದಾನವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಇಲ್ಲಿಯವರೆಗೆ ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಮತ್ತು ವೈಯಕ್ತಿಕ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸುತ್ತಾ ಬಂದಿದೆ. ಆದರೆ ಅವರ ನಿಧನದ ಬಳಿಕ ಮುಸ್ಲಿಮರು ಧ್ವನಿ ಎತ್ತಿರುವುದರಿಂದ ಅಫ್ಸರ್‌ ಕೊಡ್ಲಿಪೇಟೆ ಅವರಿಗೆ ಮತ ಹಾಕುವ ಬಗ್ಗೆ ಕೆಲವರು ಚಿಂತನೆ ನಡೆಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ವ್ಯಾಪಾರಸ್ಥರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿರಿಯ ಮತದಾರರು ಇಂದಿಗೂ ಶಾಮನೂರು ಕುಟುಂಬದ ಜೊತೆಗಿನ ಸಂಬಂಧಕ್ಕೆ ಬೆಲೆ ನೀಡುತ್ತಾರಾದರೂ, ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಯುವ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ನಮ್ಮನ್ನು ಕೇವಲ ಮತ ಯಂತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಭಾವನೆಯನ್ನು ಮತದಾರರಲ್ಲಿ ಮೂಡಿಸಿರುವುದು ಕಾಂಗ್ರೆಸ್‌ಗೆ ಮುಳುವಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಲಾಗಿದೆ.

Read More
Next Story